Friday, 17 May 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 12: 111 - 115

ವಿಷ್ಣ್ವಾವೇಶೀ ಬಲವಾನ್ ಯೋ ಗುಣಾಧಿಕಃ ಸ ಮೇ ಸುತಃ ಸ್ಯಾದಿತಿ ರೋಹಿಣೀ ಚ ।
ತೇಪೇ ತಪೋsತೋ ಹರಿಶುಕ್ಲಕೇಶಯುತಃ ಶೇಷೋ ದೇವಕೀರೋಹಿಣೀಜಃ ॥೧೨.೧೧೧॥
ವಿಷ್ಣುವಿನ ಆವೇಶಯುಕ್ತನಾದ ಅಧಿಕ ಗುಣಶಾಲಿ,
ಬಲಿಷ್ಠ ದೇವತೆಯೊಬ್ಬ ತನಗೆ ಮಗನಾಗಿ ಜನಿಸಲಿ.
ಹೀಗೆಂದು ರೋಹಿಣಿಯೂ ತಪಸ್ಸು ಮಾಡಿದ್ದಳು ಭಗವಂತನಲ್ಲಿ,
ಹರಿಶುಕ್ಲಕೇಷಾವೇಶಯುಕ್ತ ಶೇಷ ಹುಟ್ಟಿದ ದೇವಕಿ ರೋಹಿಣಿಯಲ್ಲಿ.

ಅವರ್ದ್ಧತಾಸೌ ಹರಿಶುಕ್ಲಕೇಶಸಮಾವೇಶೀ ಗೋಕುಲೇ ರೌಹಿಣೇಯಃ ।
ಕೃಷ್ಣೋsಪಿ ಲೀಲಾ ಲಳಿತಾಃ ಪ್ರದರ್ಶಯನ್ ಬಲದ್ವಿತೀಯೋ ರಮಯಾಮಾಸ ಗೋಷ್ಠಮ್ ॥೧೨.೧೧೨॥
ಹರಿಯ ಶುಕ್ಲಕೇಷಾವೇಶವುಳ್ಳ ರೋಹಿಣಿಯ ಮಗ,
ಬಲರಾಮನಾಗಿ ಗೋಕುಲದಿ ಬೆಳೆಯುತ್ತಿದ್ದನಾಗ.
ಸಂಕರ್ಷಣರೂಪೀ ಭಗವಂತನ ಆಟ,
ಬಲರಾಮ ಗೋಕುಲದಿ ಬೆಳೆವ ನೋಟ.
ಅವನೊಂದಿಗೆ ಕೃಷ್ಣನಾಟಗಳೂ ಲೀಲಾಮನೋಹರ,
ಹರಿಸಿದ ಗೋಕುಲದ ಜನಗಳಿಗೆ ಸಂತಸದ ಧಾರ.

ಸ ಪ್ರಾಕೃತಂ ಶಿಶುಮಾತ್ಮಾನಮುಚ್ಚೈರ್ವಿಜಾನನ್ತ್ಯಾ ಮಾತುರಾದರ್ಶನಾಯ ।
ವಿಜೃಮ್ಭಮಾಣೋsಖಿಲಮಾತ್ಮಸಂಸ್ಥಂ ಪ್ರದರ್ಶಯಾಮಾಸ ಕದಾಚಿದೀಶಃ ॥೧೨.೧೧೩॥
ಜಗದೀಶನಾದ ಕೃಷ್ಣನನ್ನು ಸಾಮಾನ್ಯ ಶಿಶುವೆಂದು ತಿಳಿದಿದ್ದಳು ತಾಯಿ,
ನೈಜರೂಪ ತೋರಲೊಮ್ಮೆ ಬ್ರಹ್ಮಾಂಡವ ತೋರಿದ್ದ ತೆರೆದು ತನ್ನ ಬಾಯಿ.

ಸಾsಣ್ಡಂ ಮಹಾಭೂತಮನೋsಭಿಮಾನಮಹತ್ಪ್ರಕೃತ್ಯಾವೃತಮಬ್ಜಜಾದಿಭಿಃ ।
ಸುರೈಃ ಶಿವೇತೈರ್ನ್ನರದೈತ್ಯಸಙ್ಘೈರ್ಯ್ಯುತಂ ದದರ್ಶಾಸ್ಯ ತನೌ ಯಶೋದಾ ॥೧೨.೧೧೪॥
ಯಶೋದಾದೇವಿ ಕೃಷ್ಣನ ಬಾಯಲ್ಲಿ ಕಂಡದ್ದು ಪಂಚಮಹಾಭೂತ,
ಮನಸ್ತತ್ವ ಅಹಂಕಾರತತ್ವ ಮಹತ್ತತ್ತ್ವ ಮೂಲ ಪ್ರಕೃತಿಗಳಿಂದಾವೃತ.
ರುದ್ರಸಮೇತರಾದ ಬ್ರಹ್ಮಾದಿ ದೇವತೆಗಳು,
ಮಾನವ ಮತ್ತು ದಾನವ ಸಮೂಹಗಳು,
ಸಮಸ್ತವನೊಳಗೊಂಡ ಬ್ರಹ್ಮಾಂಡ ಕಂಡಳು.



 ನ್ಯಮೀಲಯಚ್ಚಾಕ್ಷಿಣೀ ಭೀತಭೀತಾ ಜುಗೂಹ ಚಾsತ್ಮಾನಮಥೋ ರಮೇಶಃ ।
ವಪುಃ ಸ್ವಕೀಯಂ ಸುಖಚಿತ್ಸ್ವರೂಪಂ ಪೂರ್ಣ್ಣಂ ಸತ್ಸು ಜ್ಞಾಪಯಂಸ್ತದ್ಧ್ಯದರ್ಶಯತ್ ॥೧೨.೧೧೫॥
ಅತ್ಯಂತ  ಭಯಭೀತಳಾಗಿ ಕಣ್ಮುಚ್ಚಿದಳು ತಾನು  ಯಶೋದೆ,
ತನ್ನ ವಿಶ್ವರೂಪವನ್ನ ಮರುಕ್ಷಣ ಮರೆಮಾಡಿದ ಜಗದ ತಂದೆ.
ತನ್ನ ಶರೀರ ಆನಂದ ಜ್ಞಾನಸ್ವರೂಪ ಮತ್ತು ಪರಿಪೂರ್ಣ,
ಸಜ್ಜನಕೆ ತಿಳಿಸಲದನು ವಿಶ್ವರೂಪವ ತೋರಿದ್ದ ತಾ ಶ್ರೀಕೃಷ್ಣ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula