Thursday 13 February 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 15: 61 - 66


ಶ್ರುತ್ವಾ ರಾವಂ ಸಾರಮೇಯಸ್ಯ ದೂರಾಚ್ಛರೈರ್ಮ್ಮುಖಂ ಶಬ್ದವೇಧೀ ಪುಪೂರೇ ।

ಸ ಏಕಲವ್ಯೋ ವ್ರಣಮಸ್ಯ ನಾಕರೋಚ್ಛ್ವಾಪೂರಿತಾಸ್ಯಃ ಪಾಣ್ಡವಾನಭ್ಯಯಾತ್ ಸಃ ॥೧೫.೬೧॥
ಕಾಡಲ್ಲಿ ನಾಯಿಬೊಗಳುವಿಕೆಯ ದೂರದಿಂದಲೇ ಕೇಳಿದ ಏಕಲವ್ಯನೆಂಬ ಬೇಡ,
ಶಬ್ದವೇಧೀ ವಿದ್ಯೆಯಿಂದ ನಾಯಿಬಾಯ ಮುಚ್ಚಿದ ತೊಡಿಸಿ ಬಾಣದ ಮುಖವಾಡ.
ಮುಖಕ್ಕೆಲ್ಲಾ ಬಾಣ ಮೆತ್ತಿಕೊಂಡಿದ್ದರೂ ನಾಯಿಗೆ ಆಗಲಿಲ್ಲ ವ್ರಣ,
ಬಾಣಹೊತ್ತ ಮುಖದಿಂದ ಆ ನಾಯಿ ತಲುಪಿತು ಪಾಂಡವರಿದ್ದ ತಾಣ.

ದೃಷ್ಟ್ವಾ ಚಿತ್ರಂ ಕುರವಃ ಪಾಣ್ಡವಾಶ್ಚ ದ್ರಷ್ಟುಂ ಕರ್ತ್ತಾರಂ ಮಾರ್ಗ್ಗಯಾಮಾಸುರತ್ರ ।
ದ್ರೋಣಾಕೃತಿಂ ಮಾರ್ತ್ತಿಕೀಂ ಪೂಜಯನ್ತಂ ದದೃಶುಶ್ಚೈನಂ ಧನುರೇವಾಭ್ಯಸನ್ತಮ್ ॥೧೫.೬೨॥
ಇದನ್ನು ಕಂಡ ಕುರುಪಾಂಡವರಿಗೆ ಅಚ್ಚರಿಯ ನೋಟ,
ಇದನೆಸಗಿದವನ ನೋಡಲೆಂದು ಅವರೆಲ್ಲರ ಹುಡುಕಾಟ.
ಕಂಡರು ಮಣ್ಣಿನ ದ್ರೋಣಾಕೃತಿಯ ಪೂಜೆ ಮಾಡುವ ದೃಶ್ಯ,
ಬಿಲ್ಗಾರಿಕೆಯ ಕಲಿಯುತಿದ್ದ ಏಕಲವ್ಯನೆಂಬ ಮಾನಸ ಶಿಷ್ಯ.

ಪೈಶಾಚಮೇವೈಷ ಪಿಶಾಚಕೇಭ್ಯಃ ಪೂರ್ವಂ ವಿವೇದಾಸ್ತ್ರವೃನ್ದಂ ನಿಷಾದಃ ।
ದಿವ್ಯಾನ್ಯಸ್ತ್ರಾಣ್ಯಾಪ್ತುಮೇತಾಂ ಚ ಶಿಕ್ಷಾಂ ದ್ರೋಣಂ ಸದಾ ಪೂಜಯತಿ ಸ್ಮ ಭಕ್ತ್ಯಾ ॥೧೫.೬೩॥
ಈ ಬೇಡ ಏಕಲವ್ಯ ಪೈಶಾಚಾಸ್ತ್ರಗಳ ಮೊದಲೇ ತಿಳಿದವ,
ಈಗ ದಿವ್ಯಾಸ್ತ್ರವ ಹೊಂದಬೇಕೆಂದು ಅಭ್ಯಾಸ ಮಾಡುತ್ತಿದ್ದವ.
ಅದಕೆಂದೇ ಗುರುದ್ರೋಣಾಕೃತಿಯ ಭಕ್ತಿಯಿಂದ ಪೂಜಿಸುತ್ತಿದ್ದವ.

ದೃಷ್ಟ್ವಾ ವಿಶೇಷಂ ತಮಮುಷ್ಯ ಪಾರ್ತ್ಥೋ ದ್ರೋಣಾಯೋಚೇ ತ್ವದ್ವರೋ ಮೇ ಮೃಷಾssಸೀತ್ ।
ಇತ್ಯುಕ್ತ ಏನಂ ತ್ವಭಿಗಮ್ಯ ದಕ್ಷಿಣಾಂ ವಿಪ್ರೋ ಯಯಾಚೇ ದಕ್ಷಿಣಾಙ್ಗುಷ್ಠಮೇವ ॥೧೫.೬೪॥
ಇದನ್ನೆಲ್ಲಾ ಕಾಡಲ್ಲಿ ಕಂಡ ಮಧ್ಯಮಪಾಂಡವ ಅರ್ಜುನ,
ಹೀಗೆಂದ -ನಿಮ್ಮ ವರ ಸುಳ್ಳಾಯಿತಲ್ಲವೇ ಗುರು ದ್ರೋಣ.
ಇದನ್ನೆಲ್ಲಾ ಕೇಳಿಸಿಕೊಂಡ ನಂತರ ಬ್ರಾಹ್ಮಣ ದ್ರೋಣಾಚಾರ್ಯ,
ಕೈಗೊಂಡ ಏಕಲವ್ಯನ ಹೆಬ್ಬೆರಳ ದಕ್ಷಿಣೆಯಾಗಿ ಪಡೆವ ಕಾರ್ಯ.

ತಸ್ಯ ಪ್ರಸಾದೋಪಚಿತೋರುಶಿಕ್ಷೋ ನಿಷಾದೋsದಾದ್ ದಕ್ಷಿಣಾಙ್ಗುಷ್ಠಮಸ್ಮೈ ।
ತತಃ ಪರಂ ನಾಸ್ಯ ಬಭೂವ ಶಿಕ್ಷಾ ಸನ್ಮುಷ್ಟಿಹೀನಸ್ಯ ಸಮಾsರ್ಜ್ಜುನೇನ ॥೧೫.೬೫॥
ದ್ರೋಣರನುಗ್ರಹದ ಉತ್ತಮ ಶಿಕ್ಷೆಯುಳ್ಳ ಏಕಲವ್ಯ ತನ್ನ ಬಲಹೆಬ್ಬೆರಳ ದಕ್ಷಿಣೆಯಾಗಿ ಕೊಟ್ಟ,
ದೂರವೇ ಆಯಿತು ಮುಷ್ಠಿಬಲವಿಲ್ಲದ ಏಕಲವ್ಯಗೆ ಅರ್ಜುನಗೆ ಸಮವಾಗುವ ಬಿಲ್ವಿದ್ಯಾ ಪಟ್ಟ.

ಪುನಃ ಕೃಪಾಲೂ ರೈವತಪರ್ವತೇ ತಂ ದ್ರೋಣಃ ಪ್ರಾಪ್ಯಾsದಾದಸ್ತ್ರವರಾಣಿ ತಸ್ಮೈ ।
ಏಕಾನ್ತ ಏವಾಸ್ಯ ಭಕ್ತ್ಯಾ ಸುತುಷ್ಟೋ ಧನ್ವಿಶ್ರೇಷ್ಠಂ ಕೃತವಾನರ್ಜ್ಜುನಂ ಚ ॥೧೫.೬೬॥
ಏಕಲವ್ಯನ ಭಕ್ತಿಗೆ ಮೆಚ್ಚಿದ ಕೃಪಾಳುವಾದ ಆಚಾರ್ಯ ದ್ರೋಣ,
ರೈವತ್ಪರ್ವತದ ಏಕಾಂತದಲಿ ಮಾಡಿದರು ಶ್ರೇಷ್ಠ ಅಸ್ತ್ರ ಪ್ರದಾನ,
ಅಂತೆಯೇ ಅರ್ಜುನನ ಶ್ರೇಷ್ಠಧನುರ್ಧಾರಿ ಮಾಡಿದ್ದು ಪ್ರಧಾನ.

ಇತಿ ಶ್ರೀಮದಾನನ್ದತೀರ್ತ್ಥಭಗವತ್ಪಾದವಿರಚಿತೇ ಶ್ರೀಮಹಾಭಾರತತಾತ್ಪರ್ಯ್ಯನಿರ್ಣ್ಣಯೇ
ಪಾಣ್ಡವಶಸ್ತ್ರಾಭ್ಯಾಸೋ ನಾಮ ಪಞ್ಚದಶೋsಧ್ಯಾಯಃ ॥
ಹೀಗೆ ಶ್ರೀಮದಾನಂದತೀರ್ಥಭಗವತ್ಪಾದರಿಂದ ರಚಿತವಾದ,
ಶ್ರೀಮನ್ಮಹಾಭಾರತತಾತ್ಪರ್ಯನಿರ್ಣಯದ ಈ ಅನುವಾದ,
ಪಾಂಡವಶಸ್ತ್ರಾಭ್ಯಾಸವೆಂಬ ಹದಿನೈದನೇ ಅಧ್ಯಾಯ,


No comments:

Post a Comment

ಗೋ-ಕುಲ Go-Kula