Monday, 25 January 2016

Bhava Guccha 07

ಭಾವ ಗುಚ್ಛ by “ತ್ರಿವೇಣಿ ತನಯ”

ಸುಖ

ಸುಖವೆಂಬುವುದು ದೇಹಕ್ಕಲ್ಲ ಮನಸ್ಸಿಗೆ,
ಕೊಡಲಾರವದನ ಧನ ಮನೆ ಮಾಳಿಗೆ ,
ಹಳಹಳಿಸದೇ ಬಂದದುಂಬುದೇ ಸುಖ,
ಅದನ್ನೂ ಮೀರಿದ ಬಾಳದು ಅಂತರ್ಮುಖ!!!

ಇಂಧನ

ತತ್ವಸಾಕಾರಕ್ಕೆ ಬೇಕಿಲ್ಲ ಹೆಸರು ಹುದ್ದೆ ಧನ,
ಬಾಳಬಂಡಿ ಎಳೆವುದಕೆ ಬೇಕು ಅಧ್ಯಾತ್ಮದಿಂಧನ,
ಆ ಇಂಧನವಿರೆ ಬಾಳಪಯಣವದು ಸರಾಗ,
ಇಂಧನದ ಕ್ಷಮತೆಯದು ಆವೇಗವಿರದ ವೇಗ.

ಸಂಪ್ರದಾಯ

ಏನೆಲ್ಲ ನಡೆಯುತಿದೆ ಪದ್ಧತಿ ಸಂಪ್ರದಾಯವೆಂದು,
ಯೋಚಿಸಿ ನೋಡಲು ತಾಳೆಯೇ ಇಲ್ಲ ಒಂದಕ್ಕೊಂದು,
ಹಿನ್ನಲೆ ಅರ್ಥವಿಲ್ಲದ್ದು ಅದು ಎಂಥ ಆಚಾರ,
ಏನೇ ಮಾಡು ಮಂಥನದ ತಿಳಿವಿರಲಿ ಸಾರಾಸಾರ.

ಮಡಿ

ಮಡಿ ಮಡಿ ಎನ್ನುತ ಅಡಿಗಡಿಗೆ ಹಾರು ,
ವ್ಯರ್ಥವಾಯಿತಷ್ಟೇ ಕೊಡ ತಪ್ಪಲೆ ನೀರು,
ಮನಗುಡಿಸಿ ಮಡಿಯಾಗು ಅದು ಪರಮ ಶುದ್ಧಿ,
ಪರಮಾತ್ಮನನುಗ್ರಹಕೆ ಅದೇ ಮೊದಲ ಸಿದ್ಧಿ.

ದೀಕ್ಷೆ

ಹರಿ ನಿನ್ನ ಸ್ಮರಣೆಯಲಿರಲಿ ಈ ಬಾಳು,
ಲೇಪವಾಗದದು ಭವದ ಈ ಗೋಳು,
ಶಾರಣ್ಯ ಒಂದೇ ನೀನಿತ್ತಿರುವ ಭಿಕ್ಷೆ,
ಕಾರುಣ್ಯದಲಿ ಅದನೆ ಮಾಡು ದೀಕ್ಷೆ.

(Contributed by Shri Govind Magal)

No comments:

Post a Comment

ಗೋ-ಕುಲ Go-Kula