Friday 24 November 2017

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 1: 61 - 65

ಅಸ್ಯ ದೇವಸ್ಯ ಮೀಳ್ಢುಷೋ ವಯಾ ‘ವಿಷ್ಣೋರೇಷಸ್ಯ ಪ್ರಭೃಥೇ ಹವಿರ್ಭಿಃ ।
ವಿದೇ ಹಿ ರುದ್ರೋ ರುದ್ರೀಯಂ ಮಹಿತ್ವಂ ‘ಯಾಸಿಷ್ಟಂ ವರ್ತಿರಶ್ವಿನಾವಿರಾವತ್’ ॥೧.೬೧॥

(ಇದು ಋಗ್ವೇದದ ೭ನೇ ಮಂಡಲದ ೪೭ನೆಯ ಸೂಕ್ತದ ಐದನೆಯ ಋಕ್).

ಬೇಡಿದ್ದನ್ನು ನೀಡುವ ಎಲ್ಲರಂತರ್ಯಾಮಿ,
ಎಲ್ಲರ ಇಷ್ಟದೈವ ಅವ ನಾರಾಯಣ ಸ್ವಾಮಿ,
ಅವನನ್ನು ಹವಿಸ್ಸಿನೊಡಗೂಡಿ ಪೂಜಿಸಿದ ರುದ್ರ,
ಹರಿ ಅನುಗ್ರಹದಿಂದ ಅವನ ಪದವಿಯಾಯ್ತು ಭದ್ರ,
ಅಶ್ವಿದೇವತೆಗಳೂ ಅದನ್ನೇ ಅನುಸರಿಸಿದರು,
ಅನುಗುಣವಾದ ಸ್ಥಾನ ಮಾನ ಪಡೆದರು .

ಸ್ತುಹಿ ಶ್ರುತಂ ಗರ್ತಸದಂ ಯುವಾನಂ ‘ಮೃಗಂ ನ ಭೀಮಮುಪಹತ್ನುಮುಗ್ರಮ್’ ।
ಯಂ ಕಾಮಯೇ ತನ್ತಮುಗ್ರಂ ಕೃಣೋಮಿ ‘ತಂ ಬ್ರಹ್ಮಾಣಂ ತಮೃಷಿಂ ತಂ ಸುಮೇಧಾಮ್’ ॥೧.೬೨॥

(ಸ್ತುಹಿ ಶ್ರುತಂ ಗರ್ತಸದಂ ...ಎನ್ನುವುದು ಋಗ್ವೇದದ ಎರಡನೇ ಮಂಡಲದ, ೩೩ನೆಯ ಸೂಕ್ತದ, ೧೧ನೆಯ ಋಕ್).

ಇದು ರುದ್ರಾಂತರ್ಯಾಮಿ ನೃಸಿಂಹನ ಸ್ತೋತ್ರ ಮಂತ್ರ,
ಅಂತಹ ನೃಸಿಂಹನ ಭಜಿಸು ಎಂದು ರುದ್ರ ಹೇಳಿಕೊಂಡ ತಂತ್ರ,
ವೇದವೇದ್ಯ ಚಿರಯುವಕ ರುದ್ರಾಂತರ್ಯಾಮಿ,
ಪ್ರಳಯಕಾಲದಿ ಎಲ್ಲ ಸಂಹರಿಪ ಸಿಂಹಮುಖದ ಸ್ವಾಮಿ,
ಅವನನ್ನೇ ಭಜಿಸು ಎಂದು ರುದ್ರದೇವರ ಸ್ವಗತ,
ಶಿವನ ಭಕ್ತಿ ಶಕ್ತಿ -ಹರಿಸರ್ವೋತ್ತಮತ್ವ ಸ್ಥಾಪಿತ.

(ಯಂ ಕಾಮಯೇ... ಎನ್ನುವುದು ಅಂಭೃಣೀ ಸೂಕ್ತ(೫). ಋಗ್ವೇದದಲ್ಲಿ ಹತ್ತನೇ ಮಂಡಲ, ೧೨೫ನೆಯ ಸೂಕ್ತ, ೫ನೆಯ ಋಕ್. ಅಥರ್ವವೇದದಲ್ಲಿ ನಾಲ್ಕನೆಯ ಕಾಂಡ, ೩೦ನೆಯ ಸೂಕ್ತ, ೩ನೆಯ ಋಕ್).

ಮಾತೆ ಲಕ್ಷ್ಮೀದೇವಿ ಹೇಳಿಕೊಳ್ಳುತ್ತಾಳಾಕೆ,
ನಾನೇನು ಬಯಸುತ್ತೇನೋ ಹಾಗೇ ಮಾಡುವಾಕೆ,
ಬಯಸಿದವನನ್ನು ರುದ್ರನನ್ನಾಗಿ ಮಾಡುತ್ತೇನೆ,
ಬಯಸಿದವನನ್ನು ಬ್ರಹ್ಮನನ್ನಾಗಿ ಮಾಡುತ್ತೇನೆ,
ಬಯಸಿದವನನ್ನು ಋಷಿಯನ್ನಾಗಿ ಮಾಡುತ್ತೇನೆ,
ಬಯಸಿದವನನ್ನು ಜ್ಞಾನಿಯನ್ನಾಗಿ ಮಾಡುತ್ತೇನೆ,
ಇದರಿಂದ ಸ್ಪಷ್ಟ -ನಡೆಯುತ್ತದೆ ಅವಳ ಇಷ್ಟ,
ಬ್ರಹ್ಮ ರುದ್ರಾದಿ ಸಮಸ್ತ ಜೀವರಿಗಿಂತ ಅವಳು ಶ್ರೇಷ್ಠ.

ಏಕೋ ನಾರಾಯಣ ಆಸೀನ್ನ ಬ್ರಹ್ಮಾ ನಚ ಶಙ್ಕರಃ’ ।
ವಾಸುದೇವೋ ವಾ ಇದಮಗ್ರ ಆಸೀನ್ನ ಬ್ರಹ್ಮಾ ನಚ ಶಙ್ಕರಃ’ ॥೧.೬೩॥

ಇದು ಒಂದು ವೇದವಾಕ್ಯದ ಹೂರಣ,
ಒಬ್ಬನೇ ಒಬ್ಬನಿದ್ದನವ ನಾರಾಯಣ,
ಆಗಿರಲಿಲ್ಲ ಬ್ರಹ್ಮ ರುದ್ರರ ಅನಾವರಣ,
ಇನ್ನೊಂದು ವೇದವಾಣಿಯ ಸ್ಪಷ್ಟ ಭಾವ,
ಆದಿಯಲ್ಲಿ ಮೊದಲಿದ್ದವ ವಾಸುದೇವ,
ಬ್ರಹ್ಮ ರುದ್ರರು ಇರಲಿಲ್ಲ ಎಂಬ ಭಾವ.

ಯದಾ ಪಶ್ಯಃ ಪಶ್ಯತೇ ರುಗ್ಮವರ್ಣಂ ‘ಕರ್ತಾರಮೀಶಂ ಪುರುಷಂ ಬ್ರಹ್ಮಯೋನಿಮ್ ।
ತದಾ ವಿದ್ವಾನ್ ಪುಣ್ಯಪಾಪೇ ವಿಧೂಯ ‘ನಿರಞ್ಜನಃ ಪರಮಂ ಸಾಮ್ಯಮುಪೈತಿ’ ॥೧.೬೪॥

ಅಥರ್ವಣ ಉಪನಿಷತ್ತು ಹೇಳುವ ಮಾತು,
ಜ್ಞಾನಿಗಾಗುವ ಭಗವದ್ದರ್ಶನದ ಕುರಿತು,
ಸ್ವರ್ಣ ವರ್ಣ ಈ ಜಗದ ನೃಪ,
ಅಂತರ್ಯಾಮಿ ಸಮರ್ಥ ಭೂಪ,
ಜ್ಞಾನಿಗೆಂದಾಗುವುದೋ ವೇದವೇದ್ಯನ ದರ್ಶನ,
ಆಗುವುದವನಿಗೆ ಅನಿಷ್ಟ ಪುಣ್ಯ ಪಾಪದ ನಾಶನ,
ಹೀಗೆ ಸಾಕ್ಷಾತ್ಕಾರವಾಗಲು ಪರಬ್ರಹ್ಮ,
ದೊರೆವುದವನಿಗೆ ಭಗವಂತನ ಸಾಮ್ಯ .

ಯೋ ವೇದ ನಿಹಿತಂ ಗುಹಾಯಾಂ ಪರಮೇ ವ್ಯೋಮನ್।
ಸೋsಶ್ನುತೇ ಸರ್ವಾನ್ ಕಾಮಾನ್ ಸಹ ಬ್ರಹ್ಮಣಾ ವಿಪಶ್ಚಿತಾ’ ॥೧.೬೫॥

ಇದು ತೈತ್ತಿರೀಯ ಉಪನಿಷತ್ತಿನ ಸ್ಪಷ್ಟ ಉಲ್ಲೇಖ,
ಯಾರ ಒಳಗಣ್ಣಿಗೆ ಕಾಣುವನೋ ಹೃತ್ಕಮಲದ ಆತ್ಮಸಖ,
ಮುಕ್ತನಾಗಿ ಪಡೆಯುವನು ಪರಬ್ರಹ್ಮನ ಸಖ್ಯ,

ಲಭ್ಯವವನಿಗೆ ತಾರತಮ್ಯೋಕ್ತ ಸಕಲ ಸೌಖ್ಯ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula