Wednesday 15 November 2017

ಮಹಾಭಾರತ ತಾತ್ಪರ್ಯನಿರ್ಣಯ - ಕನ್ನಡದಲ್ಲಿ : 1: 1 - 5


ಓಂ  ।।

ನಾರಾಯಣಾಯ  ಪರಿಪೂರ್ಣಗುಣಾರ್ಣವಾಯ
ವಿಶ್ವೋದಯ ಸ್ಥತಿಲಯೋನ್ನಿಯ ತಿಪ್ರದಾಯ  ।
ಜ್ಞಾನಪ್ರದಾಯ  ವಿಬುಧಾಸುರ ಸೌಖ್ಯ ದುಃಖ -
ಸತ್ಕಾರಣಾಯ  ವಿತತಾಯ ನಮೋನಮಸ್ತೇ  ।।೧.೧।। 

ತುಂಬಿ ತುಳುಕುವ ಗುಣಗಳ ಕಡಲು ,
ಜಗದ ಸೃಷ್ಟಿ ಸ್ಥಿತಿ ಪ್ರಳಯಗಳ ಒಡಲು ,
ಜಗದೆಲ್ಲರಿಗೆ ಜ್ಞಾನವೀವ ದೇವತೆಗಳ ಸುಖದ ಹೂರಣ,
ಅವರವರಿಗೆ ಸಮನಾದ ದೈತ್ಯರ ದುಃಖಕ್ಕೂ ಕಾರಣ,
ಎಲ್ಲರಂತರ್ಯಾಮಿಯಾಗಿ ನಡೆಸಿಹ ನಾರಾಯಣ,
ಇದೋ ಸ್ವೀಕರಿಸು ನಿನಗೆ ನನ್ನ ನಮ್ರ ನಮನ .


ಆಸೀದುದಾರಗುಣವಾರಿಧಿರಪ್ರಮೇಯೋ
ನಾರಾಯಣಃ ಪರತಮಃ ಪರಮಾತ್ ಸ ಏಕಃ |
ಸಂಶಾಂತಸಂವಿದಖಿಲಂ ಜಠರೇ ನಿಧಾಯ
ಲಕ್ಷ್ಮೀಭುಜಾಂತರಗತಃ ಸ್ವರತೋsಪಿ ಚಾsಗ್ರೇ ||೧.೨||

ಉತ್ಕೃಷ್ಟ ಗುಣಗಳ ಹೊಂದಿರುವಾತ ,
ಯಾರಿಗೂ ಎಂದೂ ಪೂರ್ಣ ತಿಳಿಯದಾತ,
ಅತ್ಯಂತ ಉನ್ನತರಿಗೂ ಉನ್ನತನಾತ ,
ಏಕಮೇವ ಅದ್ವಿತೀಯ ಮಹಿಮನಾತ ,
ಈ ಸೃಷ್ಟಿಗೂ ಮೊದಲು ,
ಆತ ಆನಂದದ ಕಡಲು ,
ಅವನೆಂದೂ ಸ್ವರಮಣ ,
ಅವನಲ್ಲವೇ ನಾರಾಯಣ,
ಇಡೀ ಬ್ರಹ್ಮಾಂಡ ಅವನುದರದಲ್ಲಿ ,                               
ಜ್ಞಾನದೇಹಿಯ ತಲೆ ಲಕ್ಷ್ಮಿಯ ತೋಳಲ್ಲಿ .


ತಸ್ಯೋದರಸ್ಥಜಗತಃ ಸದಮಂದಸಾಂದ್ರ-
ಸ್ವಾನಂದತುಷ್ಟವಪುಷೋsಪಿ ರಮಾರಮಸ್ಯ |
ಭೂತ್ಯೈ ನಿಜಾಶ್ರಿತಜನಸ್ಯ ಹಿ ಸೃಜ್ಯಸೃಷ್ಟಾ-
ವೀಕ್ಷಾ ಬಭೂವ ಪರನಾಮನಿಮೇಷಕಾಂತೇ ||೧.೩||


ಸಮಸ್ತ ಜಗತ್ತ ಉದರದಿ ಧರಿಸಿದಾತ ,
ದೋಷವೇ ಇರದ ಆನಂದದಮೈಯಾತ,
ಲಕ್ಷ್ಮಿಯೂ ಆಗಬೇಕಿಲ್ಲ ಅವನ ಸುಖಕೆ-ಕಾರಣ,
ತನ್ನಲ್ಲೇ ತಾನು ಸುಖಿಸುವ ಅವನು  ಸ್ವರಮಣ,
ನೋಡಲಿಚ್ಛಿಸಿದ ತನ್ನ ಭಕ್ತರ ಆನಂದ ,
ಕಣ್ಮಿಟುಕಿಸುವಲ್ಲಿ ಸೃಷ್ಟಿಯ ಬಯಸಿದ .


ದೃಷ್ಟ್ವಾ ಸ ಚೇತನಗಣಾನ್ ಜಠರೇ ಶಯನಾ-
ನಾನಂದಮಾತ್ರವಪುಷಃ ಸೃತಿವಿಪ್ರಮುಕ್ತಾನ್ |
ಧ್ಯಾನಂಗತಾನ್ ಸೃತಿಗತಾಂಶ್ಚ ಸುಷುಪ್ತಿಸಂಸ್ಥಾನ್
ಬ್ರಹ್ಮಾದಿಕಾನ್ ಕಲಿಪರಾನ್ ಮನುಜಾಂಸ್ತಥೈಕ್ಷತ್ ||೧.೪||

ತನ್ನುದರದಲ್ಲಿರುವ ಆನಂದಿ ಮುಕ್ತರು ,
ಆನಂದವೇ ಮೈವೆತ್ತ ಧ್ಯಾನನಿರತರು ,
ನಿದ್ರಾವಸ್ತೆಯಲ್ಲಿರುವ ಜೀವರು ,
ಬ್ರಹ್ಮಾದಿ ಕಲಿತನಕ ಇರುವವರು ,
ಅವರ ಮಧ್ಯದಲ್ಲಿ ಇರುವವರು ,
ತನ್ನಧೀನದ ವಿವಿಧಜೀವರ ಬಗ್ಗೆ ಯೋಚಿಸಿದ ದೇವರು.


ಸ್ರಕ್ಷ್ಯೇ ಹಿ ಚೇತನಗಣಾನ್ ಸುಖದುಃಖಮಧ್ಯ-
ಸಂಪ್ರಾಪ್ತಯೇ ತನುಭೃತಾಂ ವಿಹೃತಿಂ ಮಮೇಚ್ಛನ್ |
ಸೋsಯಂ ವಿಹಾರ ಇಹ ಮೇ ತನುಭೃತ್ ಸ್ವಭಾವ-
ಸಂಭೂತಯೇ ಭವತಿ ಭೂತಿಕೃದೇವ ಭೂತ್ಯಾಃ ||೧.೫||

ಇರುವ ಬಹಳ ತರಹದ ಜೀವಗಣ ,
ಉಣಿಸಲು ಸುಖ ದುಃಖ-ಎರಡರ ಹೂರಣ,
ಆಡುತ್ತೇನೆ ನನ್ನಾಸೆಯ ಸೃಷ್ಟಿಯ ಆಟ ,
ಇದು ನನಗೊಂದು ವಿನೋದದ ನೋಟ,
ಅದರಿಂದ ಜೀವಸ್ವಭಾವಗಳ ಆವಿಷ್ಕಾರ,

ಇದು ನನ್ನಾಕೆ ಮಹಾಲಕ್ಷ್ಮಿಗೂ ಪ್ರಿಯಕರ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula