Tuesday, 21 March 2023

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 26: 01-13

 

ಅಧ್ಯಾಯ ಇಪ್ಪತ್ತಾರು[ನಾರಾಯಣಾಸ್ತ್ರೋಪಶಮನಮ್]

 

̐

ಅಥಾಖಿಲಾನಾಂ ಪೃಥಿವೀಪತೀನಾಮಾಚಾರ್ಯ್ಯಮಗ್ರ್ಯಂ ರಥಿನಾಂ ಸುವಿದ್ಯಮ್ ।

ರಾಮಸ್ಯ ವಿಶ್ವಾಧಿಪತೇಃ ಸುಶಿಷ್ಯಂ ಚಕ್ರೇ ಚಮೂಪಂ ಧೃತರಾಷ್ಟ್ರಪುತ್ರಃ ॥ ೨೬.೦೧ ॥

 

ಭೀಷ್ಮಾಚಾರ್ಯರ ಪತನದ ನಂತರ, ರಾಜರ ಅಸ್ತ್ರವಿದ್ಯೆಯ ಗುರು;ಆಚಾರ್ಯ,

ಅತ್ಯಂತ ವಿದ್ಯಾಸಂಪನ್ನರಾದ ಶ್ರೇಷ್ಠ ವೀರ, ಒಡೆಯನಾಗಿರುವ ಪರಶುರಾಮ ದೇವರ,

ಶಿಷ್ಯ ದ್ರೋಣಾಚಾರ್ಯರನ್ನು ದುರ್ಯೋಧನನು, ತನ್ನ ಪಡೆಗೆ ಸೇನಾಧಿಪತಿಯನ್ನಾಗಿ ನೇಮಿಸಿದನು.

 

ಕರ್ಣ್ಣೋSಪಿ ಭೀಷ್ಮಾನುಮತೋ ಧನುಷ್ಮಾನ್ ಯುದ್ಧೋದ್ಯತೋSಭೂತ್ ತದಸತ್ಕೃತಃ ಪುರಾ ।

ತಸ್ಮಿನ್ ಸ್ಥಿತೇSನಾತ್ತಧನುಸ್ತದೈವ ರಥಂ ಸಮಾಸ್ಥಾಯ ಗುರುಂ ಸಮನ್ವಯಾತ್ ॥ ೨೬.೦೨ ॥

 

ಭೀಷ್ಮಾಚಾರ್ಯರು ಸೇನಾಧಿಪತಿಯಾಗಿ ನಿಯುಕ್ತಿಗೊಂಡಾಗ,

ಕರ್ಣ ‘ಅರ್ಧರಥ’ ಎಂದನಿಸಿಕೊಂಡು ಅವಮಾನಿತನಾಗಿದ್ದನಾಗ.

ಭೀಷ್ಮರು ಇರುವಷ್ಟು ದಿನ ಆಯುಧವನ್ನು ಕೈಗೆತ್ತಿಕೊಳ್ಳಲಾರೆ ಎಂದಿದ್ದ ಕರ್ಣ,

ಭೀಷ್ಮರು ಬಿದ್ದ ಮೇಲೆ ಅವರಾಜ್ಞೆ ಪಡೆದು, ರಥವೇರಿ ಅನುಸರಿಸಿದ ದ್ರೋಣರನ್ನ.

 

ದ್ರೋಣೋ ವೃತೋ ಧಾರ್ತ್ತರಾಷ್ಟ್ರೇಣ ಧರ್ಮ್ಮಸುತಗ್ರಹೇ ತೇನ ಕೃತೇ ಪ್ರತಿಶ್ರವೇ ।

ಜ್ಞಾತ್ವಾ ಯತ್ತಾಃ ಪಾಣ್ಡವಾಸ್ತಂ ಸಮೀಯುರ್ಯ್ಯುದ್ಧಾಯ ತತ್ರಾಭವದುಗ್ರಯುದ್ಧಮ್ ॥ ೨೬.೦೩ ॥

 

ಧರ್ಮರಾಜನ ಸೆರೆಗಾಗಿ ದುರ್ಯೋಧನನಿಂದ ದ್ರೋಣರಲ್ಲಿ ಆಗ್ರಹ,

ಅದಕ್ಕೊಪ್ಪಿ ಪ್ರತಿಜ್ಞೆಯೊಂದಿಗೆ ಪ್ರವೃತ್ತರಾಗುತ್ತಾರೆ ದ್ರೋಣಾಚಾರ್ಯ.

ಅದನ್ನ ತಿಳಿದ ಪಾಂಡವರು ಆಗುತ್ತಾರೆ ಸಮಗ್ರವಾಗಿ ಸನ್ನದ್ಧ.

ಕೌರವ ಸೇನೆಯ ಎದುರಿಸಿ ನಡೆಯುತ್ತದೆ ಅಲ್ಲಿ ಉಗ್ರಯುದ್ಧ.

 

ಪತತ್ರಿಭಿಸ್ತತ್ರ ದುಧಾವ ಶಾತ್ರವಾನ್ ದ್ರೋಣೋ ಧನುರ್ಮ್ಮಣ್ಡಲಮನ್ತ್ರನಿಸ್ಸೃತೈಃ ।

ತಮಾಸಸಾದಾSಶು ವೃಕೋದರೋ ನದನ್ ತಮಾಸದನ್ ದ್ರೌಣಿಕೃಪೌ ಚ ಮದ್ರರಾಟ್ ॥ ೨೬.೦೪ ॥

 

 

ಆ ಯುದ್ಧದಲ್ಲಿ ದ್ರೋಣ ಮಂಡಲಾಕಾರ ಕಾಣುತ್ತಿದ್ದ ಬಿಲ್ಲಿನಿಂದ,

ಮಂತ್ರಪೂತವಾದ ಬಾಣಗಳನ್ನು ಬಿಟ್ಟು  ಶತ್ರುಗಳನ್ನು ನಡುಗಿಸಿದ.

ಆಗ ಭೀಮಸೇನನು ಗರ್ಜಿಸುತ್ತಾ ದ್ರೋಣಾಚಾರ್ಯರಿಗೆ ಎದುರಾದ,

ಆ ಭೀಮಗೆ ಅಶ್ವತ್ಥಾಮ,ಕೃಪ, ಶಲ್ಯ  ಎದುರಾಗುತ್ತಾರೆ ಬಯಸಿ ಯುದ್ಧ.

 

ಸ ತಾನ್ ವಿಧೂಯಾಭ್ಯಪತದ್ ರಣೇSಗ್ರಣೀರ್ದ್ದ್ರೋಣಂ ತಮನ್ವಾರ್ಜ್ಜುನಿರಭ್ಯಯಾತ್ ಪರಾನ್ ।

ವವಾರ ತಂ ಮದ್ರಪತಿಸ್ತಯೋರಭೂದ್ ರಣೋ ಮಹಾಂಸ್ತತ್ರ ಗದಾಂ ಸಮಾದದೇ ॥ ೨೬.೦೫ ॥

 

ಶಲ್ಯೋSಥ ಭೀಮೋSಭಿಯಯೌ ಗದಾಧರಸ್ತಮೇತಯೋರತ್ರ ಬಭೂವ ಸಙ್ಗರಃ ।

ಉಭಾವಜೇಯೌ ಗದಿನಾಮನುತ್ತಮಾವತುಲ್ಯವೀರ್ಯ್ಯೌ ಪ್ರವರೌ ಬಲೀಯಸಾಮ್ ॥ ೨೬.೦೬ ॥

 

ವಿಚೇರತುಶ್ಚಿತ್ರತಮಂ ಪ್ರಪಶ್ಯತಾಂ ಮನೋಹರಂ ತಾವಭಿನರ್ದ್ದಮಾನೌ ।

ಗದಾಪ್ರಪಾತಾಙ್ಕಿತವಜ್ರಗಾತ್ರೌ ದದರ್ಶ ಲೋಕೋSಖಿಲ ಏವ ತೌ ರಣೇ ॥ ೨೬.೦೭ ॥

 

ಭೀಮಸೇನನು ಅಶ್ವತ್ಥಾಮ-ಕೃಪ-ಶಲ್ಯರನ್ನು ಓಡಿಸಿದ,

ಯುದ್ಧದಲ್ಲಿ ಮುಂದಾಳಾಗಿ ದ್ರೋಣರಿಗೆ ಎದುರಾದ.

ಅವನನ್ನು  ಅನುಸರಿಸಿ ಅಭಿಮನ್ಯು ಶತ್ರುಗಳ ಆಕ್ರಮಿಸಿದ,

ಆಗ ಅಭಿಮನ್ಯುವನ್ನು ಶಲ್ಯ ತಡೆದಾಗ ಅವರ ನಡುವೆ ಆಯಿತು ಘೋರಯುದ್ಧ,

ದೊಡ್ಡ ಗದೆ ಹಿಡಿದು ಬಂದ ಶಲ್ಯಗೆ ಗದೆ ಹಿಡಿದ ಭೀಮಸೇನ ಎದುರಾಗಿ ಬಂದ.

ಗೆಲ್ಲಲಾಗದ ವೀರರಾದ ಅವರಿಬ್ಬರ ನಡುವೆ  ನಡೆಯಿತು ಘೋರ ಯುದ್ಧ,

ಗದಾಧಾರಿಗಳಲ್ಲೇ ಶ್ರೇಷ್ಠರಾದ, ಎಣೆಯಿರದ ಪರಾಕ್ರಮದಿಂದ ಇಬ್ಬರೂ ಬದ್ಧ.

ಗರ್ಜನೆ ,ಚಿತ್ರ-ವಿಚಿತ್ರ ಭಂಗಿಗಳು,ಗದಾಯುದ್ಧದ ಮಂಡಲಗಳ ಆಟ,

ಲೋಕಕ್ಕೆ ತೋರಿಸಿತ್ತು ಭೀಮ ಶಲ್ಯರ ಯುದ್ಧದ ಬೆರಗಿನ ನೋಟ.

 

ಗದಾಭಿಘಾತೇನ ವೃಕೋದರಸ್ಯ ವಿಚೇತನಃ ಪ್ರಾಪತದತ್ರ ಮದ್ರರಾಟ್ ।

ಭೀಮೋSಪಿ ಕೋಪಾತ್ ಪ್ರಚಲತ್ಪದಃ ಕ್ಷಿತೌ ನಿಧಾಯ ಜಾನುಂ ಸಹಸೋತ್ಥಿತಃ ಕ್ಷಣಾತ್ ॥ ೧೬.೦೮ ॥

 

ಸ್ವಲ್ಪ ಹೊತ್ತಿನ ನಂತರ ಭೀಮಸೇನನ ಗದಾಪ್ರಹಾರದಿಂದ ಶಲ್ಯ ಪ್ರಜ್ಞೆ ತಪ್ಪಿ ಬಿದ್ದ,

ಭೀಮ ಕೂಡಾ ಗಟ್ಟಿ ಪಾದ ಊರಲಾಗದೇ ಮೊಣಕಾಲೂರಿ ತಕ್ಷಣ ಪುಟಿದು ಮೇಲೆದ್ದ.

 

 

ವಿಚೇತನಂ ಪತಿತಂ ಮದ್ರರಾಜಂ ವಿಲೋಕ್ಯ ಭೀಮಂ ಚ ತಮಾಹ್ವಯನ್ತಮ್ ।

ರಥಂ ಸಮಾರೋಪ್ಯ ಜನಸ್ಯ ಪಶ್ಯತಃ ಪುರಶ್ಚ ಭೀಮಸ್ಯ ಕೃಪೋSಪಜಗ್ಮಿವಾನ್ ॥ ೨೬.೦೯ ॥

 

ಪ್ರಜ್ಞೆ ತಪ್ಪಿ ಬಿದ್ದಿದ್ದ ಶಲ್ಯನನ್ನ, ಅವನಿಗೆ ಯುದ್ಧಾಹ್ವಾನ ಕೊಡುತ್ತಿದ್ದ ಭೀಮನನ್ನ,

ಕಂಡ ಕೃಪರು, ಎಲ್ಲರೆದುರೇ ಶಲ್ಯನ ತನ್ನ ರಥಕ್ಹಾಕಿಕೊಂಡು ಮಾಡಿದರು ಪಲಾಯನ.

 

ವಿಜಿತ್ಯ ಮದ್ರಾಧಿಪಮೋಜಸಾSರಿಹಾ ನದನ್ ರಥಂ ಪ್ರಾಪ್ಯ ನಿಜಂ ಸ ಮಾರುತಿಃ ।

ವ್ಯದ್ರಾವಯದ್ ಬಾಣಗಣೈಃ ಪರೇಷಾಮನೀಕಿನೀಂ ದ್ರೋಣಸಮಕ್ಷಮೇವ ॥ ೨೬.೧೦ ॥

 

ಹೀಗೆ ಶತ್ರುಸಂಹಾರಕನಾದ ಭೀಮಸೇನನು ತನ್ನ ತೋಳ್ಬಲದಿಂದ ಶಲ್ಯನನ್ನು ಗೆದ್ದ,

ಮತ್ತೆ ರಥವೇರಿ, ಬಾಣಗಳಿಂದ ದ್ರೋಣರೆದುರೇ  ಕೌರವರ ಸೇನೆಯನ್ನು ಓಡಿಸಿದ.

 

ವಿದ್ರಾವಯತ್ಯಾಶು ಕುರೂನ್ ವೃಕೋದರೇ ವಿಧೂಯ ಸೌಭದ್ರಮುಖಾನ್ ಸಸಾತ್ಯಕೀನ್ ।

ದ್ರೋಣೋSಭಿಪೇದೇ ನೃಪತಿಂ ಗೃಹೀತುಂ ತಮಾಸಸಾದಾSಶು ಧನಞ್ಜಯೋ ರಥೀ ॥ ೨೬.೧೧ ॥

 

ಸ ವಾಸುದೇವಪ್ರಯತೇ ರಥೇ ಸ್ಥಿತಃ ಶರೈಃ ಶರೀರಾನ್ತಕರೈಃ ಸಮನ್ತತಃ ।

ನಿಹತ್ಯ ನಾಗಾಶ್ವನರಾನ್ ಪ್ರವರ್ತ್ತಯನ್ನದೃಶ್ಯತಾSಶ್ವೇವ ಚ ಶೋಣಿತಾಪಗಾಃ ॥ ೨೬.೧೨ ॥

 

ಈ ರೀತಿ ಭೀಮಸೇನನು ಕೌರವರನ್ನು ಸೋಲಿಸಿ ಓಡಿಸುತ್ತಿದ್ದಾಗ ,

ಈ ಕಡೆ ದ್ರೋಣರು ಸಾತ್ಯಕಿಸಹಿತ ಅಭಿಮನ್ಯುವ  ಸೋಲಿಸುವರಾಗ.

ದ್ರೋಣರು ಮುನ್ನುಗ್ಗುತ್ತಾರೆ ಸೆರೆಹಿಡಿಯಲು ಧರ್ಮರಾಜನನ್ನು,

ಆಗ ರಥದಲ್ಲಿರುವ ಅರ್ಜುನ ಸಮೀಪಿಸುತ್ತಾನೆ ದ್ರೋಣರನ್ನು.

 

ಅರ್ಜುನನಿದ್ದ ರಥಕ್ಕೆ ಭಗವಾನ್ ಕೃಷ್ಣನೇ ಚಾಲಕ,

ಅರ್ಜುನ ಬಿಡುತ್ತಿದ್ದ ಬಾಣಗಳವು ಶರೀರನಾಶಕ.

ತನ್ನ ಸುತ್ತಲಿರುವ ಆನೆ, ಕುದುರೆ, ರಥಿಕರನ್ನೂ ಸಂಹಾರಮಾಡಿ,

ಕಾಣಿಸಿಕೊಳ್ಳುತ್ತಾನೆ ಅರ್ಜುನ ಹರಿಸುತ್ತಾ ರಕ್ತದ ಹೊಳೆಯ ಕೋಡಿ.

 

ನಿಹನ್ಯಮಾನಾಸು ಕಿರೀಟಿನಾ ಚಮೂಷ್ವಾರಕ್ಷಿತೇ ಧರ್ಮ್ಮಸುತೇ ತಥಾSSಪದಃ ।

ಚಮೂಂ ಚ ಭೀಮಾರ್ಜ್ಜುನಬಾಣಭಗ್ನಾಂ ದ್ರೋಣೋSಪಹೃತ್ಯಾಪಯಯೌ ನಿಶಾಗಮೇ ॥ ೨೬.೧೩ ॥

 

 

ಹೀಗೆ ಅರ್ಜುನನು ಕೌರವ ಸೈನ್ಯವನ್ನು ಸಂಹಾರ ಮಾಡುತ್ತಿದ್ದಾಗ,

ಹಾಗೆಯೇ ಯುದ್ಧದ ಆಪತ್ತಿನಿಂದ ಧರ್ಮರಾಜನು ರಕ್ಷಿಸಲ್ಪಡುತ್ತಿದ್ದಾಗ,

ಭೀಮಸೇನಾರ್ಜುನರ ಬಾಣಗಳಿಂದ ಭಗ್ನವಾದ ಸೇನೆಯುಳ್ಳವರಾದ ದ್ರೋಣರು,

 ರಾತ್ರಿಯಾಗುತ್ತಿರಲು ಸೇನೆಯನ್ನು ಉಪಸಂಹಾರ ಮಾಡಿ ಶಿಬಿರಕ್ಕೆ ತೆರಳಿದರು.

No comments:

Post a Comment

ಗೋ-ಕುಲ Go-Kula