Wednesday 15 May 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 12: 94 -99

ವಿವರ್ದ್ಧಮಾನೇ ಲೋಕದೃಷ್ಟ್ಯೈವ ಕೃಷ್ಣೇ ಪಾಣ್ಡುಃ ಪುನಃ ಪ್ರಾಹ ಪೃಥಾಮಿದಂ ವಚಃ ।
ಧರ್ಮ್ಮಿಷ್ಠೋ ನೌ ಸೂನುರಗ್ರೇ ಬಭೂವ ಬಲದ್ವಯಜ್ಯೇಷ್ಠ ಉತಾಪರಶ್ಚ ॥೧೨.೯೪॥
ಇತ್ತ, ಜನರ ಕಣ್ಣಿಗೆ ಗೊಲ್ಲರ ನಡುವೆ ಕೃಷ್ಣ ಬೆಳೆಯುತ್ತಿದ್ದ,
ಅತ್ತ ಪಾಂಡುರಾಜ ಕುಂತಿಯನ್ನು ಕುರಿತು ಹೀಗೆ ಹೇಳಿದ.
ನಮಗೆ ಮೊದಲ ಮಗನಾಗಿ ಹುಟ್ಟಿದ್ದು ಧರ್ಮದ ಪ್ರತಿನಿಧಿ,
ಆನಂತರ ಹುಟ್ಟಿದವ ಜ್ಞಾನ ಹಾಗೂ ಬುದ್ಧಿಬಲದಲ್ಲಿ ನಿಧಿ.

ಯದೈಕ ಏವಾತಿಬಲೋಪಪನ್ನೋ ಭವೇತ್ ತದಾ ತೇನ ಪರಾವಮರ್ದ್ದೇ ।
ಪ್ರವರ್ತ್ತ್ಯಮಾನೇ ಸ್ವಪುರಂ ಹರೇಯುಶ್ಚೌರ್ಯ್ಯಾತ್ ಪರೇ ತದ್ ದ್ವಯಮತ್ರ ಯೋಗ್ಯಮ್ ॥೧೨.೯೫॥
ಇರಲು ಒಬ್ಬನೇ ಅತ್ಯಂತ ಬಲಿಷ್ಠನಾದ ಮಗ,
ಅವ ಇತರರೊಡನೆ ಯುದ್ಧನಿರತನಾಗಿರುವಾಗ,
ಆಗ ಬರಬಹುದು ಬೇರೆ ಶತ್ರುಗಳಿಂದ ಪುರ ಅಪಹಾರದ ಭೀತಿ,
ಪುರರಕ್ಷಣೆಗಾಗಿ ಇಬ್ಬರು ಮಕ್ಕಳಿದ್ದರಲ್ಲವೇ ಯೋಗ್ಯವಾದ ನೀತಿ.

ಶಸ್ತ್ರಾಸ್ತ್ರವಿದ್ ವೀರ್ಯ್ಯವಾನ್ ನೌ ಸುತೋsನ್ಯೋ ಭವೇದ್ ದೇವಂ ತಾದೃಶಮಾಹ್ವಯಾತಃ ।
ಶೇಷಸ್ತವ ಭ್ರಾತೃಸುತೋsಭಿಜಾತಸ್ತಸ್ಮಾನ್ನಾಸೌ ಸುತದಾನಾಯ ಯೋಗ್ಯಃ ॥೧೨.೯೬॥
ಶಸ್ತ್ರಾಸ್ತ್ರಗಳ ಬಲ್ಲ ಇನ್ನೊಬ್ಬ ವೀರ್ಯವಂತ ಸುತ ಬೇಕು,
ಅಂಥ ಮಗನ ಕೊಡಬಲ್ಲ ದೇವತೆಯ ನೀನು ಕರೆಯಬೇಕು.
ನಿನ್ನ ಅಣ್ಣನ ಮಗನಾಗಿ ಹುಟ್ಟಿದ್ದಾನೆ ಶೇಷ,
ಅದಕೆ ಅವನಿಗಿಲ್ಲ ಮಗನ ಕೊಡುವ ಅವಕಾಶ.

ನವೈ ಸುಪರ್ಣ್ಣಃ ಸುತದೋ ನರೇಷು ಪ್ರಜಾಯತೇ ವಾsಸ್ಯ ಯತಸ್ತಥ್ssಜ್ಞಾ ।
ಕೃತಾ ಪುರಾ ಹರಿಣಾ ಶಙ್ಕರಸ್ತು ಕ್ರೋಧಾತ್ಮಕಃ ಪಾಲನೇ ನೈವ ಯೋಗ್ಯಃ ॥೧೨.೯೭ ॥
ಅದೇ ಕಕ್ಷೆಯ ಗರುಡನಿಗಿಲ್ಲ ಅವತಾರದ ಅವಕಾಶ,
ಅವನಿಗೆ ಅವತಾರವಿಲ್ಲೆಂದು ಭಗವಂತನದೇ ಆದೇಶ.
ಅದೇ ಕಕ್ಷೆಯ ಸದಾಶಿವನದು ಬ್ರಹ್ಮನ ಕೋಪದಿಂದ ಜನನ,
ಅವನಿಂದಾಗಲಾರದು ಬೇರೊಬ್ಬರ ಯೋಗ್ಯ ಪರಿಪಾಲನ.

ಅತೋ ಮಹೇನ್ದ್ರೋ ಬಲವಾನನನ್ತರಃ ತೇಷಾಂ ಸಮಾಹ್ವಾನಮಿಹಾರ್ಹತಿ ಸ್ವರಾಟ್ ।
ಇತೀರಿತಾ ಸಾssಹ್ವಯದಾಶು ವಾಸವಂ ತತಃ ಪ್ರಜಜ್ಞೇ ಸ್ವಯಮೇವ ಶಕ್ರಃ ॥೧೨.೯೮॥
ಆನಂತರದ ಬಲಿಷ್ಠ ದೇವತೆ ದೇವೇಂದ್ರ,
ಆಹ್ವಾನಕ್ಕೆ ಅವನೇ ಯೋಗ್ಯ ಗುಣಸಾಂದ್ರ.
ಪಾಂಡುವಿನಿಂದ ಪ್ರೇರೇಪಿತ ಕುಂತಿ ಕೊಡುತ್ತಾಳೆ ಇಂದ್ರಗೆ ಕರೆ,
ಕುಂತಿಯ ಕರೆಯಂತೆ ಇಂದ್ರ ಹುಟ್ಟಿಬಂದ ದೇವತೆಗಳ ದೊರೆ.

ಸ ಚಾರ್ಜ್ಜುನೋ ನಾಮ ನರಾಂಶಯುಕ್ತೋ ವಿಷ್ಣ್ವಾವೇಶೀ ಬಲವಾನಸ್ತ್ರವೇತ್ತಾ ।
ರೂಪ್ಯನ್ಯಃ ಸ್ಯಾತ್ ಸೂನುರಿತ್ಯುಚ್ಯಮಾನಾ ಭರ್ತ್ತ್ರಾ ಕುನ್ತೀ ನೇತಿ ತಂ ಪ್ರಾಹ ಧರ್ಮ್ಮಾತ್ ॥೧೨.೯೯ ॥
ಇಂದ್ರನೇ ಅರ್ಜುನ ನಾಮದಿ ನರಾಂಶಯುಕ್ತನಾಗಿ ಬಂದ,
ವಿಷ್ಣು ಆವೇಶದಿ ಬಲಿಷ್ಠ ಅಸ್ತ್ರಜ್ಞನಾಗಿ ತಾ ಹುಟ್ಟಿಬಂದ.
ಚೆಂದದ ರೂಪವುಳ್ಳ ಇನ್ನೊಬ್ಬ ಮಗನಾಗಲಿ ಎಂದ ಪಾಂಡು,
ಬೇಡವೆಂದಳು ಕುಂತಿ ಅದು ಧರ್ಮಯೋಗ್ಯವಲ್ಲ ಎಂದುಕೊಂಡು.
[Contributed by Shri Govind Magal]

No comments:

Post a Comment

ಗೋ-ಕುಲ Go-Kula