Saturday 23 January 2016

ಶ್ರೀ ವಾದಿರಾಜವಿರಚಿತ ಉಡುಪಿಕೃಷ್ಣ ಶ್ಲೋಕ


ಕೃಷ್ಣಂ ವಂದೇ ಮಂಥಪಾಶಧರಂ
ದಿವ್ಯಾರ್ಭಕಾಕೃತಿಂ |
ಶಿಖಾಬಂಧ ತ್ರಯೋಪೇತಮ್
ಭೈಷ್ಮೀ ಮಧ್ವ ಕರಾರ್ಚಿತಮ್ ||

ಇದು ಉಡುಪಿ ಕೃಷ್ಣನ ಬಗೆಗೆ ಶ್ರೀವಾದಿರಾಜರು ರಚಿಸಿದ ಅಧ್ಬುತವಾದ ಶ್ಲೋಕ... ಅವರು ಹೇಳ್ತಾರೆ : ಈ ಕೃಷ್ಣನ ವಿಗ್ರಹ ಬಾಲಕೃಷ್ಣನ ನೆನಪಿಗೋಸ್ಕರ ರುಗ್ಮಿಣಿ (ಎಲ್ಲ ರುಕ್ಮಿಣಿ ಅಂತಾರೆ ಅದು ತಪ್ಪು ಶಬ್ದ ಅಂತಾರೆ ಬನ್ನಂಜೆಯವರು) ದ್ವಾಪರದಲ್ಲೇ ಕೆತ್ತಿಸಿಟ್ಟುಕೊಂಡದ್ದು ಮತ್ತು ತನ್ನ ಉದ್ಯಾನದಲ್ಲಿ ಇಟ್ಟು ಪೂಜಿಸುತ್ತಿದ್ದಳಂತೆ... ಅದು ಕೇವಲ 18 ಇಂಚು ಎತ್ತರದ (ಒಂದೂವರೆ ಅಡಿಯ) ವಿಗ್ರಹ "ದಿವ್ಯಾರ್ಭಕಾಕೃತಿಂ" ದೈವತ್ವ ಮಡುಗಟ್ಟಿದ ಕೃಷ್ಣನ ಬಾಲ್ಯವನ್ನು ನೆನಪಿಸುವ ವಿಗ್ರಹ..

"ಶಿಖಾಬಂಧ ತ್ರಯೋಪೇತಂ" ಮೊದಲೇ ಕೃಷ್ಣ ಅಂದರೆ ಗುಂಗುರು ಕೂದಲಿನ ಸುಂದರ ಸ್ವರೂಪ... ಬಾಲಕನಾಗಿದ್ದಾಗ ಕೃಷ್ಣನಿಗೆ ತಲೆತುಂಬ ಗುಂಗುರು ಕೂದಲಿದ್ದುದನ್ನು ನೆನೆಪಿಸವ ಈ ವಿಗ್ರಹದಲ್ಲಿ ಮೂರು ಕಡೆ ಜುಟ್ಟು ಕಟ್ಟಲ್ಪಟ್ಟಿದೆ...

"ಭೈಷ್ಮೀ ಮಧ್ವ ಕರಾರ್ಚಿತಮ್"

ಭೀಷ್ಮಕನ ಮಗಳಾದ್ದರಿಂದ ರುಗ್ಮಿಣಿ ಭೈಷ್ಮಿಯಾದಳು... ಆ ಭೈಷ್ಮಿ ಮುಟ್ಟಿ ಪೂಜಿಸಿದ ವಿಗ್ರಹ ಇದು... ಆ ವಿಗ್ರಹ ದ್ವಾರಕೆಯಿಂದ (ಗುಜರಾತ್ ನಿಂದ) ಹಡಗಿನಲ್ಲಿ ಬಂದು ಉಡುಪಿಯ (ಮಲ್ಪೆ) ಸಮುದ್ರ ಸೇರಿದ ಕಥೆ ಎಲ್ಲರಿಗೂ ಗೊತ್ತಿದೆ...  ಗೋಪೀಚಂದನದ ಗೆಡ್ಡೆಯೊಳಗೆ ಬಂದು ಸಮುದ್ರ ಸೇರಿದ ರುಗ್ಮಿಣಿ ಪೂಜಿಸಿದ ವಿಗ್ರಹವನ್ನು ಆಚಾರ್ಯ ಮಧ್ವರು ಸಮುದ್ರದಿಂದ ಎತ್ತಿ ತಂದು ಉಡುಪಿಯಲ್ಲಿ ಪ್ರತಿಷ್ಠಾಪಿಸಿ ಪೂಜಿಸಿದರು.... "ಭೈಷ್ಮೀಮಧ್ವ ಕರಾರ್ಚಿತಮ್"...

"ಮಂಥಪಾಶಧರಂ" ಈ ಕೃಷ್ಣ ಬಲಗೈಯಲ್ಲಿ ಕಡೆಗೋಲು ಹಿಡಿದಿದ್ದಾನೆ... ಹೇಗೆ ಮೊಸರಿನಿಂದ ಬೆಣ್ಣೆ ತೆಗೆಯಲು  ಕಡೆಗೋಲು (ಮಂಥು) ಬೇಕೋ ಹಾಗೆ ನಮ್ಮ ಹೃದಯದಲ್ಲೂ ಭಕ್ತಿಯ ಬೆಣ್ಣೆ (ಹೃದಯನವನೀತ) ಮೂಡಿಬರಬೇಕಾದರೆ ಕಡೆಗೋಲು ಬೇಕು...  ನಮ್ಮ ಮನಸ್ಸೇ ಆ ಕಡೆಗೋಲು, ವೇದ ಶಾಸ್ತ್ರಗಳೆಂಬ ಸಮುದ್ರದಲ್ಲಿ ನಮ್ಮ ಮನಸ್ಸೆಂಬ ಕಡೆಗೋಲನಿರಿಸಿ ಮಥನ ಮಾಡಿದಾಗ ಕೃಷ್ಣನ ಅನುಗ್ರಹದಿಂದ ಭಕ್ತಿಯ ಬೆಣ್ಣೆ ಮೂಡುವ ಸಂಕೇತವೇ ಕೃಷ್ಣ ಕೈಯಲ್ಲಿ ಹಿಡಿದಿರುವ ಕಡೆಗೋಲು.... ಆ ಬೆಣ್ಣೆಯನ್ನು ಕೃಷ್ಣ ಕದ್ದಾಗ (ನಮ್ಮ ಭಕ್ತಿಯನ್ನು ಕೃಷ್ಣ ಸ್ವೀಕರಿಸಿದಾಗ) ಮಾತ್ರ ಕಡೆದ ಬೆಣ್ಣೆ ಸಾರ್ಥಕ... ಇಲ್ಲದಿದ್ದರೆ ವೃಂದಾವನದ ಗೋಪಿಕೆಯರ ಹಾಗೆ ಕೃಷ್ಣ ಬರಲೇ ಇಲ್ಲ , ಕೃಷ್ಣ ಬೆಣ್ಣೆ ಕದಿಯಲೇ ಇಲ್ಲ ಎಂಬ ಚಡಪಡಿಕೆ...

ಕೃಷ್ಣನ ಇನ್ನೊಂದು ಕೈಯಲ್ಲಿ ಪಾಶ ಇದೆ... ಅದು ನಮ್ಮಲ್ಲಿರುವ ದೋಷಗಳನ್ನು ಪಾತಕಗಳನ್ನು ಅನೇಕ ಜನ್ಮಗಳಿಂದ ಕೂಡಿಟ್ಟ ಪಾಪರಾಶಿಗಳನ್ನು ಹರಣಮಾಡಿ ನಮ್ಮನ್ನು ಉದ್ಧರಿಸುವುದಕ್ಕಾಗಿಯೇ ಇರುವಂತದು....

ನಾರಾಯಣೋ ನಾಮ ನರೋ ನರಾಣಾಂ ಪ್ರಸಿದ್ಧ ಚೋರಃ ಕಥಿತಃ ಪೃಥಿವ್ಯಾಂ.... ಎಂಬಂತೆ ನಮ್ಮ ಪಾಪಗಳನ್ನೆಲ್ಲ ಕದಿಯುವ ನಾರಾಯಣ ಕೃಷ್ಣನೇ ಅಲ್ಲವೇ...

ಹೀಗೆ ಶ್ರೀವಾದಿರಾಜರು ಈ ಸುಂದರ ಶ್ಲೋಕದ ಮೂಲಕ ಹೃದಯ ತುಂಬಿ ಉಡುಪಿಯ ಕೃಷ್ಣನನ್ನು ಕೊಂಡಾಡಿದ ಪರಿ...
(Contributed by Shri B.S.Harish)

No comments:

Post a Comment

ಗೋ-ಕುಲ Go-Kula