Tuesday, 3 May 2016

Sāra Saṅgama 25

ಸಾರ ಸಂಗಮ  by “ತ್ರಿವೇಣಿ ತನಯ

ವ್ಯವಹಾರ -ಸದಾಚಾರ

ನೀ ಹುಟ್ಟಿಬಂದಾಗ ಹೊತ್ತು ತಂದದ್ದೇನು?
ಸತ್ತಾಗ ನೀ ಹೊತ್ತು ಕೊಂಡೊಯ್ಯುವುದೇನು?
ನಿನ್ನ ದೇಹವೇ ಹೆತ್ತವರಿತ್ತಿರುವ ಭಿಕ್ಷೆ,
ಮರೆಯದಿರು ಬಾಳೊಂದು ಅಗ್ನಿಪರೀಕ್ಷೆ.

ನಗು ನಗುತ ಪ್ರೀತಿಹಂಚುತ ಬಾಳು,
ಆದೀತು ಬಾಳಾಗ ಸಿಹಿಹಣ್ಣಿನ ಹೋಳು,
ಬಂದಿರುವುದೇ ಕಳೆದುಕೊಳ್ಳಲು ಕೇಳು,
ಕಳೆದುಕೊಳ್ಳದ ಹೊರತು ಏರೋದ್ಹೇಗೆ ಹೇಳು.

ಮಜಲು -ಗೋಜಲು

ಅರ್ಥವಾಗದ ಜೀವನದ ಮಜಲುಗಳು,
ಅರ್ಥೈಸಿಕೊಳ್ಳಬೇಕಾದ ಗೋಜಲುಗಳು,
ಬಂದಂತೆ ತೆರೆದಂತೆ ಒಪ್ಪಿ ಅನುಭವಿಸು,
ಎಲ್ಲವೂ ಅವನದೇ ಪೂಜೆ ಎಂದರ್ಪಿಸು.

ಪಾರದರ್ಶಕತೆ -"ಪರ"ದರ್ಶಕತೆ

ಮುಖವಾಡ ಕಿತ್ತುಬಿಡು,
ಒಳದನಿಗೆ ಕಿವಿ ಕೊಡು,
ಒಳಹೊರಗುಗಳ ಒಂದು ಮಾಡು,
ಮುಚ್ಚುತಿರು ಅಸಹ್ಯ ಕಂದರ,
ಕಟ್ಟಿಕೋ ಸ್ನೇಹದ ಹಂದರ,
ಪಾರದರ್ಶಕ ಬದುಕೆಷ್ಟು ಸುಂದರ.

(Contributed by Shri Govind Magal)

No comments:

Post a Comment

ಗೋ-ಕುಲ Go-Kula