Tuesday, 21 March 2023

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 25: 47-57

 

ವಿರಥೋ ವ್ಯಾಯುಧಶ್ಚೈವ ದೃಢವೇಧವಿಮೂರ್ಚ್ಛಿತಃ ।

ಕೃತೋ ದುರ್ಯ್ಯೋಧನಃ ಸರ್ವರಾಜ್ಞಾಂ ಭೀಮೇನ ಪಶ್ಯತಾಮ್ ॥ ೨೫.೪೭ ॥

 

ಎಲ್ಲರೂ ನೋಡ ನೋಡುತ್ತಿರುವಾಗಲೇ ಆಗ,

ಭೀಮನಿಂದ ಕೌರವ ರಥ ಆಯುಧಹೀನನಾದನಾಗ.

ಬಲವಾದ ಹೊಡೆತದಿಂದ ಮೂರ್ಛೆ ಹೊಂದಿದನಾಗ.

 

ತತೋSಪಹಾರಂ ಸೈನ್ಯಸ್ಯ ಜಿತ್ವಾಶ್ಚಕ್ರುಶ್ಚ ಕೌರವಾಃ ।

ದುರ್ಯ್ಯೋಧನೋ ನಿಶಾಯಾಂ ಚ ಯಯೌ ಯತ್ರ ನದೀಸುತಃ ॥ ೨೫.೪೮ ॥

 

ಪರಾಜಿತರಾದರು ಕೌರವರು,

ತಮ್ಮ ಸೈನ್ಯ ಹಿಂದೆ ಕರೆಸಿಕೊಂಡರು.

ಆ ರಾತ್ರಿ ದುರ್ಯೋಧನ ತಾನು,

ಭೀಷ್ಮಾಚಾರ್ಯರಿದ್ದಲ್ಲಿಗೆ ಹೋದನು.

 

ಪೀಡಿತೋ ಭೀಮಬಾಣೈಶ್ಚ ಕ್ಷರದ್ಗಾತ್ರೋ ನನಾಮ ತಮ್ ।

ಉವಾಚ ಹೇತುನಾ ಕೇನ ವಯಂ ಕ್ಷೀಯಾಮ ಸರ್ವದಾ  ॥ ೨೫.೪೯ ॥

 

ಭೀಮನ ಬಾಣಗಳಿಂದ ಪೀಡಿತನಾದವನಾಗಿ,

ನೆತ್ತರು ಸುರಿಸಿರುವಂಥ ಮೈಯುಳ್ಳವನಾಗಿ, ಭೀಷ್ಮಾಚಾರ್ಯರಿಗೆ ನಮಸ್ಕಾರ ಮಾಡಿದ,

ಯಾವಾಗಲೂ ನಮಗೇಕೆ ಸೋಲೆಂದು ಕೇಳಿದ.

 

ಪಾಣ್ಡವಾಶ್ಚ ಜಯಂ ನಿತ್ಯಂ ಲಬ್ಧ್ವಾ ಹರ್ಷಮವಾಪ್ನುವನ್ ।

ತಮಾಹ ಭೀಷ್ಮಸ್ತೇSಜೇಯಾ ದೇವಾಸ್ತೇ ಧರಣೀಂ ಗತಾಃ  ॥ ೨೫.೫೦ ॥

 

ವಿಶೇಷತಃ  ಕೇಶವೇನ ಪಾಲಿತಾಸ್ತತ್ಪ್ರಿಯಾಃ ಸದಾ ।

ಮಾನಸೋತ್ತರಶೈಲೇ ಹಿ ಪುರಾ ಬ್ರಹ್ಮಪುರಸ್ಸರಾಃ ॥ ೨೫.೫೧ ॥

 

ಪಾಂಡವರಿಗೇ ಯಾವಾಗಲೂ ಜಯ,

ಎಂದೂ ತಪ್ಪದ ಹರುಷದ ಅನುಭವ.

ಹೀಗೆಂದು ದುರ್ಯೋಧನ ಹೇಳುತ್ತಾನೆ,

ಭೀಷ್ಮರು ನೀಡುತ್ತಾರೆ ಅದರ ವಿವರಣೆ.

ಅವರು ಭೂಮಿಗೆ ಬಂದಿರುವಂಥ ಅಜೇಯ ದೇವತೆಗಳು,

ವಿಶೇಷತಃ ಕೃಷ್ಣನ ಪ್ರೀತಿ ರಕ್ಷಣೆ ಪಡೆದಂಥ ದೈವದ ಒಕ್ಕಲು.

ಬಹಳ ಹಿಂದೆ ಬ್ರಹ್ಮಾದಿ ದೇವತೆಗಳು ಮಾನಸ ಸರೋವರದ ಉತ್ತರದಲ್ಲಿದ್ದಾಗ,

ಶ್ರೀಮನ್ನಾರಾಯಣ ಬ್ರಹ್ಮರೊಬ್ಬರಿಗೆ ಮಾತ್ರ ಆಕಾಶದಿ ಕಾಣಿಸಿಕೊಳ್ಳುವನಾಗ.

 

ಸ್ಥಿತಾ ದೇವಾಸ್ತದಾSಪಶ್ಯದ್ ಬ್ರಹ್ಮೈಕೋ ಹರಿಮಮ್ಬರೇ ।

ಸ್ತುತ್ವಾ ಸಮ್ಪೂಜ್ಯ ಭೂಮೇಃ ಸ ಭಾರಾವತರಣಾಯ ತಮ್ ॥ ೨೫.೫೨ ॥

 

ಪ್ರಾರ್ತ್ಥಯಾಮಾಸ ತೇನೋಕ್ತಂ ದೇವಾನಾಮವದದ್ ವಿಭುಃ ।

ಅಯಂ ನಾರಾಯಣೋ ದೇವಃ ಪೂರ್ಣ್ಣಾನನ್ತಗುಣಾರ್ಣ್ಣವಃ ॥ ೨೫.೫೩ ॥

 

ಅಜ್ಞಾಪಯತಿ ವಃ ಸರ್ವಾನ್ ಪ್ರಾದುರ್ಭಾವಾಯ ಭೂತಳೇ ।

ಸ್ವಯಂ ಚ ದೇವಕೀಪುತ್ರೋ ಭವಿಷ್ಯತಿ ಜಗತ್ಪತಿಃ ॥೨೫.೫೪ ॥

 

ಬ್ರಹ್ಮನು ಆ ನಾರಾಯಣನ ಸ್ತೋತ್ರ ಮಾಡುತ್ತಾನೆ,

ಭೂಭಾರ ಇಳಿಸುವಂತೆ ಪ್ರಾರ್ಥನೆಯ ಸಲ್ಲಿಸುತ್ತಾನೆ.

ಆಗ ಬ್ರಹ್ಮಗೆ ಏನು ಹೇಳಿದನೋ ನಾರಾಯಣ,

ಅದೇ ಬ್ರಹ್ಮ ದೇವತೆಗಳಿಗೆ ಬಿಚ್ಚಿಟ್ಟ ಹೂರಣ.

ಪರಿಪೂರ್ಣ ಗುಣಸಾಗರ ನಾರಾಯಣ ಹೀಗೆ ಹೇಳಿದ್ದಾನೆ,

ನಿಮ್ಮೆಲ್ಲರಿಗೂ ಭುವಿಯಲ್ಲಿ ಅವತರಿಸಲು ಆಜ್ಞಾಪಿಸಿದ್ದಾನೆ.

ಜಗದ್ಪತಿಯಾದ ಭಗವಂತ ಸ್ವಯಂ ತಾನು,

ದೇವಕೀಪುತ್ರನಾಗಿ ಭುವಿಯಲ್ಲಿ ಅವತರಿಸುವನು.

 

ಏವಂ ತೇನ ಸಮಾದಿಷ್ಟಾ ಧರ್ಮ್ಮವಾಯ್ವಾದಯೋSಖಿಲಾಃ ।

ಅಭವನ್ ಪಾಣ್ಡವಾದ್ಯಾಸ್ತೇ ಸೇನ್ದ್ರಾಃ ಸಹಮರುದ್ಗಣಾಃ ॥ ೨೫.೫೫ ॥

 

ಹೀಗೆ ಬ್ರಹ್ಮದೇವರ ಮೂಲಕ ದೈವಾಜ್ಞೆ ಪಡೆದುಕೊಂಡ ದೇವೇಂದ್ರ,

ಆಯಿತು ಧರ್ಮ ವಾಯು ದೇವತೆಗಳಿಂದ ಪಾಂಡವರಾಗಿ ಅವತಾರ.

 

ಸ ಚ ನಾರಾಯಣೋ ದೇವೋ ದೇವಕೀನನ್ದನೋSಭವತ್ ।

ತೇನೈತೇ ಪಾಲಿತಾಃ ಪಾರ್ತ್ಥಾ ಅಜೇಯಾ ದೇವಸರ್ಗ್ಗಿಣಃ ॥ ೨೫.೫೬ ॥

 

ನಾರಾಯಣನೇ ಅವನು ದೇವಕೀಪುತ್ರನಾಗಿ ಬಂದಿರುವ ಕೃಷ್ಣನೆಂಬ ಮಲ್ಲ,

ಅವನ ರಕ್ಷಣೆಯಲ್ಲಿರುವ ಆ ಪಾಂಡವರನ್ನು ಜಯಿಸುವುದು ಸಾಧ್ಯವಲ್ಲ.

 

ತಸ್ಮಾತ್ ತೈಃ ಸನ್ಧಿಮನ್ವಿಚ್ಛ ಯದೀಚ್ಛಸ್ಯಪರಾಭವಮ್ ।

ಇತ್ಯುಕ್ತೋ ಡಮ್ಭಬುದ್ಧ್ಯೈವ ನತ್ವಾ ವಿಷ್ಣುಂ ತತೋ ಯಯೌ ॥ ೨೫.೫೭ ॥

 

ನಿನಗೆ ಸೋಲು ಬೇಡವೆಂದರೆ ದುರ್ಯೋಧನಾ,

ಪಾಂಡವರೊಂದಿಗೆ ಮಾಡಿಕೋ ನೀ ಸಂಧಾನ.

ಹೀಗೆ ಭೀಷ್ಮಾಚಾರ್ಯರು ಎಲ್ಲ ಬಿಡಿಸಿ ತಿಳಿ ಹೇಳಿದಾಗ,

ದುರ್ಬುದ್ಧಿಯ ಕೌರವ ಡಂಭದಿಂದ ಹರಿಗೆ ನಮಿಸಿ ತೆರಳಿದನಾಗ.

No comments:

Post a Comment

ಗೋ-ಕುಲ Go-Kula