Saturday, 9 July 2016

Sāra Saṅgama 34

ಸಾರ ಸಂಗಮ  by “ತ್ರಿವೇಣಿ ತನಯ

ಅಸ್ವತಂತ್ರ -ಸರ್ವಸ್ವತಂತ್ರ

ಎಲ್ಲರೊಳಗಾಡುವ ಅಂತರ್ಯಾಮಿಯನೋಡು,
ಜ್ಞಾನ ಗಟ್ಟಿಯಾಗಲೆಂದು ಅನವರತ ಬೇಡು,
ಏನು ಮಾಡಬಲ್ಲೆ ನೀನು ಅಸ್ವತಂತ್ರ,
ಸರ್ವಾಂತರ್ಯಾಮಿ ಅವ ಸರ್ವಸ್ವತಂತ್ರ.

ಬಿಂಬ -ಪ್ರತಿಬಿಂಬ

ನಾನೆಂಬ ಬೋನೋಳಗೆ ಅಹಂಕಾರದ ಸಿಂಹ,
ಹುಡುಕಾಟವಿದ್ದವರಿಗೆ ಅರಿವಾಗುವ ಗುಮ್ಮ ,
ನಾನೆಂದು ಹೇಳಿಕೊಳ್ಳಬಲ್ಲವನೊಬ್ಬನೇ ಪರಬ್ರಹ್ಮ,
ಮಿಕ್ಕವರೆಲ್ಲರೂ ಅವನದೇ ಪ್ರತಿಬಿಂಬವಮ್ಮ.

ಶಿಸ್ತು -ಬಿಡುಗಡೆಗೆ ಅಸ್ತು

ಲೋಕದಲ್ಲಿ ಕೂಡಾ ಶಿಸ್ತೇ ಪ್ರಧಾನ ನೋಡು,
ಶಿಸ್ತಿನ ಬಂಧನದಲ್ಲೇ ಬಿಡುಗಡೆಯ ಬೇಡು,
ಮಿತಿ ಅರಿತು ನಿಯಾಮಕಗೆ ಮಣಿವುದೇ ಶಿಸ್ತು,
ಶರಣಾದವರಿಗಷ್ಟೇ ಸಿಕ್ಕೀತು ಬಿಡುಗಡೆಗೆ ಅಸ್ತು.

ಪದಬಂಧ

ಬದುಕೊಂದು ಪದಬಂಧ,
ಇರಲಿ ಮಧುರ ಸಂಬಂಧ,
ಪದಗಳಲ್ಲಿರಲಿ ನಿರ್ಮಲ ಪ್ರೀತಿ,
ಅದೇ ನೋಡು ಬಾಳುವ ರೀತಿ.

ಪುರದ ಸ್ವತ್ತು -ಪುರುಸೊತ್ತು

ಕಾಣದ ಮಹತ್ತು ಎಲ್ಲರ ಪುರದ ಸ್ವತ್ತು,
ಕಾಣದ ಕಾಂಬುದಕೆ ಯಾರಿಗಿಲ್ಲ ಪುರುಸೊತ್ತು,
ಪುರುಸೊತ್ತಾಗಿದೆ ಅನ್ಸಿದಾಗ ಎಷ್ಟಿರತ್ತೊ ಹೊತ್ತು,
ಈ ಮತಿಹೀನಬಾಳ ಓಟವೇ ಜೀವನ ಅನ್ನೋ ಗಮ್ಮತ್ತು.


(Contributed by Shri Govind Magal)

Tuesday, 5 July 2016

Sāra Saṅgama 33

ಸಾರ ಸಂಗಮ  by “ತ್ರಿವೇಣಿ ತನಯ

ಜ್ಞಾನದ ಲಾಂದ್ರ
ಹೊರಗೆ ಆಕಾಶದಲ್ಲಿ ಹೊಳೆವ ಚಂದ್ರ,
ಮನದಾಕಾಶದಲ್ಲಿ ಹತ್ತೇ ಇಲ್ಲ ಲಾಂದ್ರ,
ಚಂದ್ರನಿರದ ಆಕಾಶ ಬರೀ ಕತ್ತಲು,
ಲಾಂದ್ರವಿರದ ಮನವಾದೀತೆಂತು ಬೆತ್ತಲು?
ನಿಜ ಗಳಿಕೆ
ಮಾನವನಿಗೆ ಜ್ಞಾನವೇ ಭೂಷಣ,
ಬಾಹ್ಯಾಡಂಬರ-ವಸನ ಆಭರಣ,
ಸತತ ಕಲಿಕೆಯಿಂದಲೇ ನಿಜ ಗಳಿಕೆ,
ತುಂಬುವುದದೇ ಅಧ್ಯಾತ್ಮ ಕುಡಿಕೆ.
ಬಾಳೊಂದು ಒಗಟು
ಎಲ್ಲರ ಬಾಳೂ ಒಂದು ಒಗಟು,
ಬಿಡಿಸಲಾಗದ ಕ್ಲಿಷ್ಟ ಕಗ್ಗಂಟು,
ಅರಿತವರಿಗೆ ಗೊತ್ತದರ ಗುಟ್ಟು,
ಕಲಿಯುತ ಅರಿವ ಬುತ್ತಿಯ ಕಟ್ಟು.
ವೇದನೆ -ನಿವೇದನೆ
ಯಾರೆದುರು ನಿನ್ನ ಹೀನ ನಿವೇದನೆ?
ಎಲ್ಲರದೂ ತೀರಲಾರದ ವೇದನೆ,
ವೇದನೆ ಇರುವಲ್ಲಿ ಹ್ಯಾಗೆ ಸಾಧನೆ?
ಗಟ್ಟಿ ಹಿಡಿ-ವೇದ ಪ್ರತಿಪಾದ್ಯನನ್ನೇ.
ದೇವತಾ ಗಣ .ಜೀವ ಕಣ.
ಎಲ್ಲಾ ನಡೆಸುವುದೇ ದೇವತಾ ಗಣ,
ಇಲ್ಲವಾದರೆ ಎಲ್ಲವೂ ಭಣ ಭಣ,
ಬೃಹತ್ ವ್ಯಾಪಾರದಲಿ ನೀನೊಂದು ಕಣ,
ಎಂದೂ ಇರಲಿ ಶಾರಣ್ಯದ ಸ್ಮರಣ.

(Contributed by Shri Govind Magal)

Sunday, 3 July 2016

Sāra Saṅgama 32

ಸಾರ ಸಂಗಮ  by “ತ್ರಿವೇಣಿ ತನಯ

ತಿಳಿ ಕೊಳ

ಕೋಪವದು ಕೊಳಕಿನ ಸಂಕೇತ,
ನಿರ್ಲಿಪ್ತ ಮನ ಕೋಪದಿಂದ ಮುಕ್ತ,
ಶುದ್ಧ ಮನವದು ಕದಡದ ಕೊಳ,
ಪಾರದರ್ಶಕವಿರೆ ತಿಳಿದೀತು ಆಳ.

ಜ್ಞಾನ-ಎಲ್ಲೆಡೆ ಸಲ್ಲುವ ಆಭರಣ

ಭಾರವೆತ್ತುವವಗೆ ಭಾರವೇನು ಲೆಕ್ಕ?
ಕಠಿಣ ಪರಿಶ್ರಮಿಗೆ ಗೆಲುವದು ಪಕ್ಕಾ,
ನಿಜ ಜ್ಞಾನಿಗೆ ಯಾವ ದೇಶವಾದರೇನು?
ಎಲ್ಲರನೂ ಪ್ರೀತಿಸುವವ ಎಲ್ಲಿದ್ದರೇನು!

ಜೀವನ ಜಾತ್ರೆ -ಶಿಸ್ತಿನ ಮಾತ್ರೆ

ಜಗತ್ತೇ ಜೀವಿಗಳು ಬಂದು ಹೋಗುವ ಜಾತ್ರೆ,
ನಿಲ್ಲದೇ ನಡೆದಿದೆ ಸೂರ್ಯನ ಶಿಸ್ತಿನ ಯಾತ್ರೆ,
ಅದೇ ಸೂರ್ಯ ಸಂಜೆ ಸಾಗರ ನುಂಗುವ ಮಾತ್ರೆ,
ಜೀವಿಗಳಿಗಿರಲಿ ಶಿಸ್ತು-ತುಂಬಲಿ ಸಾಧನಾ ಪಾತ್ರೆ.

ಅಂತರಂಗದ ಕದ-ನಿರ್ಲಿಪ್ತತೆಯ ಹದ

ಅಂತರಂಗದ ಕದವ ತೆಗೆವುದೆಂತು?
ನಿರ್ಲಿಪ್ತ ಮನವಿರೆ ಬೀಗದ ಕೈ ಸಿಕ್ಕೀತು,
ನಿರ್ಲಿಪ್ತತೆಗಾಗಿ ವ್ಯಾಮೋಹ ಕಳಚಲಿ,
ಬರುವುದೆಲ್ಲಾ ಬರಲಿ ಅಂಟದಂತಿರಲಿ.

ತಿಳಿದೆನೆಂದು ಅಳಿಯಬೇಡ

ತಿಳಿದೆ ತಿಳಿದೆ ಅಂದರೆ ಅಳಿದೆನೆಂದೇ ಅರ್ಥ,
ತಿಳಿದೆ ಎಂದು ಹೊರಟರೆ ತಿಳಿದದ್ದೆಲ್ಲವೂ ವ್ಯರ್ಥ,
ಸಾಗರದ ಆಳ-ಅಗಲವನು ಅಳೆದವರುಂಟೇ?
ಎಣೆಯಿಲ್ಲದ ಜ್ಞಾನಭಂಡಾರ ಕೈಗೆಟುದ ಗಂಟೇ!


(Contributed by Shri Govind Magal)

Saturday, 2 July 2016

Sāra Saṅgama 31

ಸಾರ ಸಂಗಮ  by “ತ್ರಿವೇಣಿ ತನಯ

ಸಜ್ಜನರ ನಂಟು-ಜ್ಞಾನದ ಗಂಟು

ಪ್ರತಿನಿತ್ಯವಿರಲಿ ಸಂಭ್ರಮ ಸಡಗರ,
ಕಲಿಯುವ ಹಸಿವಿರಲದು ನಿರಂತರ,
ಜ್ಞಾನವೊಂದೇ ಜೊತೆ ಬರುವ ಗಂಟು,
ಸಜ್ಜನರೊಂದಿಗಿರಲಿ ಶಾಶ್ವತ ನಂಟು .

ಪ್ರಪಾತದೆಡೆಗೆ ಪಯಣ

ಯಾರಿಗೇನೇ ಹೇಳು-ನನಗೆಲ್ಲಾ ಗೊತ್ತು,
ಜ್ಞಾನಿಗಳನ್ನೂ ಮೀರಿಸುವ ಭಾರೀ ಗತ್ತು,
ಸ್ವಂತ ಬುದ್ಧಿಯದು ಇಲ್ಲವೇ ಇಲ್ಲ,
ಇನ್ನೊಬ್ಬರ ಮಾತು ಕೇಳೋದೇ ಇಲ್ಲ.

ಎಲ್ಲಾ ಗೊತ್ತೆನ್ನುವ ಸ್ವಭಾವ ಸಂಕುಚಿತ,
ಗಮ್ಯವದರದು ಖಂಡಿತ --ಪ್ರಪಾತ,
ಜ್ಞಾನವದು ಎಂದೂ ಮಾಸದ ಆಭರಣ,
ಸೋಸಿ ಕೇಳುವ ಕಿವಿಗಳಿರೆ ಭೂಷಣ .

ಪ್ರತಿಯೊಬ್ಬನೂ ಹುಟ್ಟಾ ಪಂಡಿತ,
ಬೇರೆಯವರ ಮಾತು ಆಗಲ್ಲ ಹಿತ,
ಆಗುವುದೆಂದಿಗೆ ತಿಳಿವಿನ ಹೊಳವು,
ಸೃಷ್ಟಿಕರ್ತನೇ ಕೊಡಬೇಕದರ ಸುಳಿವು.

ಹುಡುಕುವ ಮನ-ವಿಕಾಸದೆಡೆ ಗಮನ

ಹುಡುಕುವ ಮನವಿರಲಿ ಬೆದಕುವ ಕಣ್ಣಿರಲಿ,
ಹುಡುಕುವುದು ಬೆದಕುವುದು ವಿಕಾಸದೆಡೆಗಿರಲಿ,
ಒಪ್ಪುವ ನಿರ್ಮಲ ಮನವಿರೆ ನಿತ್ಯವೂ ಪಾಠ,
ಪಾಠ ಒಳಗಿಳಿಯುತಿರೆ ಸರಿದಾರಿಯ ಓಟ.


(Contributed by Shri Govind Magal)