ಸಾರ ಸಂಗಮ by “ತ್ರಿವೇಣಿ ತನಯ”
ಜ್ಞಾನದ ಲಾಂದ್ರ
ಹೊರಗೆ ಆಕಾಶದಲ್ಲಿ ಹೊಳೆವ ಚಂದ್ರ,
ಮನದಾಕಾಶದಲ್ಲಿ ಹತ್ತೇ ಇಲ್ಲ ಲಾಂದ್ರ,
ಚಂದ್ರನಿರದ ಆಕಾಶ ಬರೀ ಕತ್ತಲು,
ಲಾಂದ್ರವಿರದ ಮನವಾದೀತೆಂತು ಬೆತ್ತಲು?
ನಿಜ ಗಳಿಕೆ
ಮಾನವನಿಗೆ ಜ್ಞಾನವೇ ಭೂಷಣ,
ಬಾಹ್ಯಾಡಂಬರ-ವಸನ ಆಭರಣ,
ಸತತ ಕಲಿಕೆಯಿಂದಲೇ ನಿಜ ಗಳಿಕೆ,
ತುಂಬುವುದದೇ ಅಧ್ಯಾತ್ಮ ಕುಡಿಕೆ.
ಬಾಳೊಂದು ಒಗಟು
ಎಲ್ಲರ ಬಾಳೂ ಒಂದು ಒಗಟು,
ಬಿಡಿಸಲಾಗದ ಕ್ಲಿಷ್ಟ ಕಗ್ಗಂಟು,
ಅರಿತವರಿಗೆ ಗೊತ್ತದರ ಗುಟ್ಟು,
ಕಲಿಯುತ ಅರಿವ ಬುತ್ತಿಯ ಕಟ್ಟು.
ವೇದನೆ -ನಿವೇದನೆ
ಯಾರೆದುರು ನಿನ್ನ ಹೀನ ನಿವೇದನೆ?
ಎಲ್ಲರದೂ ತೀರಲಾರದ ವೇದನೆ,
ವೇದನೆ ಇರುವಲ್ಲಿ ಹ್ಯಾಗೆ ಸಾಧನೆ?
ಗಟ್ಟಿ ಹಿಡಿ-ವೇದ ಪ್ರತಿಪಾದ್ಯನನ್ನೇ.
ದೇವತಾ ಗಣ .ಜೀವ ಕಣ.
ಎಲ್ಲಾ ನಡೆಸುವುದೇ ದೇವತಾ ಗಣ,
ಇಲ್ಲವಾದರೆ ಎಲ್ಲವೂ ಭಣ ಭಣ,
ಬೃಹತ್ ವ್ಯಾಪಾರದಲಿ ನೀನೊಂದು ಕಣ,
ಎಂದೂ ಇರಲಿ ಶಾರಣ್ಯದ ಸ್ಮರಣ.
(Contributed by Shri Govind Magal)
No comments:
Post a Comment
ಗೋ-ಕುಲ Go-Kula