Wednesday 20 January 2016

Bhava Guccha 02

ಭಾವ ಗುಚ್ಛ  By  "ತ್ರಿವೇಣಿ ತನಯ"
ಅಧ್ಯಾತ್ಮ
ಅಧ್ಯಾತ್ಮ ಚಿಂತನೆಯದು ಭಾಷೆಗೆಟುಕದ ಕಾವ್ಯ,
ಕಾಣದ ಹರಿವಿನ ಝರಿ ಗುಹೆಯೊಳಗೂ ಗುಹ್ಯ,
ಹೊಳೆವ ಮಿಂಚೊಂದು ಕೊಡುವುದು ಉತ್ತರ ನೂರಾರು,
ಯಾರಿಗೂ ಹೇಳದಿರು ಜನ ಹುಚ್ಚನೆಂದಾರು!

ಜೀವ ಯೋಗ್ಯತೆ
ಯಾವ ಜೀವಸ್ವರೂಪ ಯಾರಿಗೇನು ಗೊತ್ತು,
ತಿಳಿಸಲಾರದು ಅದನು ಎಂಥ ಕಸರತ್ತು ,
ಹಂಗಿಸದಿರು ಭಂಗಿಸದಿರು ಬೇಡ ಮಸಲತ್ತು,
ವಂದಿಸುತ ಹೊಂದಿ ಬಾಳುವ ಕಲೆಯ ಬೆನ್ಹತ್ತು

ತಾರತಮ್ಯ
ಸಮಾನತೆ ಎಂಬುವುದು ಎಂದೆಂದೂ ಇಲ್ಲ,
ಸೃಷ್ಟಿಯನೇ ನೋಡಿ ಎಲ್ಲೆಲ್ಲೂ ಏಕತಾನತೆಯ ಸುಳಿವಿಲ್ಲ,
ಭಿನ್ನ ಜೀವ ಭಿನ್ನ ಸ್ವಭಾವ ಇದನಾರೂ ಮಾಡಿಲ್ಲ,
ಬೇವು ನೆಟ್ಟು ಪಾನಕ ಸುರಿದರದು ಕೊಟ್ಟೀತೆ ಬೆಲ್ಲ?

ನೋಟದ ಆಟ
ದೃಷ್ಟಿ ನಿರ್ಮಲವಿರೆ ಲೋಕವೆಲ್ಲಾ ಸೊಗಸು,
ನೋಡುವುದು ಕಣ್ಣಲ್ಲ ಒಳಗಿರುವ ಮನಸು,
ಮನದ ಪದರಗಳಲ್ಲಿ ಕೊಳೆ ರಾಶಿ ರಾಶಿ,
ಮುಕ್ಕಣ್ಣ ನೀ ನಿಲ್ಲು ಕೊಳೆಯಲ್ಲಾ ಸೋಸಿ

ಕೊಡುವ ಸುಖ
ಬದುಕೆಂಬುದು ಕೇವಲ ಪಡೆದುಕೊಳ್ಳಲು ಅಲ್ಲ,
ಬೇವ ನುಂಗುತ ಆಗಾಗ ಹಂಚುತಿರು ಸಿಹಿ ಬೆಲ್ಲ,
ಪಡೆವುದಕ್ಕಿಂತ ಕೊಡುವುದರಲ್ಲಿನ ಸುಖ  ಕಾಣು,
ಸಾಲ ತೀರಿಸಲು ಬಂದಿರುವೆವೆಂಬ ದಿಟವ ಮನಗಾಣು
(Contributed by Shri Govind Magal)

No comments:

Post a Comment

ಗೋ-ಕುಲ Go-Kula