Wednesday, 20 May 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 17: 154 - 163

ಅಥಾಪರೇ ಚ ಯಾದವಾ ವಿಜಿತ್ಯ ತದ್ಬಲಂ ಯಯುಃ ।
ಪುರೈವ ರುಗ್ಮಿಪೂರ್ವಕಾಃ ಪ್ರಜಗ್ಮುರಚ್ಯುತಂ ಪ್ರತಿ ॥೧೭.೧೫೪॥
ಬೇರೆ ಯಾದವರು ಜರಾಸಂಧ ಶಿಶುಪಾಲರ ಸೈನ್ಯ ಸೋಲಿಸಿ ಹೊರಟರು ,
ಇದಕ್ಕೆ ಮೊದಲು ರುಗ್ಮಿ ಮುಂತಾದವರು ಭಗವಂತನ ಬೆನ್ನೇರಿ ಬಂದಿದ್ದರು .

ಸಹೈಕಲವ್ಯಪೂರ್ವಕೈಃ ಸಮೇತ್ಯ ಭೀಷ್ಮಕಾತ್ಮಜಃ ।
ಹರಿಂ ವವರ್ಷ ಸಾಯಕೈಃ ಸ ಸಿಂಹವನ್ನ್ಯವರ್ತ್ತತ ॥೧೭.೧೫೫॥
ಏಕಲವ್ಯ ಮುಂತಾದವರ ಕೂಡಿದ ಭೀಷ್ಮಕಪುತ್ರ ರುಗ್ಮಿ ಬಾಣಗಳಿಂದ ,
ಕೃಷ್ಣನ ಪೀಡಿಸಬಂದಾಗ ಭಗವಂತ ಸಿಂಹದಂತೆ ಅವನತ್ತ ತಿರುಗಿದ .

ಅಕ್ಷೋಹಿಣೀತ್ರಯಂ ಹರಿಸ್ತದಾ ನಿಹತ್ಯ ಸಾಯಕೈಃ ।
ಅವಾಹನಾಯುಧಂ ವ್ಯಧಾನ್ನಿಷಾದಪಂ ಶರೈಃ ಕ್ಷಣಾತ್ ॥೧೭.೧೫೬॥
ಶ್ರೀಹರಿ ಮಾಡಿದ ಸಂಹಾರ-ಮೂರು ಅಕ್ಷೋಹಿಣಿ ಸೇನಾ ,
ಬೇಡನಾಯಕ ಏಕಲವ್ಯನ ಮಾಡಿದ ವಾಹನ ಶಸ್ತ್ರಹೀನ .

ಶರಂ ಶರೀರನಾಶಕಂ ಸಮಾದದಾನಮೀಶ್ವರಮ್ ।
ಸ ಏಕಲವ್ಯ ಆಶು ತಂ ವಿಹಾಯ ದುದ್ರುವೇ ಭಯಾತ್ ॥೧೭.೧೫೭॥
ಶರೀರನಾಶಕ ಬಾಣವ ಭಗವಂತ ಎತ್ತಿಕೊಳ್ಳುತ್ತಿರುವ ನೋಟ ,
ಕಂಡ ಏಕಲವ್ಯ ಭಯದಿಂದ ರಣಭೂಮಿ ಬಿಟ್ಟು ಕಿತ್ತ ಓಟ .

ಧನುರ್ಭೃತಾಂ ವರೇ ಗತೇ ರಣಂ ವಿಹಾಯ ಭೂಭೃತಃ ।
ಕರೂಶರಾಜಪೂರ್ವಕಾಃ ಕ್ಷಣಾತ್ ಪ್ರದುದ್ರುವುರ್ಭಯಾತ್ ॥೧೭.೧೫೮॥
ಓಡುತ್ತಿರಲು ಯುದ್ಧರಂಗದಿಂದ ಏಕಲವ್ಯನೆಂಬ ಶ್ರೇಷ್ಠ ಧನುರ್ಧಾರಿ ,
ದಂತವಕ್ರ ಮೊದಲಾದವರು ಹಿಡಿದರು ಭಯದಿಂದ ಅದೇ ದಾರಿ .

ಅಥಾsಸಸಾದ ಕೇಶವಂ ರುಷಾ ಸ ಭೀಷ್ಮಕಾತ್ಮಜಃ ।
ಶರಾಮ್ಬುಧಾರ ಆಶು ತಂ ವಿವಾಹನಂ ವ್ಯಧಾದ್ಧರಿಃ ॥೧೭.೧೫೯॥
ಅವರ ನಿರ್ಗಮನಾನಂತರ ರುಗ್ಮಿ ಬಾಣಗಳ ಮಳೆಗರೆಯುತ್ತ ಬಂದ ,
ಕೂಡಲೇ ಶ್ರೀಕೃಷ್ಣಪರಮಾತ್ಮ ಅವನ ರಥವನ್ನು ಕತ್ತರಿಸಿ ಹಾಕಿದ .

ಚಕರ್ತ್ತ ಕಾರ್ಮ್ಮುಕಂ ಪುನಃ ಸ ಖಡ್ಗಚರ್ಮ್ಮಭೃದ್ಧರೇಃ ।
ರಥಂ ಸಮಾರುಹಚ್ಛರೈಶ್ಚಕರ್ತ್ತ ಖಡ್ಗಮೀಶ್ವರಃ ॥೧೭.೧೬೦॥
ರುಗ್ಮಿಯ ಬಿಲ್ಲನ್ನು ಕೃಷ್ಣ ಕಡಿದಾಗ ಮತ್ತೆ ಕತ್ತಿ ಗುರಾಣಿ ಸಮೇತ ,
ಎದುರಿಸಿದ ಕೃಷ್ಣ ತನ್ನ ರಥವೇರಿದ ರುಗ್ಮಿಯ ಖಡ್ಗವ ಕತ್ತರಿಸುತ್ತ .

ಶರೈರ್ವಿತಸ್ತಿಮಾತ್ರಕೈರ್ವಿಧಾಯ ತಂ ನಿರಾಯುಧಮ್ ।
ಪ್ರಿಯಾವಚಃ ಪ್ರಪಾಲಯನ್ ಜಘಾನ ನೈನಮಚ್ಯುತಃ ॥೧೭.೧೬೧॥
ಹನ್ನೆರಡಂಗುಲ ಬಾಣಗಳಿಂದ ರುಗ್ಮಿಯ ಮಾಡಿದ ನಿರಾಯುಧ ,
ರುಗ್ಮಿಣಿಯ ಮಾತ ಕೇಳುತ್ತಾ ಕೃಷ್ಣ ಮಾಡಲಿಲ್ಲ ಅವನ ವಧ .

ನಿಬದ್ಧ್ಯ ಪಞ್ಚಚೂಳಿನಂ ವಿಧಾಯ ತಂ ವ್ಯಸರ್ಜ್ಜಯತ್ ।
ಜಗಜ್ಜನಿತ್ರಯೋರಿದಂ ವಿಡಮ್ಬನಂ ರಮೇಶಯೋಃ ॥೧೭.೧೬೨॥
ಕೃಷ್ಣ ಅವನ ಕಟ್ಟಿ ಐದು ಜುಟ್ಟ ಇಟ್ಟು ,
ಕಳಿಸಿಬಿಟ್ಟ ಅವನನ್ನು ಬಿಟ್ಟು ಕೊಟ್ಟು ,
ಜಗದ್ಮಾತಾಪಿತರ ವಿಡಂಬನೆಯ ಗುಟ್ಟು .

ಸದೈಕಮಾನಸಾವಪಿ ಸ್ವಧರ್ಮ್ಮಶಾಸಕೌ ನೃಣಾಮ್ ।
ರಮಾ ಹರಿಶ್ಚ ತತ್ರ ತೌ ವಿಜಹ್ರತುರ್ಹಿ ರುಗ್ಮಿಣಾ ॥೧೭.೧೬೩॥
ಒಂದೇ ಮನೋಧರ್ಮದ ಲಕ್ಷ್ಮೀನಾರಾಯಣರಲ್ಲಿ ಎಂದೂ ಇಲ್ಲ ಭೇದ ,
ಯುಧ್ಧದಂಗಳದಲ್ಲಿ ಅವರು ತೋರಿದ್ದು ಲೋಕಧರ್ಮದ ವಿನೋದ .

Saturday, 16 May 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 17: 146 -153


ಜರಾಸುತಾದಯೋ ರುಷಾ ತಮಭ್ಯಯುಃ ಶರೋತ್ತಮೈಃ ।
ವಿಧಾಯ ತಾನ್ ನಿರಾಯುಧಾನ್ ಜಗಾಮ ಕೇಶವಃ ಶನೈಃ ॥೧೭.೧೪೬॥
ಜರಾಸಂಧ ಮುಂತಾದವರು ಕ್ರೋಧದಿಂದ ,
ಕೃಷ್ಣಗೆದುರಾದರು ಉತ್ತಮ ಬಾಣಗಳಿಂದ .
ಮಾಡುತ್ತಾ ಅವರನ್ನೆಲ್ಲಾ ನಿರಾಯುಧ ,
ಕೃಷ್ಣ ನಿಧಾನವಾಗಿ ಹೊರಟುಹೋದ .

ಪುನರ್ಗ್ಗೃಹೀತಕಾರ್ಮ್ಮುಕಾನ್ ಹರಿಂ ಪ್ರಯಾತುಮುದ್ಯತಾನ್ ।
ನ್ಯವಾರಯದ್ಧಲಾಯುಧೋ ಬಲಾದ್ ಬಲೋರ್ಜ್ಜಿತಾಗ್ರಣೀಃ ॥೧೭.೧೪೭॥
ಮತ್ತೆ ಜರಾಸಂಧಾದಿಗಳಿಂದ ಬಿಲ್ಲುಗಳನೆತ್ತಿಕೊಂಡು ಕೃಷ್ಣನತ್ತ ನಡೆ ,
ಬಲವಂತ ಸೈನಿಕರನುಳ್ಳ ಬಲರಾಮನಾದ ಅವರಿಗೆ ತಡೆಗೋಡೆ .

ತದಾ ಸಿತಃ ಶಿರೋರುಹೋ ಹರೇರ್ಹಲಾಯುಧಸ್ಥಿತಃ ।
ಪ್ರಕಾಶಮಾವಿಶದ್ ಬಲಂ ವಿಜೇತುಮತ್ರ ಮಾಗಧಮ್ ॥೧೭.೧೪೮॥
ಆಗ ಬಲರಾಮನಲ್ಲಿದ್ದ ಪರಮಾತ್ಮನ ಶುಕ್ಲಕೇಶ ,
ಜರಾಸಂಧನ ಗೆಲ್ಲಲಾಯಿತವಗೆ ಬಲದಾವೇಶ .

ಸ ತಸ್ಯ ಮಾಗಧೋ ರಣೇ ಗದಾನಿಪಾತಚೂರ್ಣ್ಣಿತಃ ।
ಪಪಾತ ಭೂತಳೇ ಬಲೋ ವಿಜಿತ್ಯ ತಂ ಯಯೌ ಪುರೀಮ್ ॥೧೭.೧೪೯॥
ಬಲರಾಮನ ಗದೆಯೇಟಿಗೆ ಜರಾಸಂಧ ನೆಲಕ್ಕೆ ಬಿದ್ದ ,
ಜರಾಸಂಧನ ಗೆದ್ದ ಬಲರಾಮ ದ್ವಾರಕೆಯತ್ತ ತೆರಳಿದ .

ವರೋರುವೇಷಸಂವೃತೋsಥ ಚೇದಿರಾಟ್ ಸಮಭ್ಯಯಾತ್ ।
ತಮಾಸಸಾರ ಸಾತ್ಯಕಿರ್ನ್ನದನ್ ಮೃಗಾಧಿಪೋ ಯಥಾ ॥೧೭.೧೫೦॥
ಮದುಮಗನ ಅಲಂಕಾರದಲ್ಲಿ ಶಿಶುಪಾಲ ಯುದ್ಧಕೆ ಬಂದ,
ಗರ್ಜಿಸುವ ಸಿಂಹದಂತೆ ಸಾತ್ಯಕಿ ಅವನನ್ನು ಎದುರಿಸಿದ .

ಚಿರಂ ಪ್ರಯುದ್ಧ್ಯ ತಾವುಭೌ ವರಾಸ್ತ್ರಶಸ್ತ್ರವರ್ಷಿಣೌ ।
ಕ್ರುಧಾ ನಿರೀಕ್ಷ್ಯ ತಸ್ಥತುಃ ಪರಸ್ಪರಂ ಸ್ಫುರತ್ತನೂ ॥೧೭.೧೫೧॥
ಬಹುಕಾಲ ನಡೆಯಿತು ಅವರಲ್ಲಿ ಶ್ರೇಷ್ಠ ಅಸ್ತ್ರ ಶಸ್ತ್ರಗಳ ಯುದ್ಧ ,
ಸೋಲು ಗೆಲುವು ಕಾಣದೇ ನಿಂತರು ಮಾಡುತ್ತಾ ದೃಷ್ಟಿಯುದ್ಧ .

ಸಮಾನಭಾವಮಕ್ಷಮೀ ಶಿನೇಃ ಸುತಾತ್ಮಜಃ ಶರಮ್ ।
ಅಥೋದ್ಬಬರ್ಹ ತತ್ಕ್ಷಣಾದ್ ಬಲಾನ್ಮುಮೋಚ ವಕ್ಷಸಿ ॥೧೭.೧೫೨॥
ಶಿನಿಯ ಮಗ ಸತ್ಯಕ-ಸತ್ಯಕನ ಮಗ ಸಾತ್ಯಕಿ ಆ ಕ್ಷಣ ,
ತಮ್ಮಲ್ಲಿ ಸಮಾನತೆ ಸಹಿಸದೇ ತೆಗೆದನೊಂದು ಬಾಣ .
ತನ್ನೆಲ್ಲಾ ಬಲವನ್ನು ಅದರಲ್ಲಿಟ್ಟ ,
ಶಿಶುಪಾಲನೆದೆಗೆ ಆ ಬಾಣನೆಟ್ಟ .

ಸ ತೇನ ತಾಡಿತೋsಪತದ್ ವಿಸಜ್ಞಕೋ ನೃಪಾತ್ಮಜಃ ।
ವಿಜಿತ್ಯ ತಂ ಸ ಸಾತ್ಯಕಿರ್ಯ್ಯಯೌ ಪ್ರಹೃಷ್ಟಮಾನಸಃ ॥೧೭.೧೫೩॥
ಶಿಶುಪಾಲ ಆ ಬಾಣದಿಂದ ಮೂರ್ಛಿತನಾಗಿ ಬಿದ್ದ ,
ಶಿಶುಪಾಲನ ಗೆದ್ದ ಸಾತ್ಯಕಿ ಸಂತಸದಿಂದ ನಡೆದ .

Thursday, 14 May 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 17: 140 - 145


ಸಸಙ್ಜ್ಞಕಾಃ ಸಮುತ್ಥಿತಾಸ್ತತೋ ನೃಪಾಃ ಪುನರ್ಯ್ಯಯುಃ ।
ಜಿಗೀಷವೋsಥ ರುಗ್ಮಿಣೀಂ ವಿಧಾಯ ಚೇದಿಪೇ ಹರಿಮ್ ॥೧೭.೧೪೦॥
ಶ್ರೀಕೃಷ್ಣ ದ್ವಾರಕೆಗೆ ಹೋದಮೇಲೆ ,
ಪ್ರಜ್ಞೆಗೊಂಡ ರಾಜರೆಲ್ಲ ಎದ್ದರುಮೇಲೆ .
ತಮ್ಮ ರಾಜ್ಯಗಳಿಗೆ ಹಿಂತಿರುಗಿದ ಲೀಲೆ .
ಕೆಲಕಾಲಾನಂತರದಲ್ಲಿ -ರುಗ್ಮಿಣಿಯ ಶಿಶುಪಾಲಗೆ ಕೊಟ್ಟು ,
ಕೃಷ್ಣಗವಮಾನಿಸಿ ಅವನ ಗೆಲ್ಲಬೇಕೆಂಬ ರಾಜರುಗಳ ಪಟ್ಟು ,
ಮತ್ತೊಮ್ಮೆ ಸೇರಿಸಿತು  ಅವರನೆಲ್ಲರ ಕುಂಡಿನಪುರದಲ್ಲಿ ಒಟ್ಟು .

ಸಮಸ್ತರಾಜಮಣ್ಡಲೇ ವಿನಿಶ್ಚಯಾದುಪಾಗತೇ ।
ಸಭೀಷ್ಮಕೇ ಚ ರುಗ್ಮಿಣೀ ಪ್ರದಾತುಮುದ್ಯತೇ ಮುದಾ ॥೧೭.೧೪೧॥
ಸಮಸ್ತಲೋಕಯೋಷಿತಾಂ ವರಾ ವಿದರ್ಭನನ್ದನಾ ।
ದ್ವಿಜೋತ್ತಮಂ ಹರೇಃ ಪದೋಃ ಸಕಾಶಮಾಶ್ವಯಾತಯತ್ ॥೧೭.೧೪೨॥
ಹೀಗೆ ರಾಜಸಮೂಹದಿಂದ ರುಗ್ಮಿಣಿಯ ಶಿಶುಪಾಲಗೆ ಕೊಡಿಸುವ ನಿರ್ಧಾರ ,
ಶ್ರೇಷ್ಠ ವೈದರ್ಭೀ ಆಗ ದ್ವಿಜೋತ್ತಮನೊಬ್ಬನ ಕೃಷ್ಣನ ಬಳಿ ಕಳಿಸುವ ವ್ಯಾಪಾರ .

ನಿಶಮ್ಯ ತದ್ವಚೋ ಹರಿಃ ಕ್ಷಣಾದ್ ವಿದರ್ಭಕಾನಗಾತ್ ।
ತಮನ್ವಯಾದ್ಧಲಾಯುಧಃ ಸಮಸ್ತಯಾದವೈಃ ಸಹ ॥೧೭.೧೪೩॥
ಶ್ರೀಕೃಷ್ಣ ರುಗ್ಮಿಣಿಯ ಮಾತ ಕೇಳಿ ತಕ್ಷಣ ಕುಂಡಿನಪುರಕ್ಕೆ ಹೊರಟ ,
ಬಲರಾಮ ಯಾದವಸೇನೆಯೊಡನೆ ಅವನ ಹಿಂಬಾಲಿಸಿದ ಆಟ.

ಸಮಸ್ತರಾಜಮಣ್ಡಲಂ ಪ್ರಯಾನ್ತಮೀಕ್ಷ್ಯ ಕೇಶವಮ್ ।
ಸುಯತ್ತಮಾತ್ತಕಾರ್ಮುಕಂ ಬಭೂವ ಕನ್ಯಕಾವನೇ ॥೧೭.೧೪೪॥
ಕೇಶವ ಬರುತ್ತಿರುವ ಸುಳಿವು ಪಡೆದ ರಾಜರುಗಳ ಹಿಂಡು ,
ಜಮಾಯಿಸಿತು ಗೌರಿಗುಡಿಯಬಳಿ ಶಸ್ತ್ರಾಸ್ತ್ರ ಹಿಡಕೊಂಡು.

ಪುರಾ ಪ್ರದಾನತಃ ಸುರೇಕ್ಷಣಚ್ಛಲಾದ್ ಬಹಿರ್ಗ್ಗತಾಮ್ ।
ರಥೇ ನ್ಯವೇಶಯದ್ಧರಿಃ ಪ್ರಪಶ್ಯತಾಂ ಚ ಭೂಭೃತಾಮ್ ॥೧೭.೧೪೫॥
ಕುಲದೇವತಾ ದರ್ಶನ ರುಗ್ಮಿಣಿಗೆ ಹೊರಬರಲು ಒಂದು ನೆಪ ,
ಎಲ್ಲ ನೋಡುತ್ತಿರಲು ತನ್ನ ರಥದಲ್ಲವಳ ಕೂರಿಸಿಕೊಂಡ ಭೂಪ .

Monday, 4 May 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 17: 132 - 139

ಸ ತಸ್ಯ ದೃಷ್ಟಿಮಾತ್ರತೋ ಬಭೂವ ಭಸ್ಮಸಾತ್ ಕ್ಷಣಾತ್ ।
ಸ ಏವ ವಿಷ್ಣುರವ್ಯಯೋ ದದಾಹ ತಂ ಹಿ ವಹ್ನಿವತ್ ॥೧೭.೧೩೨॥
ಕಾಲಯವನ ಮುಚುಕುಂದನ ದೃಷ್ಟಿಗೆ ಸುಟ್ಟು ತಾನು  ಭಸ್ಮವಾದ ,
ದೇವತೆಗಳಿಗೆ ವರ ನೀಡಿದ್ದ ಅವಿನಾಶಿ ವಿಷ್ಣುವೇ ಅವನ ಸುಟ್ಟಿದ್ದ .

ವರಾಚ್ಛಿವಸ್ಯ ದೈವತೈರವಧ್ಯದಾನವಾನ್ ಪುರಾ ।
ಹರೇರ್ವರಾನ್ನಿಹತ್ಯ ಸ ಪ್ರಪೇದ ಆಶ್ವಿಮಂ ವರಮ್ ॥೧೭.೧೩೩॥
ಶಿವವರದಿಂದ ಅವಧ್ಯರಾಗಿದ್ದರು ದಾನವರು ,
ಅದರಿಂದ ದೇವತೆಗಳೂ ಆಗಿದ್ದರು ಅಸಮರ್ಥರು.
ಶ್ರೀಹರಿ ವರಬಲದಿಂದ ಮುಚುಕುಂದ ಮಾಡಿದನವರ ಸಂಹಾರ ,
ಯುದ್ಧಾನಂತರ ದೇವತೆಗಳಿಂದ ಪಡೆದನೊಂದು ವಿಲಕ್ಷಣ ವರ .

ಸುದೀರ್ಘಸುಪ್ತಿಮಾತ್ಮನಃ ಪ್ರಸುಪ್ತಿಭಙ್ಗಕೃತ್ ಕ್ಷಯಮ್ ।
ಸ್ವದೃಷ್ಟಿಮಾತ್ರತಸ್ತತೋ ಹತಃ ಸ ಯಾವನಸ್ತದಾ ॥೧೭.೧೩೪॥
ಎನಗಾಗಿದೆ ತುಂಬಾ ಆಯಾಸ ಬಳಲಿಕೆ ,
ಆಗಿದೆ ದೀರ್ಘಕಾಲದ ನಿದ್ರೆಯ ಬಯಕೆ .
ಮಲಗಿದ ನನಗೆ ನಿದ್ರಾಭಂಗ ಮಾಡುವವ ,
ಎಚ್ಚೆತ್ತ ನನ್ನ ನೋಟಕ್ಕೇ ಸಾಯಬೇಕವ ,
ಹಾಗೇ ಸಾವ ಪಡಕೊಂಡ ಕಾಲಯವನನವ .

ಅತಶ್ಚ ಪುಣ್ಯಮಾಪ್ತವಾನ್ ಸುರಪ್ರಸಾದತೋsಕ್ಷಯಮ್ ।
ಸ ಯೌವನಾಶ್ವಜೋ ನೃಪೋ ನ ದೇವತೋಷಣಂ ವೃಥಾ ॥೧೭.೧೩೫॥
ಮುಚುಕುಂದ ಕಾಲಯವನನ ಕೊಂದ ಕಾರಣ ,
ಬಂತವನಿಗೆ ಶ್ರೀಕೃಷ್ಣಕಾರ್ಯ ಮಾಡಿದ ಪುಣ್ಯ .
ಇವೆಲ್ಲಾ ದೇವತೆಗಳ ಅನುಗ್ರಹದ ಫಲ ,
ಕೈಬಿಡದೆ ಸಲಹುವ ದೇವತಾಸೇವಾಬಲ .

ತತೋ ಹರಿಂ ನಿರೀಕ್ಷ್ಯ ಸ ಸ್ತುತಿಂ ವಿಧಾಯ ಚೋತ್ತಮಾಮ್ ।
ಹರೇರನುಜ್ಞಯಾ ತಪಶ್ಚಚಾರ ಮುಕ್ತಿಮಾಪ ಚ ॥೧೭.೧೩೬॥
ಕಾಲಯವನ ಸುಟ್ಟು ಭಸ್ಮವಾದಮೇಲೆ ,
ಮುಚುಕುಂದಗೆ ಶ್ರೀಕೃಷ್ಣದರ್ಶನದ ಲೀಲೆ .
ಉತ್ತಮ ಸ್ತುತಿ ಮಾಡಿ ಕೃಷ್ಣನಾಜ್ಞೆಯಿಂದ ಮಾಡಿದ ತಪ ,
ಕಾಲಾಂತರದಿ ಮುಕ್ತಿ ಪಡೆದ ಮುಚುಕುಂದನೆಂಬ ನೃಪ .

ತತೋ ಗುಹಾಮುಖಾದ್ಧರಿರ್ವಿನಿಸ್ಸೃತೋ ಜರಾಸುತಮ್ ।
ಸಮಸ್ತಭೂಪಸಂವೃತಂ ಜಿಗಾಯ ಬಾಹುನೇಶ್ವರಃ ॥೧೭.೧೩೭॥
ಆನಂತರ ಶ್ರೀಕೃಷ್ಣ ಗುಹೆಯಿಂದ ಹೊರ ಬರುವ ವ್ಯಾಪಾರ ,
ಹೊಡೆದೋಡಿಸಿದ ಜರಾಸಂಧಾದಿಗಳ ಬಾಹುಯುದ್ಧ ದ್ವಾರ .
ಸರ್ವಸಮರ್ಥ ಭಗವಂತಗೆ ಇದ್ಯಾವ ಬಗೆಯ ಆಶ್ಚರ್ಯ .

ತಳೇನ ಮುಷ್ಟಿಭಿಸ್ತಥಾ ಮಹೀರುಹೈಶ್ಚ ಚೂರ್ಣ್ಣಿತಾಃ ।
ನಿಪೇತುರಸ್ಯ ಸೈನಿಕಾಃ ಸ್ವಯಂ ಚ ಮೂರ್ಚ್ಛಿತೋsಪತತ್ ॥೧೭.೧೩೮॥
ಕೃಷ್ಣನ ಅಂಗೈ ಮುಷ್ಠಿ ಮರಗಳ ಹೊಡೆತದಿಂದ ,
ನೆಲಕಚ್ಚಿದ ಸೈನಿಕರು-ಮೂರ್ಛಿತನಾದ ಜರಾಸಂಧ .

ಸಸಾಲ್ವಪೌಣ್ಡ್ರಚೇದಿಪಾನ್ ನಿಪಾತ್ಯ ಸರ್ವಭೂಭುಜಃ ।
ಸ ಪುಪ್ಲುವೇ ಜನಾರ್ದ್ದನಃ ಕ್ಷಣೇನ ತಾಂ ಕುಶಸ್ಥಲೀಮ್ ॥೧೭.೧೩೯॥
ಸಾಲ್ವ , ಪೌಂಡ್ರ , ಶಿಶುಪಾಲ ಮುಂತಾದ ರಾಜರನ್ನೆಲ್ಲ ,
ಸೋಲಿಸಿ ಕೆಡವಿ ದ್ವಾರಕೆಯತ್ತ ಹಾರಿದ ಹಿರಿಯಗೊಲ್ಲ.

Friday, 1 May 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 17: 124 - 131


ಸ ಬಾಹುನೈವ ಕೇಶವೋ ವಿಜಿತ್ಯ ಯಾವನಂ ಪ್ರಭುಃ ।
ನಿಹತ್ಯ ಸರ್ವಸೈನಿಕಾನ್ ಸ್ವಮಸ್ಯ ಯಾಪಯತ್ ಪುರೀಮ್ ॥೧೭.೧೨೪॥
ಕೃಷ್ಣ ಕೇವಲ ತನ್ನ ತೋಳುಗಳಿಂದ ಕಾಲಯವನನ ಗೆದ್ದ ,
ಅವನ ಸೈನಿಕರ ಕೊಂದು ಸಂಪತ್ತನ್ನು ತನ್ನೂರಿಗೆ ಕಳಿಸಿದ .

ಸಹಾಸ್ತ್ರಶಸ್ತ್ರಸಞ್ಚಯಾನ್ ಸೃಜನ್ತಮಾಶು ಯಾವನಮ್ ।
ನ್ಯಪಾತಯದ್ ರಥೋತ್ತಮಾತ್ ತಳೇನ ಕೇಶವೋsರಿಹಾ ॥೧೭.೧೨೫॥
ಶತ್ರುಸಂಹಾರಕನಾದ ಕೇಶವ ತಾನು ,
ಅಸ್ತ್ರಶಸ್ತ್ರ ಬಿಡುತ್ತಿದ್ದ ಕಾಲಯವನನನ್ನು ,
ಅವನ ರಥದಿಂದ ಕೆಳಗೆ ಉರುಳಿಸಿದನು .

ವಿವಾಹನಂ ನಿರಾಯುಧಂ ವಿಧಾಯ ಬಾಹುನಾ ಕ್ಷಣಾತ್ ।
ವಿಮೂರ್ಚ್ಛಿತಂ ನಚಾಹನತ್ ಸುರಾರ್ತ್ಥಿತಂ ಸ್ಮರನ್ ಹರಿಃ ॥೧೭.೧೨೬॥
ಕ್ಷಣಮಾತ್ರದಲ್ಲಿ ತನ್ನ ಬಾಹುಗಳಿಂದ ಭಗವಂತ ,
ಅವನನ್ನು ಮಾಡಿದ ಆಯುಧ ವಾಹನರಹಿತ ,
ದೇವತಾಪ್ರಾರ್ಥನೆಯಂತೆ ಉಳಿಸಿದ ಜೀವಸಹಿತ .

[ದೇವತೆಗಳ ಪ್ರಾರ್ಥನೆ ಏನಾಗಿತ್ತು?]

ಪುರಾ ಹಿ ಯೌವನಾಶ್ವಜೇ ವರಪ್ರದಾಃ ಸುರೇಶ್ವರಾಃ ।
ಯಯಾಚಿರೇ ಜನಾರ್ದ್ದನಂ ವರಂ ವರಪ್ರದೇಶ್ವರಮ್ ॥೧೭.೧೨೭॥
ಅನರ್ತ್ಥಕೋ ವರೋsಮುನಾ ವೃತೋsಪಿ ಸಾರ್ತ್ಥಕೋ ಭವೇತ್ ।
ಅರಿಂ ಭವಿಷ್ಯಯಾವನಂ ದಹತ್ವಯಂ ತವೇಶ್ವರ ॥೧೭.೧೨೮॥
ಯೌವನಾಶ್ವನ ಮಗ ಮಾಂಧಾತ , ಮಾಂಧಾತನ ಮಗ ಮುಚುಕುಂದ ,
ನಿರರ್ಥಕವಾಗಿ ಕಾಣುವ ವರವ ಪಡೆದಿದ್ದ ಹಿಂದೆ ಒಮ್ಮೆ ದೇವತೆಗಳಿಂದ .
ದೇವತೆಗಳಿಂದ ನಾರಾಯಣನಲ್ಲಿ ಪ್ರಾರ್ಥನೆ ,
ಆ ವರವ ಸತ್ಯ ಮಾಡಲವನಲ್ಲಿ ನಿವೇದನೆ ,
ಈಗ ವ್ಯರ್ಥವೆಂದು ಕಾಣುವ ಮುಚುಕುಂದ ಪಡೆದ ವರ ,
ಮುಂದೆ ಬರುವ ವೈರಿಕಾಲಯವನನ ಸುಟ್ಟಾಗಲಿ ಸಂಹಾರ .

ತಥಾsಸ್ತ್ವಿತಿ ಪ್ರಭಾಷಿತಂ ಸ್ವವಾಕ್ಯಮೇವ ಕೇಶವಃ ।
ಋತಂ ವಿಧಾತುಮಭ್ಯಯಾತ್ ಸ ಯೌವನಾಶ್ವಜಾನ್ತಿಕಮ್ ॥೧೭.೧೨೯॥
ಹಾಗೇ ಆಗಲಿ ಎಂದ ಕೃಷ್ಣ ಪರಮಾತ್ಮ ತಾನು ,
ಅದ ಸತ್ಯಮಾಡಲು ಮುಚುಕುಂದನಲ್ಲಿಗೆ ಹೋದನು.

ಸಸಙ್ಜ್ಞಕೋsಥ ಯಾವನೋ ಧರಾತಳಾತ್ ಸಮುತ್ಥಿತಃ ।
ನಿಪಾತ್ಯ ಯಾನ್ತಮೀಶ್ವರಂ ಸ ಪೃಷ್ಠತೋsನ್ವಯಾತ್ ಕ್ರುಧಾ ॥೧೭.೧೩೦॥
ಸ್ವಲ್ಪಕಾಲದ ನಂತರ ಮೂರ್ಛೆಯಿಂದೆದ್ದ ಕಾಲಯವನ ,
ಕೋಪದಿಂದ ಬೆನ್ನಟ್ಟಿಹೋದ ಓಡುತ್ತಿದ್ದ ಶ್ರೀಕೃಷ್ಣನನ್ನ .

ಹರಿರ್ಗ್ಗುಹಾಂ ನೃಪಸ್ಯ ತು ಪ್ರವಿಶ್ಯ ಸಂವ್ಯವಸ್ಥಿತಃ ।
ಸ ಯಾವನಃ ಪದಾsಹನನ್ನೃಪಂ ಸ ತಂ ದದರ್ಶ ಹ ॥೧೭.೧೩೧॥
ಕೃಷ್ಣ ಪ್ರವೇಶಿಸಿದ ಮುಚುಕುಂದ ಮಲಗಿದ್ದ ಗುಹೆಯೊಳಗೆ ,
ಹಿಂಬಾಲಿಸಿ ಬಂದ ಕಾಲಯವನಗೆ ಕಾಣದಂತೆ ನಿಂತ ಮರೆಗೆ .
ಕಾಲಯವನ ಮಲಗಿದ್ದ ಮುಚುಕುಂದನ ಒದ್ದ ,
ಒಡನೆ ಮುಚುಕುಂದ ಅವನ ನೋಡುತ ಮೇಲೆದ್ದ .