Sunday 19 March 2023

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 24: 50-61

ಇತ್ಯುಕ್ತೇ ವೈರಮಾತ್ಮೋತ್ಥಂ ಲೋಕಮದ್ಧ್ಯೇ ಪ್ರಹಾಪಯನ್ ।

ಲೋಕಸಙ್ಗ್ರಹಣಾರ್ತ್ಥಾಯ ಭೀಮಸೇನೋSಬ್ರವೀದ್ ವಚಃ ॥೨೪.೫೦॥

 

ಈ ರೀತಿಯಾಗಿ ಶ್ರೀಕೃಷ್ಣ ಪರಮಾತ್ಮ ಹೇಳುತ್ತಿರಲು,

ಕೌರವರೊಂದಿಗೆ ಶತೃತ್ವ ಬಿಟ್ಟಂತೆ ಜನಕೆ ತೋರಲು,

ಇಂತಹಾ ಸಂದಿಗ್ದ ನಿರ್ಣಾಯಕವಾದ ವಿಶೇಷ ಪ್ರಸಂಗಗಳಲ್ಲಿ,

ಹೇಗೆ ನಡೆಯಬೇಕೆಂದು ಭೀಮ ಹೇಳುತ್ತಾನೆ ತನ್ನ ಮಾತುಗಳಲ್ಲಿ.

 

ನಾಸ್ಮನ್ನಿಮಿತ್ತನಾಶಃ ಸ್ಯಾತ್ ಕುಲಸ್ಯಾಪಿ  ವಯಂ ಕುಲಮ್ ।

ರಕ್ಷಿತುಂ ಧಾರ್ತ್ತರಾಷ್ಟ್ರಸ್ಯ  ಭವೇಮಾಧಶ್ಚರಾ ಇತಿ ॥೨೪.೫೧॥

 

ಆಗದಿರಲಿ ಇಡೀ ಕುರುಕುಲ ನಮ್ಮಿಂದ ಸರ್ವ ನಾಶ,

ದುರ್ಯೋಧನನನ ದಾಸರಾಗುತ್ತೇವೆ ಉಳಿಸಲು ವಂಶ.

 

ಇಚ್ಛತಾSಪ್ಯಖಿಲಾನ್ ಹನ್ತುಂ ಧಾರ್ತ್ತರಾಷ್ಟ್ರಾನ್ ದೃಢಾತ್ಮನಾ ।

ಭೀಮೇನೋಕ್ತೋ ವಾಸುದೇವೋ ಲೋಕಸಙ್ಗ್ರಹಣೇಚ್ಛಯಾ ॥೨೪.೫೨॥

 

ಎಲ್ಲಾ ದುರ್ಯೋಧನಾದಿಗಳನ್ನು ಕೊಲ್ಲಲು ದೃಢವಾಗಿ ಬಯಸಿದ್ದ ಭೀಮ,

ಲೋಕಹಿತದೃಷ್ಟಿಯಿಂದ ಲೋಕನೀತಿಯಿಂದ ತೋರಿದ ವಿವೇಕದ ನಿಯಮ.

 

ವಧಂ ತೇಷಾಂ ಧರ್ಮ್ಮಮೇವ ಲೋಕೇ ಜ್ಞಾಪಯಿತುಂ ಹರಿಃ ।

ಆಕ್ಷಿಪನ್ನಿವ ಭೀಮಂ ತಂ ಯುದ್ಧಾಯ ಪ್ರೇರಯದ್ ದೃಢಮ್ ॥೨೪.೫೩॥

 

ಶ್ರೀಕೃಷ್ಣ:ದುರ್ಯೋಧನಾದಿಗಳ ಸಂಹಾರವೇ ಧರ್ಮವೆಂದು ಜಗಕೆ ತೋರಲು,

ಭೀಮನ ಯುದ್ಧಕ್ಕೆ ಪ್ರಚೋದಿಸಿದವು ಬಯ್ಗುಳಂತಿದ್ದ ಕೃಷ್ಣನ ತೀಕ್ಷ್ಣ ಮಾತುಗಳು.

 

ಅಭಿಪ್ರಾಯಂ ಕೇಶವಸ್ಯ ಜಾನನ್ ಭೀಮೋ ನಿಜಂ ಬಲಮ್ ।

ರಾಜ್ಞಾಂ ಮದ್ಧ್ಯೇSವದತ್ ತಚ್ಚ ಕೃಷ್ಣೋSಭ್ಯಧಿಕಮೇವ ಹಿ ॥೨೪.೫೪॥

 

ಕೃಷ್ಣನ ಅಭಿಪ್ರಾಯವನ್ನು ತಿಳಿದ ಭೀಮ ತನ್ನ ಬಲದ ಬಗ್ಗೆ ಹೇಳಿದ,

ಅದಕ್ಕೆ ಶ್ರೀಕೃಷ್ಣ 'ಅದಿನ್ನೂ ಹೆಚ್ಚಿದೆ ನೀ ಕಡಿಮೆ ಹೇಳಿದೆ' ಎಂದು ನುಡಿದ.

 

ಶಶಂಸ ಸತ್ಯೈಃ  ಸದ್ವಾಕ್ಯೈ ರಾಜ್ಞಾಂ ಮದ್ಧ್ಯೇ ಪ್ರಕಾಶಯನ್ ।

ವಧಂ ಕುರೂಣಾಂ ಸದ್ಧರ್ಮ್ಮಂ ಗುಣಾನ್ ಭೀಮಸ್ಯ ಚಾಮಿತಾನ್ ॥೨೪.೫೫॥

 

ಭೀಮನ ಗುಣಗಳು ಅಪರಿಮಿತ,

ಕುರುಗಳ ವಧೆಯು ಧರ್ಮ ಸಮ್ಮತ.

ಪಾಂಡವರು ಮಾಡುವುದು ಧರ್ಮಯುದ್ಧ,

ಬಲಭೀಮ ಲೋಕಕ್ಕಾಗಿ ಸೌಜನ್ಯಕ್ಕೂ ಬದ್ಧ.

ಇದಾಗಿತ್ತು ಶ್ರೀಕೃಷ್ಣನ ಮುಖ್ಯ ಉದ್ದೇಶ,

ಹಾಗಾಗಿ ಕೊಟ್ಟ ಸಂದರ್ಭೋಚಿತ ಸಂದೇಶ.

 

ನಿತ್ಯಮೇಕಮನಸ್ಕೌ ತಾವಪಿ ಕೇಶವಮಾರುತೀ ।

ಏವಂ ಲೋಕಸ್ಯ ಸಂವಾದಹೇತೋಃ ಸಂವಾದಮಕ್ರತಾಮ್ ॥೨೪.೫೬॥

 

ಕೃಷ್ಣ ಭೀಮಸೇನರದು ಯಾವಾಗಲೂ ಒಂದೇ ಅಭಿಪ್ರಾಯ,

(ಸರ್ವೋತ್ತಮ -ಜೀವೋತ್ತಮರ ಸಮಾನ ತತ್ವದ ಭಾವ ).

ಲೋಕದ ಸಮ್ಮತಿ ಪಡೆಯುವ ಹರಿವಾಯುಗಳ ಉನ್ನತ ಧ್ಯೇಯ.

 

ತತಃ ಕೃಷ್ಣೋSರ್ಜ್ಜುನಂ ಚೈವ ಕೃಪಾಲುಂ ಸನ್ಧಿಕಾಮುಕಮ್ ।

ಹೇತುಮದ್ಭಿಃ ಶುಭೈರ್ವಾಕ್ಯೈರನುನೀಯ ಜಗತ್ಪತಿಃ ॥೨೪.೫೭॥

 

ಮಾತನಾಡಿದ ನಂತರ ಧರ್ಮರಾಜ ಹಾಗೂ ಭೀಮಸೇನ,

ಕೌರವರ ಮೇಲೆ ಕೃಪೆಯಿಟ್ಟು ಸಂಧಾನ ಬಯಸಿದ್ದ ಅರ್ಜುನನ್ನ,

ಯುಕ್ತಿಕರ ಶಾಸ್ತ್ರೋಕ್ತಿಗಳಿಂದ ಸಮಾಧಾನ ಮಾಡಿದ ಶ್ರೀಕೃಷ್ಣ.

 

ಉಕ್ತೋ ಮಾನುಷಯಾ ಬುದ್ಧ್ಯಾ ನಕುಲೇನ ಸುನೀತಿವತ್ ।

ಶೌರ್ಯ್ಯಪ್ರಕಾಶನಾಯೈವ ಯುದ್ಧಂ ಯೋಜಯತಾಂ ಭವಾನ್  ॥೨೪.೫೮॥

 

ಇತ್ಯುಕ್ತ ಸಹದೇವೇನ ಯುಯುಧಾನೇನ ಚಾಚ್ಯುತಃ ।

ದಸ್ಯೂನಾಂ ನಿಗ್ರಹೋ ಧರ್ಮ್ಮಃ ಕ್ಷತ್ರಿಯಾಣಾಂ ಯತಃ ಪರಃ ॥೨೪.೫೯॥

 

ಅತೋ ನ ಧಾರ್ತರಾಷ್ಟ್ರೈರ್ನ್ನಃ ಸನ್ಧಿಃ ಸ್ಯಾದಿತಿ ಪಾರ್ಷತೀ ।

ಜಗಾದ ಕೃಷ್ಣಂ ಸೋSಪ್ಯೇನಾಮೋಮಿತ್ಯುಕ್ತ್ವಾ ವಿನಿರ್ಯ್ಯಯೌ ॥೨೪.೬೦॥

 

ನಕುಲಗೆ ಶ್ರೀಕೃಷ್ಣನೊಬ್ಬ ಸಾಮಾನ್ಯ ಮನುಷ್ಯನೆಂಬ ಭಾವ,

ಹಾಗಾಗಿ ಕೃಷ್ಣಗೆ ನೀತಿ ಉಪದೇಶ ಮಾಡಿದ ಮಹಾನುಭಾವ.

ಸಾತ್ಯಕಿ ಸಹದೇವ ಅವರದು ಶೌರ್ಯ ಪ್ರಕಾಶನ,

ಅವರು ಕೇಳಿಕೊಂಡರು ಯುದ್ಧದ ಅಯೋಜನ.

ದ್ರೌಪದಿ ಹೇಳುತ್ತಾಳೆ, ಕಳ್ಳರನ್ನು ನಿಗ್ರಹಿಸುವುದು ಧರ್ಮ,

ಕ್ಷತ್ರಿಯರಂತೂ ಪಾಲಿಸಲೇಬೇಕಾದ ಧರ್ಮವೆಂಬ ಮರ್ಮ.

ಹಾಗಾಗಿ ದುರ್ಯೋಧನಾದಿಗಳೊಡನೆ ಬೇಡ ಸಂಧಾನ,

ಹಾಗೇ ಆಗಲಿ ಎಂದು ಹೇಳಿ ಹೊರಟ ತಾನು ಮಧುಸೂದನ.

 

ಸಸಾತ್ಯಕಿಃ ಸ್ಯನ್ದನವರ್ಯ್ಯಸಂಸ್ಥಿತಃ  ಪೃಥಾತನೂಜೈರಖಿಲೈಃ ಸ ಭೂಮಿಪೈಃ ।

ಅನ್ವಾಗತೋ ದೂರತರಂ ಗಿರಾ ತಾನ್ ಸಂಸ್ಥಾಪ್ಯ ವಿಪ್ರಪ್ರವರೈಃ ಕುರೂನ್ ಯಯೌ ॥೨೪.೬೧॥

 

 ಸಾತ್ಯಕಿಯ ಒಡಗೂಡಿದ ಶ್ರೀಕೃಷ್ಣ ಉತ್ಕೃಷ್ಟವಾದ ರಥವೇರಿ ಕುಳಿತ,

ಪಾಂಡವರು ವಿರಾಟ ದ್ರುಪದಾದಿಗಳಿಂದ ಬಹುದೂರ ಹಿಂಬಾಲಿಸಲ್ಪಟ್ಟ.

ಆನಂತರ ಕೃಷ್ಣ ಅವರೆಲ್ಲರನ್ನು ನಿಲ್ಲಿಸಿ ಹೇಳಿ ಹಿಂದೆ ಕಳಿಸಿದ,

ಶ್ರೇಷ್ಠ ಬ್ರಾಹ್ಮಣರ ಸೇರಿಕೊಂಡು ಕೌರವರ ಬಳಿಗೆ ತೆರಳಿದ.


No comments:

Post a Comment

ಗೋ-ಕುಲ Go-Kula