Tuesday, 26 September 2017

Bhava Spandana - 19


ಭಾವ ಸ್ಪಂದನ by “ತ್ರಿವೇಣಿ ತನಯ
ಪರಭಾರೆ
ನೀನಾಗೇ ಬರಲಿಲ್ಲ ನಿನ್ನಿಚ್ಛದಿ ಹೋಗಲಾರೆ,
ಮಧ್ಯದಿ ಎಂಥದು ಅರ್ಥವಿರದ ಪರಭಾರೆ?
ಇರುವ ಮೂರು ದಿನ ಪ್ರೀತಿಸುತ ಬಾಳು,
ಹಾರಾಡಿದವರು ಏನು ಒಯ್ದಿದ್ದಾರೆ ಹೇಳು!
ನಡತೆ -ತಪವಂತೆ!
ಚೂರಿ ಹಿಡಿದು ಚುಚ್ಚಿದರಷ್ಟೇ ಅಲ್ಲ ಕ್ರೌರ್ಯ,
ನಡತೆ ಬಿರುಮಾತುಗಳದೂ ಅದೇ ತಾತ್ಪರ್ಯ,
ಪ್ರೀತಿಸಲಾಗದಿದ್ದರೆ ನೋಯಿಸದಿರು ಯಾರನ್ನ,
ಮಾನವತ್ವವ ಮೆರೆ ಮನುಜ ಕಣ್ಮುಚ್ಚುವ ಮುನ್ನ.
ಕಾಣದ ಸ್ನೇಹಿತ
ಹುಡುಕಿದರೆ ಸಿಗದವನು,
ಜತೆಗಿದ್ದೂ ಕಾಣದವನು,
ಎಲ್ಲರೊಳು ಇರುವವನು,
ಎಲ್ಲರಂತಲ್ಲ ಅವನು.
ಲೋಕದ ಸ್ನೇಹಿತ
ಕಲಿತ ವಿದ್ಯೆ ಬುದ್ಧಿ ಪರದೇಶದಲ್ಲಿ,
ಅನುಕೂಲ ಸತಿಯು ಮನೆಯಲ್ಲಿ,
ತಕ್ಕ ಔಷಧಿಯದು ಅನಾರೋಗ್ಯದಲ್ಲಿ,
ಸತ್ಕರ್ಮಗಳವು ನೋಡು ಮರಣದಲ್ಲಿ.
ನೋಟ -ಅನುಭವದ ಆಟ
ಕಾಣುವುದು ನಾವಲ್ಲ,
ಕರುಣಿಸಬೇಕವ- ನಲ್ಲ,
ಎದೆಯೊಳಗೆ ಹರಿವ ಜೀವ ಝರಿ,
ಅನುಭವ ಕೊಡಬೇಕವನೇ ಹರಿ.
[Contributed by Shri Govind Magal]

Saturday, 23 September 2017

Bhava Spandana - 18

ಭಾವ ಸ್ಪಂದನ by “ತ್ರಿವೇಣಿ ತನಯ

ಸ್ವಗತ

ಚಿತ್ತಕ್ಕೆ ತಂದಿದ್ದು ಅತ್ತಿತ್ತ ಮಾಡದಿರು,
ಒತ್ತಾಗಿ ನಿಂತು ನಿತ್ಯ ಪ್ರಗತಿ ತೋರು,
ಎತ್ತಲೋ ಕಳುಹಿ ಏನೇನೋ ಮಾಡಿಸುವಿ,
ಮತ್ತೆಲ್ಲ ಮಾಡಿದ್ದು ನಿನ್ನಪೂಜೆ ಆಗಲೆಂಬ ಮನವಿ.

ನಿನ್ನೊಳಗೇ ಹುಡುಕು

ಹುಡುಕದಿರು ಅನ್ಯರಲಿ ಕೆಡುಕು,
ದುಡುಕದೇ ನಿನ್ನ ನೀ - ಕೆದಕು,
ಕಂಡೀತು ನಿನ್ನೊಳಗಣ ಹುಳುಕು,
ಕಡಿದು ಕಟ್ಟೆ ಹಾಕಿದ್ದು - ಸಾಕು,
ಹಿಡಿ ಸತ್ಸಂಗದ ತಿಳಿ ಬೆಳಕು,
ಪ್ರೀತಿಯಲಿ ಬಾಳು ದಿನ ನಾಕು.

ಬುದ್ಧಿ - ಸಿದ್ಧಿ

ಮನುಷ್ಯನ ಮನಸ್ಥಿತಿ ಯಾರ ಸ್ವತ್ತು?
ಬದಲಾಗುತ್ತಲೇ ಇರತ್ತೆ ಮೂರ್ಹೊತ್ತು,
ಹಾಲು ಕುಡಿವಷ್ಟರಲ್ಲಿ ಹದಿನಾರು ಬುದ್ಧಿ,
ಇಂತಹಾ ಅವಸ್ಥೆಯಲಿ ಎಲ್ಲಿ ಅದು ಸಿದ್ಧಿ!

ಸನ್ಮಾರ್ಗದ ಬದುಕು

ಬದುಕಿರುವಷ್ಟು ಕಾಲ ಸತ್ಪ್ರಭಾವ ಬೀರುತ ಬಾಳು,
ನೀಡುತಲಿರು ಅನ್ನ ನೀರು ಜ್ಞಾನದಾ ತಂಪು ನೆರಳು,
ಸನ್ಮಾರ್ಗದ ಬದುಕು ಕಳೆವುದು ಭವದ ಬೇಗೆ,
ಬರೀ ಲೌಕಿಕಲೋಭದಿ ಮುಳುಗಿ ಆಗದಿರು ಕಾಗೆ.

ಸ್ವಂತಿಕೆಯ ಬೆಲೆ -ಕಂಡೀತು ನೆಲೆ

ನಾಟಕವ ಬಿಟ್ಟು ನೀನಿರುವಂತೆ ಬಾಳು,
ಪರದೆ ಕಳಚಲು ಒಮ್ಮೆ ಎಲ್ಲವೂ ಬೋಳು,
ನಿನ್ನ ನಾಟಕಕೆ ಇಲ್ಲ ಮೂರು ಕಾಸಿನ ಬೆಲೆ,
ನಿನ್ನತನದಲಿ ಬದುಕಿ ಕಂಡುಕೋ ನಿನ್ನ ನೆಲೆ.
[Contributed by Shri Govind Magal]

Wednesday, 20 September 2017

Bhava Spandana - 17

ಭಾವ ಸ್ಪಂದನ by “ತ್ರಿವೇಣಿ ತನಯ

ಪಕ್ಷಮಾಸವೂ ನೀನೆ-ಪರ್ವಕಾಲವೂ ನೀನೆ

ಹಬ್ಬ ಹರಿದಿನ ಶ್ರಾದ್ಧ ಪಕ್ಷ,
ಎಲ್ಲದರಲಿ ಅವನ ದೀಕ್ಷ,
ಎಲ್ಲ(ದ)ರ ನಿಯಾಮಕ ಅವನು,
ಅಸ್ವತಂತ್ರ ಜೀವ ಮಾಡಲಾರ ಏನೂ.

ಸಾವಿರದವನ ಸಹಸ್ರನಾಮ

ಸಾವಿರದ ವಿಷ್ಣುವಿನ ಸಹಸ್ರನಾಮ,
ಜಪಿಸಲು ಜೀವವದುವೆ ಪವಿತ್ರನೇಮ,
ಆದೀತು ಜೀವನವೇ ಉತ್ಕೃಷ್ಟ ಹೋಮ,
ಶರಣಾಗಲಿ ಜೀವ -ಅವ ಸಾರ್ವಭೌಮ.

ಬೇಡ ದಾಹ -ಬಿಡು ವ್ಯಾಮೋಹ

ತೃಪ್ತಿಯೇ ಇರದ ಅತಿಮೋಹ ದಾಹ,
ಕಪಟಾಚರಣೆ ಮೇಲೆಯೇ ವ್ಯಾಮೋಹ,
ಭ್ರಾಂತ ಮನಸಿನ ವಕ್ರ ನೋಟ,
ಕೆಡುಕಿನುದ್ದೇಶದ ಕೊಳಕು ಆಟ.

ತಿಳಿ ಸ್ವಭಾವ-ಬೇಡ ಪ್ರಭಾವ

ಎನಿತು ನೋಡಿದರೂ ಜೀವಗಳ ಸ್ವಭಾವ ಮೂರು,
ಮಿಶ್ರಣದಿ ಹೊರ ಹೊಮ್ಮೀತು ಬಗೆ ಬಗೆ ಹಲವಾರು,
ಸ್ವಭಾವಗಳ ಪ್ರಶ್ನಿಸಲು ಜೀವ ನೀನ್ಯಾರು?
ಇದ್ದದಿದ್ದಂತೆ ಒಪ್ಪು ಬೇಡ ತಕರಾರು.

ಪ್ರಯತ್ನವಿರಲಿ ಸತತ ತಿಳಿ ನಿನದ್ಯಾವ ಬೇರು?
ಪ್ರಾಮಾಣಿಕ ನಡತೆಯಲಿ ಬೆಳೆಸದನ ಎರೆದು ನೀರು,
ಒಮ್ಮೆ ಅರಿವಾಗಲು ನಿನ್ನದ್ಯಾವ ರೀತಿ,
ರೀತಿ ವಿಕಸಿಸುವುದೇ ನಿಜಬಾಳಿನ ನೀತಿ.
[Contributed by Shri Govind Magal]

Monday, 18 September 2017

Bhava Spandana - 16

ಭಾವ ಸ್ಪಂದನ by “ತ್ರಿವೇಣಿ ತನಯ
ನಿರ್ಲಿಪ್ತ -ಹರಿಚಿತ್ತ

ನೊಣಗಳು ಹುಡುಕುವುದು ದೇಹದ ಗಾಯದ ಭಾಗ,
ದುರ್ಜನರು ಹುಡುಕುವುದು ಲೋಪ ದೋಷದ ಜಾಗ,
ಎಂತಾದರಾಗಲಿ ಮನವಿರಲದು ನಿರ್ಲಿಪ್ತ,
ನಿನ್ನತನ ಹುಡುಕುತ್ತ ಒಪ್ಪುತಿರು ಹರಿಚಿತ್ತ.

ಮಡಿ -ಮನದ ನುಡಿ

ಅಹಂಕಾರವದು ಮಡಿಯಬೇಕು,
ಬಿದ್ದವರನೆತ್ತಲು ಮನ ಮಿಡಿಯಬೇಕು,
ನಾಲಿಗೆಯದು ಸತ್ಯ ಸವಿ ನುಡಿಯಬೇಕು,
ನಾಟಕ ಕಂಪನಿಯ ಸಂಗ ಕಡಿಯಬೇಕು.

ನಡೆ ನುಡಿ ಶುದ್ಧವಿರಲುಬೇಕು,
ಮುಚ್ಚು ಮರೆಯಾಟ ಬಿಟ್ಟಿರಬೇಕು,
ಶುದ್ಧಾಂತಕರಣದಿ ಸೇವೆ ಮಾಡಬೇಕು,
ನಿರಪೇಕ್ಷವಾಗಿ ಕೃಷ್ಣಾರ್ಪಣವೆನಬೇಕು.

ಸ್ವಭಾವ-ಪ್ರಭಾವ

ಸ್ವಭಾವ ಪ್ರಭಾವಗಳ ಹಗ್ಗ ಜಗ್ಗಾಟ,
ಬಹುತೇಕ ಪ್ರಭಾವದ್ದೇ -ಮೇಲಾಟ,
ಸಜ್ಜನರ ಸಂಗದಿಂದ ಸ್ವಭಾವ ಉತ್ಖನನ,
ಸ್ವಭಾವದ ಅರಿವಾಗೆ ಸಾಧನ ಉದ್ದೀಪನ.

ತುಂಬದ ಗಡಿಗೆ -ಅಪೂರ್ಣ ಅಡಿಗೆ

ತುಂಬಿದ ಕೊಡ ತುಳುಕುವುದಿಲ್ಲ,
ಖಾಲಿಯ ಕೊಡದ್ದು ಸದ್ದೇ ಎಲ್ಲ,
ಜಂಬದ ಪಂಡಿತ ತುಂಬದ ಗಡಿಗೆ,
ಅನುಭವಕೆ ಬಾರದ ಅಪೂರ್ಣ ಅಡಿಗೆ.
[Contributed by Shri Govind Magal]

Thursday, 14 September 2017

Bhava Spandana - 15

ಭಾವ ಸ್ಪಂದನ by “ತ್ರಿವೇಣಿ ತನಯ

ಜಾತಿ -ಫಜೀತಿ

ಮೂಲದ್ರವ್ಯ ಮಣ್ಣಿಗ್ಯಾವ ಜಾತಿ?
ಹರಿವ ತೊಳೆವ ನೀರಿಗ್ಯಾವ ಜಾತಿ?
ಉರಿವ ಸುಡುವ ಬೆಂಕಿಗ್ಯಾವ ಜಾತಿ?
ತಂಪು ಬಿಸಿ ಬೀಸುವ ಗಾಳಿಗ್ಯಾವ ಜಾತಿ?
ಎಲ್ಲೆಡೆ ಇರುವ ಆಕಾಶಕ್ಯಾವ ಜಾತಿ?
ಪಂಚಭೂತಗಳಿಂದಾದ ದೇಹಕ್ಯಾವ ಜಾತಿ?
ತ್ರಿಗುಣಗಳಿಂದಾದ ಮೂರರಲ್ಲೊಂದು ಜಾತಿ!
ಅಂತರಾರ್ಥವರಿಯದ ಮನುಜ ಮಾಡಿದ ಫಜೀತಿ!

ಅರಿಯಲೆತ್ನಿಸು ಮೂರರಲ್ಲಿ ನಿಂದ್ಯಾವ ರೀತಿ?
ಅದೇ ಆಗಲಿ ಬಾಳನಡೆಯ ಶಿಸ್ತಿನ ನೀತಿ!
ನೀತಿಯಲಿ ನಡೆದಾಗ ನಿನ್ನ ರೀತಿಯ ವಿಕಾಸ!
ಭೀತಿಯಿಲ್ಲದೆ ಪ್ರೀತಿಯಲಿ ನಡೆದು ಮುಗಿಸು ಪ್ರವಾಸ.

ಶರಣಾಗತಿ -ತಕ್ಕ ಗತಿ

ಜ್ಞಾನಕ್ಕೆ ಸಮನಾದ ಶುದ್ಧ ವಸ್ತುವೊಂದಿಲ್ಲ,
ಶುದ್ಧ ಶರಣಾಗತಿಯ ಕರ್ಮ ಸಿದ್ಧಿಸುವುದೆಲ್ಲಾ,
ಮುಂದೊಮ್ಮೆ ಕಾಣುವೆ ಸತ್ಯ ನಿನ್ನೊಳಗೆ ನೀನು,
ಪಾಳಿ ಬಂದಾಗ ಲಭ್ಯ ಹರಿಕಾರುಣ್ಯದ ಜೇನು.

ನಿಜವೈರಾಗ್ಯ

ಪುರಾಣವೈರಾಗ್ಯ ಪ್ರಸೂತಿವೈರಾಗ್ಯ,
ಶ್ಮಶಾನವೈರಾಗ್ಯ ಅಭಾವವೈರಾಗ್ಯ,
ಕಾಲಕ್ಕೊಂದು ವೈರಾಗ್ಯ ಕ್ಷಣಿಕ,
ನಿಜವೈರಾಗ್ಯ ಮೌನತಪದ ಪಾಕ.
[Contributed by Shri Govind Magal]

Sunday, 10 September 2017

Bhava Spandana - 14

ಭಾವ ಸ್ಪಂದನ by “ತ್ರಿವೇಣಿ ತನಯ

ಕಂದಾಯ -ಸಂದಾಯ -ಅಪಾಯ

ಇರುವ ಮನೆಗೆ ಬಾಡಿಗೆ ಕರ ಕಂದಾಯ,
ನೀರು ವಿದ್ಯುತ್ ಇಂಧನಕೆ ಹಣ ಸಂದಾಯ,
ಕರ್ಮ ನೀಗಲು ಕಳಿಸಿದವನ ನೆನಪೇ ಇಲ್ಲ,
ಹೆಂಡತಿ ಮಕ್ಕಳು ಮನೆ ಧನ ವ್ಯಾಪಾರವೇ ಎಲ್ಲ.

ಅಂದ -ಚೆಂದ-ಆನಂದ

ಹೆಂಡತಿ ಮಕ್ಕಳು ಚೆಂದ ಮಹಡಿಮನೆ ಅಂದ,
ಒಬ್ಬೊಬ್ಬರಿಗೊಂದರಿಂದ ಅಮಿತ ಆನಂದ,
ಆಗಬೇಕಾಗಿರುವುದ ಬಿಟ್ಟು ನಡೆದಿರುವುದೇ ಬೇರೆ!
ಏನಿದೆಯೋ ಅವನಿಚ್ಛ ಅವನದೇ ಪ್ರೇರಣಾಧಾರೆ!!

ಕತ್ತಲು ಬೆತ್ತಲು

ಸಾಕು ಸಾಕಾಗಿದೆ ಮುಖವಾಡದ ಬದುಕು,
ತನ್ನತನ ಮುಚ್ಚಿಟ್ಟುಕೊಳ್ಳುವುದ್ಯಾರಿಗೆ ಬೇಕು ,
ಕತ್ತಲು ಕಳೆಯಲು ಬೆತ್ತಲಾಗುವುದು ಅನಿವಾರ್ಯ,
ಕತ್ತಲೇ ಅಭ್ಯಾಸವಾದವರಿಗೆಲ್ಲಿದೆ ಬೆಳಕ ನೋಡುವ ಧೈರ್ಯ?

ಮುಗಿವ ಸಂತೆ -ಬೇಡ ಚಿಂತೆ

ಸಂತೆಯೊಳಗಿದ್ದೇ ಚಿಂತೆ ಮರೆಯಬೇಕು,
ನಿಶ್ಚಿಂತನಾಗಿ ಚಿನ್ಮಯನ ನೆನೆಯಬೇಕು,
ಭ್ರಾಂತನಾಗದೇ ಹರಿವ್ಯಾಪಾರದ ತಂತು ಹಿಡಿಯಬೇಕು,
ಸಂತೆ ವ್ಯಾಪಾರವೆಲ್ಲವ ಕಂತುಪಿತಗೆ ಅರ್ಪಿಸಬೇಕು .

ಸುಭಾಷಿತ -ಸಜ್ಜನ ಹಿತ

ಪ್ರಾಪಂಚಿಕ ಸುಖದಲ್ಲೇನಿದೆ ಮಣ್ಣು,
ಅಲ್ಲಿರುವುದು ಎರಡೇ ಸಿಹಿ ಹಣ್ಣು,
ಒಂದು ಸುಭಾಷಿತದ ಮಧುರ ಸಾರ,
ಇನ್ನೊಂದು ಸಜ್ಜನರ ಜ್ಞಾನ ಧಾರ.
[Contributed by Shri Govind Magal]

Friday, 8 September 2017

Bhava Spandana - 13

ಭಾವ ಸ್ಪಂದನ by “ತ್ರಿವೇಣಿ ತನಯ

ನೋವು ಕಾವು

ಬಾಳಲಿ ಬರುವ ನೋವಿನ ಬೇವು,
ಜೀವವ ಮಾಗಿಸುವ ಶುದ್ಧ ಕಾವು,
ಅರಳಿಸುವುದು ಅರಿವಿನ ಹೂವು,
ಸೇರಿಸುವುದದು ತಕ್ಕಂಥಾ ಠಾವು.

ಬೇವು ಬೆಲ್ಲ

ಈ ಜೀವನ ಬೇವು ಬೆಲ್ಲ,
ಮಾಡಿದ್ದೇ ಉಣ್ಣೋದೆಲ್ಲ,
ಅರ್ಪಿಸು ಅವನ ಪಾದಕ್ಕೆಲ್ಲ,
ಸಮ ಕರುಣಿಸುವವ ಗೊಲ್ಲ.

ಇಳೆ -ಬೆಳೆ

ಸಜ್ಜನರ ಸಂಗದಲಿ ಮನದ ಇಳೆಯ ಉತ್ತು,
ಸಚ್ಛಾಸ್ತ್ರ ಹರಿನಾಮದ ಬೀಜಗಳನೇ ಬಿತ್ತು,
ಎಚ್ಚರದಿ ಕೀಳುತಲಿರು ಅರಿಷಡ್ವರ್ಗದ ಕಳೆ,
ಹುಲುಸಾಗಿ ಬಂದೀತು ಹರಿಕಾರುಣ್ಯದ ಬೆಳೆ.

ಎದುರಾದದ್ದ ತಿಳಿ -ಕರ್ಮ ಕಳಿ

ಎಚ್ಚತ್ತಿರು ಮನವೇ ಎದುರಾದದ್ದೆಲ್ಲ ತಿರುಳೇ,
ಅರಿಯದಿದ್ದರೆ ಮೂರ್ಖನಾಗುವೆ ಮರುಳೇ,
ಬಾಳ ತಿರುವುಗಳಲ್ಲಿ ಒದಗುವುದೆಲ್ಲಾ ಪಾಠ,
ಸಾರ್ಥಕವಾಗಲಿ ಕರ್ಮ ಕಳೆಯುವ ಆಟ.

ಸತ್ಸಂಗ

ಸತ್ಸಂಗದಿಂದ ಪರಮ ಗತಿ,
ಸಂತೋಷ ಅತಿ ಲಾಭದ ಸ್ಥಿತಿ,
ಸತ್ಯ ವಿಚಾರ -ಉಚ್ಛ ಜ್ಞಾನ,
ಶಾಂತಿ ಶಮ ಗುಣದ ಗಾನ.
[Contributed by Shri Govind Magal]

Monday, 4 September 2017

Bhava Spandana - 12

ಭಾವ ಸ್ಪಂದನ by “ತ್ರಿವೇಣಿ ತನಯ

ಗಣಿತ -ಅಗಣಿತ

ಬೇಕಿಲ್ಲ ನಮಗೆ ಶುದ್ಧ ತತ್ವ ಶುದ್ಧ ಗಣಿತ,
ಎನಿತು ಒಲಿದಾನು ಅವನು ಅಗಣಿತ,
ಇಲ್ಲದ ಶೇಷ್ಠತೆ ಮೆರೆಸುವ ಹುಚ್ಚು ಚಪಲ,
ಹಾಲೆಂದು ಭ್ರಮಿಸಿ ಕುಡಿವ ಹಾಲಾಹಲ.

ಸೃಷ್ಟಿ -ಕಾಣುವುದದಾಗಿ ಸಮಷ್ಟಿ

ಸೃಷ್ಟಿ ಹುಟ್ಟು ಎಂದರೆ ಆಕಾರದ ಸಾಕಾರ,
ತತ್ವವ್ಯಾವೂ ಹೊಸದಾಗಿ ಆಗಲ್ಲ ಆವಿಷ್ಕಾರ,
ನೂಲಿನಿಂದ ಬಟ್ಟೆ ಮಣ್ಣಿನಿಂದ ಮಡಕೆ,
ರೇತಸ್ಸಿಗೆ ತಾಯಗರ್ಭದಿ ಮೂಳೆ ಮಾಂಸದ ತಡಿಕೆ.

ಮನದ ತೆರೆ -ಸ್ವಭಾವದ ಮೇರೆ

ಬರುವ ಸ್ಫುರಣೆಗಳೆಲ್ಲ ಈ ಜೀವಸ್ವಭಾವದ ಸಂಕೇತ,
ಯಾವುವೂ ಸರ್ವತ್ರಸತ್ಯವಲ್ಲ ಹೀಗೆಂದು ಇದಮಿತ್ಥ,
ಭಾವನೆಗಳೆಲ್ಲಾ ಬದಲಾಗುವ ಸಮುದ್ರ ತೆರೆಯೆಂತೆ,
ಅವರವರ ತೀರಕ್ಕೆ ತಳ್ಳುತ್ತಾ ಸೇರಿಸುವುದಂತೆ.

ಅಲ್ಪಮತ -ಬಹುಮತ

ಬಹುಮತವಿರುವಲ್ಲಿ ಸತ್ಯ ತತ್ವ ಇರೊಲ್ಲ,
ತರ್ಕಬದ್ಧ ತತ್ವಕ್ಕೆ ಬಹುಮತವಿರಲಿಕ್ಕಿಲ್ಲ,
ತತ್ವದೊಂದಿಗೆ ಇದ್ದ ಪಾಂಡವರು ಬರೀ ಐದು,
ತತ್ವದಿಂದ ದೂರಿದ್ದ ಕೆಟ್ಟ ಕೌರವರು ನೂರೊಂದು.

ತಪ್ಪು ಒಪ್ಪು -ಸ್ವಭಾವದ ಚಿಪ್ಪು

ಮನ ಒಪ್ಪಿದರೆ ಒಪ್ಪಿ ಅಪ್ಪು,
ಒಪ್ಪದಿರೆ ಅಪ್ಪಿದ್ದೇ ಅದು ಒಪ್ಪು,
ಸ್ವಭಾವದಂತೆಯೇ ತಪ್ಪು ಒಪ್ಪು,
ಅನುಭವಸಿದ್ಧ ವೇದಮಾತಲ್ಲ ತಪ್ಪು.
[Contributed by Shri Govind Magal]

Saturday, 2 September 2017

Bhava Spandana - 11

ಭಾವ ಸ್ಪಂದನ by “ತ್ರಿವೇಣಿ ತನಯ


ವಿಶ್ವಮತ ಕೊಟ್ಟ ವಿಶ್ವಗುರು

ವಿಶ್ವಮತ ಕೊಟ್ಟ ಏಕೈಕ ವಿಶ್ವಗುರು ಮಧ್ವಾಚಾರ್ಯ,
ಧಾರ್ಮಿಕ ವೈಜ್ಞಾನಿಕವಾಗಿ ಸಮ್ಮತ ಸೂತ್ರ ಕೊಟ್ಟ ಆರ್ಯ,
ಸಕಲ ಚೇತನ ಜಡ ಸರ್ವಾಂತರ್ಯಾಮಿ ಭಗವಂತನೆಂದ,
ಸಕಲ ಚರಾಚರ ವಸ್ತು ನಾದ ವೇದಗಳು ಅವನ ನಾಮವೆಂದ,
ದೇವತೆಗಳು ಅನೇಕ ನಿಯಾಮಕ ದೇವ ಒಬ್ಬನೇ ಎಂದ,
ಯಾರನ್ನೇ ಪೂಜಿಸು ಎಲ್ಲರಂತರ್ಯಾಮಿ ಹರಿಯೆಂದ,
ಭಗವದ್ ಹಿರಿಮೆ ನಮ್ಮ ಸೀಮೆ ಅರಿತು ಬಾಳಿದರೆ ಭೂಮಿ ನಾಕ,
ಅಜ್ಞಾನದ ಬೇಲಿ ಕಟ್ಟಿಕೊಂಡು ನಾವು ಮಾಡಿಕೊಂಡಿದ್ದೇವೆ ನರಕ.

ತಾರತಮ್ಯ

ಸೃಷ್ಟಿಯಲಿ ಒಂದರಂತೆ ಇನ್ನೊಂದಿಲ್ಲ,
ಜೀವಸ್ವಭಾವ ಬೇರೆ ಬೇರೆಯೇ ಎಲ್ಲ,
ದೊರೆ ದೊರೆಯೇ ಪ್ರಜೆ ಪ್ರಜೆಯೇ,
ಮುಕುತಿಯೆನೆ ಸ್ವಭಾವ ವಿಕಾಸವೇ.

ಮಾವು ಬೇವಾಗಲ್ಲ ಬೇವು ಮಾವಾಗಲ್ಲ,
ಹಾಲು ಹಾಲಾಹಲವಲ್ಲ ಹಾಲಾಹಲ ಹಾಲಲ್ಲ,
ತ್ರಿವಿಧಗುಣ -ಸ್ವಭಾವಗಳ ಮೂಲ ದ್ರವ್ಯ,
ಅದೇ ಭಗವಂತ ತೋರುತಿಹ ಸೃಷ್ಟಿಕಾವ್ಯ.

ಸಾಧನೆ-ಅನುಕ್ಷಣದ ಚಲನೆ 

ಬದುಕಿನಲ್ಲಿ ಅಲ್ಲ --ಸಾಧನೆ,
ಅನುಕ್ಷಣದ ಬದುಕೇ ಸಾಧನೆ,
ಆಗದಿರಲದು ಬರೀ ವೇದನೆ,
ಸ್ವಚ್ಛವಿರಲಿ ಮನವೆಂಬ ಮನೆ,
ಮನಕ್ಕಿಳಿದರೆ ಸದ್ ಬೋಧನೆ,
ಸರಳಾತಿ ಸರಳವದು ಆಚರಣೆ.
[Contribute by Shri Govind Magal]