ಭಾವ ಸ್ಪಂದನ by “ತ್ರಿವೇಣಿ ತನಯ”
ಜ್ಞಾನ -ಭಕ್ತಿ -ವೈರಾಗ್ಯ
ಇರಬೇಕಾದವು ಜ್ಞಾನ ಭಕ್ತಿ ವೈರಾಗ್ಯ ,
ಇವೆ ಎಲ್ಲಾ -ಬದಲಾಗಿದೆ ಕೊಂಚ ಜಾಗ,
ಲೌಕಿಕಬೇಕುಗಳ ಜ್ಞಾನ-ಸಂಸಾರದಿ ಭಕ್ತಿ,
ಪಾರುಗಾಣಿಸುವವನೆಡೆಗೆ ಸತತ ವಿರಕ್ತಿ .
ಸಹಜ ಧರ್ಮ
ಕೃಷಿ ಮಾಡುತಿರು ಧರ್ಮ,
ಬೇಡ ಲೌಕಿಕದ ಕುಕರ್ಮ,
ಹುಡುಕದಿರು ತಪ್ಪ ಬೇರೆಯವರಲ್ಲಿ,
ಮನ ನೆಟ್ಟಿರಲಿ ಸತತ ಹರಿಸ್ಮರಣೆಯಲ್ಲಿ.
ಬಂಧ -ಸಂಬಂಧ
ಯಾತರದು ಈ ಥರದ ದೇಹ ಸಂಬಂಧ,
ಬೇಕುಗಳ ನಿರೀಕ್ಷೆಯಲಿ ಬೆಸೆದ ಬಂಧ,
ಕೇಳದಲೇ ತಕ್ಕದನು ಕೊಡುವವನು ಬಂಧು,
ನಿರೀಕ್ಷೆಯಿರದೆ ಸಮಗತಿ ಕರುಣಿಸುವವ ಆತ್ಮಬಂಧು.
ಬೇಡ ಪ್ರತಿಕ್ರಿಯೆ-ಬೇಕು ನಿವಾರಣಾಪ್ರಕ್ರಿಯೆ
ಘಟನೆಗಳಿಗೆ ಬೇಡ ಆತುರದ ಪ್ರತಿಕ್ರಿಯೆ,
ಬರಲಿ ಸಮಚಿತ್ತದ ನಿವಾರಣಾ ಪ್ರಕ್ರಿಯೆ,
ನಿನ್ನ ಕಂಗೆಡಿಸುವದು ಘಟನೆಗಳಲ್ಲ,
ಅಧೀರ ಅಪಕ್ವ ಅಸ್ಥಿರ ಮನಸ್ಥಿತಿಗಳೆಲ್ಲ.
ಬಂಧನ -ಬಿಡುಗಡೆಯ ಚಂದನ
ಬಂಧನದೊಳಿದ್ದರೂ ಬಾಳಾಗುವುದು ಚಂದ,
ತೇಯ್ದು ಬೀರುತಲಿರು ಸ್ನೇಹ ಪ್ರೀತಿಯ ಗಂಧ,
ಬಂದದನುಭವಿಸುತ ಶರಣಾಗಿ ನೀ ನಡೆ,
ದೈವ ಹಿಡಿವುದು ತಪ್ಪದೆ ರಕ್ಷಣೆಯ ಕೊಡೆ.
[Contributed by Shri Govind Magal]
No comments:
Post a Comment
ಗೋ-ಕುಲ Go-Kula