Wednesday 27 January 2016

ತತ್ವವಾದಸ್ಯ ಪ್ರಮೇಯನವಮಾಲಿಕಾ ಸ್ತೋತ್ರ


ವಿಷ್ಣುಃ ಸರ್ವೋತ್ತಮೋsಥಾಖಿಲ ಪದಗದಿತಃ ಸರ್ವವೇದಾಭಿಧೇಯಃ
ಶ್ರೀನಾಥಃ ಸದ್ಗುಣಾಬ್ಧಿರ್ಜಗದುದಯಲಯಾದ್ಯಷ್ಟ ಕರ್ತಾಂತರಾತ್ಮಾ |
ಬ್ರಹ್ಮಾದ್ಯಾ ಉಚ್ಚನೀಚಾ ಹರಿಚರಣರತಾಃ ಪಂಚಭೇದಃ ಪ್ರಪಂಚಃ 
ಸತ್ಯ ಸ್ತ್ರೀಪುಂಸಭಾವಃ ಸತತಮನಪಗಾ ಯೋಗ್ಯತಾ ಚ ಸ್ವಭಾವಃ || ||

ಜೀವಾಸ್ತ್ರೈಗುಣ್ಯಭಾಜಃ ಪರಮಗತಿಯುಜೋ ನಿತ್ಯಬದ್ಧಾಸ್ತಮೋಗಾಃ
ಸತ್ವೋದ್ರೇಕಾತ್ತು ಮೋಕ್ಷೇ ನಿಜಸುಖನಿಯತಿಃ ಸಾಧನಂ ಜ್ಞಾನಭಕ್ತೀ |
ಇಷ್ಟಂ ದೈವಂ ಮುಕುಂದಃ ಪರಮಗುರುರಸೌ ಮಾರುತಿರ್ಮಧ್ವನಾಮಾ
ವಿಶ್ವಂ ತಾಭ್ಯಾಮುಭಾಭ್ಯಾಂ ನಿಯಮಿತಮಖಿಲಂ ಚೇತ್ಯಯಂ ತತ್ವವಾದಃ || ||

ಇಮಾಮಾಚಾರ್ಯಗೋವಿಂದೋ ವಿನೇಯಜನವಾಂಛಯಾ |
ವಿತೇನೇ ತತ್ವ ವಾದಸ್ಯ ಪ್ರಮೇಯನವಮಾಲಿಕಾಮ್ || ||

ಈ ಪ್ರಮೇಯನವಮಾಲಿಕೆಯು ಶ್ರೀಮಧ್ವಾಚಾರ್ಯರು ತಮ್ಮ ತತ್ವವಾದ ಮೂಲಕ ಮನುಕುಲಕ್ಕೆ ನೀಡಿದ ಅಪೂರ್ವ ಕೊಡುಗೆಗಳ ಸಂಗ್ರಹ ಮಾಲಿಕೆ.

ವಿದ್ಯಾವಾಚಸ್ಪತಿ, ವಿದ್ಯಾರತ್ನಾಕರ ಹಾಗೂ ಭಾರತ ಸರಕಾರದ ಪದ್ಮಶ್ರೀ ಗೌರವಕ್ಕೂ ಪಾತ್ರರಾದ ಪೂಜ್ಯರಾದ ಡಾ||ಬನ್ನಂಜೆ ಗೋವಿಂದಾಚಾರ್ಯರ  ವಾಣಿಯಿಂದ ಬಂದ ಸುಂದರ ಪದಪುಂಜಗಳ ರಚನೆ ಇದು.  ಪ್ರಮೇಯನವಮಾಲಿಕಾ ಸ್ತೋತ್ರದ ಮೇಲೆ ಅವರು ನೀಡಿದ ಪ್ರವಚನದಿಂದ ಈ ಲೇಖನವನ್ನು ಸಿದ್ಧಪಡಿಸಲಾಗಿದೆ....

ಅಪೌರುಷೇಯವಾದ ವೇದಗಳು ಯಾರನ್ನು ಶ್ರೇಷ್ಠ ಅಥವಾ ಸರ್ವೋತ್ತಮ ಅಂತ ಹೇಳುತ್ತವೋ, ಜಗತ್ತಿನ ಎಲ್ಲ ಶಬ್ದಗಳೂ, ಎಲ್ಲ ದೇವತೆಗಳ ಹೆಸರುಗಳೂ ಯಾವ ಏಕ ಮಾತ್ರ ಭಗವಂತನನ್ನು ಹೇಳುತ್ತವೋ, ಅಂಥವನನ್ನು ವೇದಗಳು "ವಿಷ್ಣು" ಅಂತ ಕರೆಯುತ್ತವೆ. ಆದ್ದರಿಂದ "ವಿಷ್ಣು ಸರ್ವೊತ್ತಮ".

ಆ ವಿಷ್ಣುವೇ ಸರ್ವ ನಾಮಗಳ ಅರ್ಥ- "ಅಖಿಲ ಪದಗದಿತಃ", ಎಲ್ಲ ಪದಗಳಿಂದ ಕರೆಯಲ್ಪಡುವವ, ಸರ್ವಶಬ್ದ ವಾಚ್ಯ.
ಅವನೇ "ಸರ್ವವೇದಾಭಿಧೇಯಃ" ಅಂದರೆ, ಎಲ್ಲ ವೇದಗಳಿಂದ ತಿಳಿಯಲ್ಪಡುವವ, ವೇದಗಳ ಸಾರ.

ಲಕ್ಷ್ಮೀದೇವಿಯನ್ನು ಪತ್ನಿಯಾಗಿ ಉಳ್ಳ ನಾರಾಯಣನೇ "ಶ್ರೀನಾಥ". ಅವನೇ ಅನಂತ ಸದ್ಗುಣಗಳ ಸಾಗರ "ಸದ್ಗುಣಾಬ್ಧಿಃ".
ಈ ಚೇತನಾಚೇತನಾತ್ಮಕ ಪ್ರಪಂಚಕ್ಕೆ ಸೃಷ್ಟಿ,ಸ್ಥಿತಿ,ಸಂಹಾರ,ನಿಯಮನ, ಜ್ಞಾನ,ಅಜ್ಞಾನ,ಬಂಧ ಮತ್ತು ಮೋಕ್ಷವೆಂಬ ಎಂಟರ ನಂಟನ್ನೂ ಬೆಸೆಯುವ ನಾರಾಯಣನೇ "ಜಗದುದಯಲಯಾದ್ಯಷ್ಟಕರ್ತ" ಇವನೇ ಸಕಲ ಜೀವರ ಅಂತರ್ಯಾಮಿ ಎನಿಸಿದ "ಅಂತರಾತ್ಮ".

ಜಗತ್ತಿನ ಆದಿ ದಂಪತಿಗಳು ಲಕ್ಷ್ಮೀನಾರಾಯಣರು. ಅವರ ಮೊದಲ ಮಗ ಚತುರ್ಮುಖ ಬ್ರಹ್ಮ. ಈ ಚತುರ್ಮುಖ ಬ್ರಹ್ಮನೇ ಮೊದಲ್ಗೊಂಡು "ಬ್ರಹ್ಮಾದ್ಯಾ", ಎಲ್ಲ ತತ್ವಾಭಿಮಾನಿ ದೇವತೆಗಳೂ ಕೂಡ ಶ್ರೀಹರಿಯ ಪಾರಮ್ಯವನ್ನು ಅರಿತು ಸೇವೆಗೈಯುವವರು ಆದ್ದರಿಂದ "ಹರಿಚರಣರತಾಃ" ಶ್ರೀಹರಿಯ ಚರಣದಾಸರು.

ಇಂಥಹ ತತ್ವಾಭಿಮಾನಿ ದೇವತೆಗಳಲ್ಲಿಯೂ ತರತಮಭಾವ ಇದೆ.  "ಬ್ರಹ್ಮಾದ್ಯಾ ಉಚ್ಚನೀಚಾ" ಎಂಬಂತೆ ದೇವತಾ ತಾರತಮ್ಯವನ್ನು ಪ್ರಪಂಚಕ್ಕೆ ಪರಿಚಯಿಸಿದವರು ಶ್ರೀಮಧ್ವಾಚಾರ್ಯರು ಮಾತ್ರ..

ಹಾಗೆಯೇ ಈ ಪ್ರಪಂಚದಲ್ಲಿ ಒಂದರಂತೆ ಇನ್ನೊಂದಿಲ್ಲ... ಪ್ರತಿಯೊಂದು ಸಂಗತಿಯೂ ಭಿನ್ನ ಭಿನ್ನವಾಗಿದೆ ಎಂದು ಹೇಳಿ, ಭಗವಂತ -ಜೀವ-ಜಡ ಪ್ರಪಂಚದ ಐದು ಭೇದಗಳನ್ನು ಪ್ರತಿಪಾದಿಸಿದವರು ಆಚಾರ್ಯ ಮಧ್ವರು ಮಾತ್ರ.

ಜೀವ-ಈಶ್ವರ ಭೇದ, ಜಡ-ಈಶ್ವರ ಭೇದ, ಜಡ-ಜಡ ಭೇದ, ಜೀವ-ಜೀವ ಭೇದ, ಜೀವ-ಜಡ ಭೇದ. ಇವೇ "ಪಂಚಭೇದ ಪ್ರಪಂಚಃ".

ಭಗವಂತನಿಂದ ಸೃಷ್ಟವಾದ ಈ ಜಗತ್ತು "ಸತ್ಯಃ" ಸತ್ಯವಾಗಿ ಇರುವಂತದು. ಇಂತಹ ಜಗತ್ತಿನಲ್ಲಿ ಹುಟ್ಟಿದ ಜೀವರಾಶಿಗಳಿಗೆ ಹೆಣ್ಣು-ಗಂಡು ಎಂಬ ಎರಡು ಲಕ್ಷಣಗಳಿವೆ, "ಸ್ತ್ರಿ-ಪುಂಸ ಭಾವಃ". ಲಿಂಗ ಇರುವುದು ಜೀವಕ್ಕೇ ಹೊರತು ಜಡವಾದ ಶರೀರಕ್ಕಲ್ಲ ಎಂದು ಹೇಳಿದವರು ಶ್ರೀಮಧ್ವಾಚಾರ್ಯರು ಮಾತ್ರ.

ಭಗವಂತನ ದೃಷ್ಟಿಯಲ್ಲಿ ಎಲ್ಲ ಜೀವರೂ ಸಮಾನರು "ಸತತಮನಪಗಾಃ", ಆದರೆ ಪ್ರತಿಯೊಂದು ಜೀವಕ್ಕೂ ಅದರದ್ದೇ ಆದ 'ಸ್ವಭಾವ' ಇದೆ. ಅದರದರ ಸ್ವಭಾವಕ್ಕೆ ತಕ್ಕಂತೆ ಆಯಾ ಜೀವದ ಸ್ಥಿತಿ-ಗತಿಗಳು "ಯೋಗ್ಯತಾ ಚ ಸ್ವಭಾವಃ"...

ಅನಂತ ಜೀವರೂ ಮೂರೇ ತರ. "ಜೀವಾಸ್ತ್ರೈಗುಣ್ಯಭಾಜಃ" ಸತ್ವ , ರಜಸ್ಸು ತಮಸ್ಸೆಂಬ ಮೂರು ಗುಣಗಳ ಮಿಶ್ರಣದಲ್ಲಿ ಕಲೆತ ಜೀವರಲ್ಲಿ ಕೆಲವರು ಸಾತ್ವಿಕರು "ಪರಮಗತಿಯುಜಃ" ಅಂದರೆ ಮೋಕ್ಷಯೋಗ್ಯರು. ಕೆಲವರು ರಾಜಸರು "ನಿತ್ಯಬದ್ಧಾಃ" ನಿತ್ಯ ಸಂಸಾರಿಗಳು, ಮತ್ತೆ ಕೆಲವರು ತಾಮಸರು "ತಮೋಗಾಃ" ತಮೋಯೋಗ್ಯರು...

ಸಾತ್ವಿಕರಲ್ಲಿ "ಸತ್ವೋದ್ರೇಕಾತ್ತು ಮೋಕ್ಷೆ" ಸತ್ವಗುಣ ಸಂಪೂರ್ಣ ಜಾಗೃತಗೊಂಡು, ಸಾತ್ವಿಕತೆಯ ತುತ್ತತುದಿಯನ್ನೇರಿದಾಗ ಮೋಕ್ಷವೆಂಬ "ನಿಜಸುಖನಿಯತಿಃ" ನೈಜಸುಖವನ್ನು ಅರ್ಥಾತ್ ಸ್ವರೂಪಾನಂದವನ್ನು ಪಡೆಯುತ್ತಾರೆ.

ಅಂಥಹ ಸಾಧನೆಗೆ ನಮ್ಮಲ್ಲಿ ಮುಖ್ಯವಾಗಿ ಇರಬೇಕಾದದ್ದು, "ಸಾಧನಂ ಜ್ಞಾನಭಕ್ತೀ" ಭಗವಂತನ ಬಗೆಗೆ  ಜ್ಞಾನದಿಂದ ಕೂಡಿದ ಪರಮಭಕ್ತಿ.

ಇಂತಹ ಬದುಕು ನಮ್ಮದಾಗಬೇಕಾದರೆ ನಮಗೆ ಬೇಕು "ಇಷ್ಟಂ ದೈವಂ ಮುಕುಂದಃ" ಇಷ್ಟದ ದೇವರು ಮುಕುಂದ, ಅವನೇ ಮೋಕ್ಷಪ್ರದನಾದ 'ನಾರಾಯಣ'. ಜೊತೆಗೆ ಮಾರ್ಗದರ್ಶಕರಾಗಿ ಇರಬೇಕು "ಪರಮಗುರುರಸೌ ಮಾರುತಿರ್ಮಧ್ವನಾಮಾ" ನಮ್ಮೆಲ್ಲರಿಗೂ ಪರಮಗುರುಗಳಾಗಿ ಆಚಾರ್ಯ ಮಧ್ವರಾಗಿ ಅವತರಿಸಿದ ಪ್ರಾಣದೇವರು.

"ವಿಶ್ವಂ ತಾಭ್ಯಾಮುಭಾಭ್ಯಾಂ" ಇಡೀ ವಿಶ್ವ ,ಭಗವಂತನ ಇಚ್ಛೆಗನುಗುಣವಾಗಿ, ಈ ಎರಡು ಶಕ್ತಿಗಳ ಮೂಲಕ "ನಿಯಮಿತಮಖಿಲಂ" ಸಂಪೂರ್ಣ ನಿಯಂತ್ರಣಕ್ಕೊಳಪಟ್ಟು  ಚಲಿಸುತ್ತಾ ಇದೆ. "ಚೇತ್ಯಯಂ ತತ್ವವಾದಃ" ಇದೇ ಆಚಾರ್ಯ ಮಧ್ವರು ಮನುಕುಲಕ್ಕಿತ್ತ. "ತತ್ವವಾದ"...

ತತ್ವವಾದದ ಪ್ರಮೇಯಗಳೆಂಬ  "ನವರತ್ನಮಾಲೆಯ" ಈ ಎರಡು ಶ್ಲೋಕಗಳನ್ನು ಕೇವಲ ಜ್ಞಾನ ತೃಷೆಯುಳ್ಳವರ ಕೋರಿಕೆಯ ಮೇರೆಗೆ ಪೂಜ್ಯ ಶ್ರೀ ಬನ್ನಂಜೆ ಗೋವಿಂದಾಚಾರ್ಯರು ನಮಗೆಲ್ಲ  ಕರುಣಿಸಿದ್ದಾರೆ... ವಿದ್ವಜ್ಜನರಿಂದ ಶ್ರೀಮದಾಚಾರ್ಯರ ತತ್ವವಾದದ ಕೀರ್ತಿ ಎಲ್ಲೆಡೆ ಹಬ್ಬಲಿ ಎಂದು ಪ್ರಾರ್ಥಿಸೋಣ...
(Contributed by Shri B.S.Harish)

2 comments:

ಗೋ-ಕುಲ Go-Kula