Monday, 20 March 2023

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 25: 29-36

 

ಅಥ ಭೀಷ್ಮಮುದೀರ್ಣ್ಣಾಸ್ತ್ರಂ ದ್ರಾವಯನ್ತಂ ವರೂಥಿನೀಮ್ ।

ಸಸೌಮದತ್ತಿಂ ಸೌಭದ್ರಸಹಾಯೋSರ್ಜ್ಜುನ ಆಸದತ್ ॥ ೨೫.೨೯ ॥

 

ತದನಂತರ ಅಭಿಮನ್ಯು ಮುಂತಾದವರ ಸಹಾಯವನ್ನು ಅರ್ಜುನ ಪಡೆದುಕೊಂಡ,

ಉತ್ಕೃಷ್ಟ ಅಸ್ತ್ರ ಪ್ರಯೋಗಿಸುತ್ತಿದ್ದ ಸೌಮದತ್ತಿ ಮತ್ತಿತರರೊಂದಿಗಿದ್ದ ಭೀಷ್ಮರ ಎದಿರುಗೊಂಡ.

 

ಸೌಭದ್ರಂ ತತ್ರ ವಿಕ್ರಾನ್ತಮತೀತ್ಯ ದ್ಯುಸರಿತ್ಸುತಃ ।

ದ್ರಾವಯಾಮಾಸ ಪಾಞ್ಚಾಲಾನ್ ಪಶ್ಯತಃ ಸವ್ಯಸಾಚಿನಃ ॥ ೨೫.೩೦ ॥

 

ಪರಾಕ್ರಮ ತೋರುತ್ತಿದ್ದ ಅಭಿಮನ್ಯುವನ್ನು ಸುಲಭವಾಗಿ ದಾಟಿದ ಭೀಷ್ಮರು,

ಅರ್ಜುನ ನೋಡುತ್ತಿರುವಂತೆ ಪಾಂಚಾಲ ದೇಶದ ವೀರರನ್ನು ಓಡಿಸಿದರು.

 

ತಸ್ಯ ವಿಕ್ರಮಮಾಲಕ್ಷ್ಯ ಪಾರ್ತ್ಥಂ ತದ್ಗೌರವಾನುಗಮ್ ।

ದೃಷ್ಟ್ವಾ ಯುಧಿಷ್ಠಿರೋ ರಾಜಾ ಕ್ರುದ್ಧಃ ಸೇನಾಮಪಾಹರತ್ ॥ ೨೫.೩೧ ॥

 

ಭೀಷ್ಮರ ಪರಾಕ್ರಮವನ್ನು ಕಂಡ ಮನಗಂಡ ಮಧ್ಯಮ ಪಾಂಡವ,

ಅವರನ್ನನುಸರಿಸುವಂತೆ ಮಾಡಿತ್ತು ಅವರ ಮೇಲಿನ ಗೌರವ.

ಇಂಥ ಮನಸ್ಥಿತಿಯ ಅರ್ಜುನನ ಕಂಡು ಮುನಿದ ಧರ್ಮರಾಯ,

ಹಿಂದಕ್ಕೆ ಕರೆಸಿಕೊಂಡು ಶಿಬಿರದತ್ತ ಕೊಂಡೊಯ್ದ ತನ್ನ ಸೇನೆಯ.

 

ರಾತ್ರೌ ಯುಧಿಷ್ಠಿರಶ್ಚಿನ್ತಾಮಾಪ್ಯ ಪಾರ್ತ್ಥಂ ವ್ಯಗರ್ಹಯತ್ ।

ಸ ಕೃಷ್ಣಾದ್ಯೈಃ ಸಾನ್ತ್ವಿತಶ್ಚ ಪುನರ್ಯುದ್ಧಾಯ ನಿರ್ಯ್ಯಯೌ ॥ ೨೫.೩೨ ॥

 

ಯುಧಿಷ್ಠಿರ ಆ ರಾತ್ರಿ ಚಿಂತಿತನಾದ ,

ಅರ್ಜುನನನ್ನು ಚೆನ್ನಾಗಿ ನಿಂದಿಸಿದ.

ಕೃಷ್ಣ ಮೊದಲಾದವರು ಧರ್ಮಜಗೆ ಮಾಡಿದರು ಸಮಾಧಾನ,

ಶಾಂತನಾದ ಧರ್ಮರಾಜ ಯುದ್ಧಕ್ಕೆ ಸಿದ್ಧನಾದ ಮಾರನೇ ದಿನ.

 

ಏವಂ ಭೀಷ್ಮೋ ದಶಾಹಾನಿ ಸೇನಾಪತ್ಯಂ ಚಕಾರ ಹ ।

ಕೃತ್ವಾSಪಿ ಪಾಣ್ಡವೈರ್ಯ್ಯುದ್ಧಂ ತತ್ ಕರ್ತ್ತುಮಕೃತೋಪಮಮ್ ॥ ೨೫.೩೩ ॥

 

ಕರ್ಣ್ಣೋSರ್ದ್ಧರಥ ಇತ್ಯುಕ್ತ್ವಾ ತಾವದ್ ಯುದ್ಧಾತ್ ಪ್ರಯಾಪಿತಃ ।

ಯಾವತ್ ತ್ವಂ ಯೋತ್ಸ್ಯಸೇ ತಾವನ್ನ ಯೋತ್ಸ್ಯಾಮೀತಿ ನಿರ್ಗತೇ ॥ ೨೫.೩೪ ॥

 

ಕರ್ಣ್ಣೇSಯುತರಥಾನಾಂ ಸ ನಿತ್ಯಶೋ ವಧಮಾಹವೇ ।

ಪ್ರತಿಜಜ್ಞೇSಕರೋತ್ ತಚ್ಚ ಪುನಶ್ಚಾಸ್ತ್ರವಿದಾಂ ವರಃ ॥ ೨೫.೩೫ ॥

 

ಭೀಷ್ಮಾಚಾರ್ಯರು ಹತ್ತುದಿನ ಯುದ್ಧ ಮಾಡಿದರು ಸೇನಾಪತಿಯಾಗಿ,

ಅದನ್ನನುಪಮವಾಗಿಸಲೆಂದೇ ಕರ್ಣನ ಜರೆದಿದ್ದರು ಅರ್ಧರಥನೆಂದು ಕೂಗಿ.

ನೀನು ಯುದ್ಧ ಮಾಡುವವರೆಗೆ ನಾನು ಯುದ್ಧ ಮಾಡಲ್ಲವೆಂದಿದ್ದ ಅವಮಾನಿತ ಕರ್ಣ,

ನಷ್ಟಪರಿಹಾರಕ್ಕೆ ಪ್ರತಿಜ್ಞೆಗೈದು, ಸತ್ಯ ಮಾಡಿದರು ಹತ್ತುಸಹಸ್ರ ಸೈನಿಕರಿಗೀಯುತ್ತ ಮರಣ.

 

ಸುಸಮರ್ತ್ಥಾವಪಿ ವಧೇ ತಸ್ಯ ಭೀಮಧನಞ್ಜಯೌ ।

ಸ್ನೇಹೇನ ಯನ್ತ್ರಿತೌ ತಸ್ಯ ಗೌರವಾಚ್ಚಾನ್ವವರ್ತ್ತತಾಮ್ ॥ ೨೫.೩೬ ॥

 

ಭೀಷ್ಮರ ಸಂಹಾರದಲ್ಲಿ ಭೀಮಾರ್ಜುನರು ಅತ್ಯಂತ ಸಮರ್ಥರಾಗಿದ್ದರು,

ಅವರ ಮೇಲಿನ ಪ್ರೀತಿ ಗೌರವದಿಂದ ಅವರಿಗೆ ಯುದ್ಧದಿ ಅನುಕೂಲರಾಗಿದ್ದರು.

No comments:

Post a Comment

ಗೋ-ಕುಲ Go-Kula