Wednesday 22 March 2023

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 26: 89-100

 

ತದಾSSಸದತ್ ಕೃತವರ್ಮ್ಮಾ ರಥೇನ ಸೇನಾಂ ಪಾಣ್ಡೂನಾಂ ಶರವರ್ಷಂ ಪ್ರಮುಞ್ಚನ್ ।

ದದೌ ವರಂ ತಸ್ಯ ಹಿ ಪೂರ್ವಮಚ್ಯುತಃ ಪ್ರೀತಃ ಸ್ತುತ್ಯಾ ಸರ್ವಜಯಂ ಮೂಹೂರ್ತ್ತೇ ॥ ೨೬.೮೯ ॥

 

ಇನ್ನೊಂದು ಕಡೆಯಿಂದ ಕೃತವರ್ಮ ರಥವನ್ನೇರಿ ಬಾಣಗಳನ್ನು ಬಿಡುತ್ತಾ ಪಾಂಡವರ ಸೇನೆಯ ಬಳಿಗೆ ಸಾಗಿ ಬಂದ,

ಹಿಂದೆ ಶ್ರೀಕೃಷ್ಣ ಈ ಕೃತವರ್ಮನ ಸ್ತೋತ್ರದಿಂದ ಪ್ರೀತನಾಗಿ ಒಂದು ಮುಹೂರ್ತ ಕಾಲ ಎಲ್ಲರನ್ನೂ ಗೆಲ್ಲುವ ವರ ಕೊಟ್ಟಿದ್ದ.

 

ಸ ತೇನ ಪಾಞ್ಚಾಲಗಣಾನ್ ವಿಜಿಗ್ಯೇ ಯಮೌ ಚ ಭೀಮಸ್ಯ ಪುರೋSಥ ತಂ ಚ ।

ವಿವ್ಯಾಧ ಬಾಣೇನ ಸ ವಾಸುದೇವವರಂ ವಿಜಾನನ್ ನ ತದಾ ಸಮಭ್ಯಯಾತ್ ॥ ೨೬.೯೦ ॥

 

ಕೃತವರ್ಮನು ಆ ವರಬಲದಿಂದ ಧೃಷ್ಟದ್ಯುಮ್ನ ಮೊದಲಾದವರನ್ನು ಗೆದ್ದ, ನಕುಲ-ಸಹದೇವರನ್ನೂ ಕೂಡಾ ಭೀಮಸೇನನ ಎದುರಲ್ಲಿಯೇ ಸೋಲಿಸಿದ.

ಮತ್ತು ಭೀಮಸೇನನನ್ನೂ ಕೂಡಾ ತನ್ನ ಬಾಣದಿಂದ ಹೊಡೆದ,

ಆದರೆ ಕೃಷ್ಣವರವನ್ನು ತಿಳಿದ ಭೀಮ ಆಗವನ ಎದುರಿಸದೇ ಇದ್ದ.

 

ವಿನೈವ ವೃಷ್ಣೀನ್ ವಿಜಯೇ ವರೋ  ಯದಮುಷ್ಯ ತೇನಾಸ್ಯ ಹಯಾನ್ ಸ ಸಾತ್ಯಕಿಃ ।

ನಿಹತ್ಯ ಬಾಣೈರತುದತ್ ಸ ಯಾನಮನ್ಯತ್ ಸಮಾಸ್ಥಾಯ ತತೋSಪಜಗ್ಮಿವಾನ್ ॥ ೨೬.೯೧ ॥

 

‘ಯಾದವರನ್ನು ಬಿಟ್ಟು ಉಳಿದ ಎಲ್ಲರನ್ನೂ ಒಂದು ಮುಹೂರ್ತ ಗೆಲ್ಲಬಲ್ಲೆ’ ಎಂಬುದಾಗಿತ್ತು ಕೃಷ್ಣಪರಮಾತ್ಮನಿತ್ತ ಆ ವರ,

ಕೃತವರ್ಮನೆದುರಿಸಿ, ಅವನ ಕುದುರೆಗಳ ಕೊಂದು,ಬಾಣಗಳಿಂದ ಹಿಂಸೆ ಮಾಡಿದ ಸಾತ್ಯಕಿ ಎಂಬ ಯಾದವ ವೀರ.

ಆಗ ಕೃತವರ್ಮ ಇನ್ನೊಂದು ರಥವನ್ನೇರಿದ, ರಣಭೂಮಿಯಿಂದ ಪಲಾಯನ ಮಾಡಿದ.

 

ತದಾ ಹರಿಃ ಪಾಞ್ಚಜನ್ಯಂ ಸುಘೋಷಮಾಪೂರಯಾಮಾಸ ಜಯೇSಭಿಯುದ್ಧ್ಯತಿ ।

ಕರ್ಣ್ಣಾದಿಭಿರ್ದ್ದ್ರೌಣಿಮುಖೈ ರಿಪೂಣಾಂ ಬಲಪ್ರಹಾಣಾಯ ಪರಃ ಪರೇಭ್ಯಃ ॥ ೨೬.೯೨ ॥

 

ಇತ್ತ ರಣಭೂಮಿಯ ಇನ್ನೊಂದು ಭಾಗದಲ್ಲಿ, ಅಶ್ವತ್ಥಾಮ ಕರ್ಣಾದಿಗಳು ಪ್ರಧಾನರಾಗಿರುವಲ್ಲಿ,  ಅರ್ಜುನ ಯುದ್ಧಮಾಡುತ್ತಿರುವಾಗ ,

ಶ್ರೀಕೃಷ್ಣ ಶತ್ರುಬಲದನಾಶಕ್ಕೋಸುಗ, ಪಾಂಚಜನ್ಯವನ್ನು ಮೊಳಗಿಸಿದನಾಗ.

 

‘ಸ ಪಾಞ್ಚಜನ್ಯೋSಚ್ಯುತವಕ್ತ್ರವಾಯುನಾ ಭೃಶಂ ಸುಪೂರ್ಣ್ಣೋದರನಿಸ್ಸೃತಧ್ವನಿಃ ।

ಜಗದ್ ವಿರಿಞ್ಚೇಶಸುರೇನ್ದ್ರಪೂರ್ವಕಂ ಪ್ರಕಮ್ಪಯಾಮಾಸ ಯುಗಾತ್ಯಯೇ ಯಥಾ’ ॥ ೨೬.೯೩ ॥

 

 

ಶ್ರೀಕೃಷ್ಣ ಅತ್ಯದ್ಭುತವಾಗಿ ಊದಿ ಮೊಳಗಿಸಿದ ಆ ಪಾಂಚಜನ್ಯ,

ಹೊಮ್ಮಿಸಿತು ಪ್ರಳಯದಿ ಬ್ರಹ್ಮಾಂಡವೇ ಅಲ್ಲಾಡುವಂಥ ಕಂಪನ.

 

ಗಾಣ್ಡೀವಘೋಷೇ ಚ ತದಾSಭಿಭೂತೇ ಯುಧಿಷ್ಠಿರೋ ಭೀತಭೀತಸ್ತದೇತ್ಯ ।

ಶೈನೇಯಮೂಚೇ ಪರಸೈನ್ಯಮಗ್ನೇ ಪಾರ್ಥ್ಥೇ ಸ್ವಯಂ ಯುದ್ಧ್ಯತಿ ಕೇಶವಃ ಸ್ಮ  ॥ ೨೬.೯೪ ॥

 

ನ ಶ್ರೂಯತೇ ಗಾಣ್ಡಿವಸ್ಯಾದ್ಯ ಘೋಷಃ ಸಂಶ್ರೂಯತೇ ಪಾಞ್ಚಜನ್ಯಸ್ಯ ಘೋಷಃ ।

ತದ್ ಯಾಹಿ ಜಾನೀಹಿ ತಮದ್ಯ ಪಾರ್ತ್ಥಂ ಯದಿ ಸ್ಮ ಜೀವತ್ಯಸಹಾಯ ಏಷಃ ॥ ೨೬.೯೫ ॥

 

ಹೀಗೆ ಶ್ರೀಕೃಷ್ಣ ಪಾಂಚಜನ್ಯವನ್ನು ಊದಿದಾಗ, ಜೊತೆಗೆ ಗಾಂಡೀವದ ಶಬ್ದವು ಕೇಳಿಸದಿದ್ದಾಗ, ಯುಧಿಷ್ಠಿರನು ಅತ್ಯಂತ ಭಯಗೊಳ್ಳುತ್ತಾನೆ,

ಅರ್ಜುನನ ಸುರಕ್ಷತೆ ಬಗ್ಗೆ ಸಾತ್ಯಕಿಗ್ಹೇಳುತ್ತಾನೆ. 'ಅರ್ಜುನ ಶತ್ರು ಸೇನೆಯಲ್ಲಿ ಮುಳುಗುತ್ತಿದ್ದಾನೇ',

ಶ್ರೀಕೃಷ್ಣನು ತಾನೇ ಯುದ್ಧ ಮಾಡುತ್ತಿರುವನೇ?,

ಸಾತ್ಯಕೀ ನೀನೀಗಲೇ ಹೋಗಿ ನೋಡು, ಏನಾಗಿದೆಯೋ ಅಲ್ಲಿ ಅರ್ಜುನನ ಪಾಡು.

 

ಇತೀರಿತಃ ಸಾತ್ಯಕಿರತ್ರ ವಿಪ್ರಾನ್ ಸಮ್ಪೂಜ್ಯ ವಿತ್ತೈಃ ಪರಮಾಶಿಷಶ್ಚ ।

ಜಯಾಯ ತೇಭ್ಯಃ ಪ್ರತಿಗೃಹ್ಯ ಸೇನಾಮುಖಂ ಯಯೌ ಭೀಮಸೇನಾನುಯಾತಃ ॥ ೨೬.೯೬ ॥

 

ಇದನ್ನೆಲ್ಲಾ ಕೇಳಿದ ಸಾತ್ಯಕಿ ಶಿಬಿರಕ್ಕೆ ಬರುತ್ತಾನೆ, ದ್ರವ್ಯಗಳಿಂದ ಬ್ರಾಹ್ಮಣರನ್ನು ಪೂಜಿಸುತ್ತಾನೆ, ಜಯಕ್ಕಾಗಿ ಆಶೀರ್ವಾದವನ್ನು ಪಡೆಯುತ್ತಾನೆ.   ಸಾತ್ಯಕಿ ಸೈನ್ಯದ ದ್ವಾರಕ್ಕೆ ಬರುತ್ತಾನೆ,

ಭೀಮ ಅವನ ಬೆಂಗಾವಲಿಗಿರುತ್ತಾನೆ.

 

ಭೀಮಸ್ತು ಸೇನಾಮುಖಮಾಶು ಭಿತ್ತ್ವಾ ಪ್ರಾವೇಶಯದ್ ಯುಯುಧಾನಂ ಚಮೂಂ ತಾಮ್ ।

ಸ ಯುದ್ಧ್ಯಮಾನೋ ಗುರುಣಾSಭ್ಯುಪೇಕ್ಷಿತಃ ಸೂತಂ ನಿಹತ್ಯ ದ್ರಾವಯಾಮಾಸ ಚಾಶ್ವಾನ್ ॥ ೨೬.೯೭ ॥

 

ಭೀಮಸೇನ ಸೇನೆಯ ಮುಂಭಾಗ ಭೇದಿಸುತ್ತಾನೆ , ಸಾತ್ಯಕಿ ಪ್ರವೇಶಿಸುವಂತೆ ಅನುವುಗೊಳಿಸುತ್ತಾನೆ. ಸಾತ್ಯಕಿಯು ದ್ರೋಣಾಚಾರ್ಯರೊಂದಿಗೆ ಯುದ್ಧಮಾಡಿ ಉಪೇಕ್ಷಿಸಲ್ಪಡುತ್ತಾನೆ,

ಆದರೂ ಸಾತ್ಯಕಿ ಅವರ ಸೂತನ ಕೊಂದು ಕುದುರೆಗಳನ್ನು ಓಡುವಂತೆ ಮಾಡುತ್ತಾನೆ.

 

ಬಲಂ ವಿವೃದ್ಧಂ ಚ ತದಾSಸ್ಯ ಸಾತ್ಯಕೇರ್ವಿಪ್ರಾಶೀರ್ಭಿಃ ಕೃಷ್ಣವರಾದಪಿ ಸ್ಮ ।

ಬಲಸ್ಯ ವೃದ್ಧಿರ್ಹಿ ಪುರಾSಸ್ಯ ದತ್ತಾ ಕೃಷ್ಣೇನ ತುಷ್ಟೇನ ದಿನೇ ಹಿ ತಸ್ಮಿನ್ ॥ ೨೬.೯೮ ॥

 

ವೃದ್ಧಿಗೊಂಡಿತ್ತು ವ್ಯೂಹವನ್ನು ಪ್ರವೇಶಿಸಿದ ಸಾತ್ಯಕಿಯ ಬಲ,

ಬ್ರಾಹ್ಮಣರ ಆಶೀರ್ವಾದ ಮತ್ತೆ ಶ್ರೀಕೃಷ್ಣನ ಅನುಗ್ರಹದ ಜಾಲ.

ಹಿಂದೆ ಅತ್ಯಂತ ಸಂತುಷ್ಟನಾದ ಶ್ರೀಕೃಷ್ಣನಿಂದ, ಸಾತ್ಯಕಿ ಒಂದು ದಿನದ ಬಲದ ವರ ಪಡೆದಿದ್ದ.

 

ತತೋ ವಿವೃದ್ಧೋರುಬಲಾತ್ ಸ ಸಾತ್ಯಕಿಃ ಸಂಸ್ಥಾಪ್ಯ ಭೀಮಂ ಪ್ರಯಯೌ ರಥೇನ ।

ತಂ ಬಾಣವರ್ಷೈಃ ಪೃತನಾಂ ಸಮನ್ತಾನ್ನಿಘ್ನನ್ತಮಾಜೌ ಹೃದಿಕಾತ್ಮಜೋSಭ್ಯಯಾತ್ ॥ ೨೬.೯೯ ॥

 

ತದನಂತರ ಸಾತ್ಯಕಿ ಬಲವನ್ನು ಚೆನ್ನಾಗಿ ಬೆಳೆಸಿಕೊಂಡ,

ಭೀಮನನ್ನಲ್ಲೇ ನಿಲ್ಲಿಸಿ, ರಥದಿಂದ ಮುಂದೆ ಸಾಗಿದನು.

ಬಾಣದ ಸಮೂಹದಿಂದ ಎಲ್ಲೆಡೆ ಸೇನೆಯನ್ನು ಕೊಲ್ಲುತ್ತಿದ್ದ,

ಅಂಥ ಬಲವಂತ ಸಾತ್ಯಕಿಯನ್ನು ಕೃತವರ್ಮನು ಎದುರಾದ .

 

ತಯೋರಭೂದ್ ಯುದ್ಧಮತೀವ ದಾರುಣಂ ತತ್ರಾಕರೋತ್ ತಂ ವಿರಥಂ ಸ ಸಾತ್ಯಕಿಃ ।

ವಿಜಿತ್ಯ ತಂ ಸಾತ್ಯಕಿರುಗ್ರಧನ್ವಾ ಯಯಾವತೀತ್ಯೈವ ಶಿರಾಂಸಿ ಯೂನಾಮ್ ॥ ೨೬.೧೦೦ ॥

 

ನಡೆಯಿತು ಅವರಿಬ್ಬರಲ್ಲಿ ಅತ್ಯಂತ ಭಯಂಕರವಾದ ಯುದ್ಧ,

ಆ ಯುದ್ಧದಲ್ಲಿ ಸಾತ್ಯಕಿ ಕೃತವರ್ಮನ ರಥಹೀನನನ್ನಾಗಿ ಮಾಡಿದ.

ಹೀಗೆ ಕೃತವರ್ಮನನ್ನು ಯುದ್ಧದಲ್ಲಿ ಗೆದ್ದ,

ಸಾತ್ಯಕಿಯ ಭಯಂಕರ ಧನುಸ್ಸದು ಅಗಾಧ, ಯುವತಲೆಗಳನ್ನು ಕತ್ತರಿಸುತ್ತಾ ಮುಂದೆ ಸಾಗಿದ.

No comments:

Post a Comment

ಗೋ-ಕುಲ Go-Kula