Saturday, 23 September 2017

Bhava Spandana - 18

ಭಾವ ಸ್ಪಂದನ by “ತ್ರಿವೇಣಿ ತನಯ

ಸ್ವಗತ

ಚಿತ್ತಕ್ಕೆ ತಂದಿದ್ದು ಅತ್ತಿತ್ತ ಮಾಡದಿರು,
ಒತ್ತಾಗಿ ನಿಂತು ನಿತ್ಯ ಪ್ರಗತಿ ತೋರು,
ಎತ್ತಲೋ ಕಳುಹಿ ಏನೇನೋ ಮಾಡಿಸುವಿ,
ಮತ್ತೆಲ್ಲ ಮಾಡಿದ್ದು ನಿನ್ನಪೂಜೆ ಆಗಲೆಂಬ ಮನವಿ.

ನಿನ್ನೊಳಗೇ ಹುಡುಕು

ಹುಡುಕದಿರು ಅನ್ಯರಲಿ ಕೆಡುಕು,
ದುಡುಕದೇ ನಿನ್ನ ನೀ - ಕೆದಕು,
ಕಂಡೀತು ನಿನ್ನೊಳಗಣ ಹುಳುಕು,
ಕಡಿದು ಕಟ್ಟೆ ಹಾಕಿದ್ದು - ಸಾಕು,
ಹಿಡಿ ಸತ್ಸಂಗದ ತಿಳಿ ಬೆಳಕು,
ಪ್ರೀತಿಯಲಿ ಬಾಳು ದಿನ ನಾಕು.

ಬುದ್ಧಿ - ಸಿದ್ಧಿ

ಮನುಷ್ಯನ ಮನಸ್ಥಿತಿ ಯಾರ ಸ್ವತ್ತು?
ಬದಲಾಗುತ್ತಲೇ ಇರತ್ತೆ ಮೂರ್ಹೊತ್ತು,
ಹಾಲು ಕುಡಿವಷ್ಟರಲ್ಲಿ ಹದಿನಾರು ಬುದ್ಧಿ,
ಇಂತಹಾ ಅವಸ್ಥೆಯಲಿ ಎಲ್ಲಿ ಅದು ಸಿದ್ಧಿ!

ಸನ್ಮಾರ್ಗದ ಬದುಕು

ಬದುಕಿರುವಷ್ಟು ಕಾಲ ಸತ್ಪ್ರಭಾವ ಬೀರುತ ಬಾಳು,
ನೀಡುತಲಿರು ಅನ್ನ ನೀರು ಜ್ಞಾನದಾ ತಂಪು ನೆರಳು,
ಸನ್ಮಾರ್ಗದ ಬದುಕು ಕಳೆವುದು ಭವದ ಬೇಗೆ,
ಬರೀ ಲೌಕಿಕಲೋಭದಿ ಮುಳುಗಿ ಆಗದಿರು ಕಾಗೆ.

ಸ್ವಂತಿಕೆಯ ಬೆಲೆ -ಕಂಡೀತು ನೆಲೆ

ನಾಟಕವ ಬಿಟ್ಟು ನೀನಿರುವಂತೆ ಬಾಳು,
ಪರದೆ ಕಳಚಲು ಒಮ್ಮೆ ಎಲ್ಲವೂ ಬೋಳು,
ನಿನ್ನ ನಾಟಕಕೆ ಇಲ್ಲ ಮೂರು ಕಾಸಿನ ಬೆಲೆ,
ನಿನ್ನತನದಲಿ ಬದುಕಿ ಕಂಡುಕೋ ನಿನ್ನ ನೆಲೆ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula