Sunday, 19 March 2023

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 24: 70-82

 

ಸಮ್ಪೂಜಿತೋ ಭೀಷ್ಮಮುಖೈಃ ಸಮಸ್ತೈ ರರಾಜ ರಾಜೀವಸಮಾನನೇತ್ರಃ ।

ಯಥೋಚಿತಾಸ್ತತ್ರ ವಿಧಾಯ ವಾರ್ತ್ತಾ ಜಗಾದ ಕಾಲೇ ಕಲಿಕಲ್ಮಷಾಪಹಃ ॥೨೪.೭೦॥

 

ಕಮಲದೆಸಳಿನಂತೆ ಚೆಲುವಾದ ಅರಳು ಕಣ್ಗಳ ಶ್ರೀಕೃಷ್ಣ,

ಭೀಷ್ಮಾದಿಗಳಿಂದ ಸ್ವೀಕರಿಸಿದ ಪೂಜೆ, ಗೌರವ ಅರ್ಪಣ.

ಮಾಡಿದ ಕಲಿಕಲ್ಮಶ ನಾಶಮಾಡುವ ಯಥೋಚಿತ ಭಾಷಣ.

 

ವೈಚಿತ್ರವೀರ್ಯ್ಯ ಸ್ವಕುಲಸ್ಯ ವೃದ್ಧ್ಯೈ ಪ್ರದೇಹಿ ರಾಜ್ಯಂ ತವ ಸತ್ಸುತಾಯ ।

ಯಶಶ್ಚ ಧರ್ಮ್ಮಂ ಪರಮಂ ಪ್ರಸಾದಂ ಮಮ ತ್ವಮಾಪ್ನೋಷಿ ತದೈವ ರಾಜನ್ ॥೨೪.೭೧॥

 

‘ಓ ವಿಚಿತ್ರವೀರ್ಯ ಪುತ್ರಾ , ನಿನ್ನ ಕುಲ ಬೆಳೆದು ಉಳಿಯಬೇಕೆಂದಾದರೆ,

ಸುಪುತ್ರಗೆ ರಾಜ್ಯ ಕೊಟ್ಟು ಹೊಂದು ಕೀರ್ತಿ ಪುಣ್ಯ ನನ್ನನುಗ್ರಹದಾಸರೆ.

 

ಅತೋSನ್ಯಥಾ ಯಶಸೋ ಧರ್ಮ್ಮತಶ್ಚ ಹೀನಃ ಪ್ರತೀಪತ್ವಮುಪೈಷಿ ಮೇSತಃ ।

ಇತೀರಿತಃ ಪ್ರಾಹ ಮಮಾತಿವರ್ತ್ತಿನಂ ಸುತಂ ಸ್ವಯಂ ಮೇ ಪ್ರತಿಬೋಧಯೇತಿ  ॥೨೪.೭೨॥

 

ಹಾಗಾಗದಿದ್ದರೆ ನಿನ್ನ ಕೀರ್ತಿ ಪುಣ್ಯಗಳ ನಾಶ,

ನಿನ್ನ ಸುತ್ತಿಕೊಳ್ಳುತ್ತದೆ ನನ್ನ ವಿರೋಧದ ಪಾಶ.

ಕೇಳಿಸಿಕೊಂಡ ಧೃತರಾಷ್ಟ್ರನದು ಈ ರೀತಿಯಿತ್ತು ವರ್ತನೆ,

ಮಾತು ಕೇಳದ ಮಗನಿಗೆ ನೀನೇ ಹೇಳೆಂದು ಕುಳಿತ ಸುಮ್ಮನೆ.

 

ಸ ವಾಸುದೇವೇನ ವಿಬೋಧಿತೋSಪಿ ಪಾಪಾಭಿಸನ್ಧಿರ್ದ್ಧೃತರಾಷ್ಟ್ರಸೂನುಃ ।

ಉತ್ಥಾಯ ತಸ್ಮಾದನುಜೈರಮಾತ್ಯೈರ್ನ್ನಿಯನ್ತುಮೀಶಂ ಕುಮತಿರ್ವ್ಯಧಾನ್ಮತಿಮ್ ॥೨೪.೭೩॥

 

ಶ್ರೀಕೃಷ್ಣ ಪರಮಾತ್ಮ ಹೇಳುತ್ತಿದ್ದರೂ ಒಳ್ಳೆಯ ಬುದ್ಧಿ,

ಕೆಟ್ಟ ಕಾರ್ಯದಲ್ಲೇ ಚಲಿಸುತ್ತಿತ್ತು ಕೌರವನ ದುರ್ಬುದ್ಧಿ.

ತನ್ನ ಮಂತ್ರಿಗಳು ತಮ್ಮಂದಿರೆಲ್ಲಾ ಸೇರಿ,

ಮಾಡಿದ ಕೃಷ್ಣನನ್ನೇ ಬಂಧಿಸುವ ಪಿತೂರಿ.

 

ಯೇಯೇ ತದಾ ಕೇಶವಸಂಯಮಾಯ ನ್ಯಮನ್ತ್ರಯಂಸ್ತೇ ವಿಬುಧಪ್ರತೀಪಾಃ ।

ಅತೋ ವಿಕರ್ಣ್ಣಪ್ರಮುಖಾ ಅಪಿ ಸ್ಮ ವದ್ಧ್ಯತ್ವಮಾಯನ್ನಶುಭಾಂ ಗತಿಂ ಚ ॥೨೪.೭೪॥

 

ಆಗ ಶ್ರೀಕೃಷ್ಣನನ್ನು ನಿಗ್ರಹಿಸಲು ಆಲೋಚಿಸಿದ ಆ ಜನ,

ಅವರೆಲ್ಲಾ ದೇವತಾದ್ವೇಷಿಗಳಾದಂಥ ಅಸುರರ ಗಣ.

ಹಾಗಾಗಿ ವಿಕರ್ಣ ಮುಂತಾದವರೂ ವಧಾರ್ಹರಾದರು,

ಅದರಂತೆ ಪಡೆಯಬೇಕಾದ ಕೆಟ್ಟ ಗತಿಯ ಪಡೆದರು.

 

ಕರ್ಣ್ಣಃ ಸುರಾಗ್ರ್ಯೋSಪಿ ಸುಯೋಧನಾರ್ತ್ಥೇ ನ್ಯಮನ್ತ್ರಯದ್ ಭಾವತೋ ನೈವ ದುಷ್ಟಃ ।

ಅತೋ ಗತಿಶ್ಚಾಸ್ಯ ಸುಶೋಭನಾSಭೂದ್ ಯೇSತ್ರಾನುಕೂಲಾಃ ಪರಮಸ್ಯ ತೇ ಶುಭಾಃ ॥೨೪.೭೫॥

 

ಕರ್ಣ ಮೂಲತಃ ದೇವತಾ ಶ್ರೇಷ್ಠನಾಗಿದ್ದ,

ದುರ್ಯೋಧನಗಾಗಿ ಅಸುರಾವೇಶ ಹೊಂದಿದ್ದ.

ಮಂತ್ರಾಲೋಚನೆಯಲ್ಲಿಯೂ ಪಾಲ್ಗೊಂಡಿದ್ದ,

ದೋಷವಿರದ ಒಳಮನಸ್ಸಿತ್ತು ಅದು ಶುದ್ಧ.

ಹಾಗಾಗಿ ಕರ್ಣಗೆ ಆಯಿತು ಮಂಗಳಲೋಕ ಪ್ರಾಪ್ತಿ,

ಒಟ್ಟಲ್ಲಿ ಭಗವತ್ಪರವಿದ್ದವರು ಸಜ್ಜನರು ಎಂಬ ಉಕ್ತಿ.

 

ಋಷಿಭಿರ್ಜ್ಜಾಮದಗ್ನ್ಯೇನ ವ್ಯಾಸೇನಾಪ್ಯಮಿತೌಜಸಾ ।

ವಾಸುದೇವಾತ್ಮನಾ ಚೈವ ತ್ರಿರೂಪೇಣೈವ ವಿಷ್ಣುನಾ ॥೨೪.೭೬॥

 

ಮಾತಾಪಿತೃಭ್ಯಾಂ ಭೀಷ್ಮಾದ್ಯೈರನುಶಿಷ್ಟೋSಪಿ ದುರ್ಮ್ಮತಿಃ ।

ದೂರ್ಯ್ಯೋಧನೋ ಮನ್ತ್ರಯತೇ ಮುಕುನ್ದಸ್ಯಾSಶು ಬನ್ಧನಮ್ ॥೨೪.೭೭॥

 

ಋಷಿಗಳು, ಪರಶುರಾಮ, ವ್ಯಾಸ, ಕೃಷ್ಣ ಮೂರು ಭಗವದ್ರೂಪಗಳು,

ಗಾಂಧಾರಿ, ಧೃತರಾಷ್ಟ್ರ, ಭೀಷ್ಮ ದ್ರೋಣಾದಿಗಳ ಬುದ್ಧಿ ಮಾತುಗಳು,

ಏನಿದ್ದರೂ ಬದಲಿಸಲಾಗದಂಥ ಬುದ್ಧಿಹೀನ,

ಕೃಷ್ಣ ಸೆರೆಯ ಚಿಂತಿಸುತ್ತಿದ್ದ ದುರ್ಯೋಧನ.

 

ಸಾತ್ಯಕಿಃ ಕೃತವರ್ಮ್ಮಾ ಚ ತಚ್ಛುಶ್ರುವತುರಞ್ಜಸಾ ।

ಸಂಸ್ಥಾಪ್ಯ ಕೃತವರ್ಮ್ಮಾಣಂ ರಹಃ ಸಾತ್ಯಕಿರತ್ರ ಚ ।

ಅಭ್ಯೇತ್ಯ ಕೇಶವಂ ಪ್ರಾಹ ದೂರ್ಯ್ಯೋಧನವಿನಿಶ್ಚಯಮ್ ॥೨೪.೭೮॥

 

ಸಾತ್ಯಕಿ, ಕೃತವರ್ಮರು ಕೇಳಿಸಿಕೊಂಡರು ಆ ಮಂತ್ರಾಲೋಚನೆ,

ಕೃತವರ್ಮನ ಅಲ್ಲೇ ಬಿಟ್ಟ ಸಾತ್ಯಕಿ ಕೃಷ್ಣಗೆ ನೀಡಿದ ಅದರ ಸೂಚನೆ.

 

ಜಾನನ್ನಪ್ಯಖಿಲಂ ಕೃಷ್ಣಸ್ತಚ್ಛ್ರುತ್ವಾ ಸಾತ್ಯಕೇರ್ಮ್ಮುಖಾತ್ ।

ವೈಚಿತ್ರವೀರ್ಯ್ಯಮವದತ್ ಪಶ್ಯ ಮಾಮಿತಿ ಸರ್ವಗಮ್ ॥೨೪.೭೯॥

 

ಸರ್ವಜ್ಞನಾದ ಶ್ರೀಕೃಷ್ಣ ಎಲ್ಲವನ್ನೂ ಮೊದಲೇ ತಿಳಿದವನಾಗಿದ್ದ,

ಸಾತ್ಯಕಿ ಮಾತಕೇಳಿ, ಧೃತರಾಷ್ಟ್ರಗೆ ತನ್ನ ವಿಶ್ವರೂಪ ನೋಡಲ್ಹೇಳಿದ.

 

ಅಥ ತೇನಾSಹುತೇ ಪುತ್ರೇ ಸಾಮಾತ್ಯೇ ಪುರುಷೋತ್ತಮಃ ।

ಸ್ವಂ ರೂಪಂ ದರ್ಶಯಾಮಾಸ ಸರ್ವಗಂ ಪೂರ್ಣ್ಣಸದ್ಗುಣಮ್ ॥೨೪.೮೦॥

 

ಸ್ವಲ್ಪ ಕಾಲದ ನಂತರ ಧೃತರಾಷ್ಟ್ರ ತನ್ನ ಮಂತ್ರಿಗಳನ್ನು ಮಗನನ್ನು ಕರೆದ,

ಸರ್ವವ್ಯಾಪಿ ಕೃಷ್ಣ ತನ್ನ ವಿಶ್ವರೂಪವ ಅಂಧಗೆ ದಿವ್ಯದೃಷ್ಟಿ ಕೊಟ್ಟು ತೋರಿದ.

 

ತತ್ ಕಾಲಸೂರ್ಯ್ಯಾಮಿತದೀಪ್ತಿ ಸರ್ವಜಗದ್ಭರಂ ಶಾಶ್ವತಮಪ್ರಮೇಯಮ್ ।

ದೃಷ್ಟ್ವೈವ ಚಕ್ಷೂಂಷಿ ಸುಯೋಧನಾದ್ಯಾ ನ್ಯಮೀಲಯನ್ ದೀಧಿತಿವಾರಿತಾನಿ ॥೨೪.೮೧॥

 

ಪ್ರಳಯಕಾಲದ ಸೂರ್ಯರಿಗಿಂತಲೂ ಮಿಗಿಲಾದ ಆ ದಿವ್ಯ ಕಾಂತಿ,

ಜಗದ್ವ್ಯಾಪಿ, ಪೂರ್ಣ ತಿಳಿಯಲಾಗದ ವಿಶ್ವರೂಪದ ದೈವೀಛಾತಿ.

ಆ ಭಗವದ್ಶಕ್ತಿಯ ಬೆಳಕಾಗಿತ್ತು ಅತ್ಯಂತ ಪ್ರಖರ -ತೀಕ್ಷ್ಣ,

ನೋಡಲಾಗದ ದುರ್ಯೋಧನಾದಿಗಳು ಮುಚ್ಚಿದರು ಕಣ್ಣ.

 

ಪಿಧಾಯ ರೂಪಂ ಪುನರೇವ ತದ್ಧರಿರ್ವೈಚಿತ್ರವೀರ್ಯ್ಯೇಣ ಸಮರ್ತ್ಥಿತಃ ಪುನಃ ।

ಕೃತ್ವಾSನ್ಧಮೇವ ಪ್ರಯಯೌ ಸುಯೋಧನಂ ಸಹಾನುಗಂ ಪಾಪತಮಂ ಪ್ರಕಾಶ್ಯ ॥೨೪.೮೨॥

 

ಬೆದರಿದ ಧೃತರಾಷ್ಟ್ರ ಶ್ರೀಕೃಷ್ಣನನ್ನು ಮತ್ತೆ ಮತ್ತೆ ಬೇಡಿಕೊಂಡ,

ವಿಶ್ವರೂಪ ಮರೆಮಾಡಿ ಧೃತರಾಷ್ಟ್ರನ ಮಾಡಿದ ಮತ್ತೆ ಕುರುಡ.

ನೀಡಿದ ಲೋಕಕ್ಕೆ ದುರ್ಯೋಧನಾದಿಗಳ ದುರ್ನಡತೆಯ ದರ್ಶನ,

ಪಾಪಿಗಳ ದರ್ಶನ ಮಾಡಿಸುತ್ತಾ ಅಲ್ಲಿಂದ ಹೊರನಡೆದ ಶ್ರೀಕೃಷ್ಣ.

No comments:

Post a Comment

ಗೋ-ಕುಲ Go-Kula