Sunday 3 October 2021

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 20: 215 - 220

ತತಃ ಕದಾಚಿತ್ ಖಾಣ್ಡವಂ ಕೃಷ್ಣಪಾರ್ತ್ಥೌ ಚಿಕ್ರೀಡಿಷೂ ಸತ್ಯಭಾಮಾಸುಭದ್ರೇ ।

ಆದಾಯ ಯಾತೌಪರಿಚಾರಕೈಶ್ಚ ರಥೇನ ಗನ್ಧರ್ವವರಾನುಗೀತೌ ॥ ೨೦.೨೧೫ ॥

ಆನಂತರದಲ್ಲಿ ಒಮ್ಮೆ ಕೃಷ್ಣಾರ್ಜುನರು ತಮ್ಮ ಕ್ರೀಡೆಗಾಗಿ ,

ಭಾಮೆ ಸುಭದ್ರೆ ಸಮೇತ ಪರಿಚಾರಕರ ಕೂಡಿದವರಾಗಿ,

ಗಂಧರ್ವರು ಹಾಡುತ್ತಿರಲು ಯಶೋಗಾನ,

ರಥದಿ ವಿಹಾರಕ್ಕೆ ತಲುಪಿದ್ದು ಖಾಂಡವವನ.

 

ಸ್ವೈರಂ ತಯೋಸ್ತತ್ರ ವಿಕ್ರೀಡತೋಶ್ಚ ಸ್ತ್ರೀರತ್ನಾಭ್ಯಾಂ ಮನ್ದವಾತಾನುಜುಷ್ಟೇ ।

ವನೇ ಪ್ರಸೂನಸ್ತಬಕೋರುರಾಜಿತೇ ಜಲೇ ಚ ತಿಗ್ಮದ್ಯುತಿಕನ್ಯಕಾಯಾಃ ॥ ೨೦.೨೧೬ ॥

ಸೂರ್ಯಪುತ್ರಿಯಾದ ಯಮುನಾನದಿ ನೀರಿನಲ್ಲಿ,

ಹೂವು ಚಿಗುರುಗಳು ತುಂಬಿದ್ದ ಸುಂದರ ವನದಲ್ಲಿ,

ಸ್ತ್ರೀಶ್ರೇಷ್ಠ ಸತ್ಯಭಾಮೆ ಸುಭದ್ರೆಯರ ಜೊತೆಯಲ್ಲಿ,

ವಿಹರಿಸುತ್ತಿದ್ದರು ತಂಗಾಳಿಯುಕ್ತವಾದ ಆ ವನದಲ್ಲಿ.

 

ಭೂತ್ವಾ ವಿಪ್ರಸ್ತೌ ಯಯಾಚೇsನ್ನಮೇತ್ಯ ಕೃಶಾನುರೂಚೇ ಚ ಮತೇ ರಮೇಶಿತುಃ ।

ಪಾರ್ತ್ಥಃ ಕೀದೃಕ್ ತೇsನ್ನಮಿಷ್ಟಂ ವದೇತಿ ಸ ಚಾವಾದೀದ್ ವಹ್ನಿರಹಂ ವನಾರ್ತ್ಥೀ ॥ ೨೦.೨೧೭ ॥

 ಆಗ ಅಗ್ನಿದೇವ ಬ್ರಾಹ್ಮಣರೂಪದಿ ಅಲ್ಲಿಗೆ ಬರುತ್ತಾನೆ,

ಅವರಿರುವಲ್ಲಿಗೆ ಬಂದು ಅರ್ಜುನನಲ್ಲಿ ಅನ್ನ ಬೇಡುತ್ತಾನೆ.

ಅರ್ಜುನ ಕೃಷ್ಣಾಜ್ಞೆಯಂತೆ ಕೇಳಿದ -ನಿನಗಾವ ರೀತಿ ಅನ್ನ ಬೇಕು,

ನಾನು ಅಗ್ನಿಯಾದ್ದರಿಂದ ನನ್ನ ಅನ್ನವಾಗಿ ಕಾಡನ್ನು ಸುಡಬೇಕು.

 

[ಅಗ್ನಿ ಏಕೆ ಖಾಣ್ಡವವನವನ್ನು ಅನ್ನವಾಗಿ ಬೇಡಿದ ಎಂದರೆ:]

ಪ್ರಯಾಜಾನ್ ದೇವಾನನುಯಾಜಾಂಶ್ಚ ಶುಲ್ಕಂ ಹವಿರ್ದ್ದಾನೇ ದೇವತಾನಾಮಯಾಚಿಷಮ್ ।

ಬಲಹ್ರಾಸಸ್ತವ ಭೂಯಾದಿತಿ ಸ್ಮ ಶಪ್ತ್ವೈವ ತೇ ತಾಂಶ್ಚ ದದುಃ ಪುರಾ ಮಮ ॥ ೨೦.೨೧೮ ॥

ಹಿಂದೆ, ನನ್ನಲ್ಲಿ ಹೋಮಿಸಿದ ಹವಿಸ್ಸನ್ನು ದೇವತೆಗಳಿಗೆ ಮುಟ್ಟಿಸುವಲ್ಲಿ,

ಪ್ರಯಾಜ ಅನುಯಾಜ ಎಂಬಾಹುತಿಗಳ ಬೇಡಿದ್ದೆ ಶುಲ್ಕ ರೂಪದಲ್ಲಿ.

ದೇವತೆಗಳಾಗ ಕೊಟ್ಟರೆನಗೆ ಬಲಹ್ರಾಸದ ಶಾಪದೊಂದಿಗೆ,

ಪ್ರಯಾಜ ಅನುಯಾಜಗಳ ವಿಶೇಷ ಆಹುತಿಯ ಕೊಡುಗೆ.

 

ಪುನಃ ಪೂರ್ತ್ತಿಃ ಕೇನ ಮೇ ಸ್ಯಾದ್ ಬಲಸ್ಯೇತ್ಯಬ್ಜೋದ್ಭವಂ ಪೃಷ್ಟವಾನಸ್ಮಿ ನತ್ವಾ ।

ಯದಾ ವನಂ ಖಾಣ್ಡವಂ ಹಿ ತ್ವಮತ್ಸಿ ತದಾ ಬಲಂ ತೇ ಭವತೀತಿ ಸೋsಬ್ರವೀತ್ ॥೨೦.೨೧೯॥

ಆಗ ನಾನು ಚತುರ್ಮುಖನಲ್ಲಿ ಮಾಡಿದೆ ಪ್ರಾರ್ಥನೆ,

ಮತ್ತೆ ಹೇಗೆ ಆಗುತ್ತದೆ ನನ್ನ ಮೂಲ ಬಲದ ವರ್ಧನೆ.

ಬ್ರಹ್ಮನೆಂದ -ಮಾಡಿದಾಗ ನೀನು ಖಾಂಡವವನ ದಹನ,

ಆಗುತ್ತದೆ ನಿನಗೆ ಹ್ರಾಸವಾದ ನಿನ್ನ ಬಲದ ಪುನಃಪ್ರದಾನ.

 

ಶಕ್ರಸ್ಯೇದಂ ಖಾಣ್ಡವಂ ತೇನ ವಿಘ್ನಂ ಕರೋತ್ಯಸೌ ತೇನ ವಾಂ ಪ್ರಾರ್ತ್ಥಯಾಮಿ ।

ಇತ್ಯುಕ್ತೇ ತಂ ಪಾರ್ತ್ಥ ಊಚೇ ಯದಿ ಸ್ಯಾದ್ ರಥೋ ಧನುಶ್ಚಾಥ ಶಕ್ರಂ ನಿರೋತ್ಸ್ಯೇ ॥೨೦.೨೨೦॥

ಈ ಖಾಂಡವವನ ಇಂದ್ರದೇವನಿಗೆ ಸಂಬಂಧಪಟ್ಟಿದ್ದರಿಂದ,

ಖಂಡಿತವಾಗಿ ಒಡ್ದುತ್ತಾನೆ ನನ್ನ ಕೆಲಸಕ್ಕೆ ಅವನು ಪ್ರತಿಬಂಧ.

ಆ ಕಾರಣಕ್ಕಾಗಿ ನಿಮ್ಮನ್ನು ಬೇಡುತ್ತಿದ್ದೇನೆ ಎನ್ನುತ್ತಾನೆ ಅಗ್ನಿ ತಾನು,

ಒಂದೊಳ್ಳೆ ರಥ ಬಿಲ್ಲಿರಲು ಇಂದ್ರನ ತಡೆಯುತ್ತೇನೆ ಎಂಬ ಫಲ್ಗುಣನು.

[Contributed by Shri Govind Magal]

No comments:

Post a Comment

ಗೋ-ಕುಲ Go-Kula