Sunday 12 November 2017

Bhava Spandana - 30

ಭಾವ ಸ್ಪಂದನ by “ತ್ರಿವೇಣಿ ತನಯ

ಅಸ್ಥಿರ -ಸ್ಥಿರ

ಅಶಾಶ್ವತವಿದು ಲೋಕದಾ ಜೀವನ,
ಅಂತೆಯೇ ಧನ ಮತ್ತು ಯೌವ್ವನ,
ಸತಿ ಸುತ ಬಾಂಧವರು ಸ್ಥಿರವಲ್ಲ,
ಸನ್ಮಾರ್ಗ ಸನ್ನಡತೆ ಕೈ ಬಿಡುವುದಿಲ್ಲ.

ಸಂತೆ -ಚಿಂತೆ

ಎಂದಿದ್ದರೂ ಇದು ಗಂಟು ಕಟ್ಟೇಳುವ ಸಂತೆ,
ಬೆಂಬಿಡದ ತೊಳಲಾಟ ಬಗೆಹರಿಯದ ಚಿಂತೆ,
ಬಂಧನಕ್ಕೆ ಹಾಕುವ ಮರುಳು ನೆಂಟಿನ ಅಂಟು,
ತಪ್ಪದೇ ಕಟ್ಟಿಕೋ ನಿಜ ಅಧ್ಯಾತ್ಮಜ್ಞಾನದ ಗಂಟು.

ಬೇಡ -ಮುಖವಾಡ

ಬಿಡಿಸಿಕೊಳ್ಳಲಾಗದ ಮುಖವಾಡಗಳ ಗಲಿಬಿಲಿ,
ಹಸುಮುಖದೊಳಗೆ ಘರ್ಜಿಸುವ ಕ್ರೂರ ಹುಲಿ,
ಹುಲಿಮುಖದೊಳಗೆ ತ್ರಾಣವಿರದ ಇಲಿ,
ಬೆತ್ತಲಾಗರು ಯಾರೂ ಇಲ್ಲಿ ಕಟುಸತ್ಯ ತಿಳಿ.

ನಾಟಕದಂಕ -ಒಣಬಿಂಕ

ಯಾರ ನೋಡಿದರೂ ಅರ್ಥವಿರದ ಒಣ ಬಿಂಕ,
ಕ್ಷಣ ಕ್ಷಣಕೂ ಹೊಸದೊಂದು ನಾಟಕದ ಅಂಕ,
ಇಷ್ಟೆಲ್ಲಾ ಮಾಡುತ ಜೀವ ಸಾಧಿಸುವದೇನು?
ಕಣ್ಮುಚ್ಚಿ ತನ್ನ ತಾ ಕಂಡುಕೊಳ್ಳಲು ಆಗದವನು!

ವ್ಯಾಪಾರ -ಲೆಕ್ಕಾಚಾರ

ಬೆಳಗಾಯಿತೆಂದರೆ ಶುರು ವ್ಯಾಪಾರ ,
ಕೊಟ್ಟರೆ ಏನು ಬರುವುದೆಂಬ ಲೆಕ್ಕಾಚಾರ,
ಕೊಡಲು ಮೊದಲು ನಿನ್ನದೆಂದೇನಿದೆ?
ತೆಗೆದುಕೊಳ್ಳುವರಲ್ಲಿ ಅವರದೇನಿದೆ?
ಎಲ್ಲರೂ ಇರುವುದೇ ನಮ್ನಮ್ಮ ಜೈಲಲ್ಲಿ!
ಹೊರಡುವುದು ಸರಕಿಡದ ವಿಮಾನದಲ್ಲಿ!
ಅಲ್ಲಿ ಯಾವ ಸಾಮಾನೂ ಸೇರಿಸುವುದಿಲ್ಲ,
ಜಮಾ ಖರ್ಚುಗಳ ಲೆಕ್ಕ ಮೇಲೆ ಇರುತ್ತದೆಯೆಲ್ಲ!
[Contributed by Shri Govind Magal]

No comments:

Post a Comment

ಗೋ-ಕುಲ Go-Kula