ಸಾರ ಸಂಗಮ by “ತ್ರಿವೇಣಿ ತನಯ”
ತಿಳಿ ಕೊಳ
ಕೋಪವದು ಕೊಳಕಿನ ಸಂಕೇತ,
ನಿರ್ಲಿಪ್ತ ಮನ ಕೋಪದಿಂದ ಮುಕ್ತ,
ಶುದ್ಧ ಮನವದು ಕದಡದ ಕೊಳ,
ಪಾರದರ್ಶಕವಿರೆ ತಿಳಿದೀತು ಆಳ.
ಜ್ಞಾನ-ಎಲ್ಲೆಡೆ ಸಲ್ಲುವ ಆಭರಣ
ಭಾರವೆತ್ತುವವಗೆ ಭಾರವೇನು ಲೆಕ್ಕ?
ಕಠಿಣ ಪರಿಶ್ರಮಿಗೆ ಗೆಲುವದು ಪಕ್ಕಾ,
ನಿಜ ಜ್ಞಾನಿಗೆ ಯಾವ ದೇಶವಾದರೇನು?
ಎಲ್ಲರನೂ ಪ್ರೀತಿಸುವವ ಎಲ್ಲಿದ್ದರೇನು!
ಜೀವನ ಜಾತ್ರೆ -ಶಿಸ್ತಿನ ಮಾತ್ರೆ
ಜಗತ್ತೇ ಜೀವಿಗಳು ಬಂದು ಹೋಗುವ ಜಾತ್ರೆ,
ನಿಲ್ಲದೇ ನಡೆದಿದೆ ಸೂರ್ಯನ ಶಿಸ್ತಿನ ಯಾತ್ರೆ,
ಅದೇ ಸೂರ್ಯ ಸಂಜೆ ಸಾಗರ ನುಂಗುವ ಮಾತ್ರೆ,
ಜೀವಿಗಳಿಗಿರಲಿ ಶಿಸ್ತು-ತುಂಬಲಿ ಸಾಧನಾ ಪಾತ್ರೆ.
ಅಂತರಂಗದ ಕದ-ನಿರ್ಲಿಪ್ತತೆಯ ಹದ
ಅಂತರಂಗದ ಕದವ ತೆಗೆವುದೆಂತು?
ನಿರ್ಲಿಪ್ತ ಮನವಿರೆ ಬೀಗದ ಕೈ ಸಿಕ್ಕೀತು,
ನಿರ್ಲಿಪ್ತತೆಗಾಗಿ ವ್ಯಾಮೋಹ ಕಳಚಲಿ,
ಬರುವುದೆಲ್ಲಾ ಬರಲಿ ಅಂಟದಂತಿರಲಿ.
ತಿಳಿದೆನೆಂದು ಅಳಿಯಬೇಡ
ತಿಳಿದೆ ತಿಳಿದೆ ಅಂದರೆ ಅಳಿದೆನೆಂದೇ ಅರ್ಥ,
ತಿಳಿದೆ ಎಂದು ಹೊರಟರೆ ತಿಳಿದದ್ದೆಲ್ಲವೂ ವ್ಯರ್ಥ,
ಸಾಗರದ ಆಳ-ಅಗಲವನು ಅಳೆದವರುಂಟೇ?
ಎಣೆಯಿಲ್ಲದ ಜ್ಞಾನಭಂಡಾರ ಕೈಗೆಟುದ ಗಂಟೇ!
(Contributed by Shri Govind Magal)
No comments:
Post a Comment
ಗೋ-ಕುಲ Go-Kula