Friday, 24 September 2021

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 20: 143 - 148

 ತಸ್ಯಾಂ ಸಮಸ್ತೈರಭಿಪೂಜ್ಯಮಾನೇ ದೇವೇ ಸ್ವಪುರ್ಯ್ಯಾಂ ನಿವಸತ್ಯನನ್ತೇ ।

ಯಯೌ ಕದಾಚಿತ್ ಸ ತು ರೌಗ್ಮಿಣೇಯಃ ಸಾಮ್ಬೇನ ಸಾರ್ದ್ಧಂ ಭುಜಗೇನ್ದ್ರಲೋಕಮ್ ॥೨೦.೧೪೩॥

ಶ್ರೀಕೃಷ್ಣ ದ್ವಾರಕೆಯಲ್ಲಿ ಎಲ್ಲರಿಂದಲೂ ಪೂಜ್ಯನಾಗಿ,

ಅತ್ಯಂತ ವೈಭವದಿಂದ ವಾಸ ಮಾಡುತ್ತಿರಲಾಗಿ,

ಒಮ್ಮೆ ರುಗ್ಮಿಣಿಯ ಮಗ ಪ್ರದ್ಯುಮ್ನ ಸಾಂಬನ ಜೊತೆ,

ಪ್ರಸ್ತಾಪಿಸಲ್ಪಡುತ್ತದೆ ನಾಗಲೋಕಕ್ಕೆ ತೆರಳಿದ ಕತೆ.

 

ಅಜ್ಞಾನತಸ್ತೈರಭಿಯೋಧಿತಃ ಸ ಜಿಗಾಯ ಸರ್ವಾನಪಿ ವಾಸುಕಿಂ ಚ ।

ವಿದ್ರಾಪ್ಯ ಬಾಣೈರಥ ರತ್ನಸಞ್ಚಯಾನ್ ಸಮಾದದೇ ನೇಮುರಮುಂ ತತಸ್ತೇ ॥೨೦.೧೪೪ ॥

ಕೃಷ್ಣಪುತ್ರ ಎಂದರಿಯದೇ ನಾಗಗಳಿಂದ ಎದುರಿಸಲ್ಪಟ್ಟವನಾದ,

ಪ್ರದ್ಯುಮ್ನ ನಾಗಾಧಿಪ ವಾಸುಕಿ ಸಮೇತ ಎಲ್ಲರನ್ನೆದುರಿಸಿ ಗೆದ್ದ.

ಬಾಣಗಳಿಂದ ಎಲ್ಲರನ್ನೂ ಓಡಿಸಿ ರತ್ನಸಮೂಹ ಪಡಕೊಂಡ,

ಸೋತವರಿಂದ ನಮಸ್ಕರಿಸಿಕೊಂಡ ಪ್ರದ್ಯುಮ್ನ ಪೂಜೆಗೊಂಡ.

 

ತೈಃ ಪೂಜಿತಃ ಸಾಮ್ಬಸಹಾಯ ಆಶು ಮಯಂ ಚ ಮಾಯಾವಿನಮಸ್ತ್ರವರ್ಷೈಃ ।

ವಿಜಿತ್ಯ ರುನ್ಧಾನಮನೇನ ಪೂಜಿತೋ ಯಯೌ ರಥೇನಾಮ್ಬರಗೇನ ನಾಕಮ್ ॥೨೦.೧೪೫॥

ನಾಗಲೋಕದಲ್ಲಿ ಸಾಂಬನ ಜೊತೆಗಿದ್ದ ಪ್ರದ್ಯುಮ್ನಗಾಯಿತು ಸನ್ಮಾನ,

ಗೆದ್ದ ಮಾರ್ಗಮಧ್ಯೆ ತಡೆಯಲು ಬಂದ ಮಾಯಾವಿ ಮಯನನ್ನ.

ಮಯನಿಂದಲೂ ಪೂಜಿಸಲ್ಪಟ್ಟ,

ಆಕಾಶರಥದಿ ಸ್ವರ್ಗದೆಡೆ ಹೊರಟ.

 

ತತ್ರೈವ ಕೃಷ್ಣೇನ ತು ಪಾರಿಜಾತೇ ಹೃತೇ ಜಯನ್ತಂ ಪ್ರಜಿಗಾಯ ಚಾsಜೌ 

ಸಂಸ್ಪರ್ದ್ದಯಾssಯಾತಮಮುಷ್ಯ ಚಾನುಜಂ ಸಾಮ್ಬೋsಜಯದ್ ವೃಷಭಂ ನಾಮ ಶಸ್ತ್ರೈಃ ॥೨೦.೧೪೬॥

ಕೃಷ್ಣನಿಂದ ಪಾರಿಜಾತವು ಅಪಹರಿಸಲ್ಪಟ್ಟದ್ದರಿಂದ,

ಇಂದ್ರಪುತ್ರ ಜಯಂತ ಯುದ್ಧಕೆ ಬಂದಿದ್ದ ಸ್ಪರ್ಧೆಯಿಂದ.

ಆ ‘ಜಯಂತನನ್ನು’ ಪ್ರದ್ಯುಮ್ನ ಗೆದ್ದ,

ತಮ್ಮ ‘ವೃಷಭನನ್ನು’ ಸಾಂಬ ಗೆದ್ದ.

[ಜಯಂತ ಮತ್ತು ವೃಷಭ ಇಂದ್ರನ ಮಕ್ಕಳು. ಜಯಂತನಿಗೆ ತನ್ನ ತಂದೆಯನ್ನು ಅವಮಾನ ಮಾಡಿದ್ದರಿಂದ ಕೋಪವಿತ್ತು. ಅದಕ್ಕಾಗಿ ಅವನು ಶ್ರೀಕೃಷ್ಣನ ಮಗನನ್ನು ಗೆದ್ದು ಕೃಷ್ಣನನ್ನು ಅವಮಾನ ಮಾಡಬೇಕು ಎಂದುಕೊಂಡಿದ್ದ. ಇವೆಲ್ಲವನ್ನೂ ಹರಿವಂಶ ಹಾಗೂ ವಿಷ್ಣುಪುರಾಣದಲ್ಲಿ ವಿವರಿಸಲಾಗಿದೆ. ಇಲ್ಲಿ ಆಚಾರ್ಯರು ಘಟನೆಗಳನ್ನು ಕಾಲಾನುಕ್ರಮದಲ್ಲಿ ಹೇಳಿದ್ದಾರೆ].

 

ಅಸ್ತ್ರಾಣಿ ತಾವಸ್ತ್ರವರೈರ್ನ್ನಿಹತ್ಯ ತಯೋಶ್ಚ ತಾಭ್ಯಾಂ ಪ್ರತಿದಗ್ಧಯಾನೌ ।

ವಿದ್ರಾಪ್ಯ ತೌ ಬಾಣವರೈಃ ಸುರೇನ್ದ್ರಸಮ್ಪೂಜಿತೌ ಯಯತುರ್ವಿದ್ಯಯಾ ಖೇ ॥೨೦.೧೪೭॥

ನಡೆಯಿತು ಪ್ರದ್ಯುಮ್ನ-ಸಾಂಬರದು ಜಯಂತ ಹಾಗೂ ವೃಷಭನ ಮೇಲೆ ಯುದ್ಧ,

ಅವರ ರಥ ನಾಶಮಾಡಿ ತಾವು ಅವರಿಂದ ರಥಹೀನರಾದರೂ ಅವರ ಗೆಲುವೇ ಸಿದ್ಧ.

ಅವರಿಬ್ಬರನ್ನೂ ಬಾಣಗಳಿಂದ ಓಡಿಸಿದವರಾಗಿ,

ಸ್ವರ್ಗಾಧಿಪತಿ ಇಂದ್ರನಿಂದ ಇಬ್ಬರೂ ಪೂಜಿತರಾಗಿ,

ವಿದ್ಯಾಬಲದಿಂದ ಹೊರಟರು ಆಕಾಶಮಾರ್ಗದಿ ಸಾಗಿ.

 

ಸ ವಿದ್ಯಯಾ ಸಾಮ್ಬಮುದೂಹ್ಯ ರತ್ಯಾ ಪ್ರದತ್ತಯಾ ರುಗ್ಮಿಣಿನನ್ದನಃ ಪುರೀಮ್ ।

ಯಯೌ ತತೋ ನಾರದ ಆಗಮದ್ ದ್ರುತಂ ಜ್ಞಾತುಂ ಹರೇರ್ಬಹುಭಾರ್ಯ್ಯಾಸು ವೃತ್ತಿಮ್ ॥೨೦.೧೪೮॥

ಪ್ರದ್ಯುಮ್ನ ರತಿಯಿಂದ ಕೊಡಲ್ಪಟ್ಟ ವಿದ್ಯೆಯಿಂದ, ಸಾಂಬನನ್ನು ಹೊತ್ತು ದ್ವಾರಕಾಪಟ್ಟಣಕೆ ತೆರಳಿದ.

ಹೀಗೇ ನಾರದರಿಗೊಂದು ಕುತೂಹಲವಾಯಿತಂತೆ,

ಶ್ರೀಕೃಷ್ಣ ಹೇಗಿರುತ್ತಾನೆ ತನ್ನ ಬಹುಪತ್ನಿಯರ ಜೊತೆ,

ಅದನ್ನ ತಿಳಿಯಲು ನಾರದರು ದ್ವಾರಕೆಗೆ ಬಂದ ಕತೆ.

[Contributed by Shri Govind Magal]

No comments:

Post a Comment

ಗೋ-ಕುಲ Go-Kula