ಸಂಕ್ರಾಂತಿ ಎಳ್ಳು-ಬೆಲ್ಲದ
ಮಹತ್ವ by ಡಾ|| ಎಸ್. ಹೇಮಲತಾ
( "ವಿಕ್ರಮ" - ಆರ್.ಎಸ್.ಎಸ್. ವಾರಪತ್ರಿಕೆಯಲ್ಲಿ ಬಂದಿರುವ ಲೇಖನ...)
🔹🔹🔹🔹🔹🔹🔹🔹🔹🔹
ಸಂಕ್ರಾಂತಿ ಸಮೀಪಿಸಿತೆಂದರೆ
ಎಲ್ಲರ ಮನೆಗಳಲ್ಲಿಯೂ ಎಳ್ಳು ಕೂಡಿಸುವ ಸಂಭ್ರಮ. ಭಾರತೀಯರ ಪ್ರತಿಯೊಂದು ಹಬ್ಬದಲ್ಲಿಯೂ ಕಾಲಕ್ಕೆ
ತಕ್ಕಂತಹ ವಿಶೇಷ ಆಚರಣೆಗಳಿವೆ. ಈ ಪದ್ಧತಿಗಳ ಹಿಂದೆ ಅಡಗಿರುವ ವೈಜ್ಞಾನಿಕ ಮತ್ತು ಸಾಮಾಜಿಕ
ಮೌಲ್ಯಗಳನ್ನು ಅರ್ಥ ಮಾಡಿಕೊಂಡರೆ ಆಶ್ಚರ್ಯವೆನಿಸುತ್ತದೆ.
ಸಂಕ್ರಾಂತಿಯಲ್ಲಿ ಪ್ರಧಾನವಾಗಿ
ಬಳಸುವ ಎಳ್ಳಿನ ಬಗ್ಗೆ ಈಗ ಸ್ವಲ್ಪ ಯೋಚಿಸೋಣ. ಎಳ್ಳು ನಮ್ಮ ಪ್ರಮುಖ ಬೆಳೆಯೂ ಹೌದು, ಆಹಾರ ಪದಾರ್ಥವೂ ಹೌದು. ಎಣ್ಣೆಯನ್ನು ತೆಗೆಯುವ ಹಲವು ಬೀಜಗಳಲ್ಲಿ
ಅಂದಿನ ಕಾಲಕ್ಕೆ ಪ್ರಧಾನವಾದ ಬೀಜ ಇದಾಗಿತ್ತು.
ತಿಲವೆಂಬ ಇದರ ಸಂಸ್ಕೃತ ನಾಮಧೇಯ
‘ತಿಲಸ್ನೇಹೇ’ ಎಂಬ ಧಾತುವಿನಿಂದ ವ್ಯುತ್ಪನ್ನವಾಗಿದೆ. ಇದು ತುದಾದಿ ಗಣದ ಧಾತುವಾಗಿದೆ. ಇದಲ್ಲದೆ
‘ತಿಲ ಗತೌ’ ಎಂಬ ಭ್ವಾದಿಗಣದ ಧಾತು. ‘ತಿಲಸ್ನೇಹೇ’ ಎಂಬ ಚುರಾದಿಗಣದ ಧಾತುಗಳೂ ಇವೆ. ಒಟ್ಟಿನಲ್ಲಿ
ಸ್ನೇಹವೆಂದರೆ ಅಂಟಿಕೊಳ್ಳುವ ಗುಣ ಅಥವ ಎಣ್ಣೆಯ ಅಂಶವೆಂದು ಮುಖ್ಯವಾದ ಅರ್ಥ. ದಾಸರು ಒಂದು
ಹಾಡಿನಲ್ಲಿ, ‘ತೈಲಧಾರೆಯಂತೆ ಮನಸುಕೊಡು
ಹರಿಯಲ್ಲಿ ಶಂಭೋ’ ಎಂದು ಹಾಡಿದ್ದಾರೆ. ಎಣ್ಣೆಯ ಧಾರೆ ಹೇಗೆ ಕಡಿವಡೆಯದೆ ನಿರಂತರವಾಗಿರುತ್ತದೆಯೋ
ಹಾಗೆ ಸಮಾಜದಲ್ಲಿ ಪ್ರೀತಿ, ಭಕ್ತಿ
ಮತ್ತು ಸ್ನೇಹಗಳು ನಿರಂತರವಾಗಿರಬೇಕು. ಇದರ ಸಂಕೇತವೇ ಈ ಎಳ್ಳು. ಸ್ನೇಹವು ಹೇಗಿರಬೇಕೆಂದರೆ :
ದರ್ಶನೇ ಸ್ಪರ್ಶನೇ ವಾಪಿ
ಶ್ರವಣೇ ಭಾಷಣೇಪಿ ವಾ |
ಯತ್ರ ದ್ರವತ್ಸಂತರಂಗಂ
ಸ ಸ್ನೇಹ ಇತಿ ಕಥ್ಯತೇ ॥
ಯಾರನ್ನಾದರೂ ನೋಡಿದರೆ, ಸ್ಪರ್ಶಿಸಿದರೆ, ಅವರ ಬಗ್ಗೆ ಕೇಳಿದರೆ, ಅವರೊಂದಿಗೆ ಮಾತನಾಡಿದರೆ, ಹೃದಯ ಕರಗಿಹೋಗುತ್ತದೆಯೋ ಅದೇ ಸ್ನೇಹ. ಇಂತಹ ಸ್ನೇಹದ ಸಂಕೇತ ಈ
ಎಳ್ಳು. ಅದನ್ನು ಕುಟ್ಟಿದರೆ ಅದರ ಕಾಳುಗಳು ಒಂದಕ್ಕೊಂದು ಅಂಟಿಕೊಳ್ಳುವುವು. ಹಾಗೆಯೇ ಸ್ನೇಹವು
ಎಡರುತೊಡರುಗಳಲ್ಲಿ ಗಟ್ಟಿಗೊಳ್ಳಬೇಕು. ಎಳ್ಳಿನಲ್ಲಿರುವ ತೈಲವು ಬತ್ತಿಯ ಮೂಲಕ ಏರಿ, ದೀಪವನ್ನು ಬೆಳಗಿಸುವಂತೆ, ಸ್ನೇಹವು ಹೃದಯದಲ್ಲಿ ಪ್ರೇಮಜ್ಯೋತಿಯನ್ನು ಬೆಳಗಿಸಬೇಕು.
ಸ್ನೇಹಕ್ಕಾಗಿ ಎಳ್ಳು ತನ್ನನ್ನೇ ಅರ್ಪಿಸಿಕೊಳ್ಳುವಂತೆ ನಾವು ಗೆಳೆಯರಿಗಾಗಿ ಸಿದ್ಧವಿರಬೇಕು.
ಎಳ್ಳು ಸುಗ್ಗಿಯ ಸಂಕೇತವೂ
ಹೌದು. ಸಂಕ್ರಾಂತಿ ಸುಗ್ಗಿಯ ಹಬ್ಬ. ಜಾನಪದ ಕವಿ ‘ಬೆಳಗಾಗ ನಾನೆದ್ದು ಯಾರ್ಯಾರ ನೆನೆಯಲಿ, ಎಳ್ಳು ಜೀರಿಗೆ ಬೆಳೆಯೋಳ ಭೂಮಿತಾಯಿ ಎದ್ದೊಂದು ಗಳಿಗೆ ನೆನದೇನು’
ಎಂದು ಹಾಡಿರುತ್ತಾನೆ. ಹೀಗೆ ಎಳ್ಳು ಪ್ರಾತ:ಸ್ಮರಣೀಯವಾದ ದ್ರವ್ಯ. ಬೇರೆ ಬೇರೆ ಬೀಜಗಳಿಂದ ಎಣ್ಣೆ
ತೆಗೆದರೂ ಅವೆಲ್ಲವನ್ನೂ ತಿಲದ ಹೆಸರಿನಲ್ಲಿ ತೈಲವೆಂದೇ ಕರೆಯುತ್ತಾರೆಯೇ ಹೊರತು ತಿಲದ
ಎಣ್ಣೆಯನ್ನು ಬೇರೆ ಹೆಸರಿನಿಂದ ಕರೆಯುವುದಿಲ್ಲ. ‘ತಿಲಸ್ಯ ವಾ ತತ್ತದೃಶಸ್ಯ ವಾ ವಿಕಾರಂ ತೈಲಂ’
ಎಂದು ತಿಲವನ್ನೇ ಪ್ರಧಾನವಾಗಿ ಸ್ವೀಕರಿಸಿರುತ್ತಾರೆ. ಎಣ್ಣೆಯ ಕಾಳುಗಳಾದ ಕಡಲೆಕಾಯಿ, ಹರಳು, ಸಾಸಿವೆ
ಮುಂತಾದವುಗಳನ್ನು ತೈಲಧಾನ್ಯಗಳೆಂದೇ ಕರೆಯುತ್ತಾರೆ.
ಎಳ್ಳು ಚೀನಾ ಮತ್ತು ಇಂಡಿಯಾ
ದೇಶಗಳಲ್ಲಿ ಬೆಳೆಯುವ ಪ್ರಮುಖ ಬೆಳೆ. ನಾಲ್ಕು ತಿಂಗಳಲ್ಲಿ ಕಟಾವಿಗೆ ಬರುವ ಈ ಬೆಳೆ ಮಳೆಗಾಲದಲ್ಲಿ
ಬಿತ್ತಿದರೆ ಸಂಕ್ರಾಂತಿಗೆ ಬೇಕಾದಷ್ಟು ಧಾನ್ಯವನ್ನು ಕೊಡುತ್ತದೆ. ಇದರಲ್ಲಿ ಬಿಳಿ ಮತ್ತು ಕರಿ
ಎಳ್ಳುಗಳೆಂಬ ಮುಖ್ಯ ಪ್ರಭೇದಗಳಿವೆ. ಉತ್ತರ ಮತ್ತು ಮಧ್ಯಪ್ರದೇಶಗಳಲ್ಲಿ ಬಿಳಿ ಎಳ್ಳು, ಒರಿಸ್ಸಾ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಕರಿ ಎಳ್ಳು ಹೆಚ್ಚಾಗಿ
ಬೆಳೆಯುತ್ತದೆ. ಬಿಳಿಯ ಎಳ್ಳು ಹೆಚ್ಚಿನ ಎಣ್ಣೆಯ ಅಂಶವನ್ನು ಹೊಂದಿರುತ್ತದೆ. ಅದನ್ನೇ ನಾವು
ಸಂಕ್ರಾಂತಿಯಲ್ಲಿ ಬಳಸುವುದು. ಕರಿಯ ಎಳ್ಳು ಪಿತೃಕಾರ್ಯಕ್ಕೆ ಶ್ರೇಷ್ಠವಾದುದು. ಪಿತೃಗಳಿಗೆ ಇದು
ಪರಮಶ್ರೇಷ್ಠ ಭೋಜ್ಯವು.
ಪಿತೃಣಾಂ ಪರಮಂ ಭೋಜ್ಯಂ
ತಿಲಾಃ ಸೃಷ್ಟಾಃ ಸ್ವಯಂಭುವಾ |
ತಿಲದಾನೇನ ವೈ ತಸ್ಮಾತ್
ಪಿತೃಪಕ್ಷಃ ಪ್ರಮೋದತೇ ॥
ಎಂದು ಮಹಾಭಾರತದಲ್ಲಿ ಹೇಳಿದೆ.
ಎಳ್ಳನ್ನು ಮಾಘಮಾಸದಲ್ಲಿ ದಾನ ಮಾಡುವವನು ನರಕವನ್ನು ನೋಡಬೇಕಾಗುವುದಿಲ್ಲ. ಅದು ಪುಷ್ಟಿಯನ್ನು
ಕೊಡುತ್ತದೆ ಮತ್ತು ರೂಪವನ್ನು ವರ್ಧಿಸುತ್ತದೆ.
ಪೌಷ್ಟಿಕಾ ರೂಪದಾಶ್ಚೈವ
ತಥಾ ಪಾಪವಿನಾಶನಮ್ |
ತಸ್ಮಾತ್ ಸರ್ವಪ್ರದಾನೇಭ್ಯಃ
ತಿಲದಾನಂ ವಿಶಿಷ್ಯತೇ ॥
ವೈಜ್ಞಾನಿಕವಾಗಿಯೂ ಎಳ್ಳಿನಲ್ಲಿ
ಕೊಬ್ಬಿನ ಅಂಶ ಇರುವುದರಿಂದ ಅದು ಪುಷ್ಟಿಯನ್ನು ನೀಡುತ್ತದೆ.ಅದರಿಂದ ದೇಹ ಸೌಂದರ್ಯ
ಹೆಚ್ಚುತ್ತದೆ. ಎಣ್ಣೆಯ ಅಂಶ ಚರ್ಮವನ್ನು ಆರೋಗ್ಯವಾಗಿಡುವುದು ನಮಗೆಲ್ಲಾ ಗೊತ್ತಿರುವ ವಿಷಯ. ಈ
ಚಳಿಗಾಲದಲ್ಲಿ ವಾತಾವರಣದಲ್ಲಿ ತೇವಾಂಶ ಕಡಿಮೆಯಿರುವುದರಿಂದ ಚರ್ಮ ಒಡೆಯುತ್ತದೆ. ಎಳ್ಳು ಮತ್ತು
ಉಳಿದ ಅದರ ಘಟಕಗಳು ಇದಕ್ಕೆ ಉತ್ತಮವಾದ ರೋಧವನ್ನು ಒದಗಿಸುತ್ತವೆ. ಆದ್ದರಿಂದ ತಿಲವನ್ನು ನಾವು
ತಿನ್ನಬೇಕು ಮತ್ತು ದಾನ ಮಾಡಬೇಕು.
ಸಂಕ್ರಮಣದಲ್ಲಿ ಎಳ್ಳಿನ ದಾನ
ಅಕ್ಷಯವಾದ ಫಲವನ್ನು ಕೊಡುತ್ತದೆಂದು ಯಮನೇ ಹೇಳಿರುತ್ತಾನೆ. ಯಮದೂತರು ತಪ್ಪಿನಿಂದ ಒಬ್ಬ
ಬ್ರಾಹ್ಮಣನನ್ನು ನರಕಕ್ಕೆ ಒಯ್ದಿದ್ದರು. ಯಮನು ಅವನನ್ನು ಸತ್ಕರಿಸಿ, ಅವನೊಡನೆ ಧರ್ಮಸಂವಾದ ನಡೆಸಿ ಹಿಂದಕ್ಕೆ ಕಳಿಸಿಕೊಡುತ್ತಾನೆ. ಈ
ಸಂದರ್ಭದಲ್ಲಿ ತಿಲದಾನದ ಮಹತ್ವವು ವಿಶೇಷವಾಗಿ ಹೇಳಲ್ಪಟ್ಟಿದೆ. ಎಳ್ಳಿನಿಂದ ಮಾಡಿದ ಗೋವನ್ನು
ದಾನಮಾಡಿ,
ಗೋದಾನದ ಫಲವನ್ನು ಪಡೆಯಬಹುದು.
ಎಳ್ಳು ಬಹುವಿಧವಾದ ಉಪಯೋಗವನ್ನು
ಹೊಂದಿದೆ. ಅದನ್ನು ಆರು ವಿಧವಾಗಿ ಬಳಸಬಹುದೆಂದು ಕೆಳಗಿನ ಶ್ಲೋಕ ಹೇಳುತ್ತದೆ:
ತಿಲೋದ್ವರ್ತೀ ತಿಲಸ್ನಾಯೀ
ತಿಲಹೋಮೀ ತಿಲಪ್ರದಃ |
ತಿಲಭುಕ್ ತಿಲವಾಪೀ ಚ
ಷಟ್‌ತಿಲೇ ನಾವಸೀದತಿ ॥
ಎಳ್ಳಿನ ಎಣ್ಣೆಯಿಂದ ದೀಪ
ಹಚ್ಚುವುದು, ಎಳ್ಳೆಣೆಯನ್ನು
ಹಚ್ಚಿಕೊಂಡು ಸ್ನಾನ ಮಾಡುವುದು, ಎಳ್ಳನ್ನು
ಹೋಮ ಮಾಡುವುದು, ದಾನ ಮಾಡುವುದು, ತಿನ್ನುವುದು ಮತ್ತು ಬಿತ್ತುವುದು, ಹೀಗೆ ಈ ಆರು ವಿಧಗಳಿಂದಲೂ ಎಳ್ಳನ್ನು ಬಳಸಿಕೊಳ್ಳುವವನು
ನಾಶವಾಗುವುದಿಲ್ಲ. ಶನಿಗ್ರಹದ ಪೀಡಾಪರಿಹಾರಾರ್ಥವಾಗಿ ಎಳ್ಳಿನ ದೀಪ ಹಚ್ಚುವ ವಾಡಿಕೆಯಿದೆ.
ಎಳ್ಳಿನ ದಾನವು ಪವಿತ್ರವೆಂದರೂ, ಬರಿಯ
ಎಳ್ಳನ್ನು ದಾನವಾಗಿ ಯಾರೂ ಸ್ವೀಕರಿಸುವುದಿಲ್ಲ.
ಬ್ರಾಹ್ಮಣಃ ಪ್ರತಿಗೃಹ್ಣೀಯಾತ್
ವೃತ್ತ್ಯರ್ಥಂ ಸಾಧುತಸ್ತಥಾ |
ಅತ್ಯಲ್ಪಮಪಿ ಮಾತಂಗ
ತಿಲತಾಹಾಂಶ್ಚ ವರ್ಜಯೇತ್॥
ಎಂದು ಧರ್ಮಶಾಸ್ತ್ರ
ಹೇಳುತ್ತದೆ. ಆನೆ, ಎಳ್ಳು ಮತ್ತು ಕಬ್ಬಿಣಗಳ
ದಾನವನ್ನು ತೆಗೆದುಕೊಳ್ಳಬಾರದೆಂದು ಇಲ್ಲಿ ನಿಷೇಧಿಸಿದೆ. ಆದ್ದರಿಂದ ಬರಿಯ ಎಳ್ಳನ್ನು ದಾನ ಕೊಡಲು
ಹೋದರೆ ಯಾರೂ ತೆಗೆದುಕೊಳ್ಳುವುದಿಲ್ಲ. ಅದಕ್ಕಾಗಿಯೇ ನಮ್ಮ ಹಿರಿಯರು ಉತ್ತರಾಯಣ ಪುಣ್ಯಕಾಲದಲ್ಲಿ
ಈ ರೀತಿ ಎಳ್ಳನ್ನು ವಿನಿಮಯ ಮಾಡಿಕೊಳ್ಳುವ ಉಪಾಯವನ್ನು ಕಂಡುಕೊಂಡಿರುತ್ತಾರೆ.
ಎಳ್ಳಿನ ಜೊತೆಗೆ ಹುರಿದಕಡಲೆಬೀಜ, ಬೆಲ್ಲ, ಹುರಿಗಡಲೆ
ಮತ್ತು ಕೊಬ್ಬರಿಯನ್ನು ಸೇರಿಸುವುದರಿಂದ ಅದರ ಪುಷ್ಟಿ ಮತ್ತು ರುಚಿಗಳೆರಡೂ ಹೆಚ್ಚುತ್ತವೆ. ಈ
ಐದನ್ನೂ ಸೇರಿಸಿ ಮಾಡಿದ ಎಳ್ಳನ್ನು ಪಂಚಕಜ್ಜಾಯವೆಂದೂ ಕರೆಯುತ್ತಾರೆ. ಗಣಪತಿಗೂ ಇದು ಪ್ರಿಯವಾದ
ತಿನಿಸು.
ಎಳ್ಳಿನಲ್ಲಿರುವ ಕಡಲೆಕಾಯಿ
ಮುಂತಾದವುಗಳ ವಿಷಯ ಹೆಚ್ಚು ಹೇಳದಿದ್ದರೂ ಬೆಲ್ಲದ ವಿಷಯ ಹೇಳಲೇಬೇಕು. ಎಳ್ಳಿನ ಜೊತೆ ಬೆಲ್ಲ
ಒಳ್ಳೆಯ ಜೋಡಿ. ಸಕ್ಕರೆ ಅಚ್ಚಿನ ಚೂರುಗಳಾಗಲೀ, ಜೀರಿಗೆ ಪೆಪ್ಪರುಮಿಂಟ್‌ಗಳಾಗಲೀ ಇದಕ್ಕೆ ಸರಿದೂಗಲಾರವು. ಎಳ್ಳಿನಲ್ಲಿ
ಸ್ವಲ್ಪ ಒಗಚು ರುಚಿಯಿರುತ್ತದೆ. ಅದನ್ನು ಪ್ರತಿರೋಧಿಸಲು ಬೆಲ್ಲದ ಸವಿಯೇ ಬೇಕು. ಜೊತೆಗೆ
ಎಳ್ಳು
ಸ್ವಲ್ಪ ಪಿತ್ತಪ್ರಕೋಪವನ್ನು ಉಂಟುಮಾಡಬಹುದು.
ಕಡಲೆಕಾಯಿಬೀಜ ಮತ್ತು ಕೊಬ್ಬರಿ
ಕೂಡ ಹಾಗೆಯೇ ಮಾಡುತ್ತವೆ. ಇವೆಲ್ಲ ದುಷ್ಪರಿಣಾಮಗಳನ್ನು ಕಡಿಮೆಮಾಡಿ, ಈ ತಿನಿಸನ್ನು ಸಂಪೂರ್ಣ ಆರೋಗ್ಯಕರವಾಗಿ ಮಾಡುವ ಒಂದೇ ಒಂದು
ಘಟಕವೆಂದರೆ ಬೆಲ್ಲ.
ಹಿಂದಿನಿಂದಲೂ ಬೆಲ್ಲ ನಮ್ಮ
ಗ್ರಾಮಗಳ ಗುಡಿಕೈಗಾರಿಕೆಯ ಉತ್ಪನ್ನ. ಯಾವುದೇ ರಾಸಾಯನಿಕ ವಸ್ತುಗಳ ಮಿಶ್ರಣವಿಲ್ಲದ ಸಂಪೂರ್ಣ
ಸಾವಯವ ಆಹಾರ. ಸಕ್ಕರೆಯಲ್ಲಿ ಬಣ್ಣವನ್ನು ತೆಗೆಯಲು ಕೆಲವು ವಸ್ತುಗಳನ್ನು ಬಳಸುವುದುಂಟು. ಬೆಲ್ಲ
ತನ್ನ ನೈಸರ್ಗಿಕ ಬಣ್ಣ ಮತ್ತು ರುಚಿಯನ್ನು ಉಳಿಸಿಕೊಂಡಿರುತ್ತದೆ. ಸಕ್ಕರೆಗಿಂತ ಮೃದುವಾಗಿಯೂ
ಇದ್ದು,
ಎಳ್ಳಿನೊಡನೆ ಹೊಂದಿಕೊಳ್ಳುತ್ತದೆ. ‘ಎಳ್ಳು ಬೆಲ್ಲ ತಿಂದು ಒಳ್ಳೆಯ
ಮಾತನಾಡು’ ಎನ್ನುತ್ತಾರೆಯೇ ಹೊರತು ’ಎಳ್ಳು ಸಕ್ಕರೆ’ ಎನ್ನುವುದಿಲ್ಲ. ಬೆಲ್ಲ ತಂಪಾದ
ಅನುಭವವನ್ನು ಕೊಡುವಂತೆ ಸಕ್ಕರೆ ಕೊಡುವುದಿಲ್ಲ. ಇಂದಿಗೂ ಹಳ್ಳಿಯ ಕಡೆ ರೈತರು ಬಿಸಿಲಿನಲ್ಲಿ
ಕೆಲಸ ಮಾಡುವಾಗ ಬೆಲ್ಲದ ನೀರನ್ನು ಕುಡಿಯುತ್ತಾರೆ. ಮನೆಗೆ ಬಂದವರಿಗೂ ನೀರಿನ ಜೊತೆ ಬಾಯರಿಕೆಗೆ
ಬೆಲ್ಲವನ್ನು ಕೊಡುತ್ತಾರೆ. ಬೆಲ್ಲದಲ್ಲಿ ನಾರಿನ ಆಂಶ, ಖನಿಜಾಂಶ ಮತ್ತು ಲವಣಗಳು ಸಕ್ಕರೆಗಿಂತ ಅಧಿಕವಾಗಿರುತ್ತವೆ. ಕಬ್ಬಿಣ, ಸುಣ್ಣ, ಪೊಟ್ಯಾಷಿಯಂ, ರಂಜಕ, ಮೆಗ್ನಿಷಿಯಂ
ಮುಂತಾದವು ಹೆಚ್ಚಾಗಿರುವುದರಿಂದ ಇದು ಸಕ್ಕರೆಗಿಂತ ನಿಧಾನವಾಗಿ ಜೀರ್ಣವಾಗಿ ರಕ್ತವನ್ನು
ಸೇರುತ್ತದೆ. ಸಕ್ಕರೆ ಕಾಹಿಲೆಯಿರುವವರಿಗೂ ಸಕ್ಕರೆಗಿಂತ ಬೆಲ್ಲ ಕಡಿಮೆ ಅಪಾಯಕಾರಿ. ಆದ್ದರಿಂದ
ಎಳ್ಳಿನ ಜೊತೆಗೆ ಬೆಲ್ಲವೇ ಸರಿಯಾದ ಜೋಡಿ. ಎಳ್ಳಿನಿಂದ ಮಾಡುವ ಚಿಗಳಿ, ಎಳ್ಳುಂಡೆ ಮುಂತಾದ ಖಾದ್ಯಗಳಿಗೂ ಬೆಲ್ಲವನ್ನೇ ಹಾಕುತ್ತಾರೆ. ಎಳ್ಳು
ಬೆಲ್ಲ ಸೇರಿದ ಚಿಗಳಿಯನ್ನು ಋತುಮತಿಯಾದ ಹೆಣ್ಣುಮಕ್ಕಳಿಗೆ ತುಪ್ಪದ ಜೊತೆ ಆರೈಕೆಗೆ ಕೊಡುತ್ತಾರೆ.
ಇದು ಸೊಂಟಕ್ಕೆ ಶಕ್ತಿಯನ್ನು ನೀಡುತ್ತದೆ.
ಸಂಕ್ರಾಂತಿಯಲ್ಲಿ ಹೀಗೆ
ತಯಾರಿಸಿದ ಎಳ್ಳನ್ನು ಬಾಂಧವರಿಗೆ ಮತ್ತು ಸ್ನೇಹಿತರಿಗೆ ಹಂಚುವುದು ಮತ್ತೊಂದು ಸಡಗರ.
ವರ್ಷಕ್ಕೊಮ್ಮೆಯಾದರೂ ಬಂಧುಗಳನ್ನು ಭೇಟಿಮಾಡಿ, ಕಷ್ಟಸುಖಗಳನ್ನು ಹಂಚಿಕೊಳ್ಳಲು ಇದೊಂದು ಸದಾವಕಾಶ. ಒಂದೇ
ಊರು-ಕೇರಿಯಲ್ಲಿದ್ದರೂ, ಒಬ್ಬರನ್ನೊಬ್ಬರು
ಸಂಧಿಸುವುದು ಮತ್ತು ಮಾತನಾಡುವುದು ಇತ್ತೀಚೆಗೆ ಅಪರೂಪವಾಗಿಬಿಟ್ಟಿದೆ. ಸಂಕ್ರಾಂತಿಯ ಎಳ್ಳು ಈ
ವಿಷಯದಲ್ಲಿ ಸಂಪರ್ಕ ಸೇತುವೆಯಾಗಿ ಕೆಲಸಮಾಡುತ್ತದೆ.
ಎಳ್ಳಿನ ಜೊತೆಗೆ ಕಬ್ಬು, ಸಕ್ಕರೆಅಚ್ಚು ಮತ್ತು ಹಣ್ಣುಗಳನ್ನು ಹಂಚುತ್ತಾರೆ. ಕಬ್ಬು ಸುಗ್ಗಿಯ
ಸಂಕೇತ. ಎಲ್ಲ ದೇವತೆಗಳ ಕೈಯಲ್ಲಿಯೂ ವಿರಾಜಿಸುವ ವಿಶೇಷ ವಸ್ತುವಿದು. ಅದರ ಗಿಣ್ಣುಗಳಿಗೆ
ಪರ್ವವೆಂದು ಹೆಸರು. ಹಬ್ಬಕ್ಕೂ ಸಂಸ್ಕೃತದಲ್ಲಿ ಪರ್ವವೆಂದೇ ಹೆಸರು. ಸಕ್ಕರೆ ಅಚ್ಚಿನಲ್ಲಿ ವಿವಿಧ
ಆಕಾರಗಳನ್ನು ಮೂಡಿಸುವ ಕಲೆ ಈ ಸಮಯದಲ್ಲಿಯೇ ಅಭಿವ್ಯಕ್ತಗೊಳ್ಳಬೇಕು.
ಈ ಹಬ್ಬದಿಂದ ಮುಂದೆ ಸೂರ್ಯ
ಉತ್ತರದ ಕಡೆಗೆ ಚಲಿಸುತ್ತಾನೆ. ದೇವತೆಗಳ ಹಗಲು ಪ್ರಾರಂಭವಾಗಿ ಮುಂದೆ ಶುಭಕಾರ್ಯಗಳಿಗೆ
ಪ್ರಶಸ್ತವೆನಿಸುತ್ತದೆ. ಗೋಪೂಜೆಯೂ ಈ ಹಬ್ಬದ ಇನ್ನೊಂದು ವಿಶೇಷ. ನಮ್ಮ ಸುಖಜೀವನಕ್ಕೆ
ಸಹಾಯವಾಗಿರುವ ಸೂರ್ಯ, ಗೋವು, ಬಂಧುಗಳು, ಎಲ್ಲವನ್ನೂ
ನೆನಪಿಗೆ ತಂದುಕೊಡುವ ವಿಶೇಷ ಅವಕಾಶವಿದು. ಅಂದಿನಿಂದ ಅನೇಕ ಸಂಕ್ರಾಂತಿ ವ್ರತಗಳನ್ನು ಮಾಡಬಹುದು.
ಧಾನ್ಯ ಸಂಕ್ರಾಂತಿ, ಲವಣ, ಭೋಗ (ಅಕ್ಕಿ ಮತ್ತು ಬೆಲ್ಲ), ರೂಪ (ತುಪ್ಪ), ಜ್ಯೋತಿ ಸೌಭಾಗ್ಯ, ತಾಂಬೂಲ, ಮನೋರಥ
(ಬೆಲ್ಲ),
ಆಯಸ್ಸು (ಹಾಲುತುಪ್ಪ) ಈ ರೀತಿ ಅನೇಕ ಸಂಕ್ರಾಂತಿ ವ್ರತಗಳು
ಹೇಳಲ್ಪಟ್ಟಿವೆ. ಸಂಕ್ರಮಣ ಕಾಲದಲ್ಲಿ ವರ್ಷಪೂರ್ತಿ ಮಾಡುವ ವ್ರತಗಳಿವು. ಇವು ಮನಸ್ಸಿಗೆ
ಶುದ್ಧತೆಯನ್ನು ನೀಡುತ್ತದೆ. ಹೀಗೆ ಸಂಕ್ರಾಂತಿ ನಮಗೆ ಇಹಪರಗಳೆರಡನ್ನೂ ಸಾಧಿಸುವ ವಿಶಿಷ್ಟ
ಹಬ್ಬವಾಗಿದೆ...
(Contributed by Shri B.S.Harish,,,)
ಎಲ್ಲೊ ಇದ್ದ ಎಳ್ಳು-ಬೆಲ್ಲ ದ ಲೇಖನವನ್ನು ಹೆಕ್ಕಿ ನಮ್ಮುಂದೆ ಚೆಲ್ಲಿದ ಹರೀಶ್ ರವರಿಗೆ ಧನ್ಯವಾದಗಳು
ReplyDelete