Tuesday, 7 June 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 22: 148-156

 

ನಮಶ್ಚಕ್ರೇ ತತಃ ಪ್ರಾದಾದಸ್ತ್ರಂ ಪಾಶುಪತಂ ಶಿವಃ ।

ಅಸ್ತ್ರಂ ತದ್ ವಿಷ್ಣುದೈವತ್ಯಂ ಸಾಧಿತಂ ಶಙ್ಕರೇಣ ಯತ್ ॥೨೨.೧೪೮॥

 

ತಸ್ಮಾತ್ ಪಾಶುಪತಂ ನಾಮ ಸ್ವಾನ್ಯಸ್ತ್ರಾಣ್ಯಪರೇ ಸುರಾಃ ।

ದದುಸ್ತದೈವ ಪಾರ್ತ್ಥಾಯ ಸರ್ವೇ ಪ್ರತ್ಯಕ್ಷಗೋಚರಾಃ ॥೨೨.೧೪೯॥

ಆನಂತರ ಸದಾಶಿವನಿಂದ ಅರ್ಜುನನಿಗೆ ಪಾಶುಪತಾಸ್ತ್ರ ಪ್ರದಾನ,

ಗಮನಿಸಬೇಕು ಆ ಅಸ್ತ್ರವು ಶ್ರೀಮನ್ನಾರಾಯಣ ದೇವತೆಯ ಅಧೀನ.

ಅದನ್ನು ಶಿವನೇ ಸಾಕ್ಷಾತ್ಕರಿಸಿಕೊಂಡ ಋಷಿಯಾದ್ದರಿಂದ ಅದಕ್ಕನ್ನುವರು ಪಾಶುಪತ,

ಆನಂತರ ಉಳಿದೆಲ್ಲಾ ದೇವತೆಗಳೂ ಕೊಟ್ಟ ಅಸ್ತ್ರಗಳನ್ನು ಸ್ವೀಕರಿಸುತ್ತಾನೆ ಪಾರ್ಥ.

ಆ ದೇವತೆಗಳಿಂದ ಪ್ರತ್ಯಕ್ಷ ಗೋಚರವಾಗಿ ಅಸ್ತ್ರಗಳನ್ನು ಸ್ವೀಕರಿಸಿ ಆದ ಕೃತಾರ್ಥ.

 

ಇನ್ದ್ರೋSರ್ಜ್ಜುನಂ ಸಮಾಗಮ್ಯ ಪ್ರಾಹ ಪ್ರೀತೋSಸ್ಮಿ ತೇSನಘ ।

ರುದ್ರದೇಹಸ್ಥಿತಂ ಬ್ರಹ್ಮ ವಿಷ್ಣ್ವಾಖ್ಯಂ ತೋಷಿತಂ ತ್ವಯಾ ॥೨೨.೧೫೦॥

 

ತೇನ ಲೋಕಂ ಮಮಾSಗಚ್ಛ ಪ್ರೇಷಯಾಮಿ ರಥಂ ತವ ।

ಇತ್ಯುಕ್ತ್ವಾ ಪ್ರಯಯಾವಿನ್ದ್ರಸ್ತದ್ರಥೇನ ಚ ಮಾತಲಿಃ ॥೨೨.೧೫೧॥

ತದನಂತರ ಇಂದ್ರದೇವ ಅರ್ಜುನನ ಬಳಿಗೆ ಬಂದು ಹೀಗೆ ಹೇಳುತ್ತಾನೆ,

ಪಾಪದೂರ ಪಾರ್ಥ, ನಿನ್ನಿಂದ ರುದ್ರಾಂತರ್ಗತ ವಿಷ್ಣು ಪ್ರೀತನಾಗಿದ್ದಾನೆ.

ಭಗವತ್ಪ್ರೀತಿಯಾದದ್ದರಿಂದ ಸಹಜ ನಾನೂ ಆಗಿದ್ದೇನೆ ಸಂತೃಪ್ತ,

ಹರಿಪ್ರೇರಣೆಯಂತೆ ನೀನು ನನ್ನ ಲೋಕಕ್ಕೆ ಬರಲು ಕಳಿಸುತ್ತೇನೆ ರಥ.

ಇಷ್ಟು ಹೇಳಿದ ಇಂದ್ರದೇವ ಅಲ್ಲಿಂದ ತೆರಳುತ್ತಾನೆ,

ಮಾತಲಿ ರಥದೊಂದಿಗೆ ಅರ್ಜುನನಲ್ಲಿಗೆ ಬರುತ್ತಾನೆ.

 

ಆಯಾತ್ ಪಾರ್ತ್ಥಸ್ತಮಾರು‌ಹ್ಯ ಯಯೌ ತಾತನಿವೇಶನಮ್ ।

ಪೂಜಿತೋ ದೈವತೈಃ ಸರ್ವೈರಿದ್ರೇಣೈವ ನಿವೇಶಿತಃ ।

ತೇನ ಸಾರ್ದ್ಧಮುಪಾಸೀದತ್ ತಸ್ಮಿನ್ನೈನ್ದ್ರೇ ವರಾಸನೇ             ॥೨೨.೧೫೨॥

ಆ ರಥವೇರಿದ ಅರ್ಜುನ ಇಂದ್ರನ ಮನೆಗೆ ತೆರಳುತ್ತಾನೆ,

ಅಲ್ಲಿ ಎಲ್ಲಾ ದೇವತೆಗಳಿಂದ ಸತ್ಕಾರವನ್ನು ಸ್ವೀಕರಿಸುತ್ತಾನೆ.

ಇಂದ್ರನಿಂದಲೇ ಅವನ ಸಿಂಹಾಸನದಲ್ಲಿ ಆಸೀನನಾಗುತ್ತಾನೆ.

 

ಪ್ರೀತ್ಯಾ ಸಮಾಶ್ಲಿಷ್ಯ ಕುರುಪ್ರವೀರಂ ಶಕ್ರೋ ದ್ವಿತೀಯಾಂ ತನುಮಾತ್ಮನಃ ಸಃ ।

ಈಕ್ಷನ್ ಮುಖಂ ತಸ್ಯ ಮುಮೋದ ಸೋSಪಿ ಹ್ಯುವಾಸ ತಸ್ಮಿನ್ ವತ್ಸರಾನ್ ಪಞ್ಚ ಲೋಕೇ ॥೨೨.೧೫೩॥

ಇಂದ್ರ ಅರ್ಜುನಗೀಯುತ್ತಾನೆ ಪ್ರೀತಿಯ ಆಲಿಂಗನ,

ಇಂದ್ರನವೇ ಎರಡು ರೂಪಗಳ ಭವ್ಯವಾದ ಸಮ್ಮಿಲನ.

ಅರ್ಜುನನ ಮುಖ ನೋಡುತ್ತಾ ಇಂದ್ರ ಪಟ್ಟ ಬಹು ಸಂತೋಷ,

ಅರ್ಜುನನದಾಗುತ್ತದೆ ಇಂದ್ರಲೋಕದಲ್ಲೇ ಐದುವರ್ಷ ವಾಸ.

 

ಅಸ್ತ್ರಾಣಿ ತಸ್ಮಾ ಅದಿಶತ್ ಸ ವಾಸವೋ ಮಹಾನ್ತಿ ದಿವ್ಯಾನಿ ತದೋರ್ವಶೀ ತಮ್ ।

ಸಮ್ಪ್ರಾಪ್ಯ ಭಾವೇನ ತು ಮಾನುಷೇಣ ಮಾತಾ ಕುಲಸ್ಯೇತಿ ನಿರಾಕೃತಾSಭೂತ್ ॥೨೨.೧೫೪॥

ಇಂದ್ರನಿಂದ ಅರ್ಜುನನಿಗೆ ಮಹಾ ದಿವ್ಯಾಸ್ತ್ರಗಳ ಪ್ರದಾನ,

ಆಗ ಊರ್ವಶಿ ಬರುತ್ತಾಳೆ ಬಯಸಿ ಅರ್ಜುನನ ಮಿಲನ.

ಮಾನುಷಸಂಸ್ಕಾರದಿಂದವಳು ನನ್ನ ಕುಲದ ಹಿರಿಯಳು ಆಗುತ್ತಾಳೆ,

ನಿರಾಕರಿಸಿದ ಅರ್ಜುನ ಹೇಳುತ್ತಾನೆ:ಅವಳು ಮುತ್ತಜ್ಜಿ ಆಗುತ್ತಾಳೆ.

 

ಷಣ್ಢೋ ಭವೇತ್ಯೇವ ತಯಾSಭಿಶಪ್ತೇ ಪಾರ್ತ್ಥೇ ಶಕ್ರೋSನುಗ್ರಹಂ ತಸ್ಯ ಚಾದಾತ್ ।

ಸಂವತ್ಸರಂ ಷಣ್ಢರೂಪೀ ಚರಸ್ವ ನ ಷಣ್ಢತಾ ತೇ ಭವತೀತಿ ಧೃಷ್ಣುಃ ॥೨೨.೧೫೫॥

ನಿರಾಸೆಗೊಂಡ ಊರ್ವಶಿಯಿಂದ ಅರ್ಜುನಗೆ ನಪುಂಸಕನಾಗೆಂದು ಶಾಪ,

ಅರಿವೈರಿ ಇಂದ್ರ ಅನುಗ್ರಹಿಸಿ ಶಾಪಕ್ಕೆ ಕೊಟ್ಟ ವರವಾಗುವಂಥ ರೂಪ.

ಧರಿಸಿಕೊಂಡಿರು ಒಂದು ವರ್ಷ ಕಾಲ ನಪುಂಸಕ ವೇಷ,

ನೀನು ಹಾಗಿದ್ದರೂ ನಿನಗೆ ಅಂಟದು ಷಂಢತ್ವದ ದೋಷ.

 

ತತೋSವಸತ್ ಪಾಣ್ಡವೇಯೋ ಗಾನ್ಧರ್ವಂ ವೇದಮಭ್ಯಸನ್ ।

ಗನ್ಧರ್ವಾಚ್ಚಿತ್ರಸೇನಾತ್ತು ತಥಾSಸ್ತ್ರಾಣಿ ಸುರೇಶ್ವರಾತ್ ॥೨೨.೧೫೬॥

ಆನಂತರ ಅರ್ಜುನಗೆ ಸಂಗೀತ ನಾಟ್ಯ ಮುಂತಾದುದಕ್ಕೆ ಸಂಬಂಧಿಸಿದ ವೇದಾಭ್ಯಾಸ,

ಅದು ಚಿತ್ರಸೇನನಿಂದಲೂ, ಅಸ್ತ್ರಾಭ್ಯಾಸ ಇಂದ್ರನಿಂದಲೂ ಆಗುತ್ತಾ ಅಲ್ಲೇ ಅವನ ವಾಸ.

Monday, 6 June 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 22: 142-147

 

[ಹಾಗಿದ್ದರೆ – ‘ನಾನು ಭೂಮಿಯಮೇಲೆ ಇರುವಾಗ ಅರ್ಜುನನನ್ನು ಯಾರೊಬ್ಬರೂ ಗೆಲ್ಲುವುದಿಲ್ಲ’ ಎಂದು ಶ್ರೀಕೃಷ್ಣನ ವರವಿದ್ದರೂ ಕೂಡ, ಇಲ್ಲಿ ಏಕೆ ಅರ್ಜುನ ಪರಾಜಯವನ್ನು ಹೊಂದಿದ ಎಂದರೆ ಹೇಳುತ್ತಾರೆ- ]

 

ಪೂರ್ವಂ ಸಮ್ಪ್ರಾರ್ತ್ಥಯಾಮಾಸ ಶಙ್ಕರೋ ಗರುಡಧ್ವಜಮ್ ।

ಅವರಾಣಾಂ ವರಂ ಮತ್ತೋ ಯೇಷಾಂ ತ್ವಂ ಸಮ್ಪ್ರಯಚ್ಛಸಿ ॥೨೨.೧೪೨॥

 

ಅಜೇಯತ್ವಂ ಪ್ರಸಾದಾತ್ ತೇ ವಿಜೇಯಾಃ ಸ್ಯುರ್ಮ್ಮಯಾSಪಿ ತೇ ।

ಇತ್ಯುಕ್ತಃ ಪ್ರದದೌ ವಿಷ್ಣುರುಮಾಧೀಶಾಯ ತಂ ವರಮ್ ॥೨೨.೧೪೩॥

ಹಿಂದೆ ಶಿವಶಂಕರನು ಗರುಡಧ್ವಜ ವಿಷ್ಣುವಿನಲ್ಲಿ ಹೀಗೆಂದು ಬೇಡಿಕೊಂಡಿದ್ದ,

ಎನಗಿಂತ ಕೆಳಗಿನ ಅಜೇಯತ್ವ ವರವಿದ್ದವರನ್ನು ಗೆಲ್ಲಲು ನಾನಾಗಬೇಕು ಬದ್ಧ.

 

ತೇನಾಜಯಚ್ಛ್ವೇತವಾಹಂ ಗಿರಿಶೋ ರಣಮದ್ಧ್ಯಗಮ್ ।

ಕೇವಲಾನ್ ವೈಷ್ಣವಾನ್ ಮನ್ತ್ರಾನ್ ವ್ಯಾಸಃ ಪಾರ್ತ್ಥಾಯ ನೋ ದದೌ ॥೨೨.೧೪೪॥

 

ಏತಾವತಾSಲಂ ಭೀಷ್ಮಾದೇರ್ಜ್ಜಯಾರ್ತ್ಥಮಿತಿ ಚಿದ್ಧನಃ ।

ಕೇವಲೈರ್ವೈಷ್ಣವೈರ್ಮ್ಮನ್ತ್ರೈಃ ಸ್ವದತ್ತೈರ್ವಿಜಯಾವಹೈಃ ॥೨೨.೧೪೫॥

 

ಅತಿವೃದ್ಧಸ್ಯ ಪಾರ್ತ್ಥಸ್ಯ ದರ್ಪ್ಪಃ ಸ್ಯಾದಿತ್ಯಚಿನ್ತಯತ್ ।

ಪಾರ್ತ್ಥಃ ಸಙ್ಜ್ಞಾಮವಾಪ್ಯಾಥ ಜಯಾರ್ತ್ಥ್ಯಾರಾಧಯಚ್ಛಿವಮ್              ॥೨೨.೧೪೬॥

 

 ವ್ಯಾಸೋದಿತೇನ ಮನ್ತ್ರೇಣ ತಾನಿ ಪುಷ್ಪಾಣಿ ತಚ್ಛಿರಃ ।

ಆರುಹನ್ ಸ ತು ತಂ ಜ್ಞಾತ್ವಾ ರುದ್ರ ಇತ್ಯೇವ ಫಲ್ಗುನಃ ॥೨೨.೧೪೭॥

ಹಾಗಾಗಿ ರುದ್ರದೇವ ಅರ್ಜುನನೊಡನೆ ನಡೆದ ಯುದ್ಧದಲ್ಲಿ ಗೆದ್ದ,

ವ್ಯಾಸರು ಅರ್ಜುನನಿಗೆ ಮುಖ್ಯ ವಿಷ್ಣು ಮಂತ್ರ ನೀಡದಿರುವುದು ಸಿದ್ಧ.

ಮಾಡಿದ್ದರು -ಭೀಷ್ಮ ದ್ರೋಣರ ಗೆಲ್ಲಲು ಸಾಕಾಗುವ ಬೇರೆ ದೇವತೆಗಳ ಉಪದೇಶ,

ವೈಷ್ಣವ ಮಂತ್ರದಿಂದ ಅರ್ಜುನ ವಿಪರೀತ ಗೆಲುವು ಸಾಧಿಸಿ ಅಹಂ ಏರದಿರೋ ಉದ್ದೇಶ.

ಇತ್ತ ಮೂರ್ಛೆಯಿಂದ ಎದ್ದು ಕುಳಿತವನಾದ ಅರ್ಜುನ,

ಮಾಡಿದ:ವ್ಯಾಸರ್ಹೇಳಿದ ಮಂತ್ರದಿಂದ ಶಿವಾರಾಧನ.

ಅರ್ಜುನನರ್ಪಿಸಿದ ಪುಷ್ಪಗಳು ಏರಿದವು ಬೇಡ ವೇಷದ ಶಿವನ ಶಿರ,

ಆ ಬೇಡ ಶಿವನೇ ಎಂದರಿತ ಅರ್ಜುನ ಮಾಡಿದ ಶಿವನಿಗೆ ನಮಸ್ಕಾರ.

Saturday, 4 June 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 22: 134-141

 

ಷಣ್ಮಾಸೇsತಿಗತೇSಪಶ್ಯನ್ಮೂಕಂ ನಾಮಾಸುರಂ ಗಿರೌ ।

ವರಾಹರೂಪಮಾಯಾತಂ ವಧಾರ್ತ್ಥಂ ಫಲ್ಗುನಸ್ಯ ಚ ॥೨೨.೧೩೪॥

ಆರು ತಿಂಗಳು ಕಾಲವಾದ ಮೇಲೆ ಆ ಬೆಟ್ಟದಲ್ಲಿ ಹಂದಿಯೊಂದು ಕಂಡಿತ್ತು,

ಅದು ಮೂಕನೆಂಬ ಅಸುರನಾಗಿದ್ದು ಅರ್ಜುನನ ವಧಿಸಲು ಬಂದಿತ್ತು

 

ತಂ ಜ್ಞಾತ್ವಾ ಫಲ್ಗುನೋ ವೀರಃ ಸಜ್ಯಂ ಕೃತ್ವಾ ತು ಗಾಣ್ಡಿವಮ್ ।

ಚಿಕ್ಷೇಪ ವಜ್ರಸಮಿತಾಂಸ್ತತ್ಕಾಯೇ ಸಾಯಕಾನ್ ಬಹೂನ್ ॥೨೨.೧೩೫॥

ಶೂರ ಅರ್ಜುನ ಮೂಕಾಸುರ ಬಂದಿದ್ದನ್ನು ತಿಳಿದ,

ತನ್ನ ಗಾಂಡೀವ ಧನುಸ್ಸನ್ನು ಸಜ್ಜುಗೊಳಿಸಿದ,

ವಜ್ರಾಯುಧ ಸಮ ಬಾಣಗಳವನ ಮೇಲೆಸೆದ.

 

ಕಿರಾತರೂಪಸ್ತಮನು ಸಭಾರ್ಯ್ಯಶ್ಚ ತ್ರಿಯಮ್ಬಕಃ ।

ಸ ಮಮಾರ ಹತಸ್ತಾಭ್ಯಾಮ್ ದಾನವಃ ಪಾಪಚೇತನಃ ॥೨೨.೧೩೬॥

ಶಿವನೂ ಪಾರ್ವತೀ ಸಮೇತ ಬೇಡವೇಷದಿಂದ ಅಲ್ಲಿದ್ದ,

ರುದ್ರದೇವನೂ ಅಸುರನ ಮೇಲೆ ಬಹಳ ಬಾಣ ಎಸೆದ.

ಎರಡೂ ಕಡೆಯಿಂದ ಹೊಡೆಸಿಕೊಂಡ ಅಸುರ ಉಸಿರೆಳೆದ.

 

ತೇನೋಕ್ತೋSಸೌ ಮಯೈವಾಯಂ  ವರಾಹೋSನುಗತೋSದ್ಯ ಹಿ ।

ತಮವಿದ್ಧ್ಯೋ ಯತಸ್ತ್ವಂ ಹಿ ತದ್ ಯುದ್ಧ್ಯಸ್ವ ಮಯಾ ಸಹ ॥೨೨.೧೩೭॥

ನನ್ನ ಬೇಟೆಯಾಗಿತ್ತು ಆ ವರಾಹ, ನೀನದನ್ನ ಹೊಡೆದದ್ಯಾವ ನ್ಯಾಯ.

ನನ್ನೊಡನೆ ನೀನು ಮಾಡೀಗ ಯುದ್ಧ, ಬೇಡ ವೇಷದ ಶಿವನು ಹೀಗೆ ನುಡಿದ.

 

ಇತ್ಯುಕ್ತಃ ಫಲ್ಗುನಃ ಪ್ರಾಹ ತಿಷ್ಠತಿಷ್ಠ ನ ಮೋಕ್ಷ್ಯಸೇ ।

ಇತ್ಯುಕ್ತ್ವಾ ತಾವುಭೌ ಯುದ್ಧಂ ಚಕ್ರತುಃ ಪುರುಷರ್ಷಭೌ ॥೨೨.೧೩೮॥

ಅರ್ಜುನ : 'ನಿಲ್ಲು ನಿಲ್ಲು ನಿನ್ನನ್ನು ಬಿಡುವುದಿಲ್ಲ' ಎಂದ,

ಪ್ರಾರಂಭವಾಯಿತಾಗ ಮಹಾಪುರುಷರ ಮಧ್ಯೆ ಯುದ್ಧ.

 

ತತ್ರಾಖಿಲಾನಿ ಚಾಸ್ತ್ರಾಣಿ ಫಲ್ಗುನಸ್ಯಾಗ್ರಸಚ್ಛಿವಃ ।

ತತೋSರ್ಜ್ಜುನಸ್ತು ಗಾಣ್ಡೀವಂ ಸಮಾದಾಯಾಭ್ಯತಾಡಯತ್ ॥೨೨.೧೩೯॥

ಆಗ ಅರ್ಜುನನ ಎಲ್ಲಾ ಬಾಣಗಳನ್ನು ಶಿವ ನುಂಗಿದ,

ಆನಂತರ ಅರ್ಜುನ ಗಾಂಡೀವವೆತ್ತಿ ಶಿವನ ಹೊಡೆದ.

 

ತದಪ್ಯಗ್ರಸದೇವಾಸೌ ಪ್ರಹಸನ್ ಗಿರಿಶಸ್ತದಾ ।

ಬಾಹುಯುದ್ಧಂ ತತಸ್ತ್ವಾಸೀತ್ ತಯೋಃ ಪುರುಷಸಿಂಹಯೋಃ ॥೨೨.೧೪೦॥

ನಸುನಗುತ್ತಾ ಸದಾಶಿವ ಗಾಂಡೀವವನ್ನೂ ನುಂಗಿದ,

ನಂತರ ನಡೆಯಿತು ಪುರುಷಸಿಂಹರ ಮಧ್ಯೆ ಬಾಹುಯುದ್ಧ.

 

ಪಿಣ್ಡೀಕೃತ್ಯ ತತೋ ರುದ್ರಶ್ಚಿಕ್ಷೇಪಾಥ ಧನಞ್ಜಯಮ್ ।

ಮೂರ್ಚ್ಛಾಮವಾಪ ಮಹತೀಂ ಫಲ್ಗುನೋ ರುದ್ರಪೀಡಿತಃ ॥೨೨.೧೪೧॥

ಬಾಹುಯುದ್ಧದಿ ಶಿವ ಅರ್ಜುನನ ಮುದ್ದೆ ಮಾಡಿ ಎಸೆದ,

ನೋವಿಗೊಳಗಾದ ಅರ್ಜುನ ಗಾಢವಾಗಿ ಮೂರ್ಛೆ ಹೋದ.

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 22: 124-133

 

ಕೃತಕೃತ್ಯೇ ತಥಾ ಭೀಮೇ ಸ್ಥಿತೇ ಧರ್ಮ್ಮಾತ್ಮಜೋ ಹಿ ಸಃ ।

ಭೀಷ್ಮದ್ರೋಣಾದಿವಿಜಯಃ ಕಥಂ ಸ್ಯಾದಿತ್ಯಚಿನ್ತಯತ್ ॥೨೨.೧೨೪॥

ಆನಂತರ ತಾನಂದುಕೊಂಡ ಕೆಲಸ ಮುಗಿಸಿದ ಭೀಮಸೇನ ಸುಮ್ಮನಾದ,

ಯುಧಿಷ್ಠಿರ, ಭೀಷ್ಮ ದ್ರೋಣರ ಗೆಲ್ಲುವ ಬಗೆ ಹೇಗೆಂದು ಯೋಚಿಸಿದ.

 

ನಿವಾರಣಂ ಗುರೂಣಾಂ ಹಿ ಭೀಮ ಇಚ್ಛತಿ ನ ಕ್ವಚಿತ್ ।

ತಸ್ಮಾತ್ ತೇ ಹ್ಯರ್ಜ್ಜುನೇನೈವ ನಿವಾರ್ಯ್ಯಾ ಇತ್ಯಚಿನ್ತಯತ್ ॥೨೨.೧೨೫॥

ಭೀಮಸೇನ ಗುರುಹಿರಿಯರ ತಡೆಯುವುದ ಬಯಸದ ಕಾರಣ,

ಭೀಷ್ಮ ದ್ರೋಣರೊಡನೆ ಯುದ್ಧ ಮಾಡಲು ಯೋಗ್ಯ ಅರ್ಜುನ.

 

ಆಪದ್ಯೇವ ಹಿ ಭೀಮಸ್ತಾನ್ ನಿವಾರಯತಿ ನಾನ್ಯಥಾ ।

ಏವಂ ಚಿನ್ತಾಸಮಾವಿಷ್ಟಂ ವಿಜ್ಞಾಯೈವ ಯುಧಿಷ್ಠಿರಮ್ ॥೨೨.೧೨೬॥

 

ಸರ್ವಜ್ಞಃ ಸರ್ವಶಕ್ತಿಶ್ಚ ಕೃಷ್ಣದ್ವೈಪಾಯನೋSಗಮತ್ ।

ನೃಪತಿಂ ಬೋಧಯಾಮಾಸ ಚಿನ್ತಾವ್ಯಾಕುಲಮಾನಸಮ್ ॥೨೨.೧೨೭॥

ಭೀಮಸೇನ ಆಪತ್ಕಾಲದಲ್ಲಿ ಮಾತ್ರ ಭೀಷ್ಮಾದಿಗಳ ತಡೆಯುವ,

ಅವಶ್ಯವಿದ್ದರೆ ಹೋರಾಡುವ, ಇರದಿರೆ ಸುಮ್ಮನೇ ಬಿಟ್ಟುಬಿಡುವ.

ಹೀಗೆ ಯುಧಿಷ್ಠಿರನನ್ನು ಕಾಡುತ್ತಿರಲು ಇಂತಹಾ ವಿಚಾರಧಾರೆ,

ಅಲ್ಲಿಗೆ ಸರ್ವಜ್ಞರಾದ ಸರ್ವಶಕ್ತ ವೇದವ್ಯಾಸರು ಬರುತ್ತಾರೆ

ಕಂಗೆಟ್ಟಿರುವ ಧರ್ಮರಾಜನಿಗೆ ಉಪದೇಶವನ್ನು ಮಾಡುತ್ತಾರೆ.

 

ಇಮಂ ಮನ್ತ್ರಂ ವದಿಷ್ಯಾಮಿ ಯೇನ ಜೇಷ್ಯತಿ ಫಲ್ಗುನಃ ।

ಭೀಷ್ಮದ್ರೋಣಾದಿಕಾನ್ ಸರ್ವಾನ್ ತಂ ತ್ವಂ ವದ ಧನಞ್ಜಯೇ ॥೨೨.೧೨೮॥

 

ಇತ್ಯುಕ್ತ್ವೈವಾವದನ್ಮನ್ತ್ರಂ ಸರ್ವದೈವತದೃಷ್ಟಿದಮ್ ।

ನ ಸ್ವಯಂ ಹ್ಯವದತ್ ಪಾರ್ತ್ಥೇ ಫಲಾಧಿಕ್ಯಂ ಯತೋ ಭವೇತ್ ॥೨೨.೧೨೯॥

ಯಾವ ಈ ಒಂದು ಮಂತ್ರದಿಂದ ಅರ್ಜುನನಿಗೆ,

ಲಭ್ಯವಾಗುವುದು ಭೀಷ್ಮ ದ್ರೋಣರ ಗೆಲ್ಲುವ ಬಗೆ.

ನಿನಗೆ ಮಾಡುತ್ತೇನೆ ಅಂಥದೊಂದು ಮಂತ್ರದ ಉಪದೇಶ,

ನಿನ್ನದು : ಅದನ್ನು ಅರ್ಜುನನಿಗೆ ಉಪದೇಶಿಸುವ ಕೆಲಸ.

ಧರ್ಮರಾಯಗೆ ನೀಡಿದರು ಎಲ್ಲಾ ದೇವತೆಗಳ ಪ್ರತ್ಯಕ್ಷವನ್ನು ನೀಡುವ ಮಂತ್ರ,

ಫಲಾಧಿಕ್ಯವಾಗಬಾರದೆಂಬುದು ಅರ್ಜುನನಿಗೆ ತಾವೇ ಹೇಳದಿರುವ ತಂತ್ರ.

 

ಭೀಷ್ಮದ್ರೋಣಾದಿವಿಜಯ ಏತಾವದ್ ವೀರ್ಯ್ಯಮೇವ ಹಿ ।

ಅಲಂ ನಾತೋSಧಿಕಂ ಕಾರ್ಯ್ಯಮೇತಾವದ್ ಯೋಗ್ಯಮಸ್ಯ ಚ ॥೨೨.೧೩೦॥

ಭೀಷ್ಮ ದ್ರೋಣರನ್ನು ಗೆಲ್ಲಲು ಇದು ಸಾಕಾಗುತ್ತದೆ,

ಆ ಜಯಕ್ಕಿಂತಧಿಕ ಅರ್ಜುನಗೆ ಯಾವುದಿರುತ್ತದೆ.

 

ಫಲ್ಗುನಸ್ಯೇತಿ ಭಗವಾನ್ ನ ಸ್ವಯಂ ಹ್ಯವದನ್ಮನುಮ್ ।

ಗತೇ ವ್ಯಾಸೇ ಭಗವತಿ ಸರ್ವಜ್ಞೇ ಸರ್ವಕರ್ತ್ತರಿ ॥೨೨.೧೩೧॥

 

ಧರ್ಮ್ಮರಾಜೋSದಿಶನ್ಮನ್ತ್ರಂ ಫಲ್ಗುನಾಯ ರಹಸ್ಯಮುಮ್ ।

ತಮಾಪ್ಯ ಫಲ್ಗುನೋ ಮನ್ತ್ರಂ ಯಯೌ ಜ್ಯೇಷ್ಠೌ ಪ್ರಣಮ್ಯ ಚ  ॥೨೨.೧೩೨॥

 

ಯಮಜೌ ಚ ಸಮಾಶ್ಲಿಷ್ಯ ಗಿರಿಮೇವೇನ್ದ್ರಕೀಲಕಮ್ ।

ತಪಶ್ಚಚಾರ ತತ್ರಸ್ಥಃ ಶಙ್ಕರಸ್ಥಂ ಹರಿಂ ಸ್ಮರನ್ ॥೨೨.೧೩೩॥

ವೇದವ್ಯಾಸರು ಎಲ್ಲರ ಯೋಗ್ಯತೆ ಅರಿತ ಸರ್ವಜ್ಞ ಸರ್ವೇಶ,

ಹಾಗಾಗಿ ಅರ್ಜುನಗೇ ಮಾಡಲಿಲ್ಲ ಆ ಮಂತ್ರದ ಉಪದೇಶ.

ಸರ್ವನಿಯಾಮಕ,ಸರ್ವಜ್ಞ ವೇದವ್ಯಾಸರು ತೆರಳುತ್ತಾರೆ,

ಧರ್ಮಜ ರಹಸ್ಯದಿ ಅರ್ಜುನಗೆರೆಯುತ್ತಾನೆ ಮಂತ್ರಧಾರೆ.

ಮಂತ್ರ ಪಡೆದ ಅರ್ಜುನ ಹಿರಿಯರಿಬ್ಬರಿಗೆ ನಮಸ್ಕರಿಸುತ್ತಾನೆ,

ನಕುಲ ಸಹದೇವರ ಆಲಿಂಗಿಸಿ ಇಂದ್ರಕೀಲಕದತ್ತ ತೆರಳುತ್ತಾನೆ.

ಅಲ್ಲಿ ರುದ್ರಾಂತರ್ಯಾಮಿಯಾದ ಶ್ರೀಹರಿಯನ್ನು,

ಅರ್ಜುನ ಸ್ಮರಿಸುತ್ತಾ ಮಾಡುತ್ತಾನೆ ತಪಸ್ಸನ್ನು.