ಭಾವ ಗುಚ್ಛ By "ತ್ರಿವೇಣಿ ತನಯ"
ಅನುಭವದ ಕೆತ್ತನೆ
ಉಳಿಪೆಟ್ಟು ತಿಂದ ಕಲ್ಲದು ಮೂರ್ತಿಯಾಯ್ತು ,
ಒಲ್ಲೆನೆನುತ ದೂರ ಉಳಿದುದದು ಬರೀ ಮೆಟ್ಟಿಲಾಯ್ತು ,
ಕಷ್ಟ ಕಾರ್ಪಣ್ಯ ಟೀಕೆಗಳಿಗೆ ಒಡ್ಡಿಕೋ ನಿನ್ನ ,
ಕೊಳೆಕಳೆದ ಚಲುಮನದ ಗೊಂಬೆಯಾಗುವೆ ಚೆನ್ನ .
ಎಡಬಿಡಂಗಿ
ಈ ನೆಲ ಜಲ ಸಂಸ್ಕೃತಿ ಭಾಷಾಭಿಮಾನ,
ನಶಿಸಿ ನಡೆದಿದೆ ಬರೀ ಅಂಧ ಆಂಗ್ಲಾನುಕರಣ,
ಒಂದು ಕಲಿಯಲೇ ಇಲ್ಲ ಇನ್ನೊಂದು ಬರಲಿಲ್ಲ ,
ಆಗುತಿದೆ ಎಡಬಿಡಂಗಿಗಳ ಬೀಡು ನಾಡೆಲ್ಲ .
ನವಯುಗ
ಸ್ಪಂದನ ಸ್ಫುರಣ ಆತ್ಮಾವಲೋಕನ ,
ಅಂತ:ಕರಣ ಚಿಂತನ ಮಂಥನ ,
ಪದಗಳ ಸುಳಿವೇ ಇಲ್ಲ ನವಪೀಳಿಗೆಯಲ್ಲಿ,
ಯಾಂತ್ರಿಕ ಓಟದಲ್ಲಿ ಹೊರಟಿರುವುದಾದರೂ ಎಲ್ಲಿ?
ಭಾಷೆ ಭಾವ
ಭಾಷೆ ಯಾವುದೇ ಇರಲದು ಗೌಣ ,
ಭಾವವೊಂದೇ ಮುಖ್ಯ ಹೂರಣ ,
ಚಿಂತಕರು ಹರಿಸುತ್ತಿರಿ ಅನುಸಂಧಾನದ ದಾರಿ ,
ಮುಂದೊಮ್ಮೆ ಒಪ್ಯಾನು ಹರಿ ಕಾರುಣ್ಯ ತೋರಿ .
ಹರಿದಿನ
ಇಂದು ಪದ್ಮನಾಭನ(ಹರಿ) ದಿನದ ಉಪವಾಸ ,
ಕೊಟ್ಟರು ಚಿಂತಕರು ಅನುಸಂಧಾನದ "ಉಪರಿ"ವಾಸ ,
ಸಾಗಿರಲಿ ಬಳಗ ಸತ್ಚಿಂತನೆಯ ಜಾಡಿನಲ್ಲಿ ,
ಅದಿರದ ಏನೇ ಕರ್ಮಗಳೂ ನಿರರ್ಥಕ ಬಾಳಿನಲ್ಲಿ
(Contributed by Shri Govind Magal)
No comments:
Post a Comment
ಗೋ-ಕುಲ Go-Kula