Saturday, 29 January 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 21: 65-71

 

ಸೇವಕಾ ಬ್ರಹ್ಮಣಶ್ಚೈವ ದೇವಾ ವೇದಾಶ್ಚ ಸರ್ವಶಃ ।

ಶಕ್ರಸ್ಯ ಮುನಯಃ ಸರ್ವೇ ಹರಿಶ್ಚನ್ದ್ರಶ್ಚ ಭೂಮಿಪಃ          ॥೨೧.೬೫॥

ಬ್ರಹ್ಮಲೋಕದಲ್ಲಿ ದೇವತೆಗಳು ವೇದಾಭಿಮಾನಿಗಳೂ ಸೇವಾಪರಿವಾರ,

ಅಂತೆಯೇ ಇಂದ್ರಲೋಕದಲ್ಲಿ ಎಲ್ಲಾ ಮುನಿ ರಾಜಾಹರಿಶ್ಚಂದ್ರನೂ ಸೇವಾಪರಿವಾರ.

 

ಅಖಿಲಾ ಅಪಿ ರಾಜಾನಃ ಪಾಣ್ಡುಶ್ಚಾಸ್ಮತ್ಪಿತಾ ಮುನೇ ।

ಯಮಸ್ಯೈವಾನುಗಾಃ ಪ್ರೋಕ್ತಾ ರಾಜಭಿಸ್ತೈರ್ಯ್ಯಮೇನ ಚ          ॥೨೧.೬೬॥

 

ಉಪಾಸ್ಯಮಾನೋ ಭಗವಾನ್ ರಾಮೋ ಯಮಸಭಾತಳೇ ।

ಉಕ್ತ ಇನ್ದ್ರೇಣ ಚೋಪಾಸ್ಯೇ ವಾಮನಾತ್ಮಾ ಜನಾರ್ದ್ದನಃ          ॥೨೧.೬೭॥

ಭುವಿಯನಾಳಿದ ಎಲ್ಲಾ ರಾಜರು, ನನ್ನ ತಂದೆ ಪಾಂಡುವೂ,

ಯಮನ ಲೋಕದಲ್ಲಿ ಇರುವರೆಂದು ನಿಮ್ಮ ಹೇಳಿಕೆಯು.

ಆ ರಾಜರಿಂದ, ಯಮನಿಂದ ಭಗವಂತ ರಾಮಚಂದ್ರ ಪೂಜಿತನಾಗುತ್ತಿದ್ದಾನೆ,

ಇಂದ್ರಲೋಕದಲ್ಲಿ ನಡೆಯುತ್ತಿದೆ ವಾಮನರೂಪಿ ಜನಾರ್ದನನ ಆರಾಧನೆ.

 

ಪ್ರಾದುರ್ಭಾವಾಶ್ಚ ನಿಖಿಲಾ ಬ್ರಹ್ಮಣೋಪಾಸಿತಾಃ ಸದಾ ।

ವರುಣಸ್ಯಾನುಗಾ ನಾಗಸ್ತತ್ರ ಮತ್ಸ್ಯಾಕೃತಿರ್ಹರಿಃ                      ॥೨೧.೬೮॥

ಬ್ರಹ್ಮಲೋಕದಲ್ಲಿ ಸದಾ ಎಲ್ಲಾ ಭಗವದವತಾರಗಳ ಉಪಾಸನೆ,

ವರುಣಲೋಕದಲ್ಲಿ ಮತ್ಸ್ಯರೂಪಿ ನಾರಾಯಣನ ಉಪಾಸನೆ.

 

ಗನ್ಧರ್ವಾ ಧನದಸ್ಯಾಪಿ ತತ್ರ ಕಲ್ಕೀ ಹರಿಃ ಪ್ರಭುಃ ।

ರುದ್ರಸ್ಯೋಗ್ರಾಣಿ ಭೂತಾನಿ ನೃಸಿಂಹಾತ್ಮಾ ಶಿವೇನ ಚ             ॥೨೧.೬೯॥

 ಗಂಧರ್ವರು ಕುಬೇರನ ಪರಿವಾರ,

ಕಲ್ಕಿರೂಪದ ಹರಿ ಉಪಾಸ್ಯನಾಗುವ ವ್ಯಾಪಾರ.

ಭಯಂಕರ ಭೂತಗಳು ರುದ್ರನ ಪರಿವಾರ,

ನಾರಸಿಂಹ ಪೂಜಿತನಲ್ಲಿ ಶಿವನದ್ವಾರ.

 

ಉಪಾಸ್ಯತೇ ಸದಾ ವಿಷ್ಣುರಿತ್ಯಾದ್ಯುಕ್ತಂ ತ್ವಯಾsನಘ ।

ಸರ್ವರತ್ನಸ್ಥಲಾನ್ ದಿವ್ಯಾನ್ ದೇವಲೋಕಾನ್ ಪ್ರಭಾಷತಾ      ॥೨೧.೭೦॥

 

ತತ್ರ ಮೇ ಸಂಶಯೋ ಭೂಯಾನ್ ಹರಿಶ್ಚನ್ದ್ರಃ ಕಥಂ ನೃಪಃ ।

ಐನ್ದ್ರಂ ಸಭಾತಳಂ ಪ್ರಾಪ್ತಃ ಪಾಣ್ಡುರ್ನ್ನಾಸ್ಮತ್ಪಿತಾ ಮುನೇ         ॥೨೧.೭೧॥

ಓ ಪಾಪರಹಿತ ನಾರದರೇ ನೀವು ಕೊಟ್ಟ ಸಭೆಗಳ ವರ್ಣನೆ,

ನೀವು ಹೇಳಿದಂತೆ ನಡೆದಿದೆ ಎಲ್ಲೆಡೆ ವಿಷ್ಣುವಿನ ಆರಾಧನೆ.

ದೇವತೆಗಳ ಲೋಕ,ಅಲೌಕಿಕ ರತ್ನಮಯ ಸ್ಥಳಗಳ ಚೆಲುನೋಟ,

ಎಲ್ಲಾ ಚೆಂದವಿದ್ದರೂ ಕಾಡುತಿದೆ ಎನಗೊಂದು ಸಂಶಯದ ಕಾಟ.

ರಾಜಾ ಹರಿಶ್ಚಂದ್ರನಿಗೆ ಹೇಗಾಯಿತು ಇಂದ್ರಲೋಕ ಲಭ್ಯ,

ನಮ್ಮ ತಂದೆ ಪಾಂಡುರಾಜಗೆ ಅದು ಏಕಾಯಿತು ಅಲಭ್ಯ.

 

(ಹರಿಶ್ಚಂದ್ರ ಪಾಂಡುವಿಗಿಂತ ಯಾವ ಲೆಕ್ಕದಲ್ಲೂ ಮಿಗಿಲಾದವನಲ್ಲ. ಅವನು ಚಕ್ರವರ್ತಿಯಾಗಿದ್ದ  ಅಷ್ಟೇ.  ಆದರೆ ಈಗ ಮೇಲಿನ ಲೋಕದಲ್ಲಿ ಅವನು ಪಾಂಡುವಿಗಿಂತ ಎತ್ತರದ ಲೋಕದಲ್ಲಿದ್ದಾನೆ. ಏಕೆ ಹೀಗೆ ಎಂದು ನಾರದರನ್ನು ಕುರಿತು ಯುಧಿಷ್ಠಿರ ಪ್ರಶ್ನೆ ಮಾಡಿದ). 

 

[ಎಲ್ಲಾ ಸಭೆಗಳು, ಅಲ್ಲಿನ ಪರಮಾತ್ಮನ ರೂಪ ಹಾಗೂ ಅಲ್ಲಿರುವ ಉಪಾಸಕರು, ಅಲ್ಲಿರುವ ಅಲೌಕಿಕವಾದ ರತ್ನಗಳು,  ಹೀಗೆ ಶ್ರೇಷ್ಠವಾದ ಸಭೆಗಳನ್ನು ವರ್ಣಿಸುವ ಪರ್ವ ಮಹಾಭಾರತದ ಸಭಾಪರ್ವ. ಇದು ನಿಜವಾದ ಸಭಾಪರ್ವದ ನಿರ್ಣಯ].

[Contributed by Shri Govind Magal]

Friday, 28 January 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 21: 60-64

 

ಉತ್ತರೋತ್ತರತಃ ಸರ್ವೇ ಸುಖೇ ಶತಗುಣೋತ್ತರಾಃ ।

ಅನನ್ತಜನಸಮ್ಪೂರ್ಣ್ಣಾ ಅಪಿ ತೇ ಹೀಚ್ಛಯಾ ಹರೇಃ       ॥೨೧.೬೦॥

 

ಅವಕಾಶವನ್ತೋ ದಿವ್ಯತ್ವಾತ್ ಪೂರ್ಯ್ಯನ್ತೇ ನ ಕದಾಚನ ।

ಸರ್ವಕಾಮಸುಖೈಃ ಪೂರ್ಣ್ಣಾ ದಿವ್ಯಸ್ತ್ರೀಪುರುಷೋಜ್ಜ್ವಲಾಃ ॥೨೧.೬೧॥

ಸ್ವರ್ಗದಿಂದ ವೈಕುಂಠದವರೆಗೆ ಇರುವ ಲೋಕಗಳಲ್ಲಿನ ಸುಖ,

ಕ್ರಮೇಣ ಮೇಲು ಮೇಲಕ್ಕೆ ಒಂದರಿಂದೊಂದು ನೂರ್ಪಟ್ಟು ಅಧಿಕ.

ಅಲ್ಲಿದೆ ಅನಂತ ಜೀವರಾಶಿಗಳ ಶಾಶ್ವತ ವಾಸ,

ಎಲ್ಲರಿಗುಂಟು ಸಂದಣಿಯಿರದ ವಿಶೇಷ ಅವಕಾಶ.

ಈ ಲೋಕಗಳು ಎಲ್ಲಾ ಸುಖ ಸಮೃದ್ಧಿಯಿಂದ ಭರಿತ,

ಅಲೌಕಿಕ ಸ್ತ್ರೀಪುರುಷರಿಂದ ಲೋಕಗಳಿವು ಶೋಭಿತ.

 

[ಭೂಲೋಕದಿಂದ ಸತ್ಯಲೋಕದತನಕ ಅಂತರಿಕ್ಷಲೋಕಗಳನ್ನು ನೋಡಿದೆವು. ಅದೇ ರೀತಿ ಕೆಳಗೆ ಏಳು ಪಾತಾಳ ಲೋಕಗಳಿವೆ-  ಅತಳ, ವಿತಳ, ಸುತಳ, ತಳಾತಳ, ಮಹಾತಳ, ರಸಾತಳ ಮತ್ತು  ಪಾತಾಳ)]

 

ದಿವ್ಯರತ್ನಸಮಾಕೀರ್ಣ್ಣಂ ತಥಾ ಪಾತಾಳಸಪ್ತಕಮ್ ।

ಅಧಸ್ತಾಚ್ಛೇಷದೇವೇನ ಬಲಿನಾ ಸಮಧಿಷ್ಠಿತಮ್ ॥೨೧.೬೨॥

ದಿವ್ಯ ರತ್ನಗಳಿಂದ ತುಂಬಿರುವವುಗಳು,

ಅವು ಏಳು ಪಾತಾಳ ಲೋಕಗಳು.

ಶೇಷನಿಂದ ಹೊರಲ್ಪಟ್ಟ ಲೋಕಗಳು.

 

ಕಾಮಭೋಗಸಮಾಯುಕ್ತಾ ಬಹುವರ್ಷಸಹಸ್ರಿಣಃ ।

ಸಪ್ತದ್ವೀಪೇಷು ಪುರುಷಾ ನಾರ್ಯ್ಯಶ್ಚೋಕ್ತಾಃ ಸುರೂಪಿಣಃ ॥೨೧.೬೩॥

ಕೆಳಗಿನ ಲೋಕದಲ್ಲಿರುವವರದು ಬಯಸಿದ ಭೋಗ ಪಡೆದ ದೀರ್ಘ ಬಾಳು,

ಏಳೂ ದ್ವೀಪಗಳಲ್ಲಿರುವ ಸ್ತ್ರೀ ಪುರುಷರುಗಳು ಅತ್ಯಂತ ಸ್ಫುರದ್ರೂಪಿಗಳು.

 

ಏಷಾಂ ಚ ಸರ್ವಲೋಕಾನಾಂ ಧಾತಾ ನಾರಾಯಣಃ ಪರಃ ।

ವಿಷ್ಣುಲೋಕಸ್ಥಿತೋ ಮುಕ್ತೈಃ ಸದಾ ಸರ್ವೈರುಪಾಸ್ಯತೇ             ॥೨೧.೬೪॥

ಈ ಎಲ್ಲಾ ಲೋಕಗಳನ್ನೂ ಹೊತ್ತಿರುವ ಏಕೈಕ ಮಹಾತ್ರಾಣ,

ಮುಕ್ತಲೋಕದಲ್ಲಿದ್ದು ಮುಕ್ತರಿಂದ ಸ್ತುತಿಗೊಂಬ ನಾರಾಯಣ.

 

[ಹೀಗೆ ಒಟ್ಟಿನಲ್ಲಿ ಇಲ್ಲಿ ಆಚಾರ್ಯರು ಭಾಗವತದ ಐದನೇ ಸ್ಕಂಧದಲ್ಲಿ ಹೇಳಿದ ಭೂಗೋಳ ವರ್ಣನೆ, ಖಗೋಳ ವರ್ಣನೆ ಮತ್ತು ವಿಷ್ಣುಪುರಾಣಾದಿಗಳಲ್ಲಿ ಹೇಳಿರುವ ಇಡೀ ಬ್ರಹ್ಮಾಂಡ ವರ್ಣನೆ ಈ ಮೂರನ್ನೂ ಸಮಷ್ಟಿಯಾಗಿ, ಎಲ್ಲವನ್ನೂ ಒಟ್ಟಿಗೆ ವ್ಯಾಖ್ಯಾನ ಮಾಡಿ ನಮಗೆ ನೀಡಿದ್ದಾರೆ].


[Contributed by Shri Govind Magal]

Saturday, 22 January 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 21: 55-59

 

ತತಃ ಕದಾಚಿತ್ ಪ್ರವರೇ ಸಭಾತಳೇ ಧರ್ಮ್ಮಾತ್ಮಜೋ ರಾಜಭಿರ್ಭ್ರಾತೃಭಿಶ್ಚ ।

ವೃತೋ ನಿಶಮ್ಯೈವ ಸಭಾಃ ಸುರಾಣಾಂ ಯಥಾ ಸ್ಥಿತಾ ನಾರದಮನ್ವಪೃಚ್ಛತ್ ॥೨೧.೫೫॥

ಒಮ್ಮೆ ಮಯ ಮಾಡಿದ ಶ್ರೇಷ್ಠ ಸಭಾಂಗಣದಲ್ಲಿ ರಾಜರು ಸಹೋದರರ ಕೂಡಿದ ಧರ್ಮರಾಜ,

ದೇವತಾಸಭೆಗಳ ಬಗ್ಗೆ ವಿಚಾರಿಸುತ್ತಾ ನಾರದರನ್ನು ಪ್ರಶ್ನೆ ಮಾಡಿದ ತಾನು ಪಾಂಡವಾಗ್ರಜ.

 

ಅನ್ತರಿಕ್ಷಂ ತ್ವಯಾ ಪ್ರೋಕ್ತಂ ಲಕ್ಷಯೋಜನಮುಚ್ಛ್ರಿತಮ್ ।

ಅರ್ದ್ಧಕೋಟ್ಯುಚ್ಛ್ರಿತಃ ಸ್ವರ್ಗ್ಗೋ ವಿಮಾನಾವಲಿಸಙ್ಕುಲಃ ॥೨೧.೫೬॥

ನಾರದರೇ, ಅಂತರಿಕ್ಷವು ಭುವಿಯಿಂದ ಲಕ್ಷ ಯೋಜನ ಮೇಲಿದೆಯೆಂದು ಹೇಳಿದ್ದೀರಿ,

ಆನಂತರ ಸ್ವರ್ಗಲೋಕವು ಐವತ್ತು ಲಕ್ಷ ಯೋಜನ ವಿಸ್ತಾರ ಎಂದು ಹೇಳಿರುವಿರಿ,

ಸ್ವರ್ಗಲೋಕದಲ್ಲಿ ವಿಮಾನಗಳ ಸಾಲು ಸಾಲುಗಳೇ ಇರುತ್ತವೆಂದು ತಿಳಿಸಿರುವಿರಿ.

 

[ಅಂದರೆ ಭೂಮೇರು ಊರ್ಧ್ವ- ಲಕ್ಷ ಯೋಜನ ಪರ್ಯಂತ  ಅಂತರಿಕ್ಷಲೋಕ. ಅನಂತರ ಅರ್ಧ ಕೋಟಿ ಯೋಜನ ಸ್ವರ್ಗಲೋಕ. ಒಟ್ಟು ೫೧,೦೦೦೦೦ ಯೋಜನ ವಿಸ್ತಾರ]

 

ಭುವಃ ಸ್ವರ್ಗ್ಗಶ್ಚ ಕೋಟ್ಯೈವ ಯೋಜನಾನಾಂ ಪ್ರವಿಸ್ತೃತೌ ।

ಮಹರ್ಜ್ಜನಸ್ತಪಶ್ಚೈವ ಕ್ರಮಾದದ್ಧ್ಯರ್ದ್ಧಯೋಜನಾಃ ॥೨೧.೫೭॥

ಭುವಃಲೋಕ ಮತ್ತು ಸ್ವರ್ಗಲೋಕಗಳು ಒಂದು ಕೋಟಿ ಯೋಜನದಷ್ಟು ವಿಸ್ತಾರ,

ಮಹರ್ಲೋಕ,ಜನಲೋಕ, ತಪೋಲೋಕಗಳು ಕ್ರಮವಾಗಿ ಒಂದೂವರೆ ಪಟ್ಟು ಹೆಚ್ಚು ಎತ್ತರ.

 

ಪಞ್ಚಾಶತ್ಕೋಟಿವಿಸ್ತಾರಾ ಯೋಜನಾನಾಂ ಸಮಸ್ತಶಃ ।

ಯಾವನ್ತ ಏತೇ ಮಿಳಿತಾಸ್ತತ್ಪ್ರಮಾಣ ಉದೀರಿತಃ ॥೨೧.೫೮॥

 

ಸತ್ಯಾಖ್ಯೋ ಬ್ರಹ್ಮಲೋಕಸ್ತು ಯತ್ರ ಬ್ರಹ್ಮಾ ವಿ ರಾಜತೇ ।

ತತಶ್ಚ ದ್ವಿಗುಣಃ ಪ್ರೋಕ್ತೋ ವಿಷ್ಣುಲೋಕಃ ಸನಾತನಃ ॥೨೧.೫೯॥

ಐವತ್ತುಕೋಟಿ ಯೋಜನಗಳಷ್ಟು ಎಲ್ಲವೂ ಸೇರಿದ ಊರ್ಧ್ವಲೋಕ,

ಮಹರ್ಲೋಕ, ಜನಲೋಕ, ತಪೋಲೋಕದ ನಂತರ ಬ್ರಹ್ಮನ ಸತ್ಯಲೋಕ.

ಇದರ ವಿಸ್ತಾರ ಭೂಮಧ್ಯಬಿಂದುವಿನಿಂದ ತಪೋಲೋಕದ ತನಕ,

ಅಂಥಾ ಸತ್ಯಲೋಕಕ್ಕಿಂತ ಎರಡು ಪಟ್ಟು ಮಿಗಿಲಾಗಿದೆ ವಿಷ್ಣುಲೋಕ.

 

[ಮಹರ್ಲೋಕ :- ೫೧,೦೦೦೦೦ + ೨೫೫೦೦೦೦ = ೭೬೫೦೦೦೦ ಯೋಜನ. ಜನರ್ಲೋಕ:- ೭೬೫೦೦೦೦ + ೩೮೨೫೦೦೦ = ೧೧೪೭೫೦೦೦ ಯೋಜನ. ತಪೋಲೋಕ:- ೧೧೪೭೫೦೦೦ + ೫೭೩೭೫೦೦ = ೧೭೨೧೨೫೦೦ ಯೋಜನ.  ಭೂಮಧ್ಯಬಿಂದುವಿನಿಂದ ತಪೋಲೋಕದ ತನಕ – ೫೦೦೦೦ + ೫೧೦೦೦೦೦ + ೭೬೫೦೦೦೦ + ೧೧೪೭೫೦೦೦ + ೧೭೨೧೨೫೦೦ = ೪೧೪೮೭೫೦೦ ಯೋಜನ. ಸತ್ಯಲೋಕ -  ೪೧೪೮೭೫೦೦ X ೨ = ೮೨೯೭೫೦೦೦ ಯೋಜನ. ಸತ್ಯಲೋಕದ ದ್ವಿಗುಣ ವಿಷ್ಣುಲೋಕ- ೮೨೯೭೫೦೦೦ X ೨ = ೧೬೫೯೫೦೦೦೦ ಯೋಜನ. ಒಟ್ಟು ೮೨೯೭೫೦೦೦ + ೧೬೫೯೫೦೦೦೦= ೨೪೮೯೨೫೦೦೦. ಹೀಗೆ ಭೂಮಿಯ ಮಧ್ಯದಿಂದ^ ಗಣನೆಗೆ ತೆಗೆದುಕೊಂಡಾಗ ಒಟ್ಟು  ೨೫೦೦೦೦೦೦೦ ಯೋಜನ. ( ^೧೦೭೫೦೦೦+ ೨೪೮೯೨೫೦೦೦).

 

 ಮೇರು ಪರ್ವತವನ್ನೂ ಲೆಕ್ಕ ಹಾಕಿದರೆ ಐವತ್ತು ಕೋಟಿ ಯೋಜನ ವಿಸ್ತಾರ. ಮೇರು ಪರ್ವತದಿಂದ ಲೆಕ್ಕ ಹಾಕಿದರೆ ಇಪ್ಪತ್ತೈದು ಕೋಟಿ ವಿಸ್ತಾರ. ಅದರಿಂದಾಗಿ ಪುರಾಣದ ಮಾತಿಗೂ ಮಹಾಭಾರತದ ಮಾತುಗಳಿಗೂ ವಿರೋಧವಿಲ್ಲ. ಎಲ್ಲಿಂದ ಲೆಕ್ಕ ಹಾಕಿರುವುದು ಎನ್ನುವುದು ಮುಖ್ಯ. ಹೀಗಾಗಿ ಪುರಾಣ ಬೇರೆಬೇರೆ ಗಣಿತವನ್ನು ಹೇಳಿದಾಗ ಅದರ ವಿವಕ್ಷೆ ಏನಿದೆ ಎನ್ನುವುದನ್ನು ತಿಳಿದುಕೊಳ್ಳಬೇಕು].


[Contributed by Shri Govind Magal]

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 21: 50-54

 

ಅನನ್ತಶೀರ್ಷೋsನನ್ತಾಕ್ಷೋsನನ್ತಪಾದಕರೋರುಕಃ ।

ಅನನ್ತಗುಣಮಾಹಾತ್ಮ್ಯಶ್ಚಿದಾನನ್ದಶರೀರಕಃ                              ॥೨೧.೫೦॥

ಅನಂತವಾದ ತಲೆಗಳುಳ್ಳಾತ,

ಅನಂತವಾದ ಕಂಗಳುಳ್ಳಾತ,

ಅನಂತಪಾದ ಕರಕಮಲಗಳುಳ್ಳಾತ.

ಅನಂತವಾದ ಗುಣ ಮಹಾತ್ಮ್ಯವುಳ್ಳಾತ,

ಜ್ಞಾನಾನಂದವೇ ಮೈವೆತ್ತು ಬಂದ ತಾತ.

 

ಮದ್ವಶಾ ಏವ ಸರ್ವೇsಪಿ ತ್ವಂ ಚಾನ್ಯೇ ಚ ಧನಞ್ಜಯ।

ಮತ್ಪ್ರಸಾದಾದ್ ಬಲಂ ಚೈವ ವಿಜಯಶ್ಚಾಖಿಲಾ ಗುಣಾಃ ।

ತಸ್ಮಾನ್ನ ವಿಸ್ಮಯಃ ಕಾರ್ಯ್ಯೋ ನ ದರ್ಪ್ಪಶ್ಚ ತ್ವಯಾsನಘ         ॥೨೧.೫೧॥

ಎಲವೋ ಧನಂಜಯ, ನೀನೇ ಇರಲಿ, ಬೇರೆ ಯಾರೇ ಇರಲಿ ಎಲ್ಲರೂ ನನ್ನ ಕೈಗೊಂಬೆಗಳು,

ನನ್ನ ಅನುಗ್ರಹಮಾತ್ರದಿಂದಲೇ ಬರುವುದು ಬಲ, ವಿಜಯ ಮೊದಲಾದ ಎಲ್ಲಾ ಗುಣಗಳು.

ಈ ಕಾರಣದಿಂದ ಪಡಬೇಕಿಲ್ಲ ಆಶ್ಚರ್ಯ,

ಪಾಪವಿರದ ನಿನಗೆ ಬಾರದಿರಲಿ ಅಹಂಕಾರ.

 

ಮನ್ಮನಾ ಭವ ಮದ್ಭಕ್ತೋ ಮದ್ಯಾಜೀ ಮಾಂ ನಮಸ್ಕುರು ।

ಮಾಮೇವೈಷ್ಯಸಿ ಸತ್ಯಂ ತೇ ಪ್ರತಿಜಾನೇ ಪ್ರಿಯೋsಸಿ ಮೇ’      ॥೨೧.೫೨॥

ನನ್ನ ಭಕ್ತನಾಗಿ ನನ್ನಲ್ಲೇ ಬಗೆಯನ್ನು ನೆಡು,

ನನ್ನನ್ನೇ ಪೂಜಿಸುತ್ತಾ ನನಗೇ ಪೊಡಮಡು.

ನನ್ನ ಸೇರುವೆ ನೀನು :ಇದೆಂದಿಗೂ ಅಲ್ಲ ಸುಳ್ಳು,

ಎನ್ನ ಪ್ರಿಯ ನೀನು :ಆಣೆ ಮಾಡಿ ಹೇಳುತ್ತಿದ್ದೇನೆ ಕೇಳು.

 

ಇತ್ಯುಕ್ತಃ ಪ್ರಣಿಪತ್ಯೈನಂ ಕ್ಷಮಸ್ವೇತ್ಯಾಹ ಫಲ್ಗುನಃ ।

ಉಷಿತ್ವಾ ಕತಿಚಿನ್ಮಾಸಾನ್ ಯಯುಃ ಸರ್ವೇಪಿ ಪಾಣ್ಡವಾಃ         ॥೨೧.೫೩॥

 

ಅನುಜ್ಞಾತಾಃ ಕೇಶವೇನ ಭಕ್ತಿನಮ್ರಧಿಯೋsಚ್ಯುತೇ ।

ಸಮ್ಭಾವಿತಾಃ ಕೇಶವೇನ ಸೌಹಾರ್ದ್ದೇನಾಧಿಕೇನ ಚ                  ॥೨೧.೫೪॥

ಇದೆಲ್ಲಾ ಕೇಳಿದ ಅರ್ಜುನ ಕೃಷ್ಣನಲ್ಲಿ ಕ್ಷಮೆ ಬೇಡುತ್ತಾ ಮಾಡಿದ ನಮಸ್ಕಾರ,

ಪಾಂಡವರೆಲ್ಲರೂ ಕೃಷ್ಣಸೇವೆ ಮಾಡುತ್ತಾ ಕೆಲ ತಿಂಗಳಿದ್ದದ್ದದು ದ್ವಾರಕಾಪುರ.

ಅವರಿಗೆಲ್ಲಾ ಇತ್ತು ಕೃಷ್ಣನಲ್ಲಿ ಬಾಗಿದ ಭಕ್ತಿಯ ಮನ,

ನಾರಾಯಣನಿಂದ ಸ್ವೀಕರಿಸಿದರು ಪ್ರೀತಿಯ ಬಹುಮಾನ.

ಕೃಷ್ಣನ ಆಜ್ಞೆ ಪಡೆದವರಾಗಿ ಸೇರಿಕೊಂಡರು ತಮ್ಮ ಪಟ್ಟಣ.

 

[ಇದು ಭಾಗವತದ ೧೦ನೇ ಸ್ಕಂಧದ ೧೦೩ನೇ ಅಧ್ಯಾಯದಲ್ಲಿ ಬರುವ ಕಥೆಯಾಗಿದ್ದು, ಅದನ್ನು ಇಲ್ಲಿ ಆಚಾರ್ಯರು ಕಾಲಕ್ರಮದಲ್ಲಿ ಪ್ರಸ್ತುತಪಡಿಸಿರುವುದನ್ನು ನಾವು ಗಮನಿಸಬೇಕು]

[Contributed by Shri Govind Magal]

Wednesday, 19 January 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 21: 42-49

 ಕಿಮೇತದ್ ದೃಷ್ಟಮಿತ್ಯೇವ ತೇನ ಪೃಷ್ಟೋ ರಮಾಪತಿಃ ।

ಅಯಂ ದ್ವೀಪಃ ಸಾಗರಶ್ಚ ಲಕ್ಷಯೋಜನವಿಸ್ತೃತೌ                      ॥೨೧.೪೨॥

ನಾನೇನೆಲ್ಲಾ ನೋಡಿದೆ ಎಂದು ತಬ್ಬಿಬ್ಬಾದಂತೆ ಕಾಣುವ ಅರ್ಜುನ ಶ್ರೀಕೃಷ್ಣನ ಕೇಳುತ್ತಾನೆ,

ಜಂಬೂದ್ವೀಪವ ಆವರಿಸಿಕೊಂಡ ಸಾಗರವದು ಲಕ್ಷ ಯೋಜನದಷ್ಟು ಎಂದು ಕೃಷ್ಣ ಹೇಳುತ್ತಾನೆ.

 

ತದನ್ಯೇ ತು ಕ್ರಮೇಣೈವ ದ್ವಿಗುಣೇನೋತ್ತರೋತ್ತರಾಃ ।

ಅನ್ತ್ಯಾದ್ಧ್ಯರ್ದ್ಧಸ್ಥಲಂ ಹೈಮಂ ಬಾಹ್ಯತೋ ವಾಜ್ರಲೇಪಿಕಮ್       ॥೨೧.೪೩॥

ಬೇರೆಲ್ಲಾ ದ್ವೀಪ ಸಮುದ್ರಗಳದ್ದು ಕ್ರಮವಾಗಿ ಎರಡು ಪಟ್ಟು ಹೆಚ್ಚು ವಿಸ್ತಾರ,

ಶುದ್ಧೋದಕದ ವಿಸ್ತಾರಕ್ಕಿಂತ ಒಂದೂವರೆ ಪಟ್ಟು ವಜ್ರಲೇಪ ಪ್ರದೇಶದ ವಿಸ್ತಾರ.

[ವಿಷ್ಣುಪುರಾಣ( ೨.೨.೫-೬) ಜಂಬೂಪ್ಲಕ್ಷಾಹ್ವಯೌ ದ್ವೀಪೌ ಶಾಲ್ಮಲಶ್ಚಾಪರೋ ದ್ವಿಜ । ಕುಶಃ ಕ್ರೌಞ್ಚಸ್ತಥಾ ಶಾಕಃ ಪುಷ್ಕರಶ್ಚೈವ ಸಪ್ತಮಃ ।  ಎತೇ ದ್ವೀಪಾಃ ಸಮುದ್ರೈಸ್ತು ಸಪ್ತ ಸಪ್ತಭಿರಾವೃತಾಃ । ಲವಣೇಕ್ಷುಸುರಾಸರ್ಪಿರ್ದಧಿದುಗ್ಧಜಲೈಃ ಸಮಮ್’ ಜಂಬೂ, ಪ್ಲಕ್ಷ, ಶಾಲ್ಮಲ, ಕುಶಕ್ರೌಞ್ಚ  ಶಾಕಃ ಮತ್ತು ಪುಷ್ಕರ ಎನ್ನುವ ಏಳುದ್ವೀಪಗಳಿವೆ. ಇವು ಏಳು ಸಮುದ್ರಗಳಿಂದ ಆವೃತವಾಗಿವೆ. ಅವುಗಳೆಂದರೆ: ಲವಣ(ಉಪ್ಪು), ಇಕ್ಷು(ಕಬ್ಬಿನರಸ), ಸುರಾ(ಮದ್ಯ), ಸರ್ಪಿಃ(ಘೃತ -ತುಪ್ಪ), ದಧಿ(ಮೊಸರು), ದುಗ್ಧ(ಹಾಲು) ಮತ್ತು ಶುದ್ಧೋದಕ].

 

ಏತತ್ ಸರ್ವಂ ಲೋಕನಾಮ ಹ್ಯೇತಸ್ಮಾದ್ ದ್ವಿಗುಣಂ ತಮಃ ।

ಅನ್ಧಂ ಯತ್ರ ಪತನ್ತ್ಯುಗ್ರಾ ಮಿಥ್ಯಾಜ್ಞಾನಪರಾಯಣಾಃ                 ॥೨೧.೪೪॥

ಇವೆಲ್ಲವೂ ಸೇರಿದಾಗದು ಸೂರ್ಯರಶ್ಮಿ ಹರಿದಾಡುವ ಪ್ರದೇಶ -ಲೋಕ,

ಎರಡು ಪಟ್ಟು ಅಂಧಂತಮ :ಮಿಥ್ಯಾಜ್ಞಾನ ಪರಾಯಣರು ಬೀಳುವ ಲೋಕ.

 

ಘನೋದಕಂ ತದ್ದ್ವಿಗುಣಂ ತದನ್ತೇ ಧಾಮ ಮಾಮಕಮ್ ।

ಯತ್ತದ್ ದೃಷ್ಟಂ ತ್ವಯಾ ಪಾರ್ತ್ಥ ತತ್ರ ಮುಕ್ತೈರಜಾದಿಭಿಃ           ॥೨೧.೪೫॥

 

ಸೇವ್ಯಮಾನಃ ಸ್ಥಿತೋ ನಿತ್ಯಂ ಸರ್ವೈಃ ಪರಮಪೂರುಷಃ ।

ಲೋಕಾಲೋಕಪ್ರದೇಶಸ್ತು ಪಞ್ಚಾಶಲ್ಲಕ್ಷವಿಸ್ತೃತಃ                       ॥೨೧.೪೬॥

 

ಸಪಞ್ಚಾಶತ್ಸಹಸ್ರಶ್ಚ ತಸ್ಯಾಪಿ ಗಣನಂ ತಥಾ ।

ಯೋಜನಾನಾಂ ಪಞ್ಚವಿಂಶತ್ಕೋಟಯೋ ಮೇರುಪರ್ವತಾತ್ ॥೨೧.೪೭॥

 

ಚತಸೃಷ್ವಪಿ ದಿಕ್ಷೂರ್ಧ್ವಮಧಶ್ಚಾಣ್ಡಂ ಪ್ರಕೀರ್ತ್ತಿತಮ್ । 

ಅಬಗ್ನೀರನಭೋಹಙ್ಕೃನ್ಮಹತ್ತತ್ವಗುಣತ್ರಯೈಃ                                    ॥೨೧.೪೮॥

 

ಕ್ರಮಾದ್ ದಶೋತ್ತರೈರೇತದಾವೃತಂ ಪರತಸ್ತತಃ ।

ವ್ಯಾಪ್ತೋsಹಂ ಸರ್ವಗೋsನನ್ತೋsನನ್ತರೂಪೋ ನಿರನ್ತರಃ      ॥೨೧.೪೯॥

ಘನೋದಕವಿರುವುದು ಅಂಧಂತಮಕ್ಕಿಂತ ಎರಡು ಪಟ್ಟು ಮಿಗಿಲಾಗಿ,

ಅದರಾಚೆಯಿರುವ ನನ್ನ ಧಾಮವನ್ನೇ ನೀನು ನೋಡಿರುವುದು ಹೋಗಿ.

ಅಲ್ಲಿ ಪರಮಪುರುಷನಾದ ನಾನು ಸಮಸ್ತ ಬ್ರಹ್ಮಾದಿಗಳಿಂದ,

ಬೇರೆಲ್ಲಾ ದೇವತೆಗಳು ಮತ್ತು ಇತರ ಮುಕ್ತರಿಂದ ಸದಾವಂದ್ಯ.

 

ಲೋಕಾಲೋಕ ಪ್ರದೇಶ ಐವತ್ತು ಲಕ್ಷ ಐವತ್ತು ಸಾವಿರ ಯೋಜನ ವಿಸ್ತಾರ,

ಪುರಾಣ ಹೇಳಿರುವ ಐವತ್ತು ಲಕ್ಷ ಯೋಜನ ತಾತ್ಪರ್ಯಗ್ರಾಹಕ ವಿಚಾರ.

ಮೇರುಪರ್ವತ ಮಧ್ಯವಾಗಿಟ್ಟುಕೊಂಡು ಇಪ್ಪತ್ತೈದು ಕೋಟಿ ಯೋಜನ,

ಮೇಲೆ ಕೆಳಗೆ ಮತ್ತು ನಾಕು ದಿಕ್ಕುಗಳಲ್ಲೂ ಇದೆ ಬ್ರಹ್ಮಾಂಡದ ಪರಿಮಾಣ.

ಇಂತಹಾ ಬ್ರಹ್ಮಾಂಡಕ್ಕೆ ಉಂಟು ಅನೇಕ ಆವರಣ,

ಜಲಾವರಣ,ಅಗ್ನಿ ಆವರಣ,ಗಾಳಿ ಆಕಾಶದಾವರಣ,

ಅಹಂಕಾರ ತತ್ವದಾವರಣ, ಮಹತತ್ವದಾವರಣ, ತ್ರಿಗುಣಗಳ ಆವರಣ.

(ತಮೋಗುಣ, ರಜೋಗುಣ, ಮತ್ತು ಸತ್ವಗುಣಗಳ  ಆವರಣ.)

ಇಲ್ಲಿ ಪ್ರತಿಯೊಂದು ಆವರಣದ ಗಾತ್ರ,

ಒಂದಕ್ಕಿಂತ ಒಂದು ಹತ್ತುಪಟ್ಟು ವಿಸ್ತಾರ.

ಇವೆಲ್ಲವುದರ ಆಚೆ ಭಗವಂತನವ ವ್ಯಾಪ್ತ,

ಸರ್ವತ್ರವ್ಯಾಪ್ತ, ಅಂತವೇ ಇರದ ಅನಂತ.

ಅನಂತಾನಂತ ರೂಪಗಳ ಆ ಭಗವಂತ,

ಬ್ರಹ್ಮಾಂಡದ ಪ್ರತಿ ಪರಮಾಣುವಿನಲ್ಲೂ ವ್ಯಾಪ್ತ.

[ಮೇರುಪರ್ವತ ಜಂಬೂದ್ವೀಪದ ಕೇಂದ್ರ. ಈ ಕೇಂದ್ರದಿಂದ ಲವಣಸಮುದ್ರ ೫೦,೦೦೦ ಯೋಜನ. ಲವಣಸಮುದ್ರ ೧,೦೦೦೦೦ ಯೋಜನ ವಿಸ್ತಾರ.  ಪ್ಲಕ್ಷದ್ವೀಪ ೨,೦೦೦೦೦ ಯೋಜನ ಹಾಗೆಯೇ ಅದನ್ನು ಆವರಿಸಿರುವ ಇಕ್ಷುಸಮುದ್ರದ ವಿಸ್ತಾರವೂ ೨,೦೦೦೦೦ ಯೋಜನ. ನಂತರ ಶಾಲ್ಮಲದ್ವೀಪ ೪,೦೦೦೦೦ ಯೋಜನ ಮತ್ತು ಅದನ್ನು ಆವರಿಸಿರುವ ಸುರಸಮುದ್ರವು ೪,೦೦೦೦೦ ಯೋಜನ ವಿಸ್ತಾರವುಳ್ಳದ್ದು. ಕುಶದ್ವೀಪ ೮,೦೦೦೦೦ ಯೋಜನವಾದರೆ ಘೃತಸಮುದ್ರ ೮,೦೦೦೦೦ ಯೋಜನ. ಕ್ರೌಞ್ಚದ್ವೀಪ ೧೬,೦೦೦೦೦ ಯೋಜನ ಮತ್ತು ದಧಿಸಮುದ್ರ ೧೬,೦೦೦೦೦ ಯೋಜನ. ಶಾಕದ್ವೀಪ ೩೨,೦೦೦೦೦ ಯೋಜನ ಮತ್ತು ಕ್ಷೀರಸಾಗರ ೩೨,೦೦೦೦೦ ಯೋಜನನಂತರ ಪುಷ್ಕರದ್ವೀಪ ೬೪,೦೦೦೦೦ ಯೋಜನವಾದರೆ ಶುದ್ಧೋದಕ  ೬೪,೦೦೦೦೦ ಯೋಜನ. ವಜ್ರಲೇಪಿತ ಪ್ರದೇಶ ೧.೫X೬೪,೦೦೦೦೦=೯೬,೦೦,೦೦೦ ಯೋಜನ ವಿಸ್ತಾರ. ಇವಿಷ್ಟನ್ನು ‘ಲೋಕ’ ಎಂದು ಕರೆಯುತ್ತಾರೆ. ಅಂದರೆ ಲೋಕದ ವಿಸ್ತಾರ ಮೇರುಮಧ್ಯದಿಂದ ೩,೪೯,೫೦,೦೦೦ ಯೋಜನ. ಲೋಕಾಲೋಕಪರ್ವತ ಪ್ರದೇಶ ೫೦,೫೦,೦೦೦ ಯೋಜನ. ಲೋಕಮಾನದ ದ್ವಿಗುಣ ಅನ್ಧಂತಮ. ಅಂದರೆ ೬,೯೯,೦೦,೦೦೦ ಯೋಜನ. ಇದರ ದ್ವಿಗುಣ ಘನೋದಕ. ಅಂದರೆ ೧೩,೯೮,೦೦,೦೦೦ ಯೋಜನ. ಒಟ್ಟಿನಲ್ಲಿ ಜಂಬೂದ್ವೀಪದ ಕೇಂದ್ರದಿಂದ ಘನೋದಕದ ಕೊನೆಯ ತನಕದ ವಿಸ್ತಾರ: ೨೪,೯೭,೦೦,೦೦೦ ಯೋಜನ.  {,೪೯,೫೦,೦೦೦(ಲೋಕ) + ೫೦,೫೦,೦೦೦(ಲೋಕಾಲೋಕ) + ೬,೯೯,೦೦,೦೦೦(ಅನ್ಧಂತಮ) + ೧೩,೯೮,೦೦,೦೦೦(ಘನೋದಕ) = ೨೪,೯೭,೦೦,೦೦೦ ಯೋಜನ}. ಅದರಾಚೆ ಇರುವುದು ಭಗವಂತನ ಧಾಮ. ಅದು ಮೂರುಲಕ್ಷ ಯೋಜನ ಎಂದು ಹೇಳುತ್ತಾರೆ. ಒಟ್ಟಿನಲ್ಲಿ ಕೇಂದ್ರಬಿಂದುವಿನಿಂದ ೨೫ ಕೋಟಿ ಯೋಜನ ಎಲ್ಲಾ ದಿಕ್ಕಿನಲ್ಲೂ ಎಂದು ಹೇಳಲಾಗುತ್ತದೆ. ಅಂದರೆ ಒಟ್ಟು ವಿಸ್ತಾರ ೫೦ ಕೋಟಿ ಯೋಜನ].