Saturday, 4 June 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 22: 113-123

 

ಸ್ವತನ್ತ್ರತ್ವಂ ವಾಸುದೇವಸ್ಯ ಸಮ್ಯಕ್  ಪ್ರತ್ಯಕ್ಷತೋ ದೃಶ್ಯತೇ ಹ್ಯದ್ಯ ರಾಜನ್ ।

ಯಸ್ಮಾತ್ ಕೃಷ್ಣೋ ವ್ಯಜಯಚ್ಛಙ್ಕರಾದೀನ್ ಜರಾಸುತಾದೀನ್ ಕಾದಿವರೈರಜೇಯಾನ್ ॥೨೨.೧೧೩॥

ಯಾವ ಈ ಕಾರಣದಿಂದ ನಾರಾಯಣನವತಾರ ಶ್ರೀಕೃಷ್ಣನೆಂಬುದು ಸಿದ್ಧ,

ರುದ್ರಾದಿಗಳನ್ನು, ಬ್ರಹ್ಮವರದಿ ಅಜೇಯನಾದ ಜರಾಸಂಧಾದಿಗಳನ್ನು ಗೆದ್ದ.

ಪ್ರತ್ಯಕ್ಷ ತೋರುತ್ತದೆ ಶ್ರೀಕೃಷ್ಣನ ಸರ್ವ ಸ್ವಾಮಿತ್ವ ಇವೆಲ್ಲಾ ಕಾರಣಗಳಿಂದ.

 

ಬ್ರಹ್ಮಾದೀನಾಂ ಪ್ರಕೃತೇಸ್ತದ್ವಶತ್ವಂ ದೃಷ್ಟಂ ಹಿ ನೋ ಬಹುಶೋ ವ್ಯಾಸದೇಹೇ ।

ಪಾರಾಶರ್ಯ್ಯೋ ದಿವ್ಯದೃಷ್ಟಿಂ ಪ್ರದಾಯ ಸ್ವಾತನ್ತ್ರ್ಯಂ ನೋSದರ್ಶಯತ್ ಸರ್ವಲೋಕೇ ॥೨೨.೧೧೪॥

ಬ್ರಹ್ಮ ರುದ್ರಾದಿಗಳು ಲಕ್ಷ್ಮಿಯ ಅಧೀನ,

ತಾಯಿ ಲಕ್ಷ್ಮೀದೇವಿ ಭಗವಂತನಧೀನ.

ಇದರದಾಗಿದೆ ನಮಗೆ ಬಹುಬಾರಿ ವ್ಯಾಸರ ದೇಹದಲ್ಲಿ ದರ್ಶನ,

ಆ ಸ್ವಾತಂತ್ರ್ಯ ಕಂಡಿದ್ದೇವೆ:ಅವರೇ ಇತ್ತಂಥಾ ದಿವ್ಯದೃಷ್ಟಿಯ ಕಾರಣ.

 

ತಸ್ಮಾದ್ ರಾಜನ್ನಭಿನಿರ್ಯ್ಯಾಹಿ ಶತ್ರೂನ್ ಹನ್ತುಂ ಸರ್ವಾನ್ ಭೋಕ್ತುಮೇವಾಧಿರಾಜ್ಯಮ್ ।

ಏವಞ್ಚ ತೇ ಕೀರ್ತ್ತಿಧರ್ಮ್ಮೌ ಮಹಾನ್ತೌ ಪ್ರಾಪ್ಯೌ ರಾಜನ್ ವಾಸುದೇವಪ್ರಸಾದಾತ್ ॥೨೨.೧೧೫॥

ಹಾಗಾಗಿ ಧರ್ಮರಾಜನೇ, ರಾಜ್ಯ ಭೋಗಕ್ಕೆ ಶತ್ರು ನಾಶಕ್ಕೆ ಹೊರಡು,

ಅದೇ ದೈವಾನುಗ್ರಹ, ಪುಣ್ಯ, ಕೀರ್ತಿಗಳ ಪಡೆವ ಸರಿಯಾದ ಜಾಡು.

 

ಏವಮುಕ್ತೋSಬ್ರವೀದ್ ಭೀಮಂ ಧರ್ಮ್ಮಪುತ್ರೋ ಯುಧಿಷ್ಠಿರಃ ।

ತ್ರಯೋದಶಾಬ್ದಸ್ಯಾನ್ತೇSಹಂ ಕುರ್ಯ್ಯಾಮೇವ ತ್ವದೀರಿತಮ್ ॥೨೨.೧೧೬॥

 

ಸತ್ಯಮೇತನ್ನ ಸನ್ದೇಹಃ ಸತ್ಯೇನಾSತ್ಮಾನಮಾಲಭೇ ।

ಲೋಕಾಪವಾದಭೀರುಂ ಮಾಂ ನಾತೋSನ್ಯದ್ ವಕ್ತುಮರ್ಹಸಿ ॥೨೨.೧೧೭॥

ಇಷ್ಟೆಲ್ಲವನ್ನೂ ಕೇಳಿದ ಯುಧಿಷ್ಠಿರ ಭೀಮಸೇನಗೆ ಹೇಳುತ್ತಾನೆ,

ಹದಿಮೂರು ವರ್ಷಾನಂತರ ನೀನು ಹೇಳಿದ್ದನ್ನು ಮಾಡುತ್ತೇನೆ.

ಇದು ಸತ್ಯ, ಖಚಿತ ; ಬೇಡ ಇದರಲ್ಲಿ ಸಂದೇಹ,

ಈಗ ಉಂಟು ಅದಕ್ಕೆ ಲೋಕಾಪವಾದದ ಭಯ.

ಸಾಕು,ಬೇಡವೀಗ ಯಾವ ಪ್ರಚೋದನೆಗಳಾಶ್ರಯ.

 

ತುದಸೇ ಚಾತಿವಾಚಾ ಮಾಂ ಯದ್ಯೇವಂ ಭೀಮ ಮಾಂ ವದೇಃ ।

ತದೈವ ಮೇSತ್ಯಯಃ ಕಾರ್ಯ್ಯೋ ಹನ್ತವ್ಯಾಶ್ಚೈವ ಶತ್ರವಃ ॥೨೨.೧೧೮॥

 

ನೈತಾದೃಶೈರಿದಾನೀಂ ತು ವಾಕ್ಯೈರ್ಬಾಧಿತುಮರ್ಹಸಿ ।

ಭೀಷ್ಮದ್ರೋಣಾದಯೋSಸ್ತ್ರಜ್ಞಾ ನಿವಾರ್ಯ್ಯಾಶ್ಚ ಕಥಂ ಯುಧಿ ॥೨೨.೧೧೯॥

ಅತ್ಯಂತ ತೀಕ್ಷ್ಣ ಮತ್ತು ಕಟು ಮಾತುಗಳಿಂದ ನನ್ನನ್ನು ಚುಚ್ಚುತ್ತಿರುವೆ ನೀನು,

ಅವಧಿ ನಂತರವೂ ಅವರು ತಿರುಗಿಬಿದ್ದು, ನಾನು ಮೃದುವಾದರೆ ಈ ಕ್ರಮವಲ್ಲವೇನು.

ಆಗ ನೀನು ನನ್ನನ್ನು ಅತಿಕ್ರಮಿಸಿ ಹೋಗಿ ಅವರನ್ನು ಸಂಹರಿಸು,

ಅವಧಿಗೆ ಮೊದಲೇ ತಿಂಗಳ ವರ್ಷವೆಂದು ಎಣಿಸುವುದ್ಹೇಗೆ ಲೇಸು.

ಬೇಡ ಕಟುವಾದ ಮಾತುಗಳಿಂದ ಪೀಡನೆ,

ಶತ್ರುಗಳು ಸಂಹಾರಯೋಗ್ಯವೆಂದರಿತಿದ್ದೇನೆ.

ಅಸ್ತ್ರಜ್ಞ ಭೀಷ್ಮ ದ್ರೋಣರ ಎದುರಿಸುವುದು ಹೇಗೆ,

ಅವರನ್ನು, ಅವರಂಥವರನ್ನು ತಡೆವುದ್ಯಾವ ಬಗೆ?

 

ಪೂಜ್ಯಾಸ್ತೇ ಬಾಹುಯುದ್ಧೇನ ನ ನಿವಾರ್ಯ್ಯಾಃ ಕಥಞ್ಚನ ।

ಅಸ್ತ್ರಾಣಿ ಜಾನನ್ನಪಿ ಹಿ ನ ಪ್ರಯೋಜಯಸಿ ಕ್ವಚಿತ್ ॥೨೨.೧೨೦॥

 

ತಸ್ಮಾದ್ ತದೈವ ಗನ್ತವ್ಯಂ ವಿಜ್ಞಾತಾಸ್ತ್ರೇ ಧನಞ್ಜಯೇ ।

ಇತ್ಯುಕ್ತೋ ಭೀಮಸೇನಸ್ತು ಸ್ನೇಹಭಙ್ಗಭಯಾತ್ ತತಃ ॥೨೨.೧೨೧॥

 

ನೋವಾಚ ಕಿಞ್ಚಿದ್ ವಚನಂ ಸ್ವಾಭಿಪ್ರೇತಮವಾಪ್ಯ ಚ ।

ಅಭಿಪ್ರಾಯೋ ಹಿ ಭೀಮಸ್ಯ ನಿಶ್ಚಯೇನ ತ್ರಯೋದಶೇ ॥೨೨.೧೨೨॥

 

ಯುಧಿಷ್ಠಿರಸ್ಯ ರಾಜ್ಯಾರ್ತ್ಥಂ ಗಮನಾರ್ತ್ಥೇ ಪ್ರತಿಶ್ರವಃ ।

ಅನ್ಯಥಾSತಿಮೃದುತ್ವಾತ್ ಸ ನ ಗಚ್ಛೇದ್ ಭಿನ್ನಧೀಃ ಪರೈಃ ॥೨೨.೧೨೩॥

ಪೂಜ್ಯರಾದ ಅವರುಗಳನ್ನು ಬಾಹು ಯುದ್ಧಕ್ಕೆ ಕರೆಯಲು ಸಾಧ್ಯವೇ,

ನೀನು ಅಸ್ತ್ರಜ್ಞನಾಗಿದ್ದರೂ ಅದನ್ನು ಪ್ರಯೋಗ ಮಾಡಲಾರೆ ಅಲ್ಲವೇ.

ಅರ್ಜುನ ಅಸ್ತ್ರಗಳ ತಿಳಿದಮೇಲೆ, ಹದಿಮೂರು ವರ್ಷ ಕಳೆದಮೇಲೆ,

ನಾವು ಯುದ್ಧವ ಮಾಡಬೇಕಾಗುತ್ತದೆ ; ಇದೆಲ್ಲ ಘಟನೆ ದಾಟಿದಾಗಲೇ.

ಇಷ್ಟೆಲ್ಲವನ್ನೂ ಕೇಳಿಸಿಕೊಂಡವನಾದ ಭೀಮಸೇನ,

ಸುಮ್ಮನಾದ ಸೋದರ ಸ್ನೇಹಕ್ಕೆ ಕುತ್ತು ಬಂದೀತೆಂಬ ಕಾರಣ.

ಹದಿಮೂರು ವರ್ಷಾನಂತರವಾದರೂ ಯುಧಿಷ್ಠಿರ ಯುದ್ಧ ಮಾಡಲೆಂಬುದೇ ಭೀಮನ ಆಶಯ,

ಅಲ್ಲಿದ್ದದ್ದು:ಅತಿ ಮೃದುವಾದ ಧರ್ಮಜ ಬೇರೊಬ್ಬರ ಪ್ರಭಾವದಿಂದ ಯುದ್ಧ ಬಿಟ್ಟಾನೆಂಬ ಸಂಶಯ.

No comments:

Post a Comment

ಗೋ-ಕುಲ Go-Kula