Saturday, 29 February 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 16: 01 - 06

. ಸೃಗಾಲವಧಃ
॥ ಓಂ ॥
ಕಾಲೇ ತ್ವೇತಸ್ಮಿನ್ ಭೂಯ ಏವಾಖಿಲೈಶ್ಚ ನೃಪೈರ್ಯ್ಯುಕ್ತೋ ಮಾಗಧೋ ಯೋದ್ಧುಕಾಮಃ ।
ಪ್ರಾಯಾದ್ ಯದೂಂಸ್ತತ್ರ ನಿತ್ಯಾವ್ಯಯಾತಿಬಲೈಶ್ವರ್ಯ್ಯೋsಪೀಚ್ಛಯಾsಗಾತ್ ಸ ಕೃಷ್ಣಃ ॥೧೬.೦೧॥
ರಾಜಕುಮಾರರು ದ್ರೋಣರ ಬಳಿ ಅಸ್ತ್ರಶಿಕ್ಷಣ ಪಡೆಯುತ್ತಿದ್ದ ಕಾಲ,
ಎಲ್ಲಾ ರಾಜರೊಂದಿಗೆ ಯಾದವರ ಮೇಲೆ ಜರಾಸಂಧನ ಯುದ್ಧಜಾಲ.
ಮಧುರೆಯಲ್ಲೂ ಎಲ್ಲೆಲ್ಲೂ ಯಾವಾಗಲೂ ಇರುವ ಭಗವಂತ,
ನಾಶವಿರದ ಸರ್ವಶಕ್ತ ಸ್ವಯಿಚ್ಛೆಯಿಂದಲೇ ತಾನು ಓಟಕಿತ್ತ.

ಸನ್ದರ್ಶಯನ್ ಬಲಿನಾಮಲ್ಪಸೇನಾದ್ಯುಪಸ್ಕರಾಣಾಂ ಬಹಳೋಪಸ್ಕರೈಶ್ಚ ।
ಪ್ರಾಪ್ತೇ ವಿರೋಧೇ ಬಲಿಭಿರ್ನ್ನಿತಿಮಗ್ರ್ಯಾಂ ಯಯೌ ಸರಾಮೋ ದಕ್ಷಿಣಾಶಾಂ ರಮೇಶಃ ॥೧೬. ೦೨ ॥
ಬಲಿಷ್ಠಸೈನ್ಯ ಯುದ್ಧಸಾಧನಗಳಿರುವವರಿಂದ ಆದಾಗ ದಾಳಿ,
ಯುದ್ಧತಂತ್ರ ನೀತಿ ತೋರುತ್ತಾನೆ ಕೃಷ್ಣ ತಾನು ದಕ್ಷಿಣದೆಡೆ ತೆರಳಿ.

ಸೋsನನ್ತವೀರ್ಯ್ಯಃ  ಪರಮೋsಭಯೋsಪಿ ನೀತ್ಯೈ ಗಚ್ಛನ್ ಜಾಮದಗ್ನ್ಯಂ ದದರ್ಶ ।
ಕ್ರೀಡಾರ್ತ್ಥಮೇಕೋsಪಿ ತತೋsತಿದುರ್ಗ್ಗಂ ಶ್ರುತ್ವಾ ಗೋಮನ್ತಂ ತತ್ರ ಯಯೌ ಸಹಾಗ್ರಜಃ॥೧೬.೦೩ ॥
ಎಣೆಯಿರದ ವೀರ್ಯ ಎಂದೂ ಬತ್ತದ ಧೈರ್ಯದ ಭಗವಂತ,
ಪಲಾಯನಗೈಯ್ಯುತ್ತಾ ತೋರಿದ ಪರಶುರಾಮನ ಭೇಟಿಯಾಟ.
ಭಗವಂತನ ಅವತಾರಗಳಲ್ಲಿ ಎಂದೂ ಯಾವತ್ತೂ ಭೇದವಿಲ್ಲ,
ಅಣ್ಣನೊಂದಿಗೆ ಗೋಮಂತಕ ಪರ್ವತಕ್ಕೆ ಹೊರಟ ಹಿರಿಗೊಲ್ಲ.

ತದಾ ದುಗ್ಧಾಬ್ಧೌ ಸಂಸೃಸ್ಥೈಃ ಸುರಾದ್ಯೈಃ ಪೂಜಾಂ ಪ್ರಾಪ್ತುಂ ಸ್ಥಾನಮೇಷಾಂ ಚ ಯೋಗ್ಯಮ್ ।
ಮುಕ್ತಸ್ಥಾನಾದಾಪ ನಾರಾಯಣೋsಜೋ ಬಲಿಶ್ಚಾsಗಾತ್ ತತ್ರ ಸನ್ದೃಷ್ಟುಮೀಶಮ್ ॥ ೦೪ ॥
ಆಗ ಕ್ಷೀರಸಾಗರದಲ್ಲಿ ಅಮುಕ್ತ ದೇವಾದಿಗಳಿಂದ,
ಸೇವೆಗೊಳ್ಳಲು ಅಮುಕ್ತಸ್ಥಾನಕ್ಕೆ ಹರಿ ತಾ ಬಂದ,
ಬಲಿಯೂ ಆಗ ನಾರಾಯಣನ ನೋಡಲಲ್ಲಿಗೆ ಬಂದ.

ತತ್ರಾಸುರಾವೇಶಮಮುಷ್ಯ ವಿಷ್ಣುಃ ಸನ್ದರ್ಶಯನ್ ಸುಪ್ತಿಹೀನೋsಪಿ ನಿತ್ಯಮ್ ।
ಸಂಸುಪ್ತವಚ್ಛಿಶ್ಯ ಉದಾರಕರ್ಮ್ಮಾ ಸಙ್ಯಾಯೈ ದೇವಾನಾಂ ಮುಖಮೀಕ್ಷ್ಯಾಪ್ರಮೇಯಃ ॥ ೦೫ ॥
ಉತ್ಕೃಷ್ಟ ಕರ್ಮವುಳ್ಳ ಯಾರಿಂದ ಪೂರ್ಣ ತಿಳಿಯಲಾಗದ ಭಗವಂತ,
ಬಲಿಯ ಅಸುರಾವೇಶವನ್ನು ಈ ಜಗತ್ತಿಗೆಲ್ಲಾ ತೋರಿಸುವ ನಿಮಿತ್ತ,
ದೇವತೆಗಳಿಗೆಲ್ಲಾ ನಿದ್ರೆ ಮಾಡುವಂತಿರಲು ನೀಡಿ ಸೂಚನೆ,
ತಾನೂ ತೋರಿದ ನಿದ್ರಿಸುವವನಂತೆ ಮಲಗಿದ ರೂಪವನ್ನೆ.

ದೇವಾಶ್ಚ ತದ್ಭಾವವಿದೋsಖಿಲಾಶ್ಚ ನಿಮೀಲಿತಾಕ್ಷಾಃ ಶಯನೇಷು ಶಿಶ್ಯಿರೇ ।
ತದಾ ಬಲಿಸ್ತಸ್ಯ ವಿಷ್ಣೋಃ ಕೀರೀಟಮಾದಾಯಗಾಜ್ಜಹಸುಃ ಸರ್ವೇದೇವಾಃ ॥ ೧೬.೦೬ ॥
ಭಗವಂತನಿಚ್ಛೆಯಂತೆ ಎಲ್ಲಾ ದೇವತೆಗಳಿಂದ ಮಲಗಿದ ಆಟ,
ಬಲಿ ಅಲ್ಲಿಗೆ ಬಂದು ವಿಷ್ಣುಕಿರೀಟ ಎತ್ತಿಕೊಂಡು ಓಡಿದ ಓಟ.
ಸಾಕ್ಷಿಯಾದ ಎಲ್ಲಾ ದೇವತೆಗಳು ಬೀರಿದರು ನಗುವಿನನೋಟ.
[Contributed by Shri Govind Magal]

Thursday, 13 February 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 15: 61 - 66


ಶ್ರುತ್ವಾ ರಾವಂ ಸಾರಮೇಯಸ್ಯ ದೂರಾಚ್ಛರೈರ್ಮ್ಮುಖಂ ಶಬ್ದವೇಧೀ ಪುಪೂರೇ ।

ಸ ಏಕಲವ್ಯೋ ವ್ರಣಮಸ್ಯ ನಾಕರೋಚ್ಛ್ವಾಪೂರಿತಾಸ್ಯಃ ಪಾಣ್ಡವಾನಭ್ಯಯಾತ್ ಸಃ ॥೧೫.೬೧॥
ಕಾಡಲ್ಲಿ ನಾಯಿಬೊಗಳುವಿಕೆಯ ದೂರದಿಂದಲೇ ಕೇಳಿದ ಏಕಲವ್ಯನೆಂಬ ಬೇಡ,
ಶಬ್ದವೇಧೀ ವಿದ್ಯೆಯಿಂದ ನಾಯಿಬಾಯ ಮುಚ್ಚಿದ ತೊಡಿಸಿ ಬಾಣದ ಮುಖವಾಡ.
ಮುಖಕ್ಕೆಲ್ಲಾ ಬಾಣ ಮೆತ್ತಿಕೊಂಡಿದ್ದರೂ ನಾಯಿಗೆ ಆಗಲಿಲ್ಲ ವ್ರಣ,
ಬಾಣಹೊತ್ತ ಮುಖದಿಂದ ಆ ನಾಯಿ ತಲುಪಿತು ಪಾಂಡವರಿದ್ದ ತಾಣ.

ದೃಷ್ಟ್ವಾ ಚಿತ್ರಂ ಕುರವಃ ಪಾಣ್ಡವಾಶ್ಚ ದ್ರಷ್ಟುಂ ಕರ್ತ್ತಾರಂ ಮಾರ್ಗ್ಗಯಾಮಾಸುರತ್ರ ।
ದ್ರೋಣಾಕೃತಿಂ ಮಾರ್ತ್ತಿಕೀಂ ಪೂಜಯನ್ತಂ ದದೃಶುಶ್ಚೈನಂ ಧನುರೇವಾಭ್ಯಸನ್ತಮ್ ॥೧೫.೬೨॥
ಇದನ್ನು ಕಂಡ ಕುರುಪಾಂಡವರಿಗೆ ಅಚ್ಚರಿಯ ನೋಟ,
ಇದನೆಸಗಿದವನ ನೋಡಲೆಂದು ಅವರೆಲ್ಲರ ಹುಡುಕಾಟ.
ಕಂಡರು ಮಣ್ಣಿನ ದ್ರೋಣಾಕೃತಿಯ ಪೂಜೆ ಮಾಡುವ ದೃಶ್ಯ,
ಬಿಲ್ಗಾರಿಕೆಯ ಕಲಿಯುತಿದ್ದ ಏಕಲವ್ಯನೆಂಬ ಮಾನಸ ಶಿಷ್ಯ.

ಪೈಶಾಚಮೇವೈಷ ಪಿಶಾಚಕೇಭ್ಯಃ ಪೂರ್ವಂ ವಿವೇದಾಸ್ತ್ರವೃನ್ದಂ ನಿಷಾದಃ ।
ದಿವ್ಯಾನ್ಯಸ್ತ್ರಾಣ್ಯಾಪ್ತುಮೇತಾಂ ಚ ಶಿಕ್ಷಾಂ ದ್ರೋಣಂ ಸದಾ ಪೂಜಯತಿ ಸ್ಮ ಭಕ್ತ್ಯಾ ॥೧೫.೬೩॥
ಈ ಬೇಡ ಏಕಲವ್ಯ ಪೈಶಾಚಾಸ್ತ್ರಗಳ ಮೊದಲೇ ತಿಳಿದವ,
ಈಗ ದಿವ್ಯಾಸ್ತ್ರವ ಹೊಂದಬೇಕೆಂದು ಅಭ್ಯಾಸ ಮಾಡುತ್ತಿದ್ದವ.
ಅದಕೆಂದೇ ಗುರುದ್ರೋಣಾಕೃತಿಯ ಭಕ್ತಿಯಿಂದ ಪೂಜಿಸುತ್ತಿದ್ದವ.

ದೃಷ್ಟ್ವಾ ವಿಶೇಷಂ ತಮಮುಷ್ಯ ಪಾರ್ತ್ಥೋ ದ್ರೋಣಾಯೋಚೇ ತ್ವದ್ವರೋ ಮೇ ಮೃಷಾssಸೀತ್ ।
ಇತ್ಯುಕ್ತ ಏನಂ ತ್ವಭಿಗಮ್ಯ ದಕ್ಷಿಣಾಂ ವಿಪ್ರೋ ಯಯಾಚೇ ದಕ್ಷಿಣಾಙ್ಗುಷ್ಠಮೇವ ॥೧೫.೬೪॥
ಇದನ್ನೆಲ್ಲಾ ಕಾಡಲ್ಲಿ ಕಂಡ ಮಧ್ಯಮಪಾಂಡವ ಅರ್ಜುನ,
ಹೀಗೆಂದ -ನಿಮ್ಮ ವರ ಸುಳ್ಳಾಯಿತಲ್ಲವೇ ಗುರು ದ್ರೋಣ.
ಇದನ್ನೆಲ್ಲಾ ಕೇಳಿಸಿಕೊಂಡ ನಂತರ ಬ್ರಾಹ್ಮಣ ದ್ರೋಣಾಚಾರ್ಯ,
ಕೈಗೊಂಡ ಏಕಲವ್ಯನ ಹೆಬ್ಬೆರಳ ದಕ್ಷಿಣೆಯಾಗಿ ಪಡೆವ ಕಾರ್ಯ.

ತಸ್ಯ ಪ್ರಸಾದೋಪಚಿತೋರುಶಿಕ್ಷೋ ನಿಷಾದೋsದಾದ್ ದಕ್ಷಿಣಾಙ್ಗುಷ್ಠಮಸ್ಮೈ ।
ತತಃ ಪರಂ ನಾಸ್ಯ ಬಭೂವ ಶಿಕ್ಷಾ ಸನ್ಮುಷ್ಟಿಹೀನಸ್ಯ ಸಮಾsರ್ಜ್ಜುನೇನ ॥೧೫.೬೫॥
ದ್ರೋಣರನುಗ್ರಹದ ಉತ್ತಮ ಶಿಕ್ಷೆಯುಳ್ಳ ಏಕಲವ್ಯ ತನ್ನ ಬಲಹೆಬ್ಬೆರಳ ದಕ್ಷಿಣೆಯಾಗಿ ಕೊಟ್ಟ,
ದೂರವೇ ಆಯಿತು ಮುಷ್ಠಿಬಲವಿಲ್ಲದ ಏಕಲವ್ಯಗೆ ಅರ್ಜುನಗೆ ಸಮವಾಗುವ ಬಿಲ್ವಿದ್ಯಾ ಪಟ್ಟ.

ಪುನಃ ಕೃಪಾಲೂ ರೈವತಪರ್ವತೇ ತಂ ದ್ರೋಣಃ ಪ್ರಾಪ್ಯಾsದಾದಸ್ತ್ರವರಾಣಿ ತಸ್ಮೈ ।
ಏಕಾನ್ತ ಏವಾಸ್ಯ ಭಕ್ತ್ಯಾ ಸುತುಷ್ಟೋ ಧನ್ವಿಶ್ರೇಷ್ಠಂ ಕೃತವಾನರ್ಜ್ಜುನಂ ಚ ॥೧೫.೬೬॥
ಏಕಲವ್ಯನ ಭಕ್ತಿಗೆ ಮೆಚ್ಚಿದ ಕೃಪಾಳುವಾದ ಆಚಾರ್ಯ ದ್ರೋಣ,
ರೈವತ್ಪರ್ವತದ ಏಕಾಂತದಲಿ ಮಾಡಿದರು ಶ್ರೇಷ್ಠ ಅಸ್ತ್ರ ಪ್ರದಾನ,
ಅಂತೆಯೇ ಅರ್ಜುನನ ಶ್ರೇಷ್ಠಧನುರ್ಧಾರಿ ಮಾಡಿದ್ದು ಪ್ರಧಾನ.

ಇತಿ ಶ್ರೀಮದಾನನ್ದತೀರ್ತ್ಥಭಗವತ್ಪಾದವಿರಚಿತೇ ಶ್ರೀಮಹಾಭಾರತತಾತ್ಪರ್ಯ್ಯನಿರ್ಣ್ಣಯೇ
ಪಾಣ್ಡವಶಸ್ತ್ರಾಭ್ಯಾಸೋ ನಾಮ ಪಞ್ಚದಶೋsಧ್ಯಾಯಃ ॥
ಹೀಗೆ ಶ್ರೀಮದಾನಂದತೀರ್ಥಭಗವತ್ಪಾದರಿಂದ ರಚಿತವಾದ,
ಶ್ರೀಮನ್ಮಹಾಭಾರತತಾತ್ಪರ್ಯನಿರ್ಣಯದ ಈ ಅನುವಾದ,
ಪಾಂಡವಶಸ್ತ್ರಾಭ್ಯಾಸವೆಂಬ ಹದಿನೈದನೇ ಅಧ್ಯಾಯ,


ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 15: 56 60

ಇತ್ಯುಕ್ತಮಾತ್ರವಚನೇ ಸ ತು ಕೀಟಕೋsಸ್ಯ ರಾಮಸ್ಯ ದೃಷ್ಟಿವಿಷಯತ್ವತ ಏವ ರೂಪಮ್ ।
ಸಮ್ಪ್ರಾಪ್ಯ ನೈಜಮತಿಪೂರ್ಣ್ಣಗುಣಸ್ಯ ತಸ್ಯವಿಷ್ಣೋರನುಗ್ರಹತ ಆಪ ವಿಮಾನಗಃ ಸ್ವಃ ॥೧೫.೫೬॥
ಈರೀತಿಯಾಗಿ ಹೇಳುತ್ತಿರುವಂತೆಯೇ ಕರ್ಣ,
ಕೀಟದ ಮೇಲೆ ಬೀಳಲು ರಾಮನದೃಷ್ಟಿಕಿರಣ.
ಕೀಟರೂಪದ ಹೇತಿಗೆ ತನ್ನ ಮೂಲರೂಪ ಬಂತು,
ವಿಷ್ಣುವಿನನುಗ್ರಹದಿಂದ ಸ್ವರ್ಗಲೋಕಕ್ಕೆ ತೆರಳಿತು.

ಅಥಾsಹ ರಾಮಸ್ತಮಸತ್ಯವಾಚೋ ನ ತೇ ಸಕಾಶೇ ಮಮ ವಾಸಯೋಗ್ಯತಾ ।
ತಥಾsಪಿ ತೇ ನೈವ ವೃಥಾ ಮದೀಯಾ ಭಕ್ತಿರ್ಭವೇಜ್ಜೇಷ್ಯಸಿ ಸರ್ವಶತ್ರೂನ್ ॥೧೫.೫೭॥
ಸುಳ್ಳು ಹೇಳಿದ ಕರ್ಣಗೆ ಪರಶುರಾಮರಿಂದ ಶಾಪ,
ತನ್ನಲ್ಲಿರಲು ಯೋಗ್ಯತೆಯಿಲ್ಲೆಂದು ತೋರಿದ ಕೋಪ.
ಆದರೂ ನೀನು ನನ್ನಲ್ಲಿಟ್ಟಿರುವ ಭಕ್ತಿ ಆಗದು ವ್ಯರ್ಥ,
ಶತ್ರುಗಳನ್ನೆಲ್ಲ ಗೆಲ್ಲಲಾಗುತ್ತೀಯ ನೀನು ಸಮರ್ಥ.

ಅಸ್ಪರ್ದ್ಧಮಾನಂ ನ ಕಥಞ್ಚನ ತ್ವಾಂ ಜೇತಾ ಕಶ್ಚಿತ್ ಸ್ಪರ್ದ್ಧಮಾನಸ್ತು ಯಾಸಿ ।
ಪರಾಭೂತಿಂ ನಾತ್ರ ವಿಚಾರ್ಯಮಸ್ತಿ ಪ್ರಮಾದೀ ತ್ವಂ ಭವಿತಾ ಚಾಸ್ತ್ರಸಙ್ಘೇ ॥೧೫.೫೮॥
ನೀನು ಸ್ಪರ್ಧಾಭಾವದಿಂದ ಯುದ್ಧ ಮಾಡದಿರೆ ನಿನ್ನನ್ನ ಗೆಲ್ಲುವರಿಲ್ಲ,
ಸ್ಪರ್ಧೆ ಮಾಡಿದರೆ ಸೋಲುವೆ -ಮರೆವವು ಕಲಿತ ಅಸ್ತ್ರಶಸ್ತ್ರಗಳೆಲ್ಲ.
ಮೇಲೆ ಹೇಳಿದ್ದ ವಿಷಯದಲ್ಲಿ ಮತ್ತೆ ನನ್ನ ಮರುಪರಿಶೀಲನೆ ಇಲ್ಲ.

ಯಾಹೀತಿ ತೇನೋಕ್ತ ಉದಾರಕರ್ಮ್ಮಣಾ ಕರ್ಣ್ಣೋ  ಯಯೌ ತಂ ಪ್ರಣಮ್ಯೇಶಿತಾರಮ್ ।
ತಥೈಕಲವ್ಯೋsಪಿ ನಿರಾಕೃತೋsಮುನಾ ದ್ರೋಣೇನ ತಸ್ಯ ಪ್ರತಿಮಾಂ ವನೇsರ್ಚ್ಚಯತ್ ॥೧೫.೫೯॥
ಹೋಗು ಎಂದು ಪರಶುರಾಮದೇವರಿಂದ ಹೇಳಲ್ಪಟ್ಟ ಕರ್ಣ,
ದೇವರಿಗೆ ನಮಸ್ಕರಿಸಿ ಅಲ್ಲಿಂದ ಹೊರಡಲು ಕರ್ಣಗಾಯ್ತು ಕಾರಣ.
ಹಾಗೇ ದ್ರೋಣರಿಂದ ಏಕಲವ್ಯ ನಿರಾಕರಿಸಲ್ಪಟ್ಟಿದ್ದ,
ಅವರ ಪ್ರತಿಮೆಯನ್ನು ಕಾಡಿನಲ್ಲಿಟ್ಟು ಪೂಜಿಸುತ್ತಿದ್ದ.

ತತಃ ಕದಾಚಿದ್ ಧೃತರಾಷ್ಟ್ರಪುತ್ರೈಃ ಪಾಣ್ಡೋಃ ಸುತಾ ಮೃಗಯಾಂ ಸಮ್ಪ್ರಯಾತಾಃ ।
ಅಗ್ರೇ ಗಚ್ಛನ್ ಸಾರಮೇಯೋ ರುರಾವ ಧರ್ಮ್ಮಾತ್ಮಜಸ್ಯಾತ್ರ ವನೇ ಮೃಗಾರ್ತ್ಥೀ ॥೧೫.೬೦॥
ಧೃತರಾಷ್ಟ್ರನ ಮಕ್ಕಳೊಂದಿಗೆ ಪಾಂಡುಕುಮಾರರು ಬೇಟೆಗೆ ಹೊರಟಾಗ,
ಧರ್ಮರಾಜನ ಬೇಟೆನಾಯಿಯು ಮೃಗಾರ್ಥಿಯಾಗಿ ಚೆನ್ನಾಗಿ ಬೊಗಳಿತಾಗ.

Tuesday, 4 February 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 15: 51 - 55

ಅಙ್ಕೇ ನಿಧಾಯ ಸ ಕದಾಚಿದಮುಷ್ಯ ರಾಮಃ ಶಿಶ್ಯೇ ಶಿರೋ ವಿಗತನಿದ್ರ ಉದಾರಬೋಧಃ ।
ಸಂಸುಪ್ತವತ್ ಸುರವರಃ ಸುರಕಾರ್ಯ್ಯಹೇತೋರ್ದ್ದಾತುಂ ಚ ವಾಲಿನಿಧನಸ್ಯ ಫಲಂ ತದಸ್ಯ॥೧೫.೫೧॥
ಜ್ಞಾನಾನಂದಮಯ ದೇಹಿಯಾದ ಪರಶುರಾಮ,
ತೋರಿದ ಕರ್ಣನ ತೊಡೆಮೇಲೆ ಮಲಗಿದ ನೇಮ.
ದೇವತಾಕಾರ್ಯ ಹಾಗೂ ಕರ್ಣಗೆ ಕೊಡಲು ವಾಲಿಯ ಕೊಂದ ಫಲ,
ಪರಶುರಾಮನಾಡಿದ ನಿದ್ರಿಸಿದವನಂತೆ ಪೂರ್ವನಿಶ್ಚಿತ ನಾಟಕದ ಜಾಲ.

ತತ್ರಾsಸ ರಾಕ್ಷಸವರಃ ಸ ತು ಹೇತಿನಾಮಾ ಕಾಲೇ ಮಹೇನ್ದ್ರಮನುಪಾಸ್ಯ ಹಿ ಶಾಪತೋsಸ್ಯ ।
ಕೀಟಸ್ತಮಿನ್ದ್ರ ಉತ ತತ್ರ ಸಮಾವಿವೇಶ ಕರ್ಣ್ಣಸ್ಯ ಶಾಪಮುಪಪಾದಯಿತುಂ ಸುತಾರ್ತ್ಥೇ ॥೧೫.೫೨॥
ಆಗಲೇ ಸೇವಾಕಾಲದಿ ಮಹೇಂದ್ರನ ಸೇವಿಸದಿರುವ ಆಟ,
ಹೇತಿ ಎಂಬ ಅಸುರ ಇಂದ್ರಶಾಪದಿಂದಾಗಿದ್ದ ಒಂದು ಕೀಟ.
ಮಗನಿಗಾಗಿ ಕರ್ಣಗೆ ಶಾಪಕೊಡಿಸಲು ಕೀಟಪ್ರವೇಶ ಒಂದಾಟ.

ಕರ್ಣ್ಣಃ ಸಕೀಟತನುಗೇನ ಕಿರೀಟಿನೈವ ಹ್ಯೂರೋರಧಸ್ತನತ ಓಪರಿಗಾತ್ವಚಶ್ಚ ।
ವಿದ್ಧಃ ಶರೇಣ ಸ ಯಥಾ ರುಧಿರಸ್ಯ ಧಾರಾಂ ಸುಸ್ರಾವ ತಂ ವಿಗತನಿದ್ರ ಇವಾsಹ ರಾಮಃ ॥೧೫.೫೩॥
ಕೀಟಶರೀರದಲ್ಲಿನ ಹೇತಿಯೊಂದಿಗಿದ್ದ ಇಂದ್ರ,
ಕರ್ಣನ ತೊಡೆತಳ ಕೊರೆದು ಮಾಡ್ತಿದ್ದ ರಂಧ್ರ.
ಆಗ ಹರಿಯತೊಡಗಿತು ಧಾರಾಕಾರ ರಕ್ತದ ಕೋಡಿ,
ಎಚ್ಚತ್ತವನಂತೆ ರಾಮ ಕೇಳಿದ ಅದನ್ನೆಲ್ಲ ನೋಡಿ.

ಕಿಂ ತ್ವಂ ನ ಚಾಲಯಸಿ ಮಾಂ ರುಧಿರಪ್ರಸೇಕೇ ಪ್ರಾಪ್ತೇsಪಿ ಪಾವನವಿರೋಧಿನಿ ಕೋsಸಿ ಚೇತಿ ।
ತಂ ಪ್ರಾಹ ಕರ್ಣ್ಣ ಇಹ ನೈವ ಮಯಾ ವಿಧೇಯೋ ನಿದ್ರಾವಿರೋಧ ಇತಿ ಕೀಟ ಉಪೇಕ್ಷಿತೋ ಮೇ॥೧೫.೫೪ ॥
ಅಪವಿತ್ರ ರಕ್ತಸ್ಪರ್ಶವಾದಾಗಲೂ ನೀನೆನ್ನ ಎಬ್ಬಿಸಲಿಲ್ಲ,
ಯಾರ್ಹೇಳು ನೀನು ಎನಗೆ ಅನುಮಾನ ಆಗುತ್ತಿದೆಯಲ್ಲ.
ಕರ್ಣನೆಂದ ಸಹಿಸಿದ್ದೆ ನಿಮ್ಮ ನಿದ್ದೆ ಭಂಗ ಆಗಬಾರದಲ್ಲ.

ಜಾತ್ಯಾsಸ್ಮಿ ಸೂತ ಉತ ತೇ ತನಯೋsಸ್ಮಿ ಸತ್ಯಂ ತೇನಾಸ್ಮಿ ವಿಪ್ರ ಇತಿ ಭಾರ್ಗ್ಗವವಂಶಜೋsಹಮ್ ।
ಅಗ್ರೇsಬ್ರವಂ ಭವತ ಈಶ ನಹಿ ತ್ವದನ್ಯೋ ಮಾತಾ ಪಿತಾ ಗುರುತರೋ ಜಗತೋsಪಿ ಮುಖ್ಯಃ ॥೧೫.೫೫ ॥
ಲೋಕಜಾತಿಯಿಂದ ನಾನು ಒಬ್ಬ ಸೂತ,
ಜಗದ್ಪಿತ ನಿನ್ನ ಮಗನಾಗಿರುವುದೂ ಸತ್ಯ.
ಹಾಗಾಗೇ ಹೇಳಿದೆ ನಾನು ಭೃಗುಕುಲದಿ ಹುಟ್ಟಿದ ಬ್ರಾಹ್ಮಣ,
ನೀನಲ್ಲವೇ ಮಾತಾ ಪಿತಾ ಗುರು ಸಕಲ ಜಗದ ಕಾರಣ. 

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 15:46 - 50

ತದಾ ಕರ್ಣ್ಣೋsಥೈಕಲವ್ಯಶ್ಚ ದಿವ್ಯಾನ್ಯಸ್ತ್ರಾಣ್ಯಾಪ್ತುಂ ದ್ರೋಣಸಮೀಪಮೀಯತುಃ ।
ಸೂತೋ ನಿಷಾದ ಇತಿ ನೈತಯೋರದಾದಸ್ತ್ರಾಣಿ ವಿಪ್ರಃ ಸ ತು ರಾಮಶಿಷ್ಯಃ ॥೧೫.೪೬॥
ಆಗ ಕರ್ಣ ಹಾಗೂ ಏಕಲವ್ಯ ಪಡೆಯಲು ದಿವ್ಯಾಸ್ತ್ರ,
ಸಾರಿಬಂದರಿಬ್ಬರು ದ್ರೋಣಾಚಾರ್ಯರ ಹತ್ತಿರ.
ದ್ರೋಣಾಚಾರ್ಯರು ಪರಶುರಾಮರ ಶಿಷ್ಯರಾಗಿದ್ದ ಕಾರಣ,
ಒಬ್ಬ ಸೂತ ಇನ್ನೊಬ್ಬ ಬೇಡನೆಂದು ಮಾಡಿದರು  ನಿರಾಕರಣ.

ಕರ್ಣ್ಣೋsನವಾಪ್ಯ ನಿಜಮೀಪ್ಸಿತಮುಚ್ಚಮಾನೋ ಯಸ್ಮಾದವಾಪ ಪುರುಷೋತ್ತಮತೋsಸ್ತ್ರವೃನ್ದಮ್ ।
ವಿಪ್ರೋsಪ್ಯಯಂ ತಮಜಮೇಮಿ ಭೃಗೋಃ ಕುಲೋತ್ಥಮಿತ್ಥಂ ವಿಚಿನ್ತ್ಯ ಸ ಯಯೌ ಭೃಗುಪಾಶ್ರಮಾಯಾ ॥೧೫.೪೭॥
ಹೀಗೆ ನಿರಾಕರಿಸಲ್ಪಟ್ಟ ಸ್ವಾಭಿಮಾನಿಯಾದ ಕರ್ಣ,
ಪರಶುರಾಮರಿಂದಲೇ ಅಸ್ತ್ರ ಪಡೆಯಲಿಚ್ಛಿಸಿತವನ ಮನ.
ಯಾವ ಭೃಗುಕುಲೋತ್ಪನ್ನನಿಂದ ಅಸ್ತ್ರ ಪಡೆದಿದ್ದನೋ ದ್ರೋಣ,
ಹರಿಯಿಂದಲೇ ಪಡೆವೆನೆಂದಾರಂಭಿಸಿದ ಆಶ್ರಮದತ್ತ ಯಾನ.

ಸ ಸರ್ವವೇತ್ತುಶ್ಚ ವಿಭೋರ್ಭಯೇನ ವಿಪ್ರೋsಹಮಿತ್ಯವದದಸ್ತ್ರವರಾತಿಲೋಭಾತ್ ।
ಜಾನನ್ನಪಿ ಪ್ರದದಾವಸ್ಯ ರಾಮೋ ದಿವ್ಯಾನ್ಯಸ್ತ್ರಾಣ್ಯಖಿಲಾನ್ಯವ್ಯಯಾತ್ಮಾ ॥೧೫.೪೮॥
ಕರ್ಣನ ಶ್ರೇಷ್ಠ ಅಸ್ತ್ರಗಳ ಲೋಭದ ಕಾರಣ,
ಪರಶುರಾಮಗೆ ಹೇಳಿದ ಸುಳ್ಳು ತಾನು ಬ್ರಾಹ್ಮಣ.
ಪರಶುರಾಮನೋ ಎಂದೆಂದೂ ಎಲ್ಲಾ ಬಲ್ಲ ಸರ್ವಜ್ಞ,
ಕರ್ಣಗುಪದೇಶಿಸಿದರು ಉದ್ದೇಶಿಸಿ ಯುದ್ಧ ಯಜ್ಞ.

ಅಸ್ತ್ರಜ್ಞಚೂಳಾಮಣಿಮಿನ್ದ್ರಸೂನುಂ ವಿಶ್ವಸ್ಯ ಹನ್ತುಂ ಧೃತರಾಷ್ಟ್ರಪುತ್ರಃ ।
ಏನಂ ಸಮಾಶ್ರಿತ್ಯ ದೃಢೋ ಭವೇತೇತ್ಯದಾಜ್ಜ್ಞಾತ್ವೈವಾಸ್ತ್ರಮಸ್ಮೈ ರಮೇಶಃ   ॥೧೫.೪೯॥
ಧೃತರಾಷ್ಟ್ರಪುತ್ರನಾದ ದುರ್ಯೋಧನನಿಗೆ,
ನಂಬಿಸಲು ಅರ್ಜುನನ ಕರ್ಣ ಕೊಲ್ಲುವ ಬಗೆ.
ದೃಢವಿಶ್ವಾಸ ಹೊಂದಲಿಕ್ಕಾಗಿ ದುರ್ಯೋಧನ,
ಕರ್ಣಗೆ ಪರಶುರಾಮ ಮಾಡಿದ ಅಸ್ತ್ರಪ್ರದಾನ.

ಜ್ಞಾನಂ ಚ ಭಾಗವತಮಪ್ಯಪರಾಶ್ಚ ವಿದ್ಯಾ ರಾಮಾದವಾಪ್ಯ ವಿಜಯಂ ಧನುರಗ್ರ್ಯಯಾನಮ್ ।
ಅಬ್ದೈಶ್ಚತುರ್ಭಿರಥ ಚ ನ್ಯವಸತ್ ತದನ್ತೇ ಹಾತುಂ ನ ಶಕ್ತ ಉರುಗಾಯಮಿಮಂ ಸ ಕರ್ಣ್ಣಃ ॥೧೫.೫೦॥
ಕರ್ಣ ನಾಕು ವರ್ಷಗಳಲ್ಲಿ ಪರಮಾತ್ಮನಿಂದ,
ಜ್ಞಾನ ಉಳಿದ ವಿದ್ಯೆ ಪಡೆದ ರಾಮನನುಗ್ರಹದಿಂದ.
ಹೊಂದಿದ ಶ್ರೇಷ್ಠರಥ ವಿಜಯವೆಂಬ ಬಿಲ್ಲ,
ಬಿಡಲಾಗದೆ ರಾಮನಲ್ಲೇ ಉಳಿದ ಕೆಲಕಾಲ.