Saturday 4 June 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 22: 107-112

 

ಅಕ್ಷದ್ಯೂತಂ ನಿಕೃತಿಃ ಪಾಪಾಮೇವ ಕೃತಂ ತ್ವಯಾ ಗರ್ಹಿತಂ ಸೌಬಲೇನ ।

ನ ಕುತ್ರಚಿದ್ ವಿಧಿರಸ್ಯಾಸ್ತಿ ತೇನ ನ ತದ್ ದತ್ತಂ ದ್ಯೂತಹೃತಂ ವದನ್ತಿ ॥೨೨.೧೦೭॥

ಪಗಡೆ ಅಥವಾ ಆ ಥರದ ಯಾವುದೇ ಜೂಜು ಪಾಪಕರ;ಬಲು ಹೇಯ,

ನಿಂದನೀಯವಾದ ಅಂಥಾ ಜೂಜನ್ನು ನೀನು ಶಕುನಿಯೊಡನೆ ಆಡಿದ್ದೀಯ.

ಜೂಜು ಅಲ್ಲವೇ ಅಲ್ಲ ವೇದೊಕ್ತ - ವಿಧಿಬದ್ಧ,

ಜೂಜಲ್ಲಿ ಹೋದದ್ದು ಕೊಟ್ಟದ್ದಲ್ಲ ಎಂಬುದು ಸಿದ್ಧ.

 

ಭೀತೇನ ದತ್ತಂ ದ್ಯೂತದತ್ತಂ ತಥೈವ ದತ್ತಂ ಕಾಮಿನ್ಯೈ ಪುನರಾಹಾರ್ಯ್ಯಮೇವ ।

ಏವಂ ಧರ್ಮ್ಮಃ ಶಾಶ್ವತೋ ವೈದಿಕೋ ಹಿ ದ್ಯೂತೇ ಸ್ತ್ರಿಯಾಂ ನಾಲ್ಪಮಾಹಾರ್ಯ್ಯಮಾಹುಃ ॥೨೨.೧೦೮॥

ಭಯದಲ್ಲಿ ಕೊಟ್ಟದ್ದು, ಜೂಜಲ್ಲಿ ಕೊಟ್ಟದ್ದು, ಕೆಟ್ಟ ಹೆಣ್ಣಿಗೆ ಕೊಟ್ಟದ್ದು,

ಅದು ಶಾಸ್ತ್ರೀಯವಾಗಿ ಕೊಟ್ಟದ್ದಲ್ಲ; ಮತ್ತೆ ಹಿಂದೆ ಪಡೆಯಬಹುದಾದದ್ದು.

ಈ ತೆರದಲ್ಲಿ ಕೊಟ್ಟ ಪ್ರಮಾಣ ಅಲ್ಪವಾಗಿದ್ದಾಗ,

ಅದನ್ನು ಔದಾರ್ಯದಿಂದ ಬಿಟ್ಟು ಬಿಡಬಹುದಾಗ.

 

ಯದ್ಯೇಷಾಂ ವೈ ಭೋಗ್ಯಮಲ್ಪಂ ತದೀಯಂ ಭೋಗೇನ ತದ್ಬನ್ಧುಭಿಸ್ತಚ್ಚ ಹಾರ್ಯ್ಯಮ್ ।

ನಿವಾರಣೇ ಪುರುಷಸ್ಯ ತ್ವಶಕ್ತೈಸ್ತದ್   ರಾಜ್ಯಂ ನಃ ಪುನರಾಹಾರ್ಯ್ಯಮೇವ ॥೨೨.೧೦೯॥

ಒಂದೊಮ್ಮೆ ಕೊಟ್ಟವನಿಗೆ ಕಡಿಮೆಯೆನಿಸಿ ಪಡೆದವನಿಗಾಗಿದ್ದರೆ ಜಾಸ್ತಿ,

ಅದನ್ನೂ ಕೂಡಾ ಹಿಂಪಡೆಯಬಹುದೆಂದು ಹೇಳುತ್ತದೆ ವೈದಿಕ ನೀತಿ.

ನಮ್ಮ ರಾಜ್ಯವನ್ನೂ ನಾವು ಹಿಂದೆ ಪಡೆಯಬೇಕು-  ಅದೇ ಸರಿಯಾದ ರೀತಿ.

 

ತ್ವಂ ಧರ್ಮ್ಮನಿತ್ಯಶ್ಚಾಗ್ರಜಶ್ಚೇತಿ ರಾಜನ್ ಋತೇSನುಜ್ಞಾಂ ನ ಮಯಾ ತತ್ ಕೃತಂ ಚ ।

ದಾತಾಸ್ಯನುಜ್ಞಾಂ ಯದಿ ತಾನ್ ನಿಹತ್ಯ ತ್ವಯ್ಯೇವ ರಾಜ್ಯಂ ಸ್ಥಾಪಯಾಮ್ಯದ್ಯ ಸಮ್ಯಕ್ ॥೨೨.೧೧೦॥

ಧರ್ಮಭೀರುವಾಗಿರುವ ನೀನು ನಮ್ಮೆಲ್ಲರ ಅಗ್ರಜ,

ನಿನ್ನಾಜ್ಞೆ ಮೀರಿ ಆ ಕೆಲಸ ಮಾಡದ ನಾನಿನ್ನ ಅನುಜ.

ಒಂದು ವೇಳೆ ಈಗಲೂ ನೀನು ಆಜ್ಞೆ ಕೊಟ್ಟರೆ ಮಾಡಲು ಆ ಕಾರ್ಯ,

ಸಂಶಯ ಬೇಡ, ಅವರೆಲ್ಲರ ಕೊಂದು ನಿನಗೆ ಒಪ್ಪಿಸುವೆ ರಾಜ್ಯಭಾರ.

 

ಸತ್ಯಂ ಪಾಪೇಷ್ವಪಿ ಕರ್ತ್ತುಂ ಯದೀಚ್ಛಾ ತಥಾSಪಿ ಮಾಸಾ ದ್ವಾದಶ ನಃ ಪ್ರಯಾತಾಃ ।

ವೇದಪ್ರಾಮಾಣ್ಯಾದ್ ವತ್ಸರಾಸ್ತೇ ಹಿ ಮಾಸೈಃ ಸಹಸ್ರಾಬ್ದಂ  ಸತ್ರಮುಕ್ತಂ ನರಾಣಾಮ್ ।

ಅಜ್ಞಾತಮೇಕಂ ಮಾಸಮುಷ್ಯಾಥ ಶತ್ರೂನ್  ನಿಹತ್ಯ ರಾಜ್ಯಂ ಪ್ರತಿಪಾಲಯಾಮಃ ॥೨೨.೧೧೧॥

ಒಂದೊಮ್ಮೆ ಪಾಪಿಷ್ಠರೊಡನೆಯೂ ನಿನ್ನ ಮಾತು ಉಳಿಸಿಕೊಳ್ಳಬೇಕೆಂದಿದ್ದರೆ,

ಹಾಗೂ ಕಳೆದಾಗಿದೆ ನಮ್ಮ ಹನ್ನೆರಡು ತಿಂಗಳುಗಳ ಕಾಲದ ವನವಾಸದ ಸೆರೆ.

ಹನ್ನೆರಡು ತಿಂಗಳು - ಹನ್ನೆರಡು ವರ್ಷಕ್ಕೆ ಸಮಾನ,

ಮಾನವ ಪರಿಗಣನೆಗಿದೆ ವೇದ ಹೇಳಿದ ಪ್ರಮಾಣ.

ಬಾಕಿ ಉಳಿದಿರುವುದಿನ್ನು ಒಂದೇ ಒಂದು ವರ್ಷ ಕಾಲದ ಅಜ್ಞಾತವಾಸ,

ತಿಂಗಳು ಮರೆಯಲಿದ್ದು,ಶತ್ರುಗಳ ಕೊಂದರಾಗದೇ ರಾಜ್ಯ ನಮ್ಮ ವಶ.

 

ಮಾ ಮಿತ್ರಾಣಾಂ ತಾಪಕಸ್ತ್ವಂ ಭವೇಥಾಸ್ತಥಾSಮಿತ್ರಾಣಾಂ ನನ್ದಕಶ್ಚೈವ ರಾಜನ್ ।

ಜ್ವಲಸ್ವಾರೀಣಾಂ ಮೂರ್ಧ್ನಿ ಮಿತ್ರಾಣಿ ನಿತ್ಯಮಾಹ್ಲಾದಯನ್ ವಾಸುದೇವಂ ಭಜಸ್ವ ॥೨೨.೧೧೨॥

ನಿನ್ನವರಿಗೆ ನಿನ್ನ ಹಿತೈಷಿಗಳಿಗೆ ಕೊಡಬೇಡ ಕಷ್ಟ,

ವೈರಿಗಳಿಗೆ ಕೊಡುತ್ತಿರುವೆ ಆನಂದ ಯಥೇಷ್ಟ.

ಶತ್ರುಗಳ ತಲೆಯ ಮೇಲೆ ಬೆಂಕಿಯಾಗಿ ಪ್ರಜ್ವಲಿಸು,

ಹಿತೈಷಿಗಳಿಗೆ ಮುದವೀಯುತ್ತ ಹರಿಯ ಧ್ಯಾನಿಸು.

No comments:

Post a Comment

ಗೋ-ಕುಲ Go-Kula