ಸಾರ ಸಂಗಮ by “ತ್ರಿವೇಣಿ ತನಯ”
ಶಿಸ್ತು -ಅಶಿಸ್ತು
ನಿತ್ಯ ನೋಡುವೆವು ಸೂರ್ಯೋದಯ ಸೂರ್ಯಾಸ್ತ,
ಶಿಸ್ತಿನ ಪ್ರಕೃತಿಯೊಂದಿಗಿದ್ದರೂ ಬದುಕು ಅಸ್ತವ್ಯಸ್ತ,
ಬೃಹತ್ ಪ್ರಕೃತಿಯ ಓಟದಲ್ಲಿ ನೀನೊಂದು ಕಣ,
ಅರಿತು ತೀರಿಸಲೆತ್ನಿಸು ನಿನ್ನ ಪ್ರತಿಯೊಂದು ಋಣ.
ನಮಾಮಿ -ಅಂತರ್ಯಾಮಿ
ನಿತ್ಯ ಜೀವನದಲಿ ಪ್ರತಿಯೊಬ್ಬರನೂ ಗೌರವಿಸು,
ಒಳಗಿದ್ದು ಚೈತನ್ಯವೀವ ಅಂತರ್ಯಾಮಿಗೆ ನಮಿಸು,
ಸಾಲಿಗ್ರಾಮ ಮೂರ್ತಿಗಳಿಗಾಗದಿರಲಿ ಪೂಜೆ ಸೀಮಿತ,
ಎಲ್ಲರಲ್ಲಿರುವ ಶಕ್ತಿಗೆ ಬಾಗಿ ಁನಮಿಸುವುದೇ ಸಮ್ಮತ.
ಹಬ್ಬಗಳ ಸಾಲು -ತಿಳಿ ಒಳತಿರುಳು
ನಮ್ಮಲ್ಲೇನು ಕೊರತೆ ಹಬ್ಬಗಳ ಸಾಲು ಸಾಲು,
ಸಿಹಿ ತಿಂದು ಹೊಸಬಟ್ಟೆ ತೊಟ್ಟು ಮೆರೆವ ಗೀಳು,
ಯಾಂತ್ರಿಕ ಓಟದಲಿ ಕೊಚ್ಚಿಹೋಗದಿರಲಿ ಬಾಳು,
ಅರ್ಪಿಸವಗೆ ನಿತ್ಯ ಆಯಾ ದಿನಕರ್ಮದ ಹೋಳು.
ಚಿಂತಕರ ಚಾವಡಿ
ಮರ್ಕಟ ಮನವೇ ಆಗದಿರು ಹುಚ್ಚುಖೋಡಿ,
ಬಳಸಿಕೊ ಸಿಕ್ಕಾಗ ಚಿಂತಕರ ಚಾವಡಿ,
ಬಲು ಅಪರೂಪ ಸಜ್ಜನರೊಂದಿಗಿನ ವೇಳೆ,
ಖಚಿತವಿಲ್ಲ ಮತ್ತೆ ಸಿಗದಿರಬಹುದು ನಾಳೆ.
ಚಲಪ್ರತಿಮೆಗಳ ಪೂಜೆ
ನಡೆಯಲಿ ಸಾಂಪ್ರದಾಯಿಕ ಪೂಜೆ ಪುನಸ್ಕಾರ,
ಚಲಪ್ರತಿಮೆಗಳಿಗೆ ಆಗದಿರಲಿ ಅಪಚಾರ,
ಬಂದವರಿಗೆ ಉಪಚರಿಸಿ ಉಣಬಡಿಸು,
ಅಂತರ್ಯಾಮಿಗೆ ನೈವೇದ್ಯ ಎಂದು ನಮಿಸು.
(Contributed by Shri Govind Magal)
No comments:
Post a Comment
ಗೋ-ಕುಲ Go-Kula