Tuesday, 21 March 2023

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 26: 14-22

 

ಸ ಧಾರ್ತ್ತರಾಷ್ಟ್ರೇಣ ಯುಧಿಷ್ಠಿರಾಗ್ರಹಾತ್ ಸಂಶ್ರಾವಿತಃ ಕ್ರೂರವಚೋ ನಿಶಾಯಾಮ್ ।

ಜಗಾದ ದೂರಂ ಸಮರಾದ್ ವಿನೀಯತಾಂ ಪಾರ್ತ್ಥಸ್ತತೋ ಧರ್ಮ್ಮಸುತಂ ಗ್ರಹೀಷ್ಯೇ ॥ ೨೬.೧೪ ॥

 

ಧರ್ಮರಾಜನನ್ನು ಬಂಧಿಸಲಾಗದ್ದಕ್ಕೆ ಆ ರಾತ್ರಿ ದ್ರೋಣರನ್ನು ಕಟುವಾಗಿ ಬೈಯ್ಯುತ್ತಾನೆ ದುರ್ಯೋಧನ,

ಅರ್ಜುನನನ್ನು ರಣರಂಗದಿಂದ ದೂರ ಒಯ್ಯಿರಿ, ಆಗ ನಾನು ಧರ್ಮಜನ ಹಿಡಿಯುತ್ತೇನೆನನ್ನುತ್ತಾರೆ ದ್ರೋಣ.

 

ತತಃ ಸುಶರ್ಮ್ಮಾ ಸಹಿತೋ ಮಹಾರಥೈಃ ಸಂಶಪ್ತಕೈರ್ದ್ದೂರತರಂ ಪ್ರಣೇತುಮ್ ।

ಯುದ್ಧಾಯ ಭೀಮಾನುಜಮಾಶು ಕ್ಲ್-ಪ್ತೋ ದುರ್ಯ್ಯೋಧನೇನೋಮಿತಿ ಸೋSಪ್ಯವಾದೀತ್ ॥ ೨೬.೧೫ ॥

 

 ಆನಂತರ ದುರ್ಯೋಧನನಿಂದ ಮಹಾರಥಿಕರಾದ ಸಂಶಪ್ತಕರಸಹಿತನಾದ ಸುಶರ್ಮನಿಗೆ,

ಭೀಮಸೋದರ ಅರ್ಜುನನನ್ನು ದೂರ ಒಯ್ಯಲು ಆಜ್ಞೆ: ಅದಕ್ಕೆ ಸುಶರ್ಮನಿಂದ ಒಪ್ಪಿಗೆ.

 

ಸಮಾಹ್ವಯಾಮಾಸುರಥಾರ್ಜ್ಜುನಂ ತೇ ಪ್ರಾತರ್ಹುತಾಶಸ್ಯ ದಿಶಂ ರಣಾಯ ।

ಅಯೋಧಯತ್ ತಾನ್ ಸ ಚ ತತ್ರ ಗತ್ವಾ ಭೀಮೋ ಗಜಾನೀಕಮಥಾತ್ರ ಚಾವಧೀತ್ ॥ ೨೬.೧೬ ॥

 

ಬೆಳಗಾದೊಡನೆ ರಣರಂಗದಲ್ಲವರು ಅರ್ಜುನಗೆ ಕೊಡುತ್ತಾರೆ ಆಗ್ನೇಯದತ್ತ ಆಹ್ವಾನ,

ಅದಕ್ಕೊಪ್ಪಿ ಸಂಶಪ್ತಕರು ಕರೆದ ದಿಕ್ಕಿನೆಡೆ ಹೋಗಿ ಯುದ್ಧ ಮಾಡುತ್ತಾನೆ ಅರ್ಜುನ.

ಈ ಹನ್ನೆರಡನೇದಿನದ ಯುದ್ಧದಿ ಆನೆಸಮೂಹವ

ಸಂಹರಿಸುತ್ತಾನೆ ಭೀಮಸೇನ.

 

ನಿಹನ್ಯಮಾನೇಷು ಗಜೇಷು ಸರ್ವಶೋ ವಿದ್ರಾಪ್ಯಮಾಣೇಷ್ವಖಿಲೇಷು ರಾಜಸು ।

ಪ್ರಾಗ್ಜ್ಯೋತಿಷೋ ಧಾರ್ತ್ತರಾಷ್ಟ್ರಾರ್ತ್ಥಿತಸ್ತಂ ಸಮಾಸದತ್ ಸುಪ್ರತೀಕೇನ ಧನ್ವೀ ॥ ೨೬.೧೭॥

 

 

 

ಭೀಮನಿಂದ ಎಲ್ಲಾ ಕಡೆ ಆನೆಗಳು ಸಾಯುತ್ತಿರಲು,

ಎಲ್ಲಾ ರಾಜರುಗಳಲ್ಲಿಂದ ಪಲಾಯನ ಮಾಡುತ್ತಿರಲು,

ದುರ್ಯೋಧನ ಭಗದತ್ತನ ಬೇಡಿಕೊಳ್ಳುತ್ತಾನೆ,

ಭಗದತ್ತ ಬಿಲ್ಲು ಹಿಡಿದು,ಸುಪ್ರತೀಕ ಏರುತ್ತಾನೆ,

ಭೀಮಸೇನನಿಗೆ ಎದುರಾಗಿ ಸಾಗಿ ಬರುತ್ತಾನೆ.

 

ವಿಭೀಷಿತಾಃ ಸುಪ್ರತೀಕೇನ ಭೀಮಹಯಾ ನ ತಸ್ಥುಸ್ತದನು ಸ್ಮ ಸಾತ್ಯಕಿಃ ।

ಸೌಭದ್ರಮುಖ್ಯಾಶ್ಚ ಗಜಂ ತಮಭ್ಯಯುಶ್ಚಿಕ್ಷೇಪ ತೇಷಾಂ ಸ ರಥಾನಥಾಮ್ಬರೇ ॥ ೨೬.೧೮ ॥

 

ಭಯಗೊಂಡಿತ್ತು ಸುಪ್ರತೀಕವೆಂಬ ಆ ವಿಶೇಷ ಆನೆ,

ಒಂದೆಡೆ ನಿಲ್ಲದಂತೆ ಮಾಡಿತ್ತು ಭೀಮನ ಕುದುರೆಗಳನ್ನೆ.

ಆಗ ಸಾತ್ಯಕಿ, ಅಭಿಮನ್ಯು, ಮುಂತಾದವರು ಆ ಆನೆಗೆದುರಾದಾಗ,

ಆ ಸುಪ್ರತೀಕ ಆನೆಯು ಅವರೆಲ್ಲರ ರಥಗಳನ್ನು ಆಕಾಶಕ್ಕೆಸೆಯಿತಾಗ.

 

ಶೈನೇಯಪೂರ್ವೇಷು ರಥೋಜ್ಝಿತೇಷು ಭೂಮಾವವಪ್ಲುತ್ಯ ಕಥಞ್ಚಿದೇವ ।

ಸ್ಥಿತೇಷು ಭೀಮೇ ಚ ವಿಭೀಷಿತಾಶ್ವಾನ್ ಸಂಯಮ್ಯ ಯುದ್ಧ್ಯತ್ಯಪಿ ಕೃಷ್ಣ ಐಕ್ಷತ್ ॥ ೨೬.೧೯ ॥

 

ಸಙ್ಕ್ಲೇಶಿತೋ ವೈಷ್ಣವಾಸ್ತ್ರಂ ಪ್ರಮುಞ್ಚೇತ್ ಪ್ರಾಗ್ಜ್ಯೋತಿಷೋ ಭೀಮಸೇನೇ ತತೋSಹಮ್ ।

ಯಾಮ್ಯರ್ಜ್ಜುನೇನೈವ ತದಸ್ತ್ರಮಾತ್ಮನಃ ಸ್ವೀಕರ್ತ್ತುಮನ್ಯೇನ ವರಾದಧಾರ್ಯ್ಯಮ್ ॥ ೨೬.೨೦ ॥

 

ಹೀಗೆ ಸಾತ್ಯಕಿ ಮುಂತಾದವರೆಲ್ಲಾ ರಥಹೀನರಾಗಿದ್ದಾಗ,

ನೆಲಕ್ಕೆಸೆಯಲ್ಪಟ್ಟು ,ಪ್ರಯಾಸದಿಂದ  ನಿಂತುಕೊಂಡಿರುವಾಗ,

ಭೀಮ ಹೆದರಿದ ಕುದುರೆಗಳನ್ನು ಹತೋಟಿಗೆ ತರುತ್ತಾನೆ,

ಯುದ್ಧರಂಗಕ್ಕೆ ಬಂದು ಯುದ್ಧ ಮಾಡಲು ಆರಂಭಿಸುತ್ತಾನೆ.

ಕೃಷ್ಣಪರಮಾತ್ಮ ಮಾಡುತ್ತಾನೆ ಹೀಗೊಂದು ಆಲೋಚನೆ.

 

ಪೀಡಿತನಾದ ಭಗದತ್ತ ಭೀಮನ ಮೇಲೆ ನಾರಾಯಣಾಸ್ತ್ರ ಬಿಡಬಹುದು,

ಆ ಕಾರಣದಿಂದ ನನ್ನ ಅಸ್ತ್ರವನ್ನು ನಾನೇ ಸ್ವೀಕರಿಸಿ ಧರಿಸಬೇಕಾಗಬಹುದು.

ನಾನು ಅರ್ಜುನನಿಂದ ಕೂಡಿಕೊಂಡು, ಅಲ್ಲಿಗೆ ಹೋಗುತ್ತೇನೆ,

ಇನ್ನೊಬ್ಬರದಕ್ಕೆ ಅಶಕ್ಯರೆಂಬುದು ಸತ್ಯಸಂಕಲ್ಪನ ಆಲೋಚನೆ.

 

ಇತಿ ಸ್ಮ ಸಞ್ಚಿನ್ತ್ಯ ಸಹಾರ್ಜ್ಜುನೇನ ತತ್ರಾSಯಯಾವಥ ಪಾರ್ತ್ಥಂ ತ್ರಿಗರ್ತ್ತಾಃ ।

ನ್ಯವಾರಯಂಸ್ತ್ವಾಷ್ಟ್ರಮಸ್ತ್ರಂ ಸ ತೇಷು ವ್ಯವಾಸೃಜನ್ಮೋಹನಾಯಾSಶು ವೀರಃ  ॥ ೨೬.೨೧ ॥

 

ಈರೀತಿಯಾಗಿ ಯೋಚನೆ ಮಾಡಿದ ಕೃಷ್ಣನು ಅರ್ಜುನನೊಡಗೂಡಿ ಭಗದತ್ತನಲ್ಲಿಗೆ ಹೊರಟ,  ಪಾರ್ಥನನ್ನು ತ್ರಿಗರ್ತದವರು ತಡೆದಾಗ ಅವನು ಅವರ ಮೇಲೆ ತ್ವಷ್ಟ್ರು ಮೊಹನಾಸ್ತ್ರವನ್ನು ಬಿಟ್ಟ,

 

ತದಸ್ತ್ರವೀರ್ಯೇಣ ವಿಮೋಹಿತಾಸ್ತೇ ಪರಸ್ಪರಂ ಕೃಷ್ಣಪಾರ್ತ್ಥಾವಿತಿ ಸ್ಮ ।

ಜಘ್ನುಸ್ತದಾ ವಾಸವಿಸ್ತಾನ್ ವಿಸೃಜ್ಯ ಪ್ರಾಗ್ಜ್ಯೋತಿಷಂ ಹನ್ತುಮಿಹಾಭ್ಯಗಾದ್ ದ್ರುತಮ್ ॥ ೨೬.೨೨ ॥

 

ಆ ಸಮ್ಮೊಹನಾಸ್ತ್ರದ ಬಲದಿಂದ ಮೋಹಗೊಂಡು ಬುದ್ಧಿ ಕೆಡಿಸಿಕೊಂಡ ಆ ತ್ರಿಗರ್ತದವರು,

ಪರಸ್ಪರರಲ್ಲೇ ‘ಇವನು ಕೃಷ್ಣ, ಇವನು ಅರ್ಜುನ’ ಎಂದು ತಿಳಿದುಕೊಂಡು ಹೊಡೆದುಕೊಂಡರು.

ಆಗ ಅರ್ಜುನನು ಅವರನ್ನು ಬಿಟ್ಟು ಭಗದತ್ತನನ್ನು ಕೊಲ್ಲಲು ಬರುತ್ತಾನೆ ಅವನಿಗೆ ಎದುರು.

No comments:

Post a Comment

ಗೋ-ಕುಲ Go-Kula