Sunday, 31 January 2016

Bhava Guccha 13

ಭಾವ ಗುಚ್ಛ by “ತ್ರಿವೇಣಿ ತನಯ”

ರಾಯರ ಎತ್ತರ -ನಾವೆಷ್ಟು ಹತ್ತಿರ?

ನಮೋ ಯತಿಕುಲತಿಲಕ ಶ್ರೀ ರಾಘವೇಂದ್ರ,
ನಿಮ್ಮ ಹೆಸರಲಿ ಮಠಗಳಾಗಿವೆ ಬರೀ ವ್ಯಾಪಾರ ಕೇಂದ್ರ,
ಬೇಕಿಲ್ಲ ನಿಮಗೆ ರಜತ-ಸುವರ್ಣ ತೇರುಗಳಲಿ ಮೆರವಣಿಗೆ,
ನಿಮ್ಮ ಗ್ರಂಥಗಳ ಕಲಿತು ತರುವುದಾಗುತ್ತ ಲೇ ಇಲ್ಲ ಆಚರಣೆಗೆ.

ರಾಯರ -ನಮ್ಮ ವೈರಾಗ್ಯ

ನಿಮಗಿರಲಿಲ್ಲವೇ ನಿಮ್ಮ ದಾರಿದ್ರ್ಯ ನಿವಾರಣೆಯ ಶಕ್ತಿ!
ನಗುತಲೇ ನೀಗಿಕೊಂಡಿರಿ ಮಾಡುತಾ ಪ್ರಾರಬ್ಧಗಳ ಭುಕ್ತಿ,
ಮಠಗಳಾಗಿವೆ ಇಂದು ಧನ ಕನಕಗಳ ಭಂಡಾರ,
ಆಗುತ್ತಿಲ್ಲ ನೀವಿತ್ತ ನಿಜಸಂಪತ್ತಿನ ಸಾಕ್ಷಾತ್ಕಾರ .

ರಾಯರ ಕರುಣೆ -ನಮ್ಮ ಸ್ಮರಣೆ

ಏನೆಂದು ಕೊಂಡಾಡಲೀ ಶ್ರೀ ರಾಯರ ಮಹಿಮೆ,
ಕೊಡುವುದೆಲ್ಲವ ಕೊಟ್ಟು ಹರಸಿದವರ ಹಿರಿಮೆ ,
ಪಟ್ಟಿ ಮಾಡಲಳವೇ ಈ ಪಾಮರ ಅವರ ಗ್ರಂಥವಿಸ್ತಾರ ,
ಅವರಿಗವರೇ ಸಾಟಿ ಅವರೊಂದು ಜ್ಞಾನಸಾಗರ .

ಪ್ರಾತಃಸಂಕಲ್ಪ ಗದ್ಯವೊಂದೇ ಸಾಕು ಜನ್ಮಕ್ಕಾಗುವಷ್ಟು ಗಂಟು,
ಸರ್ವ ಸಮರ್ಪಣ ಗದ್ಯ ಸಾಲದೇ ಕಳಚಲು ಭವದ ಅಂಟು,
ರಾಮ ಕೃಷ್ಣಚಾರಿತ್ರ್ಯ ಮಂಜರಿ ಹೃದಯದಲಿ ಹರಿಯಲೇ ಬೇಕಾದ ಝರಿ,
ಮ.ಭಾ.ತಾ.ನಿ.ಭಾವಸಂಗ್ರಹ ಕಳೆವುದೆಲ್ಲ ಅರಿಗಳ ಉರಿ,
ಅವತಾರಗಳಲ್ಲಿ ಜ್ಞಾನ ಹರಿಸುತ್ತಾ ಕಾರುಣ್ಯ ತೋರಿದ ಗುರು,
ನಮ್ಮೊಳಗೆ ನಿಂತು ಜ್ಞಾನದೀಪ ಉರಿಸುತ್ತ ಹೆದ್ದಾರಿಯ ತೋರು .

ಬರೆದೆ ನೀ ವೇದಗಳಿಗೆ ಭಾಷ್ಯ,
ಕೊಟ್ಟೆ ಪುರುಷ-ಪಂಚಸೂಕ್ತಾದಿಗಳ ಹರುಷ,
ಪ್ರಸ್ಥಾನತ್ರಯಗಳ ಅಧ್ಯಯನದ ಕೊಡುಗೆ,
ಹರಸು ಗುರುವೇ ನಮಗಿತ್ತು ನೋಡುವ ಬಗೆ.

ಪ್ರಾರ್ಥನೆ

ಇಲ್ಲವೆಂದರೂ ಇದ್ದಾರೆ ನಿಜ ಕಳಕಳಿಯ ಮಂದಿ,
ಅಂಥವರ ಹಂಬಲ ಅಪಾರ ಹೋಗಿಲ್ಲವದು ಕುಂದಿ,
ನಿನ್ನ ನಿಜ ಭಕ್ತರೆಡೆಗೆ ಕಾರುಣ್ಯ ಹರಿಸು,
ತತ್ವಮಣಿಗಳನೀಯುತ ಪ್ರೀತಿಯಲಿ ಹರಸು.

(Contributed by Shri Govind Magal)

No comments:

Post a Comment

ಗೋ-ಕುಲ Go-Kula