ಭಾವ ಗುಚ್ಛ by ತ್ರಿವೇಣಿ ತನಯ
ಜೀವನಯಜ್ಞ
ಅರಿತವರಿಗೆ ನಿತ್ಯ
ಚಟುವಟಿಕೆಗಳದು ಜೀವನಯಜ್ಞ,
ಸರ್ವರೊಳು ನಿಂತು ಸಕಲವ್ಯಾಪಾರ
ನಡೆಸುವವ ಸರ್ವಜ್ಞ,
ಈ ಅನುಸಂಧಾನವಿರೆ ಸತತ ಕರ್ಮಗಳ
ಲೇಪವೆಲ್ಲಿ?
ಕರ್ಮಗಳ ಬಂಧನ ಕಳಚಲೊಮ್ಮೆ
ಮತ್ತೆ ಮರುಜನ್ಮವೆಲ್ಲಿ?
ಸೃಷ್ಟಿವೈಚಿತ್ರ
ಈ ಸೃಷ್ಟಿಯೇ ತ್ರಿಪುಟಿಗಳ ಆಗರ
ತ್ರಿಗುಣಗಳ ವಿಚಿತ್ರೋಗರ,
ಪ್ರತಿಕ್ಷಣವೂ ಪರಸ್ಪರ ಭೇದ
ಅವಲಂಬಿತ ಪರಸ್ಪರ,
ಸ್ವಭಾವಕ್ಕನುಗುಣವಾಗಿ
ನಡೆಸಿಹನು ಹರಿ ವ್ಯಾಪಾರ,
ಸಲ್ಲುವುದನೇ ಸಲ್ಲಿಸುವ
ನ್ಯಾಯಾಧೀಶ ಮಂದರಧರ.
ಹುಡುಕಾಟ
ನಗುವಿರಲಿ ತುಟಿಯಲ್ಲಿ ನಯವಿರಲಿ
ಮಾತಲ್ಲಿ,
ಮುದವಿರಲಿ ಮನದಲ್ಲಿ
ಪ್ರೀತಿಯಿರಲಿ ಎದೆಯಲ್ಲಿ,
ಸಾಕು ಸಾಕು ತಪ್ಪು ಕೆಡುಕುಗಳ
ಹುಡುಕಾಟ,
ನೀ ಹುಡುಕುವುದೇ ನಿನ್ನಲಿ
ನೆಲೆಸುವುದದು ದಿಟ.
ಹಂಬಲ
ಓ ಭಗವಂತಾ ನೀನಾದರೋ ಸೀಮಾತೀತ,
ಎನ್ನ ಮನವಾದರೋ ಸೀಮಿತದಲ್ಲಿ
ಸೀಮಿತ,
ಎಳೆದುಬಿಡು ಎನ್ನ ಚಿತ್ತವ
ಸೀಮೆಯಾಚೆಗೆ,
ಒಗೆಯಲಾರೆಯಾ ಒಳಬಗೆಯ ಅರಿವ ಬಗೆ.
ನಿಜದ್ವಿಜ
ನಿತ್ಯದ ಬದುಕಾಗಬೇಕದು ಸಹಜ,
ಅದಾಗಲೇ ನೀನಾಗುವಿ ನಿಜ ದ್ವಿಜ,
ತಿದ್ದಲಾಗದ ಊರಗೊಡವೆ ನಿನಗೇಕೆ?
ನಿನ್ನ ನೀ ತಿಳಿವುದಕಿಂತ
ಬೇರೊಂದು ಬೇಕೆ?
(Contributed by Shri Govind Magal)
No comments:
Post a Comment
ಗೋ-ಕುಲ Go-Kula