ಭಾವ ಗುಚ್ಛ by “ತ್ರಿವೇಣಿ ತನಯ “
ಬ್ರಾಹ್ಮಣ್ಯ
ಯಾವುದು
ಯಾವ ಥರದ್ದೀ ಬ್ರಾಹ್ಮಣ್ಯ?
ಯಾವುದರಲ್ಲೂ ಕಿಂಚಿತ್ತಿಲ್ಲ
ಕಾರುಣ್ಯ!
ಬ್ರಾಹ್ಮಣ ,ಕ್ಷಾತ್ರ ,ವೈಶ್ಯ
-ಶೂದ್ರ,
ಏನಾದರಾಗಲಿ ಮೊದಲಾಗಬೇಕಲ್ಲವೇ
ಆರ್ದ್ರ?
ಜುಟ್ಟು ಜನಿವಾರಗಳಲ್ಲಿಲ್ಲ
ಬ್ರಾಹ್ಮಣ್ಯ,
ಅಂಗಾರಕ ಭಸ್ಮಗಳಲ್ಲಿಲ್ಲ
ಬ್ರಾಹ್ಮಣ್ಯ,
ಪಟ್ಟೆಮಡಿ ಪಂಚೆಗಳಲ್ಲಿಲ್ಲ
ಬ್ರಾಹ್ಮಣ್ಯ,
ಬ್ರಹ್ಮಜ್ಞಾನಕೆ ತುಡಿದು
ತಪಿಸುವ ಜೀವದಲ್ಲಿದೆ ಬ್ರಾಹ್ಮಣ್ಯ .
ನಿರ್ದಿಷ್ಟ ಮಠಮಾನ್ಯಗಳ
ಸ್ವತ್ತಲ್ಲ ಬ್ರಾಹ್ಮಣ್ಯ,
ಸರ್ವರಿಗೂ ಹಿತವೀವ ಜೀವನದಿ
ಬ್ರಾಹ್ಮಣ್ಯ,
ಬಿದ್ದವರ ಮೇಲೆತ್ತುವ ಬೃಹತ್
ಯತ್ನವದು ಬ್ರಾಹ್ಮಣ್ಯ,
ವರ್ಣಕ್ಕನುಸಾರ ಕಾರುಣ್ಯ
ತೋರುವುದೇ ಬ್ರಾಹ್ಮಣ್ಯ.
ಲೇಪ -ನಿರ್ಲೇಪ
ಫುಲ್ಲನಾಭನ ಸಂಗ ಇಲ್ಲದೇ ಇರಲೊಲ್ಲೆ,
ಒಲ್ಲೇ ದುರಿತಗಳ
ನಾನೊಲ್ಲೆ-ದಾಸವಾಣಿ,
ಒಲ್ಲೆನೆಂದರೆ ಬರದಿದ್ದೀತೆ?ತಡೆಯಲಾದೀತೆ?
ಒಲ್ಲೆನೆಂದರೆ ಮನಕೆ ಒಲ್ಲೆ,ಲೇಪಒಲ್ಲೆ ಅಂತಿದ್ದೀತೆ!!
ಜೀವ -ಜನ್ಮ
ಕಲಿಯಲು ತಿಳಿಯಲು ಇರುವ ಜ್ಞಾನ
ಅಗಾಧ,
ಚಿಂತೆ ಬೇಡ ತಿಳಿದುದರಲ್ಲಿ
ಇರದಿರಲಿ ವಿರೋಧ,
"ಜೀವ"ನ
ದೀರ್ಘ ಯಾತ್ರಾರೇಖೆಯಲಿ "ಜನ್ಮ"ವೊಂದು ಬಿಂದು,
ಜ್ಞಾನಬಿಂದು ಪೋಣಿಸುತ ರೇಖಾಂತ
ತಲುಪುವಲ್ಲಿ ಬಾರದಿರಲಿ ಕುಂದು.(Contributed by Govind Magal)
No comments:
Post a Comment
ಗೋ-ಕುಲ Go-Kula