Friday, 27 November 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 20: 11 - 15

 ಅಥೋಪಯೇಮೇ ಶಿಶುಪಾಲಪುತ್ರೀಂ ಯುಧಿಷ್ಠಿರೋ ದೇವಕೀಂ ನಾಮ ಪೂರ್ವಮ್ ।

ಸ್ವೀಯಾಂ ಭಾರ್ಯ್ಯಾಂ ಯತ್ಸಹಜೋ ಧೃಷ್ಟಕೇತುರನುಹ್ಲಾದಃ ಸವಿತುಶ್ಚಾಂಶಯುಕ್ತಃ ॥೨೦.೧೧॥

ಯುಧಿಷ್ಠಿರನವಳೇ ಆಗಿರುವಂಥ ಶ್ಯಾಮಲಾ,

ಈಗ ಮಗಳಾಗಿ ಹೊಂದಿದ್ದನವ ಶಿಶುಪಾಲ.

ದೇವಕೀ ಎನಿಸಿಕೊಳ್ಳುವ ಅವಳ ಯುಧಿಷ್ಠಿರ ಮದುವೆಯಾದ,

ಅಣ್ಣ ಧೃಷ್ಟಕೇತು ಪೂರ್ವಜನ್ಮದಿ ಪ್ರಹ್ಲಾದನ ತಮ್ಮ ಅನುಹ್ಲಾದ.

ಇವನು 'ಸವಿತು' ಎನ್ನುವ ಆದಿತ್ಯನ ಅಂಶದವನು ಆಗಿಬಂದಿದ್ದ.

 

ತಸ್ಯಾಂ ಸುಹೋತ್ರೋ ನಾಮತಃ ಪುತ್ರ ಆಸೀದ್  ಯಶ್ಚಿತ್ರಗುಪ್ತೋ ನಾಮ ಪೂರ್ವಂ ಸುಲೇಖಃ ।

ಕೃಷ್ಣಾ ಸೈವಾಪ್ಯನ್ಯರೂಪೇಣ ಜಾತಾ ಕಾಶೀಶಪುತ್ರೀ ಯಾಂ ಪ್ರವದನ್ತಿ ಕಾಳೀಮ್ ॥೨೦.೧೨॥

ದೇವಕಿಯಲ್ಲಿ ಮಗನಾಗಿ ಹುಟ್ಟಿದವನು ಸುಹೋತ್ರ,

ಚಿತ್ರಗುಪ್ತ ಬರಹಗಾರನಿಗೆ ಈಗ ದೇವಕೀಮಗನ ಪಾತ್ರ.

ದ್ರೌಪದೀ ಹುಟ್ಟಿದಳು ಇನ್ನೊಂದು ರೂಪದಿ ಆಗಿ ಕಾಶೀರಾಜನ ಮಗಳು,

ಯಾವ ದೇವಿಯನ್ನು ಕಾಳೀ ಎಂದು ಕರೆಯುತ್ತಾರೆ ಅವಳೇ ಇವಳು.

 

ಸಾ ಕೇವಲಾ ಭಾರತೀ ನಾನ್ಯದೇವ್ಯಸ್ತತ್ರಾsವಿಷ್ಟಾಸ್ತತ್ಕೃತೇ ಕಾಶಿರಾಜಃ ।

ಸ್ವಯಮ್ಬರಾರ್ತ್ಥಂ ನೃಪತೀನಾಜುಹಾವ ಸರ್ವಾಂಸ್ತೇSಪಿ ಹ್ಯತ್ರ ಹರ್ಷಾತ್ ಸಮೇತಾಃ ॥೨೦.೧೩॥

ಅವಳಲ್ಲಿದ್ದದ್ದು ಕೇವಲ ಭಾರತೀದೇವಿ ಮಾತ್ರ,

ಬೇರೆ ದೇವಿಯರಿಗಿರಲಿಲ್ಲ ಆವಿಷ್ಟರಾಗುವ ಪಾತ್ರ.

ಕಾಶೀರಾಜ ಏರ್ಪಡಿಸಿದ ಅವಳ ಸ್ವಯಂವರ,

ಎಲ್ಲಾ ರಾಜರುಗಳ ಕರೆಸಿದ ಆಮಂತ್ರಣದ ದ್ವಾರ.

ಹರ್ಷದಿಂದ ಎಲ್ಲರೂ ಬಂದು ಸೇರಿದ ವ್ಯಾಪಾರ.

 

ತೇಷಾಂ ಮಧ್ಯೇ ಭೀಮಸೇನಾಂಸ ಏಷಾ ಮಾಲಾಮಾಧಾತ್ ತತ್ರ ಜರಾಸುತಾದ್ಯಾಃ ।

ಕೃದ್ಧಾ ವಿಷ್ಣೋರಾಶ್ರಿತಾನಾಕ್ಷಿಪನ್ತ ಆಸೇದುರುಚ್ಚೈಃ ಶಿವಮಾಸ್ತುವನ್ತಃ ॥೨೦.೧೪॥

ಎಲ್ಲಾ ರಾಜರ ಮದ್ಧ್ಯೇ ಕಾಳಿ ಭೀಮನ ಕೊರಳಿಗೆ ಹಾಕಿದಳು ಮಾಲೆ,

ಜರಾಸಂಧ ಮೊದಲಾದವರಲ್ಲಿ ಎಬ್ಬಿಸಿಬಿಟ್ಟಿತು ಕೋಪದ ಜ್ವಾಲೆ.

ವಿಷ್ಣುಭಕ್ತರ ಬೈಯುತ್ತಾ ಶಿವಸ್ತುತಿಗೈಯುತ್ತ ಏರಿ ಬಂದರು ಮೇಲೆ.

 

ಪೂರ್ವಂ ವಾಕ್ಯೈರ್ವೈದಿಕೈಸ್ತಾನ್ತ್ಸ ಭೀಮೋ ಜಿಗ್ಯೇ ತರ್ಕ್ಕೈಃ ಸಾಧುಭಿಃ ಸಮ್ಪ್ರಯುಕ್ತೈಃ ।

ವೇದಾ ಹ್ಯದೋಷಾ ಇತಿ ಪೂರ್ವಮೇವ ಸಂಸಾಧಯಿತ್ವೈವ ಸದಾಗಮೈಶ್ಚ ॥೨೦.೧೫॥

ಭೀಮಸೇನ ನಿರೂಪಿಸಿದ ವೇದಗಳೆಲ್ಲಾ ದೋಷಮುಕ್ತ,

ಸಾಧಿಸಿದ ಸದಾಗಮ ನಿರ್ದುಷ್ಟ ತರ್ಕಗಳ ಅಭಿವ್ಯಕ್ತ.

ವೈದಿಕವಾಕ್ಯಗಳಿಂದ ಎಲ್ಲರ ವಾದದಿ ಗೆದ್ದ ವಿಷ್ಣುಭಕ್ತ.

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 20: 05 - 10

 ಆಜೀವಿನಾಂ ವೇತನದಸ್ತದಾssಸೀನ್ಮಾದ್ರೀಸುತಃ ಪ್ರಥಮೋsಥ ದ್ವಿತೀಯಃ ।

ಸನ್ಧಾನಭೇದಾದಿಷು ಧರ್ಮರಾಜಪಶ್ಚಾಚ್ಚ ಖಡ್ಗೀ ಸ ಬಭೂವ ರಕ್ಷನ್ ॥೨೦.೦೫॥

ಮಾದ್ರೀಸುತ ನಕುಲನದು ಕೆಲಸಗಾರರ ಸಂಬಳ ಭತ್ಯೆ ಇತ್ಯಾದಿಗಳ ಉಸ್ತುವಾರಿ,

ಎರಡನೇ ಮಗ ಸಹದೇವನದು ಸಂಧಾನಭೇದದಿ ಖಡ್ಗ ಹಿಡಿದು ರಾಜನ ಕಾಯ್ವ ಜವಾಬ್ದಾರಿ.

 

ಧೃಷ್ಟದ್ಯುಮ್ನಸ್ತತ್ರ ಸೇನಾಪ್ರಣೇತಾ ಶಕ್ರಪ್ರಸ್ಥೇ ನಿತ್ಯಮಾಸ್ತೇsತಿಹಾರ್ದ್ದಾತ್ ।

ವಿಶೇಷತೋ ಭೀಮಸಖಾ ಸ ಆಸೀದ್ ರಾಷ್ಟ್ರಂ ಚೈಷಾಂ ಸರ್ವಕಾಮೈಃ ಸುಪೂರ್ಣ್ಣಮ್ ॥೨೦.೦೬॥

ದೃಷ್ಟದ್ಯುಮ್ನಗಿತ್ತು ಪಾಂಡವರಲ್ಲಿ ಅತ್ಯಧಿಕವಾದ ಸ್ನೇಹ,

ಸೇನಾನಾಯಕನಾಗಿ ಇಂದ್ರಪ್ರಸ್ಥದಲ್ಲೇ ಇದ್ದ ಮಹಾನುಭಾವ.

ಭೀಮಸೇನನಿಗಾಗಿದ್ದ ಅವನು ವಿಶೇಷವಾದ ಸ್ನೇಹಿತ,

ಇವರೆಲ್ಲರಿಂದ ಕೂಡಿದ ರಾಷ್ಟ್ರವಾಗಿತ್ತು ಅದು  ಸುಭಿಕ್ಷಿತ.

 

ನಾವೈಷ್ಣವೋ ನ ದರಿದ್ರೋ ಬಭೂವ ನ ಧರ್ಮ್ಮಾಹಾನಿಶ್ಚ ಬಭೂವ ಕಸ್ಯಚಿತ್ ।

ತೇಷಾಂ ರಾಷ್ಟ್ರೇ ಶಾಸತಿ ಭೀಮಸೇನೇ ನ ವ್ಯಾಧಿತೋ ನಾಪಿ ವಿಪರ್ಯ್ಯಯಾನ್ಮೃತಿಃ ॥೨೦.೦೭॥

ವಿಷ್ಣುವಿರೋಧ, ದಾರಿದ್ರ್ಯಗಳು ಇರದೇ ಇತ್ತು ಆ ದೇಶ,

ಯಾರಿಗೂ ಆಗುತ್ತಿರಲಿಲ್ಲ ಎಂದೂ ಧರ್ಮಹಾನಿ ಲವಲೇಶ.

ಯಾರೂ ಸಾಯುತ್ತಿರಲಿಲ್ಲ -ರೋಗಗಳು ಆಗಿ ಕಾರಣ,

ಸಂಭವಿಸುತ್ತಿರಲಿಲ್ಲ ವಯೋಸಹಜವಲ್ಲದ ದುರ್ಮರಣ.

 

ಯುಧಿಷ್ಠಿರಂ ಯಾನ್ತಿ ಹಿ ದರ್ಶನೋತ್ಸುಕಾಃ ಪ್ರತಿಗ್ರಹಾಯಾಪ್ಯಥ ಯಾಜನಾಯ ।

ಕಾರ್ಯ್ಯಾರ್ತ್ಥತೋ ನೈವ ವೃಕೋದರೇಣ ಕಾರ್ಯ್ಯಾಣಿ ಸಿದ್ಧಾನಿ ಯತೋsಖಿಲಾನಿ ॥೨೦.೦೮॥

ದಾನಾರ್ಥಿಗಳಾಗಿ ದರ್ಶನಾರ್ಥಿಗಳಾಗಿ ಯಾಗಾರ್ಥಿಗಳಾಗಿ ಆಗುತ್ತಿತ್ತು ಪ್ರಜೆಗಳಿಂದ ರಾಜನ ಭೇಟಿ,

ಬೇರಾವ ಕೆಲಸವಾಗಬೇಕೆಂದು ಯಾರೂ ಬರುತ್ತಿರಲಿಲ್ಲ -ಹಾಗಿತ್ತು ಭೀಮನ ಕಾರ್ಯಸಿದ್ಧಿಯ ರೀತಿ.

 

ಗನ್ಧರ್ವವಿದ್ಯಾಧರಚಾರಣಾಶ್ಚ ಸೇವನ್ತ ಏತಾನ್ತ್ಸತತಂ ಸಮಸ್ತಾಃ ।

ಯಥಾ ಸುರೇನ್ದ್ರಮ್ ಮುನಯಶ್ಚ ಸರ್ವ ಆಯಾನ್ತಿ ದೇವಾ ಅಪಿ ಕೃಷ್ಣಮರ್ಚ್ಚಿತುಮ್ ॥೧೦.೦೯॥

ಗಂಧರ್ವರು, ವಿದ್ಯಾಧರರು, ಚಾರಣರು ಇಂದ್ರನ ಪೂಜಿಸುವಂತೆ,

ಹಾಗೆಯೇ ಅವರೆಲ್ಲಾ ಬಂದು ಪಾಂಡವರನ್ನು ಸೇವಿಸುತ್ತಿದ್ದರಂತೆ.

ಸೇರುತ್ತಿತ್ತಂತೆ ಅಲ್ಲಿ ಕೃಷ್ಣಪೂಜೆಗೆಂದು ಮುನಿ ದೇವತೆಗಳ ಸಂತೆ.

 

ತೇಷಾಂ ರಾಷ್ಟ್ರೇ ಕಾರ್ತ್ತಯುಗಾ ಹಿ ಧರ್ಮ್ಮಾಃ ಪ್ರವರ್ತ್ತಿತಾ ಏವ ತತೋsಧಿಕಾಶ್ಚ ।

ಋದ್ಧಿಶ್ಚ ತಸ್ಮಾದಧಿಕಾ ಸುವರ್ಣ್ಣರತ್ನಾಮ್ಬರಾದೇರಪಿ ಸಸ್ಯಸಮ್ಪದಾಮ್ ॥೨೦.೧೦॥

ಪಾಂಡವ ರಾಜ್ಯದಲ್ಲಿ ನೆಲೆಸಿತ್ತು ಕೃತಯುಗದ ಧರ್ಮ,

ಅದಕ್ಕಿಂತ ಮಿಗಿಲೆನಿಸಿ ಅಧರ್ಮ ಸುಳಿಯದ ಮರ್ಮ.

ಹಾಗಾಗಿ -ಬಂಗಾರ ರತ್ನ ಪೀತಾಂಬರಗಳು ಹೇರಳ,

ಸಸ್ಯಸಂಪತ್ತುಗಳ ಸಮೃದ್ಧಿ ಕೂಡಾ ಇತ್ತು ಧಾರಾಳ.

Friday, 6 November 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 20: 01 - 04

                                                     ॥ ಓಂ ॥

                         ಖಾಣ್ಡವದಾಹಃ  

ಯಜ್ಞೋರುದಾನನರದೇವವನ್ದ್ಯತಾಪ್ರಶ್ನರ್ಷಿಪೂಜಾಸು ಯುಧಿಷ್ಠಿರೋsಭೂತ್ ।

ಧರ್ಮ್ಮಾನುಶಾಸ್ತಿಹರಿತತ್ವಶಂಸನಸ್ವರಾಷ್ಟ್ರರಕ್ಷಾದಿಷು ಭೀಮ ಆಸೀತ್ ॥೨೦.೦೧॥

ಯಜ್ಞ, ದಾನ, ಆಸ್ಥಾನಕ್ಕೆ ರಾಜರ ಬರಮಾಡಿಕೊಳ್ಳುವ ಕಾರ್ಯ,

ಮುನಿಗಳೊಂದಿಗೆ ತತ್ವವಿಚಾರ, ಋಷಿಪೂಜೆಗಳ ವಹಿಸಿಕೊಂಡ ಯುಧಿಷ್ಠಿರ.

ಧರ್ಮ ಅನುಶಾಸನ, ಪರತತ್ವಚಿಂತನ ಮತ್ತು ರಾಷ್ಟ್ರರಕ್ಷಣ,

ಕಾರ್ಯಗಳನ್ನು ವಹಿಸಿಕೊಂಡು ಮುನ್ನಡೆದ ತಾ ಭೀಮಸೇನ.

 

ಸ್ತ್ರೀಧರ್ಮ್ಮಸಂಶಾಸನಭೃತ್ಯಕೋಶರಕ್ಷಾವ್ಯಯಾದೌ ಗುಣದೋಷಚಿನ್ತನೇ ।

ಅನ್ತಃಪುರಸ್ಥಸ್ಯ ಜನಸ್ಯ ಕೃಷ್ಣಾ ತ್ವಾಸೀದ್ಧರೇರ್ದ್ಧರ್ಮ್ಮನಿದರ್ಶನೀ ಚ ॥೨೦.೦೨॥

ಸ್ತ್ರೀಧರ್ಮ ಶಿಕ್ಷಣ, ಭೃತ್ಯ ಪೋಷಣೆ, ಕೋಶದ ರಕ್ಷಣೆ,

ಖರ್ಚುನಿರ್ವಹಣೆ,ಗುಣದೋಷ ಚಿಂತನೆ ಕೃಷ್ಣೆಯಿಂದ ಪಾಲನೆ.

ಜೊತೆ ಅಂತಃಪುರ ಜನಕ್ಕೆ ಮಾಡುತ್ತಿದ್ದಳು ವಿಷ್ಣುಧರ್ಮಉಪದೇಶವನ್ನೆ.

 

ಭೀಭತ್ಸುರಾಸೀತ್ ಪರರಾಷ್ಟ್ರಮರ್ದ್ದನೇ ತೇನಾನಿಯಮ್ಯಾಂಸ್ತು ಜರಾಸುತಾದೀನ್ ।

ಸ ಕೀಚಕಾದೀಂಶ್ಚ ಮಮರ್ದ್ದ ಭೀಮಸ್ತಸ್ಯೈವ ತೇ ಬಲತೋ ನಿತ್ಯಭೀತಾಃ ॥೨೦.೦೩॥

ಪರರಾಷ್ಟ್ರಗಳ ಅಂಕೆ, ಮರ್ದನ ನಿಯಮನ ನೋಡುತ್ತಿದ್ದ ಅರ್ಜುನ,

ಅರ್ಜುನಗೆ ಮೀರಿದ ಜರಾಸಂಧ ಕೀಚಕಾದಿಗಳ ನಿಗ್ರಹಿಸಿದ ಭೀಮಸೇನ.

ಅವರೆಲ್ಲರ ಭಯಕ್ಕೆ ಕಾರಣನಾಗಿದ್ದ ಬಲವಂತ ಯುವರಾಜ ಭೀಮಸೇನ.

 

ರಾಷ್ಟ್ರೇಷು ಭೀಮೇನ ವಿಮರ್ದ್ದಿತೇಷು ಜಿತಾಶ್ಚ ಯುದ್ಧೇಷು ನಿರುದ್ಯಮಾಸ್ತೇ ।

ಬಭೂವುರಾಸೀದ್ಧರಿಧರ್ಮ್ಮನಿಷ್ಠಃ ಪ್ರಾಯೇಣ ಲೋಕಶ್ಚ ತದೀಯಶಾಸನಾತ್ ॥೨೦.೦೪॥

ಭೀಮಸೇನ ತಾನು ಶತ್ರುರಾಷ್ಟ್ರಗಳ ನಿಗ್ರಹಕ್ಕೆ ತೊಡಗಿದಾಗ,

ಜರಾಸಂಧಾದಿ ವಿಷ್ಣುವಿರೋಧಿ ರಾಜರಿಗಿರಲಿಲ್ಲ ಉದ್ಯೋಗ.

ಭೀಮನಾಳ್ವಿಕೆಯಲ್ಲಿ ಲೋಕ ವಿಷ್ಣುಧರ್ಮದಲ್ಲಿ ನಿರತವಾಗ.