Sunday 26 November 2017

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 1: 76 - 82

ಭೂಮ್ನೋ ಜ್ಯಾಯಸ್ತ್ವಮಿ’ತಿ ಹ್ಯುಕ್ತಂ ಸೂತ್ರೇಷು ನಿರ್ಣಯಾತ್ ತೇನ ।
ತತ್ ಪ್ರೀತ್ಯೈವ ಚ ಮೋಕ್ಷಃ ಪ್ರಾಪ್ಯಸ್ತೇನೈವ ನಾನ್ಯೇನ ॥೧.೭೬॥

ಬ್ರಹ್ಮಸೂತ್ರದ ಪರಮ ಪ್ರಮಾಣ,
ಎಲ್ಲರಿಗಿಂತ ಅಧಿಕನವ ನಾರಾಯಣ,
ಪಡೆದಾಗಲೇ ಭಗವದನುಗ್ರಹ-ಪ್ರೀತಿ,
ಆನಂತರವೇ ಮೋಕ್ಷವದು ಪ್ರಾಪ್ತಿ,
ಇದನ್ನೇ ಹೇಳುವ ವೇದವಾಣಿಗಳು ಅನೇಕ,
ಆಚಾರ್ಯರು ವಿಶ್ಲೇಷಿಸಿ ಕೊಟ್ಟ ನಿರ್ಧರಿತ ವಾಕ್ಯ.

ನಾಯಮಾತ್ಮಾ ಪ್ರವಚನೇನ ಲಭ್ಯೋ ‘ನ ಮೇಧಯಾ ನ ಬಹುನಾ ಶ್ರುತೇನ ।
ಯಮೇವೈಷ ವೃಣುತೇ ತೇನ ಲಭ್ಯ - ಸ್ತಸ್ಯೈಷ ಆತ್ಮಾ ವಿವೃಣುತೇ ತನುಂ ಸ್ವಾಮ್’ ॥೧.೭೭॥

ಪರಮಾತ್ಮ ಪ್ರವಚನಕ್ಕೆ ಅಲಭ್ಯ,
ಸ್ವಾಧ್ಯಾಯ ಬುದ್ಧಿವಂತಿಕೆಗೆ ಅಲಭ್ಯ,
ಶಾಸ್ತ್ರ-ತರ್ಕ-ಸ್ಮರಣಶಕ್ತಿಗೆ ಅಲಭ್ಯ,
ತಾನೇ ಒಲಿದವನಿಗೆ ಮಾತ್ರ ಇವ ಲಭ್ಯ,
ನಿರಹಂಕಾರದ ತನ್ಮಯ ಭಕ್ತಿಗೆ ಒಲಿವ ಸ್ವಾಮಿ,
ಹೃತ್ಕಮಲದಲ್ಲಿ ಒಳಗಣ್ಣಿಗೆ ಕಾಣುವ ಅಂತರ್ಯಾಮಿ.

  
ವಿಷ್ಣುರ್ಹಿ ದಾತಾ ಮೋಕ್ಷಸ್ಯ ವಾಯುಶ್ಚ ತದನುಜ್ಞಯಾ ।
ಮೋಕ್ಷೋ ಜ್ಞಾನಂ ಚ ಕ್ರಮಶೋ ಮುಕ್ತಿಗೋ ಭೋಗ ಏವಚ ॥೧.೭೮॥
ಉತ್ತರೇಷಾಂ ಪ್ರಸಾದೇನ ನೀಚಾನಾಂ ನಾನ್ಯಥಾ ಭವೇತ್ ।
ಸರ್ವೇಷಾಂ ಚ ಹರಿರ್ನಿತ್ಯನಿಯನ್ತಾ ತದ್ವಶಾಃ ಪರೇ ॥೧.೭೯॥

ತಾರತಮ್ಯಂ ತತೋ ಜ್ಞೇಯಂ ಸರ್ವೋಚ್ಚತ್ವಂ ಹರೇಸ್ತಥಾ ।
ಏತದ್ ವಿನಾ ನ ಕಸ್ಯಾಪಿ ವಿಮುಕ್ತಿಃ ಸ್ಯಾತ್ ಕಥಞ್ಚನ ॥೧.೮೦॥

ಎಂದಿಗೂ ಮೋಕ್ಷದಾತನು ಅವನು ನಾರಾಯಣ,
ಅವನಾಜ್ಞೆಯಿಂದ ಮೋಕ್ಷಪ್ರದ-ಮುಖ್ಯಪ್ರಾಣ,
ಮೋಕ್ಷ-ಅದಕ್ಕೆ ಬೇಕಾದ ಜ್ಞಾನ-ಮುಕ್ತಿಯಲ್ಲಿನ ಭೋಗ,
ಬೇಕದಕೆ ಸಾಧನಾಯೋಗ್ಯ ಹಿರಿಯರನುಗ್ರಹದ ಭಾಗ,
ಎಲ್ಲವೂ ಒಂದಕ್ಕೊಂದು ತಾರತಮ್ಯದಿ ಅವಲಂಬಿತ,
ಈ ರೀತಿ ಹಿರಿಯರನುಗ್ರಹ ಆಶೀರ್ವಾದದಿಂದಲೆ ಮೋಕ್ಷ ಪ್ರಾಪ್ತ,
ನಾರಾಯಣನೇ ಎಲ್ಲರ ಅಂತರ್ಯಾಮಿ,
ಅವರವರ "ಸಮ" ಕೊಡುವ ವಿಶ್ವಪ್ರೇಮಿ,
ಹೀಗೆ ತಿಳಿಯಬೇಕಾದ ತಾರತಮ್ಯ ಜ್ಞಾನ,
ಹಾಗೇ ಸಮ-ಮಿಗಿಲಿಲ್ಲದವ ನಾರಾಯಣ.

ಪಞ್ಚಭೇದಾಂಶ್ಚ ವಿಜ್ಞಾಯ ವಿಷ್ಣೋಃ ಸ್ವಾಭೇದಮೇವ ಚ ।
ನಿರ್ದೋಷತ್ವಂ ಗುಣೋದ್ರೇಕಂ ಜ್ಞಾತ್ವಾ ಮುಕ್ತಿರ್ನಚಾನ್ಯಥಾ ॥೧.೮೧॥

ಬಿಡುಗಡೆಗೆ ಆಗಬೇಕು ಪಂಚಭೇದಗಳ ಜ್ಞಾನ,
ಹರಿಯ ಸಮಸ್ತ ರೂಪಗಳ-ಸ್ವರೂಪದ ಅಭೇದ ಜ್ಞಾನ,
ಅವನಿಗೆ ದೋಷಗಳೇ ಇಲ್ಲವೆಂಬ ಸ್ಪಷ್ಟ ಜ್ಞಾನ,
ಅವನು ಸಮಸ್ತ ಗುಣಗಳ ಗಡಣವೆಂಬ ಜ್ಞಾನ,
ಇವೆಲ್ಲಾ ಸಾಕ್ಷಾತ್ಕಾರವಾದಾಗಲೇ ಮುಕ್ತಿಯೆಂಬ ಫಲ,
ಇನ್ಯಾವ ಬೇರೆ ಬೇರೆ ರೀತಿ-ನೀತಿಗಳೆಲ್ಲಾ --ನಿಷ್ಫಲ.

ಅವತಾರಾನ್ ಹರೇರ್ಜ್ಞಾತ್ವಾ ನಾವತಾರಾ ಹರೇಶ್ಚಯೇ ।
ತದಾವೇಶಾಂಸ್ತಥಾ ಸಮ್ಯಗ್ ಜ್ಞಾತ್ವಾ ಮುಕ್ತಿರ್ನಚಾನ್ಯಥಾ ॥೧.೮೨॥

ತಿಳಿಯಬೇಕು ಭಗವಂತನ ಅವತಾರಗಳ ಗುಟ್ಟು,
ಆವೇಶಾವತಾರಗಳಲ್ಲಿನ ವಿಚಿತ್ರ ನಡೆಗಳು ರಟ್ಟು,
ಬರಬೇಕು ಭಗವಂತನ ಗುಣೋದ್ರೇಕದ ಅರಿವು,
ಅವನ ಶಕ್ತಿ-ಅದರ ಅಭಿವ್ಯಕ್ತಿ ಇತ್ಯಾದಿಗಳ ತಿಳಿವು,
ಇದೆಲ್ಲಾ ಆದಾಗಲೇ ಸಾಕ್ಷಾತ್ಕಾರ,
ತೆರೆಯುತ್ತದೆ ಮುಕುತಿಯ ದ್ವಾರ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula