Saturday, 14 October 2017

Bhava Spandana - 25

ಭಾವ ಸ್ಪಂದನ by “ತ್ರಿವೇಣಿ ತನಯ

ಶಾಖ ಪಾಕ -ನಾಕ ನರಕ

ಶಾಖದಿಂದ ಮನವಾಗಬೇಕು ಪಾಕ,
ಅದಾಗದಿದ್ದರೆ ಇಲ್ಲೂ ಮೇಲೂ ನರಕ,
ಎಂತಿದೆಯೋ ಅಂತೇ ಆಗುವುದು ಖಚಿತ,
ಕೃಷ್ಣಾರ್ಪಣವೆನುವ ನಿರ್ಲಿಪ್ತ ನಡೆಯದು ಉಚಿತ.

ಅವನದೇ ವ್ಯಾಪಾರ -ನಂಬಿದರೆ ಇಲ್ಲ ಭಾರ.

ಭಗವಂತನ ಮಾಡದಿರು ಕೆಲವಕ್ಕೆ ಸೀಮಿತ,
ಅವನಾದರೋ ಸರ್ವಕಾಲ ಸರ್ವತ್ರ ವ್ಯಾಪ್ತ,
ಎಲ್ಲ ನಡೆಗಳೂ ಅವನದೇ ವ್ಯಾಪಾರ,
ದೃಢಜ್ಞಾನವಿರೆ ಅವ ಹೊರುವ ಭಾರ.

ಅಳತೆಗೆ ಸಿಗದವ-ಸೆಳೆತಕ್ಕೆ ವಶನವ

ಯಾವ ಮಾಪನದಳತೆಗೂ ಸಿಗದವನು ಭಗವಂತ,
ಎಲ್ಲ ಗುಣಗಳ ಗಡಣ ಆನಂದಮಯ ನಿತ್ಯತೃಪ್ತ,
ಏನು ಮಾಡಬಲ್ಲದು ಜೀವ-ಎಲ್ಲವೂ ಅವನ ಕರುಣೆ,
ಕೊಡಲಿ ಅವನೀಶ ನಾ ದಾಸ ಎಂಬ ನಿಷ್ಠಿತ ಸ್ಮರಣೆ.

ತೆರೆದ ಮನಸ್ಸು -ಸಹಜ ತಪಸ್ಸು

ಹಸಿದವರಿಗೆ ಪ್ರೀತಿಯಲಿ ತಿನ್ನಿಸು,
ನೊಂದವರಿಗೆ ಸ್ನೇಹದಲಿ ನಗಿಸು,
ತೋರದಿರು ಯಾರಲೂ ಮುನಿಸು,
ಇದೊಂದೇ ಅವನೊಪ್ಪುವ ತಪಸ್ಸು.

ಸಹಜ ಯಾಗ -ಶುಭ ಯೋಗ

ಶ್ರೀಗಂಧಲೇಪನವದು ಹಿತ,
ಹುಣ್ಣಿಮೆಯ ಬೆಳಕದು ಹಿತ,
ಸಾಧು ಸಜ್ಜನರ ಸಹಯೋಗ,

ಎಲ್ಲಕ್ಕೂ ಮಿಗಿಲಾದ ಶುಭಯೋಗ.


[Contributed by Shri Govind Magal]

No comments:

Post a Comment

ಗೋ-ಕುಲ Go-Kula