Thursday 14 September 2017

Bhava Spandana - 15

ಭಾವ ಸ್ಪಂದನ by “ತ್ರಿವೇಣಿ ತನಯ

ಜಾತಿ -ಫಜೀತಿ

ಮೂಲದ್ರವ್ಯ ಮಣ್ಣಿಗ್ಯಾವ ಜಾತಿ?
ಹರಿವ ತೊಳೆವ ನೀರಿಗ್ಯಾವ ಜಾತಿ?
ಉರಿವ ಸುಡುವ ಬೆಂಕಿಗ್ಯಾವ ಜಾತಿ?
ತಂಪು ಬಿಸಿ ಬೀಸುವ ಗಾಳಿಗ್ಯಾವ ಜಾತಿ?
ಎಲ್ಲೆಡೆ ಇರುವ ಆಕಾಶಕ್ಯಾವ ಜಾತಿ?
ಪಂಚಭೂತಗಳಿಂದಾದ ದೇಹಕ್ಯಾವ ಜಾತಿ?
ತ್ರಿಗುಣಗಳಿಂದಾದ ಮೂರರಲ್ಲೊಂದು ಜಾತಿ!
ಅಂತರಾರ್ಥವರಿಯದ ಮನುಜ ಮಾಡಿದ ಫಜೀತಿ!

ಅರಿಯಲೆತ್ನಿಸು ಮೂರರಲ್ಲಿ ನಿಂದ್ಯಾವ ರೀತಿ?
ಅದೇ ಆಗಲಿ ಬಾಳನಡೆಯ ಶಿಸ್ತಿನ ನೀತಿ!
ನೀತಿಯಲಿ ನಡೆದಾಗ ನಿನ್ನ ರೀತಿಯ ವಿಕಾಸ!
ಭೀತಿಯಿಲ್ಲದೆ ಪ್ರೀತಿಯಲಿ ನಡೆದು ಮುಗಿಸು ಪ್ರವಾಸ.

ಶರಣಾಗತಿ -ತಕ್ಕ ಗತಿ

ಜ್ಞಾನಕ್ಕೆ ಸಮನಾದ ಶುದ್ಧ ವಸ್ತುವೊಂದಿಲ್ಲ,
ಶುದ್ಧ ಶರಣಾಗತಿಯ ಕರ್ಮ ಸಿದ್ಧಿಸುವುದೆಲ್ಲಾ,
ಮುಂದೊಮ್ಮೆ ಕಾಣುವೆ ಸತ್ಯ ನಿನ್ನೊಳಗೆ ನೀನು,
ಪಾಳಿ ಬಂದಾಗ ಲಭ್ಯ ಹರಿಕಾರುಣ್ಯದ ಜೇನು.

ನಿಜವೈರಾಗ್ಯ

ಪುರಾಣವೈರಾಗ್ಯ ಪ್ರಸೂತಿವೈರಾಗ್ಯ,
ಶ್ಮಶಾನವೈರಾಗ್ಯ ಅಭಾವವೈರಾಗ್ಯ,
ಕಾಲಕ್ಕೊಂದು ವೈರಾಗ್ಯ ಕ್ಷಣಿಕ,
ನಿಜವೈರಾಗ್ಯ ಮೌನತಪದ ಪಾಕ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula