Sunday 29 October 2017

Bhava Spandana - 28

ಭಾವ ಸ್ಪಂದನ by “ತ್ರಿವೇಣಿ ತನಯ

ಭೂಷಣ -ಜ್ಞಾನದಾಭರಣ

ಎಲ್ಲಾ ಗೊತ್ತೆನ್ನುವ ಸ್ವಭಾವ ಸಂಕುಚಿತ,
ಗಮ್ಯವದರದು ಖಂಡಿತ ---ಪ್ರಪಾತ,
ಜ್ಞಾನವದು ಎಂದೂ ಮಾಸದ ಆಭರಣ,
ಸೋಸಿ ಕೇಳುವ ಕಿವಿಗಳಿರೆ ಭೂಷಣ.

ಭ್ರಮಾಧೀನರು

ಇಲ್ಲದ್ದನ್ನು ನಂಬುವ ನಾಸ್ತಿಕವಾದಿ ,
ಇರುವುದನ್ನು ಅನುಭವಿಸದ ಆಸ್ತಿಕವಾದಿ,
ಇಬ್ಬರೂ ನಾಟಕದ ಭ್ರಮೆಗೆ ಒಳಗಾದವರೇ,
ಒಳಗಣ್ಣು ತೆರೆಯದೆ ಹರಿಯದು ಭ್ರಮೆಯ ಪೊರೆ.

ಮುಚ್ಚಿಟ್ಟ ದೀಪ

ದೇವರು ಎಲ್ಲರೊಳಗಿರುವ ಮುಚ್ಚಿಟ್ಟ ದೀಪ,
ಅವನಿರದೇ ಜೀವ ಏನು ಮಾಡಬಲ್ಲದು ಪಾಪ,
ದೇಹವೇ ನಾನೆಂಬುವವಗೆ ತನ್ನರಿವೇ ಇಲ್ಲ,
ಅಂಥವಗೆ ಸಿಗಲಾರ ಅವ ಲಕುಮೀನಲ್ಲ.

ಸ್ವಭಾವದನಾವರಣ

ಇನ್ನೊಬ್ಬರ ತಪ್ಪುಗಳ ಹುಡುಕುವ ಬುದ್ಧಿವಂತ,
ತನ್ನ ದೋಷಗಳ ಮುಚ್ಚಿಡುವದೇ ಧಾವಂತ,
ಮುಚ್ಚುವುದು ಬಿಚ್ಚುವುದು ನೀನು ಮಾಡುತ್ತಿಲ್ಲ,
ಸ್ವಭಾವದ ಪ್ರದರ್ಷನ ಆಗುತಿದೆ ತಾನೇ ಎಲ್ಲ.

ಅಪಾತ್ರ ಕೊಡುಗೆ

ಸಾಗರದ ಮೇಲೆ ಸುರಿದ ಮಳೆ,
ತೃಪ್ತನಿಗೆ ಕೊಟ್ಟ ಆಹಾರದ ತೊಳೆ,
ಶ್ರೀಮಂತಗೆ ದೇಣಿಗೆ-ಹಗಲು ದೀವಟಿಗೆ,
ಎಲ್ಲವೂ ಅರ್ಥಹೀನ ಅಪಾತ್ರ ಕೊಡುಗೆ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula