ಭಾವ ಗುಚ್ಛ by “ತ್ರಿವೇಣಿ ತನಯ”
ಕಾಯ - ಕರ್ಮ - ಕಾಲ - ಕರುಣ
ಧರ್ಮ ಸಾಧನೆಗೆ ‘ಕಾಯ’ ಬೇಕು,
ಸಂಸಾರದ ಕಾವಿನಲ್ಲಿ ‘ಕಾಯ’ ಬೇಕು,
ಗುರು ಹರಿ ಕಾರುಣ್ಯಕೆ ‘ಕಾಯ’ ಬೇಕು,
ಹಣ್ಣಾ? ಕಾಯಾ? ‘ಕಾಯ’ ಬೇಕು.
ಕಾಯಿ ಎನುತ ಕಾಯಿಸಲು ಬೇಡ ನೀನು,
ಕಾಯುತಿಹೆನಾದರೂ ಕಸಗಾಯಲ್ಲ
ನಾನು,
ಮಾಗದಾ ಕಾಯವದು ಬಾಗುತಲಿದೆ
ತಾನು,
ಮಾಗಿಸುತ ತೊಟ್ಟ ಕಳಚಲಾರೆಯಾ
ನೀನು .
ನಿನ್ನೆ ನಾಳೆಗಳ ಚಿಂತೆ ಅನವರತ ,
ವರ್ತಮಾನದೊಳಿಲ್ಲ ಮನಸು ಸತತ,
ಭೂತ ಭವಿಷ್ಯಗಳ ಮರುಗುವಿಕೆ
ಸಾಕು,
ಅಂತರಂಗ ಕಡೆಯುತ್ತಾ ಒಳಗೆ
ಕಣ್ಹಾಕು.
ಏಕೆ ಬೆನ್ಹತ್ತಿರುವೆ ಸಿಗದು ಆ
ಬಿಸಿಲ್ಗುದುರೆ,
ಮುದದಿಂದ ಹದಮಾಡು ಮನವೆಂಬ
ಕುದುರೆ,
ಕೋಟೆ ಶಿಲಾಶಾಸನ
ಕೆತ್ತಿಸಿದವರೆಲ್ಲಾ ಮಣ್ಣು,
ಇನ್ನಾದರೂ ಹೊರಮುಚ್ಚಿ ಒಳಹಾಕು
ಕಣ್ಣು.
ಕಟ್ಟಿದ್ದು ನೀನಲ್ಲ ಕೊಟ್ಟದ್ದು ನೀನಲ್ಲ,
ಬೆಟ್ಟ ನದಿ ಮರಗಳ ನೆಟ್ಟಿದ್ದು
ನೀನಲ್ಲ,
ಕಟ್ಟಕಡೆಯ ಪಯಣದಲಿ ಜೊತೆ
ಯಾವುದೂ ಇಲ್ಲ,
ಸುಟ್ಟು ಬೂದಿಯಾಗೋ ಮುನ್ನ
"ಹರಿ"ಯಲೀ ಕಟ್ಟೆಲ್ಲ.(Contributed by Shri Govind Magal)
No comments:
Post a Comment
ಗೋ-ಕುಲ Go-Kula