ನನ್ನೊಳು ಹರಿದ ಉಪನಿಷತ್ ಝರಿ-
ನಿಮಗೊಪ್ಪಿಸುವ ಸರಳ ಪರಿ .
ಇದು ಅಣುನಾರಾಯಣ ಉಪನಿಷತ್ತು,
ಅಷ್ಟಾಕ್ಷರದ ಮಹಿಮೆಯ ಉಪನಿಷತ್ತು,
ಪ್ರತಿ "ಬ್ರಾಹ್ಮಣ"ಗೂ ಬೇಕಾದ ಉಪನಿಷತ್ತು,
ಹೇಳುವ ಕೇಳುವರಲ್ಲಿದ್ದು ತಿಳಿಸಲಿ ದೈವದ ಮಹತ್ತು.
ಪ್ರಳಯದ ನಂತರ ನಾರಾಯಣ ಬಯಸಿದ,
ಪುರುಷನಾಗಿ ಎಲ್ಲಾ ಕಡೆ ಇದ್ದು ವ್ಯಾಪಿಸಿದ,
ಬ್ರಹ್ಮಾಂಡದ ಮನೆಯ ವಾಸಿಯಾದ,
ಪಿಂಡಾಂಡ ದೇಹದ ನಿವಾಸಿಯಾದ.
ಪುರುಷಸೂಕ್ತದ ಪ್ರತಿಪಾದ್ಯ ನಾರಾಯಣ,
ಕಾಣದಿದ್ರೂ ಎಲ್ಲೆಲ್ಲೂ ಅವನದೇ ಅನಾವರಣ,
ಅದವನ ಸೃಷ್ಟಿಯ ಮೇಲಿನ ಕರುಣ,
ದೋಷವೇ ಇರದ ಗುಣಗಳ ಗಡಣ.
ಕಾಣದ ಸೂಕ್ಷ್ಮರೂಪದಿಂದಿತ್ತು ಜಗತ್ತು,
ಕಾಣುವ ಸೃಷ್ಟಿಯ ಬಯಕೆಯ ಗಮ್ಮತ್ತು,
ಮಾಡಿದ ಬ್ರಹ್ಮ ಪ್ರಾಣತತ್ವದ ಆವಿಷ್ಕಾರ,
ಇಟ್ಟ ಅಭಿಮಾನಿದೇವತೆಗಳ ಅವತಾರ.
ಆಯಿತು ಪಂಚಭೂತಗಳ ನಿರ್ಮಾಣ,
ನಾರಾಯಣನ ಸೃಷ್ಟಿಯೇ ಕಾರಣ,
ಪಿಂಡಾಂಡದೊಳಗಿರುವ ಮನಸು,
ಮೊಮ್ಮಗನಧೀನ-ರುದ್ರನೆಂಬ ಕೂಸು.
ಹನ್ನೆರಡು ಆದಿತ್ಯರ ಸೃಷ್ಟಿ,
ಹನ್ನೊಂದು ರುದ್ರರ ಸೃಷ್ಟಿ,
ಎಂಟು ವಸುಗಳ ಸೃಷ್ಟಿ,
ವೇದ ಛಂದಸ್ಸುಗಳ ಸೃಷ್ಟಿ.
ಸಂಸ್ಕೃತ ಎಲ್ಲಾ ಭಾಷೆಗಳಿಗೂ ಮೂಲ,
ಎಲ್ಲಾ ಭಾಷೆಗಳ ನಿರ್ಮಾಣ ಮಾಲ,
ನಾಮ ರೂಪದ ಮೂಲ ಅವನೇ ನಾರಾಯಣ,
ಸಮಸ್ತ ಸೃಷ್ಟಿಯ ಋಗ್ವೇದ ಖಂಡದ ಹೂರಣ.
______________________
ಸದಾ ನಿತ್ಯನಾದವ ನಾರಾಯಣ,
ಎಲ್ಲವೂ ಅವನಿಂದಲೇ ಅನಾವರಣ,
ಎಲ್ಲವೂ ಭಗವಂತನಿಂದಲೇ ಬಂದದ್ದು,
ಇಲ್ಲದೇ ಇದ್ದದ್ದು ಬಂದಾಗ-ಅದೇ ಹುಟ್ಟಿದ್ದು.
ಎಲ್ಲರ ಎಲ್ಲದರ ಅಂತರ್ಯಾಮಿ,
ಎಲ್ಲರಿಗೂ ಎಲ್ಲದಕ್ಕೂ ಅವನೇ ಸ್ವಾಮಿ,
ಅವನು ಎಲ್ಲ(ದ)ರಲ್ಲೂ ವ್ಯಾಪ್ತ,
ಅರಿತವರಿಗೆ ಮಾತ್ರ ಅವ ಆಪ್ತ.
ಬ್ರಹ್ಮನಲ್ಲಿ ಶಿವನಲ್ಲಿ ಎಲ್ಲರಲ್ಲೂ ಅವನೇ,
ಅವರವರಲ್ಲಿದ್ದು ಅವರತನ ಕೊಟ್ಟವ ತಾನೇ,
ಇಂದ್ರನಲ್ಲೂ ಅವನೇ ನಾರಾಯಣ,
ಸರ್ವತ್ರವ್ಯಾಪ್ತನಿದ್ದು ಅಲ್ಲಲ್ಲೇ ಅನಾವರಣ.
ಯಾವ ದೇವತೆಯೂ ಸ್ವತಂತ್ರನಲ್ಲ,
ಎಲ್ಲರೊಳಗಣ ಅಂತಶ್ಯಕ್ತಿ ಲಕುಮೀನಲ್ಲ,
ಪ್ರತಿಯೊಂದೂ ಕರ್ಮಗತಿಯ ಕೊಡುಗೆ,
ಅದರಂತೇ ದೈವ ಬಡಿಸುವ ಅಡುಗೆ.
ಎಲ್ಲಾ ಶಬ್ದಗಳೂ ಹೆಸರುಗಳೂ ಅವನ ನಾಮ,
ಅದನ್ನೇ ಹೇಳುತ್ತದೆ ವಿಷ್ಣುಸಹಸ್ರ ನಾಮ,
ಪ್ರಕೃತಿಯ ಪ್ರತಿಯೊಂದೂ ನಾದ,
ಭಗವಂತನನ್ನೇ ಶಬ್ದಿಸುವ ವೇದ,
ಒಳಗೆ ಹೊರಗೆ ಮೇಲೆ ಕೆಳಗೆ ಎಲ್ಲ ದಿಕ್ಕು,
ಎಲ್ಲೆಲ್ಲೂ ಅವನೇ ಇರುವ ಹಾಸುಹೊಕ್ಕು.
ನಿಷ್ಕಳಂಕ ನಿರಂಜನ ನಿರ್ವಿಕಲ್ಪ ನಿರಾಖ್ಯಾತ,
ಪ್ರಾಕೃತದ ಲೇಪವೇ ಇರದ ಅಪ್ರಾಕೃತನಾತ,
ಸೃಷ್ಟಿ ಸ್ಥಿತಿ ಸಂಹಾರಗಳ ಆಟದಂತೆ ನಡೆಸುವವ,
ಪ್ರತಿಯೊಂದರ ಅಂತಶ್ಯಕ್ತಿ ಅವನೇ ಎಂಬ ಭಾವ,
ಸರ್ವಶಕ್ತ ಸರ್ವವ್ಯಾಪ್ತ ಸರ್ವಾಂತರ್ಯಾಮಿ,
ತನ್ನಾಮ ತದ್ರೂಪನಾಗಿ ನಡೆಸುವ ನಾರಾಯಣ ಸ್ವಾಮಿ,
ಇದೆಲ್ಲಾ ಯಜುರ್ವೇದ ಖಂಡದ ತಾತ್ಪರ್,
ಋಷಿ ಮುನಿಗಳು ಕಂಡುಕೊಂಡ ಆಂತರ್ಯ.
________________________
ಉಪನಿಷತ್ತಿನ ಸಾಮವೇದದ ಸಾರ,
ನಾರಾಯಣಷ್ಟಾಕ್ಷರ ಮಂತ್ರದ ದ್ವಾರ,
ಮೊದಲು ಪಠಿಸುವುದು ಓಂಕಾರ,
ಕೊನೆಗೆ ನಾರಾಯಣಗೆ ನಮಸ್ಕಾರ.
ನಾರಾಯಣಷ್ಟಾಕ್ಷರ ಮೂಲ ಮಂತ್ರ,
ನಾಡಿಲೆಕ್ಕಕ್ಕನುಸಾರ ಪಠಿಸುವ ತಂತ್ರ,
ತಾರಕವದು ಗಾಯತ್ರಿಯ ಮೂರುಪಟ್ಟು,
ಹೆಚ್ಚಾದರೆ ತಡೆಯದ ದೇಹಕ್ಕದು ಪೆಟ್ಟು.
ಅಕ್ಷರಗಳು ಅವು ಅನಂತ,
ದೇವನಾಮಗಳೂ ಅನಂತ,
ನಮಗಷ್ಟೇ ಇಂತಿಷ್ಟೆಂದು ಸೀಮಿತ,
ಸಂಖ್ಯೆ ಶಬ್ದಗಳ ಮೀರಿದವನಾತ.
ಗೊತ್ತಿರುವ ಯಾವುದೂ ಅವನಲ್ಲ,
ಗೊತ್ತಾಗದದ್ದನ್ನು ನಂಬುವುದಾಗಲ್ಲ,
ಗೊತ್ತಿಲ್ಲದ ಎತ್ತರದ ದೇವರು ತಿಳಿಯಲ್ಲ,
ಗೊತ್ತಾಗುವಷ್ಟೇ ಉತ್ತರ ತಿಳಿಯಬಹುದಲ್ಲ,
ಅವನು ಆಳ ಅಗಲ ಸಿಗದ ಮಹತ್ಸಾಗರ,
ನಮ್ನಮ್ಮ ಯೋಗ್ಯತೆಯೆಷ್ಟೇ ಅವ ಗೋಚರ.
ಎಚ್ಚರ ಕನಸು ನಿದ್ರೆ,
ಮೂರು ಸ್ಥಿತಿಗಳ ಜಾತ್ರೆ,
ಎಚ್ಚರದಲ್ಲಿ ಅಜ್ಞಾನ,
ಕನಸಿನಾಟವೇ ಮಾನ,
ನಿದ್ರೆಯಲ್ಲಿ ಗೊತ್ತಿಲ್ಲವೆಂಬ ಜ್ಞಾನ,
ಎಚ್ಚರದಲ್ಲೂ ಬರಬೇಕಾದ ಧ್ಯಾನ.
ಓಂಕಾರದ ಅಷ್ಟಾಕ್ಷರದ ಚಿಂತನೆ,
ಮೂರು ವ್ಯಾಹೃತಿಗಳ ಪ್ರತಿಪಾದನೆ,
ವಿಶ್ವ ತೈಜಸ ಪ್ರಾಜ್ಞರ ಆಡೋ ಆಟ,
ಮೂರರಿಂದ ಎಂಟರ ದರ್ಶನದ ನೋಟ.
ಅಕ್ಷರ ಅಕ್ಷರದಿಂದಲೂ ಅವನು ಅಕ್ಷರ,
ನಾರಾಯಣ ಅದ್ವಿತೀಯ ಅಜರಾಮರ,
ದೋಷ ಪರಿಹಾರ ಮಾಡಿ ಕೊಡುವ ಆನಂದ,
ತಿಳಿದು ಪಠಿಸುವವರಿಗೆ ಅಷ್ಟಾಕ್ಷರಮಂತ್ರವೇ ವೇದ,
ಇದು ಸಾಮವೇದದ ಖಂಡದ ಸಾರ,
ತಿಳಿದು ಧ್ಯಾನಿಸಿದವರಿಗೆ ಅಮೃತತ್ವದ ದ್ವಾರ.
________________________
ಉಪನಿಷತ್ತಿನ ಅಥರ್ವವೇದದ ಸಾರ,
ಓಂಕಾರದ ಉಪಾಸನೆಯ ದ್ವಾರ,
ಪ್ರತಿ ಅಕ್ಷರವೂ ಭಗವಂತನ ನಾಮ,
ಆನಂದಸ್ವರೂಪನ ತಿಳಿವುದೇ ನೇಮ.
ಓಂಕಾರ ಪ್ರಣವ ಸ್ವರೂಪ,
ಸರಿಸಾಟಿಯಿರದ ಭೂಪ,
ಅವನಲ್ಲಿ ದೋಷ ತ್ರಿಗುಣಗಳಿಲ್ಲ,
ಗುಣಗಳ ಗಡಣ ಲಕುಮೀನಲ್ಲ,
ಇದು ಮೂರು ವೇದಗಳ ಸಾರ,
ತಿಳಿದವರಿಗೆ ಲಭ್ಯ ಭವಸಾಗರದ ತೀರ.
ಭಗವಂತನಲ್ಲಿ ಮನ ನೆಲೆಗೊಳಿಸಿದವ ಯೋಗಿ,
ಮನನಪೂರ್ವಕವಾಗಿ ಜಪಿಸಿದವನು ನಿರೋಗಿ,
ಲಭ್ಯವವನಿಗೆ ವೈಕುಂಠ ಲೋಕ,
ಜ್ಞಾನಾನಂದಮಯನ ಅರಿವಿನ ಪಾಕ.
ದೇವಕೀ ಎಂದರೆ ವೇದ,
ಪುತ್ರ ಭಗವಂತನ ನಾದ,
ಮಧುಸೂದನ ಎಂದರೆ ಏನು?
ಸಾತ್ವಿಕರಿಗೆ ಆನಂದದ ಜೇನು,
ಪುಂಡರೀಕಾಕ್ಷ ಎಂದರೆ ಕೆಂಪಾದ ಕಣ್ಣಿನವನು,
ವಿಷ್ಣುವಾಗಿ ವ್ಯಾಪ್ತನಾಗಿ ವಿಷವ ಕಳೆವವನು.
ಸರ್ವಭೂತದ ಒಳಗಿರುವವನು,
ತನ್ನಾಮ ತದ್ರೂಪನಾಗಿ ತೋರುವವನು,
ಅನಂತರೂಪನಾದರೂ ಅವ ಏಕರೂಪ,
ನಾರಾಯಣನೆಂದಿಗೂ ಸರಿಸಮನಿರದ ಭೂಪ,
ಎಲ್ಲದಕ್ಕೂ ಭಗವಂತನೇ ಕಾರಣ,
ಕಾರಣವಿರದ ಪರಬ್ರಹ್ಮ ನಾರಾಯಣ.
ಹಗಲು ಪಠಿಸಿದರೆ ರಾತ್ರಿಯ ಪಾಪನಾಶ,
ಸಂಜೆ ಪಠಿಸಿದರೆ ಹಗಲಿನ ಪಾಪನಾಶ,
ಮಧ್ಯಾನ್ಹ ಪಠಿಸಿದರೆ ಮಹಾಪಾತಕಗಳ ನಾಶ,
ಸಮಸ್ತ ವೇದಗಳ ಸಾರ-ಭಗವಂತನೊಡನೆ ವಾಸ.
[Composed by Shri Govind Magal]