Tuesday, 30 July 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 13: 73 - 77


ಕಾರ್ತ್ತ್ಯಾಯನೀವ್ರತಪರಾಃ ಸ್ವಪತಿತ್ವಹೇತೋಃ ಕನ್ಯಾ ಉವಾಹ ಭಗವಾನಪರಾಶ್ಚ ಗೋಪೀಃ ।
ಅನ್ಯೈ ರ್ದ್ಧೃತಾ ಅಯುಗಬಾಣಶರಾಭಿನುನ್ನಾಃ ಪ್ರಾಪ್ತಾ ನಿಶಾಸ್ವರಮಯಚ್ಛಶಿರಾಜಿತಾಸು ॥೧೩.೭೩॥
ಮದುವೆಯಾದ,ಕಾರ್ತ್ಯಾಯನೀ ವ್ರತವನ್ನು ತೊಟ್ಟ,
ಕೃಷ್ಣನ ಸೆಳೆತಕ್ಕೊಳಗಾಗಿ ಕಾಮಬಾಣ ನೆಡಲ್ಪಟ್ಟ,
ಇವನೇ ಪತಿಯಾಗಬೇಕೆಂಬ ಪಣವನ್ನು ತೊಟ್ಟ,
ಕನ್ನಿಕೆ-ಗೊಲ್ಲಪತ್ನಿಯರೊಂದಿಗೆ ಕೃಷ್ಣನ ರಮಿಸುವಾಟ.

ತಾಸ್ವತ್ರ ತೇನ ಜನಿತಾ ದಶಲಕ್ಷಪುತ್ರಾ ನಾರಾಯಣಾಹ್ವಯಯುತಾ ಬಲಿನಶ್ಚ ಗೋಪಾಃ ।
ಸರ್ವೇsಪಿ ದೈವತಗಣಾ ಭಗವತ್ಸುತತ್ವಮಾಪ್ತುಂ ಧರಾತಳಗತಾ ಹರಿಭಕ್ತಿಹೇತೋಃ ॥೧೩.೭೪॥
ಹೀಗಿಲ್ಲಿ, ಆ ಗೊಲ್ಲ ಹೆಣ್ಣುಮಕ್ಕಳಲ್ಲಿ ಶ್ರೀಕೃಷ್ಣ,
ಜನ್ಮವಿತ್ತ ಹತ್ತುಲಕ್ಷ ಮಕ್ಕಳ ಹೆಸರು ನಾರಾಯಣ.
ಅವರೆಲ್ಲಾ ಸೇರಿದವರಾಗಿದ್ದರು ದೇವತಾಗಣ,
ಹರಿಭಕ್ತಿ, ಮತ್ತವನ ಮಕ್ಕಳಾಗಬಯಸಿದ ಕಾರಣ.
ಶ್ರೀಕೃಷ್ಣ ಹೀಗೆ ಅವರೆಲ್ಲರ ಮದುವೆಯಾಗಲು ಕಾರಣ,
ಮುಂದಿನ ಶ್ಲೋಕದಲ್ಲಿ ಕೊಡಲ್ಪಟ್ಟಿದೆ ವಿವರದ ಹೂರಣ.

ತಾಸ್ತತ್ರ ಪೂರ್ವವರದಾನಕೃತೇ ರಮೇಶೋ ರಾಮಾ ದ್ವಿಜತ್ವಗಮನಾದಪಿ ಪೂರ್ವಮೇವ ।
ಸರ್ವಾ ನಿಶಾಸ್ವರಮಯತ್ ಸಮಭೀಷ್ಟಸಿದ್ಧಿಚಿನ್ತಾಮಣಿರ್ಹಿ ಭಗವಾನಶುಭೈರಲಿಪ್ತಃ ॥೧೩.೭೫॥
ಭಗವಂತ ಹಿಂದೆ ತಾನೇ ಕೊಟ್ಟಿದ್ದ ವರದ ಅನುಸಾರ,
ಮುಂಜಿಗೆ ಮೊದಲೇ ಹೆಣ್ಣುಗಳೊಡನವನ ವಿಹಾರ.
ತಾನೊಪ್ಪಿದವರಿಗೆ ಬಯಸಿದ್ದ ಕೊಡುವ ಭೂಪ,
ಲೋಕಜನಕ ಪರಿಪೂರ್ಣಗೆಲ್ಲಿ ಪಾಪದ ಲೇಪ?

ಸಮ್ಪೂರ್ಣ್ಣಚನ್ದ್ರಕರರಾಜಿತಸದ್ರಜನ್ಯಾಂ ವೃನ್ದಾವನೇ ಕುಮುದಕುನ್ದಸುಗನ್ಧವಾತೇ ।
ಶುತ್ವಾಮುಕುನ್ದಮುಖನಿಸ್ಸೃತಗೀತಸಾರಂ ಗೋಪಾಙ್ಗನಾ ಮುಮುಹುರತ್ರ ಸಸಾರ ಯಕ್ಷಃ॥೧೩.೭೬॥
ಉತ್ತಮ ರಾತ್ರಿಗಳವು-ಪೂರ್ಣಚಂದ್ರನ ಬೆಳಕಿಂದ ಶೋಭಿತ,
ನೈದಿಲೆ ಮಲ್ಲಿಗೆ ಮುಂತಾದ ಹೂಗಳಿಂದ ಪರಿಮಳಭರಿತ.
ಸುಗಂಧಮಯ ಗಾಳಿ ಬೀಸುವ ಆ ವೃಂದಾವನ,
ಕೃಷ್ಣಾರವಿಂದದಿಂದ ಹೊರಬಂದ ಸುಶ್ರಾವ್ಯಗಾನ.
ಗೋಪಿಯರು ಆನಂದದಿಂದ ಮೈಮರೆತ ಆ ಕ್ಷಣ,
ಆಗಾಯಿತು ಅಲ್ಲಿಗೆ ಯಕ್ಷನೊಬ್ಬನ ಆಗಮನ.

ರುದ್ರಪ್ರಸಾದಕೃತರಕ್ಷ ಉತಾಸ್ಯ ಸಖ್ಯುರ್ಭೃತ್ಯೋ ಬಲೀ ಖಲತರೋsಪಿಚ ಶಙ್ಖಚೂಡಃ ।
ತಾಃ ಕಾಲಯನ್ ಭಗವತಸ್ತಳತಾಡನೇನ ಮೃತ್ಯುಂ ಜಗಾಮ ಮಣಿಮಸ್ಯ ಜಹಾರ ಕೃಷ್ಣಃ ॥೧೩.೭೭॥
ಆ ಯಕ್ಷಗೆ ಇತ್ತು ಶಿವನ ಅನುಗ್ರಹದ ರಕ್ಷಣೆ,
ರುದ್ರಮಿತ್ರ ಕುಬೇರನ ಸೇವಕನಾಗಿದ್ದವನವನೇ.
ಬಲಿಷ್ಠ ಕ್ರೂರಿ ಶಂಖಚೂಡನೆಂದು ಅವನ ಹೆಸರು,
ಗೋಪಿಯರ ಕದಿವಾಗ ಕೃಷ್ಣನಕೈಯಿಂದ ನಿಂತಿತವನ ಉಸಿರು.
ಅವನ ಮಣಿ ಕಿತ್ತುಕೊಂಡ ಕೃಷ್ಣನ ನೋಡುತ್ತಿರಲು ಸ್ತ್ರೀಯರು.

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 13: 67 - 72

ತುಷ್ಟಾವ ಚೈನಮುರುವೇದಶಿರೋಗತಾಭಿರ್ಗ್ಗೀರ್ಭಿಃ ಸದಾsಗಣಿತಪೂರ್ಣ್ಣಗುಣಾರ್ಣ್ಣವಂ ತಮ್ ।
ಗೋಭೃದ್ ಗುರುಂ ಹರಗುರೋರಪಿ ಗೋಗಣೇನ ಯುಕ್ತಃ ಸಹಸ್ರಗುರಗಾಧಗುಮಗ್ರ್ಯಮಗ್ರ್ಯಾತ್ ॥೧೩.೬೭॥
ಸಾವಿರಕಂಗಳ ಹೊಂದಿದ ವಜ್ರಧಾರಿ ಇಂದ್ರ,
ಉತ್ಕೃಷ್ಟ ಉಪನಿಷತ್ ಮಾತುಗಳ ದ್ವಾರ,
ರುದ್ರಪಿತ ಚತುರ್ಮುಖನಿಗೂ ಉಪದೇಶಕನಾದ ಅಗಣಿತ ಗುಣಪೂರ್ಣ,
ಇಂದ್ರನಿಂದ ಸ್ತುತಿಸಲ್ಪಟ್ಟನವ ಸಹಸ್ರಾಕ್ಷ ಶೇಷ್ಠರಿಗೂ ಶ್ರೇಷ್ಠನಾದ ನಾರಾಯಣ.

ತ್ವತ್ತೋ ಜಗತ್ ಸಕಲಮಾವಿರಭೂದಗಣ್ಯಧಾಮ್ನಸ್ತ್ವಮೇವ ಪರಿಪಾಸಿ ಸಮಸ್ತಮನ್ತೇ ।
ಅತ್ಸಿ ತ್ವಯೈವ ಜಗತೋsಸ್ಯ ಹಿ ಬನ್ಧಮೋಕ್ಷೌ ನ ತ್ವತ್ಸಮೋsಸ್ತಿ ಕುಹಚಿತ್ ಪರಿಪೂರ್ಣ್ಣಶಕ್ತೇ ॥೧೩.೬೮॥
ಅಗಣಿತ ಶಕ್ತಿಯ ನಿನ್ನಿಂದಲೇ ಸಕಲ ಜಗತ್ತಿನ ಸೃಜನ,
ನಿನ್ನಿಂದಲೇ ಪಾಲನ ಮತ್ತು ಕಡೆಗೆ ಆಗುವ  ನಾಶನ.
ನಿನ್ನಿಂದಲೇ ಬಂಧನ ಮತ್ತು ಬಿಡುಗಡೆ ಹೊಂದುವ ಜಗತ್ತು,
ನಿನಗೆ ಸಮನಾರಿಲ್ಲ ನೀನೇ ಈ ಜಗದ ಪರಿಪೂರ್ಣ ತಾಕತ್ತು.

ಕ್ಷನ್ತವ್ಯಮೇವ ಭವತಾ ಮಮ ಬಾಲ್ಯಮೀಶ ತ್ವತ್ಸಂಶ್ರಯೋsಸ್ಮಿ ಹಿ ಸದೇತ್ಯಭಿವನ್ದಿತೋsಜಃ ।
ಕ್ಷಾನ್ತಂ ಸದೈವ ಭವತಸ್ತವ ಶಿಕ್ಷಣಾಯ ಪೂಜಾಪಹಾರವಿಧಿರಿತ್ಯವದದ್ ರಮೇಶಃ ॥೧೩.೬೯॥
ಓ ಕೃಷ್ಣಾ, ನಿನ್ನಿಂದ ಕ್ಷಮಿಸಲ್ಪಡಲಿ ನನ್ನ ಹುಡುಗುತನ,
ನಿನ್ನಲ್ಲಿ ಆಶ್ರಿತವಾಗೇ ಹೊಂದಲ್ಪಟ್ಟದ್ದು ನನ್ನ ಸ್ಥಾನಮಾನ.
ಹೀಗೆ ಬೇಡಿಕೊಳ್ಳುತ್ತಾ ನಮಸ್ಕರಿಸುತ್ತಾನೆ ಇಂದ್ರ,
ನಿನಗೆ ಸದಾ ಕ್ಷಮಿಸಿರುವೆ ಎನ್ನುತ್ತಾನೆ ಗುಣಸಾಂದ್ರ.
ನಿನಗೆ ಈಯಲೆಂದೇ ಶಿಕ್ಷಣ,
ಮಾಡಿದೆ ನಿನ್ನ ಪೂಜಾಹರಣ.

ಗೋವಿನ್ದಮೇನಮಭಿಷಿಚ್ಯ ಸ ಗೋಗಣೇತೋ ಗೋಭಿರ್ಜ್ಜಗಾಮ ಗುಣಪೂರ್ಣ್ಣಮಮುಂ ಪ್ರಣಮ್ಯ ।
ಗೋಪೈರ್ಗ್ಗಿರಾಮ್ಪತಿರಪಿ ಪ್ರಣತೋsಭಿಗಮ್ಯ ಗೋವರ್ದ್ಧನೋದ್ಧರಣಸಙ್ಗತಸಂಶಯೈಃ ಸಃ ॥೧೩.೭೦॥
ಕ್ಷಮೆ ಪಡೆದ ಇಂದ್ರನಿಂದಾಯ್ತು ಗುಣಪೂರ್ಣ ಕೃಷ್ಣಗೆ ಅಭಿಷೇಕ,
ಭಗವಂತಗೆ ನಮಸ್ಕರಿಸಿ ಹೊರಟ ಇಂದ್ರ ತನ್ನ ಲೋಕಾಭಿಮುಖ.
ದೈವೇಚ್ಛೆಯಂತೆ ನಡೆದ ನಂತರ ಮೇಲಿನ ಘಟನೆ ಗೋವರ್ಧನೋದ್ಧಾರ,
ಗೋಪಾಲಕರಿಗೆ ಆಯ್ತು ಕೃಷ್ಣನ ಬಗ್ಗೆ ಅವರಿಗಿದ್ದ ಸಂಶಯದ ಪರಿಹಾರ.
ತಮ್ಮ ಮಿತಿ ದೈವಶಕ್ತಿ ನೋಡಿ ಅನುಭವಿಸಿದವರಿಂದ ಕೃಷ್ಣಗೆ ನಮಸ್ಕಾರ.

ಕೃಷ್ಣಂ ತತಃ ಪ್ರಭೃತಿ ಗೋಪಗಣಾ ವ್ಯಜಾನನ್  ನಾರಾಯಣೋsಯಮಿತಿ ಗರ್ಗ್ಗವಚಶ್ಚ ನನ್ದಾತ್ ।
ನಾರಯಣಸ್ಯ ಸಮ ಇತ್ಯುದಿತಂ ನಿಶಮ್ಯ ಪೂಜಾಂ ಚ ಚಕ್ರುರಧಿಕಾಮರವಿನ್ದನೇತ್ರೇ ॥೧೩.೭೧ ॥
ಗೋಪಾಲಕರು ತಿಳಿದ ಸತ್ಯವದು -ಇವನು ನಾರಾಯಣ,
ಗರ್ಗ ನಂದಗ್ಹೇಳಿದ ಮಾತು ಇವ ನಾರಾಯಣಗೆ ಸಮಾನ.
ಅದ ಕೇಳಿದವರು ಮಾಡಿದರು ಅರವಿಂದಾಕ್ಷಗೆ ಅಧಿಕ ಸಮ್ಮಾನ.

ಸ್ಕನ್ದಾದುಪಾತ್ತವರತೋ ಮರಣಾದಪೇತಂ ದೃಷ್ಟ್ವಾ ಚ ರಾಮನಿಹತಂ ಬಲಿನಂ ಪ್ರಲಮ್ಬಮ್ ।
ಚಕ್ರುರ್ವಿನಿಶ್ಚಯಮಮುಷ್ಯ ಸುರಾಧಿಕತ್ವೇ ಗೋಪಾ ಅಥಾಸ್ಯ ವಿದಧುಃ ಪರಮಾಂ ಚ ಪೂಜಾಮ್ ॥೧೩.೭೨॥
ಸ್ಕಂದವರಬಲದಿಂದ ಅವಧ್ಯನಾಗಿ ಮೆರೆದಿದ್ದ ಬಲಿಷ್ಠ ಪ್ರಲಂಬಾಸುರ,
ದೇವತಾಶ್ರೇಷ್ಠನೆಂದು ತಿಳಿದರು ಬಲರಾಮನ ಅವನಿಂದಾದಾಗ ದೈತ್ಯಸಂಹಾರ.
ಸಲ್ಲಿಸಿದರು ಬಲರಾಮಗೆ ಕೃಷ್ಣಗೆ ನಂತರದ ಪೂಜೆ ಉತ್ಕೃಷ್ಠವಾದ ಆದರ.

Monday, 22 July 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 13: 62 - 66

ಕೃಷ್ಣೋsಥ ವೀಕ್ಷ್ಯ ಪುರುಹೂತಮಹಪ್ರಯತ್ನಂ ಗೋಪಾನ್ ನ್ಯವಾರಯದವಿಸ್ಮರಣಾಯ ತಸ್ಯ ।
ಮಾ ಮಾನುಷೋsಯಮಿತಿ ಮಾಮವಗಚ್ಛತಾಂ ಸ ಇತ್ಯವ್ಯಯೋsಸ್ಯ ವಿದಧೇ ಮಹಭಙ್ಗಮೀಶಃ ॥೧೩.೬೨ ॥

ಆನಂತರ ಇಂದ್ರಪೂಜೆ ಮತ್ತು ಜಾತ್ರೆಗಾಗಿ ಗೋವಳರ ಸಿದ್ಧತೆಯ ಪ್ರಸಂಗ,
ಇಂದ್ರ ತನ್ನನ್ನು ಮಾನವನೆಂದು ತಿಳಿಯದಿರಲಿ ಎಂದು ಕೃಷ್ಣ ಅದ ಮಾಡಿದ ಭಂಗ.

ಗೋಪಾಂಶ್ಚ ತಾನ್ ಗಿರಿಮಹೋsಸ್ಮದುರುಸ್ವಧರ್ಮ್ಮ ಇತ್ಯುಕ್ತಿಸಚ್ಛಲತ ಆತ್ಮಮಹೇsವತಾರ್ಯ್ಯ ।
ಭೂತ್ವಾsತಿವಿಸ್ತೃತತನುರ್ಬುಭುಜೇ ಬಲಿಂ ಸ ನಾನಾವಿಧಾನ್ನರಸಪಾನಗುಣೈಃ ಸಹೈವ ॥೧೩.೬೩॥

ಗೋಪಾಲಕರಿಗೆ ಕೃಷ್ಣ ವಿವರಿಸಿದ ಪರ್ವತಪೂಜೆಯೇ ತಮ್ಮ ಧರ್ಮ,
ತನ್ನ ಮೋಡಿಯಿಂದೆಲ್ಲರ ಒಪ್ಪಿಸಿದ್ದು ಅಂತರ್ಯಾಮಿ ಮಾಡಿದ ಮರ್ಮ.
ಗೋವರ್ಧನಪರ್ವತದಲ್ಲಿ ಶ್ರೀಕೃಷ್ಣ ತಾನೇ ಹೊಂದಿದ ದೇಹವದು ವಿಸ್ತಾರ,
ಸ್ವೀಕರಿಸಿದ ತಾನು ಬಲಿ ರೂಪದ ಅನ್ನ ರಸ ಪಾನೀಯ ಬಗೆಬಗೆಯ ಆಹಾರ.

ಇನ್ದ್ರೋsಥ ವಿಸ್ಮೃತರಥಾಙ್ಗಧರಾವತಾರೋ ಮೇಘಾನ್ ಸಮಾದಿಶದುರೂದಕಪೂಗವೃಷ್ಟ್ಯೈ।
ತೇ ಪ್ರೇರಿತಾಃ ಸಕಲಗೋಕುಲನಾಶನಾಯ ಧಾರಾ ವಿತೇರುರುರುನಾಗಕರಪ್ರಕಾರಾಃ   ॥೧೩.೬೪॥

ಚಕ್ರಧರ ಹರಿಯ ಅವತಾರ ಕೃಷ್ಣ ಎಂಬುದ ಮರೆತಿದ್ದ ಇಂದ್ರ,
ಮೋಡಗಳಿಗೆ ಆಜ್ಞಾಪಿಸಿದ ಸುರಿಸಲು ಮಳೆಯ ಧಾರಾಕಾರ.
ಸಮಸ್ತ ಗೋಕುಲ ನಾಶಕ್ಕಾಗಿ ಬಂದ ಆ ಮೋಡಗಳು,
ಸುರಿಸಿದ ಮಳೆಹನಿಯ ಗಾತ್ರವದಾಗಿತ್ತು ಆನೆಸೊಂಡಿಲು.

ತಾಭಿರ್ನ್ನಿಪೀಡಿತಮುದೀಕ್ಷ್ಯ ಸ ಕಞ್ಜನಾಭಃ ಸರ್ವಂ ವ್ರಜಂ ಗಿರಿವರಂ ಪ್ರಸಭಂ ದಧಾರ ।
ವಾಮೇನ ಕಞ್ಜದಲಕೋಮಳಪಾಣಿನೈವ ತತ್ರಾಖಿಲಾಃ ಪ್ರವಿವಿಶುಃ ಪಶುಪಾಃ ಸ್ವಗೋಭಿಃ  ॥೧೩.೬೫॥

ಆ ಜಲಧಾರೆಯಿಂದ ಪೀಡಿತರಾದ ಗೋಕುಲವಾಸಿಗಳ ಕೃಷ್ಣ ನೋಡಿದ,
ತಾವರೆ ಎಲೆಯಂಥ ತನ್ನ ಎಡಗೈಯಿಂದ ಗೋವರ್ಧನವ ಎತ್ತಿ ಹಿಡಿದ.
ನಿರ್ಮಿತವಾಯಿತು ಆಗ ಪರ್ವತದ ಕೆಳಗೆ ರಕ್ಷಿತ ಪ್ರದೇಶ,
ಗೋವಳಗೋವುಗಳೆಲ್ಲ ಮಾಡಿದರು ಬೆಟ್ಟದಡಿ ಪ್ರವೇಶ.

ವೃಷ್ಟ್ವೋರುವಾರ್ಯ್ಯಥ ನಿರನ್ತರಸಪ್ತರಾತ್ರಂ ತ್ರಾತಂ ಸಮೀಕ್ಷ್ಯ ಹರಿಣಾ ವ್ರಜಮಶ್ರಮೇಣ ।
ಶಕ್ರೋsನುಸಂಸ್ಮೃತಸುರಪ್ರವರಾವತಾರಃ ಪಾದಾಮ್ಬುಜಂ ಯದುಪತೇಃ ಶರಣಂ ಜಗಾಮ ॥೧೩.೬೬॥

ಹೀಗೆ ಇಂದ್ರ ಸುರಿಸಿದ ಏಳುದಿನ ಭಾರೀ ನಿರಂತರ ಮಳೆ,
ಕೃಷ್ಣನಿಂದ ಸುರಕ್ಷಿತವಾಗಿತ್ತು ನಂದಗೋಕುಲದ ಆ ಇಳೆ.
ಇಂದ್ರನಿಗಾಯಿತು ನೆನಪು ಕೃಷ್ಣ ಭಗವಂತನ ಅವತಾರ,
ಇವ ನಾರಾಯಣನೇ ಎಂದರಿತು ಶರಣಾದ ಪುರಂದರ.
[Contributed by Shri Govind Magal] 

Wednesday, 17 July 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 13: 58 - 61

ಕೃಷ್ಣಂ ಕದಾಚಿದತಿದೂರಗತಂ ವಯಸ್ಯಾ ಊಚುಃ ಕ್ಷುಧಾsರ್ದ್ದಿತತರಾ ವಯಮಿತ್ಯುದಾರಮ್ ।
ಸೋsಪ್ಯಾಹ ಸತ್ರಮಿಹ ವಿಪ್ರಗಣಾಶ್ಚರನ್ತಿ ತಾನ್ ಯಾಚತೇತಿ ಪರಿಪೂರ್ಣ್ಣಸಮಸ್ತಕಾಮಃ ೧೩.೫೮॥
ಒಮ್ಮೆ ಗೋಕುಲದಿಂದ ಬಹಳದೂರ ಬಂದಿದ್ದರು ಗೋಪಾಲಕರು,
ಬಹಳ ಹಸಿವಿನಿಂದ ಬಳಲುತ್ತಿದ್ದೇವೆಂದು ಕೃಷ್ಣನಲ್ಲಿ ಮೊರೆಯಿಟ್ಟರು.
ಇದೇ ಪರಿಸರದಲ್ಲಿ ಬ್ರಾಹ್ಮಣಗುಂಪು ಮಾಡುತ್ತಿದೆ ಯಾಗ,
ಅವರಲ್ಲಿ ಹೋಗಿ ಬೇಡಿರಿ ಎಂದು ಶ್ರೀಕೃಷ್ಣ ಹೇಳಿದ ಆಗ.

ತಾನ್ ಪ್ರಾಪ್ಯ ಕಾಮಮನವಾಪ್ಯ ಪುನಶ್ಚ ಗೋಪಾಃ ಕೃಷ್ಣಂ ಸಮಾಪುರಥ ತಾನವದತ್ ಸ ದೇವಃ ।
ಪತ್ನೀಃ ಸಮರ್ತ್ಥಯತ ಮದ್ವಚನಾದಿತಿ ಸ್ಮ ಚಕ್ರುಶ್ಚ ತೇ ತದಪಿ ತಾ ಭಗವನ್ತಮಾಪುಃ ॥೧೩.೫೯॥
ಕೃಷ್ಣ ಹೇಳಿದಂತೆ ಬ್ರಾಹ್ಮಣರತ್ತ ಹೊರಟಿತು ಗೋಪಾಲಕರ ಹಿಂಡು,
ತಮ್ಮ ಬಯಕೆ ಈಡೇರಿಸಿಕೊಳ್ಳದೇ ಹಿಂತಿರುಗಿತ್ತು ಗೋವಳರ ದಂಡು.
ಕೃಷ್ಣ ಹೇಳಿದನಾಗ -ಅವರ ಹೆಂಡತಿಯರನ್ನು ಕೇಳಿ,
ಜೊತೆಗೆ ಕೃಷ್ಣನೇ ಹೇಳಿಕಳುಹಿಸಿದ್ದಾನೆಂದು ಹೇಳಿ. 
ಈಬಾರಿ ವಿಪ್ರಪತ್ನಿಯರೆಲ್ಲ ಬಂದರು ಕೃಷ್ಣನ ಬಳಿ.

ತಾಃ ಷಡ್ವಿಧಾನ್ನಪರಿಪೂರ್ಣ್ಣಕರಾಃ ಸಮೇತಾಃ ಪ್ರಾಪ್ತಾ ವಿಸೃಜ್ಯ ಪತಿಪುತ್ರಸಮಸ್ತಬನ್ಧೂನ್ ।
ಆತ್ಮಾರ್ಚ್ಚನೈಕಪರಮಾ ವಿಸಸರ್ಜ್ಜ ಕೃಷ್ಣ ಏಕಾ ಪತಿಪ್ರವಿಧುತಾ ಪದಮಾಪ ವಿಷ್ಣೋಃ ॥೧೩.೬೦॥
ಆ ಸ್ತ್ರೀಯರೆಲ್ಲಾ ಹೊತ್ತು ತಂದಿದ್ದರು ಉತೃಷ್ಟ  ಷಡ್ರಸೋಪೇತವಾದ ಅನ್ನ,
ತಮ್ಮವರ ಬಿಟ್ಟುಬಂದವರ ಕೃಷ್ಣಭಕ್ತಿಯದಾಗಿತ್ತು ಅವಿಚ್ಛಿನ್ನ.
ಅವರೆಲ್ಲರ ಭಾವನೆಯಾಗಿತ್ತು ಕೃಷ್ಣಪೂಜೆಯೊಂದೇ ಅತಿ ಶ್ರೇಷ್ಠ .
ಹಾಗೆ ಬಂದ ಸ್ತ್ರೀಯರನ್ನೆಲ್ಲಾ ಕೃಷ್ಣಪರಮಾತ್ಮ ಸಂತೈಸಿ ಬೀಳ್ಕೊಟ್ಟ,
ಗಂಡನಿಂದ ತಿರಸ್ಕೃತವಾದ ಒಬ್ಬಳಿಗೆ ಮುಕುತಿಯನೆ ಕೊಟ್ಟ.

ಭುಕ್ತ್ವಾsಥ ಗೋಪಸಹಿತೋ ಭಗವಾಂಸ್ತದನ್ನಂ ರೇಮೇ ಚ ಗೋಕುಲಮವಾಪ್ಯ ಸಮಸ್ತನಾಥಃ ।
ಆಜ್ಞಾತಿಲಙ್ಘನಕೃತೇಃ ಸ್ವಕೃತಾಪರಾಧಾತ್ ಪಶ್ಚಾತ್ ಸುತಪ್ತಮನಸೋsಪ್ಯಭವನ್ ಸ್ಮ ವಿಪ್ರಾಃ ॥೧೩.೬೧॥
ಆನಂತರ ಕೃಷ್ಣ ಗೋಪರೊಂದಿಗೆ ಕೂಡಿ ಮಾಡಿದ ಎಲ್ಲಾ ಅನ್ನ ಸ್ವೀಕಾರ,
ಸಮಸ್ತ ಲೋಕದೊಡೆಯ ಗೋಕುಲಕ್ಕೆ ತಿರುಗಿ ಬಂದು ಮಾಡಿದ ವಿಹಾರ.
ಇತ್ತ ಗೋಪಾಲಕರಿಗೆ ಆಹಾರ ನಿರಾಕರಿಸಿದ್ದ ಬ್ರಾಹ್ಮಣವೃಂದ,
ತೀವ್ರವಾಗಿ ನೊಂದರು ಭಗವದಾಜ್ಞೆ ಮೀರಿದ ಪಶ್ಚಾತ್ತಾಪದಿಂದ.
[Contributed by Shri Govind Magal]

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 13: 55 - 57

ಪಕ್ಷದ್ವಯೇನ ವಿಹರತ್ಸ್ವಥ ಗೋಪಕೇಷು ದೈತ್ಯಃ ಪ್ರಲಮ್ಬ ಇತಿ ಕಂಸವಿಸೃಷ್ಟ ಆಗಾತ್ ।
ಕೃಷ್ಣಸ್ಯ ಪಕ್ಷಿಷು ಜಯತ್ಸು ಸ ರಾಮಮೇತ್ಯ ಪಾಪಃ ಪರಾಜಿತ ಉವಾಹ ತಮುಗ್ರರೂಪಃ ॥೧೩.೫೫॥
ಗೋಪಾಲಕರೆಲ್ಲರೂ ಎರಡು ಗುಂಪುಗಳಾಗಿ ಆಟವಾಡುತ್ತಿದ್ದಾಗ,
ಕಂಸ ಕಳುಹಿಸಿದ ಪ್ರಲಂಬನೆಂಬ ದೈತ್ಯ ಬಾಲಕ ರೂಪದಲ್ಲಿ ಬಂದನಾಗ.
ಶ್ರೀಕೃಷ್ಣನ ಗುಂಪಿನವರು ಆಟದಲ್ಲಿ ಹೊಂದುತ್ತಿರಲು ಗೆಲುವು,
ಗೆದ್ದವರನ್ನು ಸೋತವರು ಹೊರಬೇಕೆಂಬುದು ಆಟದ ನಿಲುವು.
ಸೋತಗುಂಪಿನ ಪ್ರಲಂಬ ಬಲರಾಮನನ್ನು ಹೊತ್ತ,
ಅದರಂತೆಯೇ ಶ್ರೀಧಾಮನೆಂಬುವ ಶ್ರೀಕೃಷ್ಣನನ್ನು  ಹೊತ್ತ.
ಬಲರಾಮನ ಹೊತ್ತ ಪ್ರಲಂಬ ತೋರಿದ ತಾನೆಂಥ ದೈತ್ಯ

ಭೀತೇನ ರೋಹಿಣಿಸುತೇನ ಹರಿಃ ಸ್ತುತೋsಸೌ ಸ್ವಾವಿಷ್ಟತಾಮುಪದಿದೇಶ ಬಲಾಭಿಪೂರ್ತ್ತ್ಯೈ  ।
ತೇನೈವ ಪೂರಿತಬಲೋsಮ್ಬರಚಾರಿಣಂ ತಂ ಪಾಪಂ ಪ್ರಲಮ್ಬಮುರುಮುಷ್ಟಿಹತಂ ಚಕಾರ ॥೧೩.೫೬॥
ಈ ಘಟನೆಯಲ್ಲಿ ಭಯಗೊಂಡ ಬಲರಾಮ,
ರೋಹಿಣೀಪುತ್ರನಿಂದ ಸ್ತುತಿಸಲ್ಪಟ್ಟ ಶ್ಯಾಮ.
ಅವನ ಬಲವೃದ್ಧಿಗೆ ಕೃಷ್ಣ ಮಾಡಿದ ನಾ ನಿನ್ನಲ್ಲಿ ಆವಿಷ್ಟನಾಗಿದ್ದೇನೆಂಬ ಉಪದೇಶ,
ಆ ದೈವಬಲದಿಂದ ಬಲರಾಮ ಗುದ್ದಿ ಮಾಡಿದ ಆಕಾಶಸಂಚಾರಿ ದೈತ್ಯನ ದೇಹನಾಶ.

ತಸ್ಮಿನ್ ಹತೇ ಸುರಗಣಾ ಬಲದೇವನಾಮ ರಾಮಸ್ಯ ಚಕ್ರುರತಿತೃಪ್ತಿಯುತಾ ಹರಿಶ್ಚ।
ವಹ್ನಿಂ ಪಪೌ ಪುನರಪಿ ಪ್ರದಹನ್ತಮುಚ್ಚೈರ್ಗ್ಗೋಪಾಂಶ್ಚ ಗೋಗಣಮಗಣ್ಯಗುಣಾರ್ಣ್ಣವೋsಪಾತ್ ॥೧೩.೫೭॥
ಹೀಗೆ ಪ್ರಲಂಬಾಸುರ ಹೊಂದುತ್ತಿರಲು ತನ್ನ ಸಾವಿನ ನೋವ,
ತೃಪ್ತರಾದ ದೇವತೆಗಳು ಬಲರಾಮಗಿಟ್ಟ ಹೆಸರು ಬಲದೇವ.
ಎಣೆಯಿರದ ಗುಣಸಾಗರನವ ಶ್ರೀಕೃಷ್ಣ,
ಕುಡಿದುಬಿಟ್ಟ ಕಾಡ್ಗಿಚ್ಚಿನ ಆ ತೀಕ್ಷ್ಣ ಉಷ್ಣ.
ರಕ್ಷಿಸಿದ ಗೋವುಗಳ ಗೋವಳರ ಶ್ರೀಕೃಷ್ಣ.
[Contributed by Shri Govind Magal] 

Tuesday, 9 July 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 13: 51 - 54

ತತ್ರಾಥ ಕೃಷ್ಣಮವದನ್ ಸಬಲಂ ವಯಸ್ಯಾಃ ಪಕ್ವಾನಿ ತಾಲಸುಫಲಾನ್ಯನುಭೋಜಯೇತಿ ।
ಇತ್ಯರ್ತ್ಥಿತಃ ಸಬಲ ಆಪ ಸ ತಾಲವೃನ್ದಂ ಗೋಪೈರ್ದ್ದುರಾಸದಮತೀವ ಹಿ ಧೇನುಕೇನ ॥೧೩.೫೧॥
ತಾಳಮರದ ಒಳ್ಳೆಯ ಹಣ್ಣುಗಳನ್ನು ತಿನ್ನುವ ಬಯಕೆ,
ಕೃಷ್ಣನಲ್ಲಿ ತನ್ನ ಗೆಳೆಯರಿಂದ ಅವನ್ನು ತಿನ್ನಿಸೆಂಬ ಬೇಡಿಕೆ.
ತಾಳಮರದ ತೋಪಲ್ಲಿ ಧೇನುಕಾಸುರನಿದ್ದುದರಿಂದ ದುರ್ಗಮವಾಗಿದ್ದ ಪ್ರದೇಶ,
ಬಲರಾಮ ಮತ್ತು ಸಹಗೋಪಾಲಕರ ಕೂಡಿಕೊಂಡು ಕೃಷ್ಣ ಮಾಡಿದ ಪ್ರವೇಶ.

 ವಿಘ್ನೇಶತೋ ವರಮವಾಪ್ಯ ಸ ದೃಷ್ಟದೈತ್ಯೋ ದೀರ್ಘಾಯುರುತ್ತಮಬಲಃ ಕದನಪ್ರಿಯೋsಭೂತ್ ।
 ನಿತ್ಯೋದ್ಧತಃ ಸ ಉತ ರಾಮಮವೇಕ್ಷ್ಯ ತಾಲವೃನ್ತಾತ್ ಫಲಾನಿ ಗಳಯನ್ತಮಥಾಭ್ಯಧಾವತ್ ।
 ತಸ್ಯ ಪ್ರಹಾರಮಭಿಕಾಙ್ಕ್ಷತ ಆಶು ಪೃಷ್ಠಪಾದೌ ಪ್ರಗೃಹ್ಯ ತೃಣರಾಜಶಿರೋsಹರತ್ ಸಃ ॥೧೩.೫೨॥
ಅತ್ಯಂತ ದುಷ್ಟನಾಗಿದ್ದನವ ದೈತ್ಯ ಧೇನುಕಾಸುರ,
ದೀರ್ಘಾಯುಷಿಯಾಗಿದ್ದ ಪಡೆದು ಗಣಪತಿ ವರ.
ಆ ರಕ್ಕಸ ಬಲಶಾಲಿಯೂ ರಣೋತ್ಸಾಹಿಯೂ ಆಗಿದ್ದ,
ಹಣ್ಣು ಬೀಳಿಸುವ ಬಲರಾಮನ ಕಂಡು ಅಲ್ಲಿಗೆ ಓಡಿಬಂದ.
ಬಲರಾಮಗೆ ಒದೆಯಲು ಬಂದವನ ಹಿಂಗಾಲನ್ನು  ಕೃಷ್ಣ ಹಿಡಿದ,
ಎತ್ತಿ ಅವನ ಮೇಲಕ್ಕೆಸೆಯಲು ಆಯಿತವನ ಕತ್ತೆ ತಲೆಯ ಛೇದ.

ತಸ್ಮಿನ್ ಹತೇ ಖರತರೇ ಖರರೂಪದೈತ್ಯೇ ಸರ್ವೇ ಖರಾಶ್ಚ ಖರತಾಲವನಾನ್ತರಸ್ಥಾಃ ।
ಪ್ರಾಪುಃ ಖರಸ್ವರತರಾ ಖರರಾಕ್ಷಸಾರಿಂ ಕೃಷ್ಣಂ ಬಲೇನ ಸಹಿತಂ ನಿಹತಾಶ್ಚ ತೇನ ॥೧೩.೫೩॥
ಅತಿಭಯಂಕರವಾದ ಕತ್ತೆಯ ರೂಪದಲ್ಲಿದ್ದ ದೈತ್ಯ ಸತ್ತನಾಗ,
ಕೃಷ್ಣಬಲರಾಮರಿಗೆದುರಾಯ್ತು ಕತ್ತೆಯ ರೂಪದಲ್ಲಿದ್ದ ದೈತ್ಯಹಿಂಡಾಗ.
ಕೃಷ್ಣ ಅವರನ್ನೆಲ್ಲಾ ಮುಗಿಸಿದ ಬಾರಿಸುತ್ತಾ ಅವರ ಮರಣಮೃದಂಗ.

ಸರ್ವಾನ್ ನಿಹತ್ಯ ಖರರೂಪಧರಾನ್ ಸ ದೈತ್ಯಾನ್ ವಿಘ್ನೇಶ್ವರಸ್ಯ ವರತೋsನ್ಯಜನೈರವದ್ಧ್ಯಾನ್ ।
ಪಕ್ವಾನಿ ತಾಲಸುಫಲಾನಿ ನಿಜೇಷು ಚಾದಾದ್ ದುರ್ವಾರಪೌರುಷಗುಣೋದ್ಭರಿತೋ ರಮೇಶಃ॥೧೩.೫೪॥
ತಾಲತೋಪಿನೊಳಗಿನ ಕತ್ತೆಯ ರೂಪದಲ್ಲಿದ್ದ ರಕ್ಕಸರ ಪಡೆ,
ಹೊಂದಿತ್ತು ಇತರರು ಕೊಲ್ಲಲಾರದ ಗಣಪನ ವರದಕೊಡೆ.
ಆ ದೈತ್ಯರನ್ನೆಲ್ಲಾ ಕೊಂದ ಅಪರಿಮಿತ ಬಲದ ರಮೇಶ,
ತಾಳಮರದ ಹಣ್ಣುಗಳ ತನ್ನವರಿಗೆಲ್ಲಾ ಕೊಟ್ಟ ಸರ್ವೇಶ.
[Contributed by Shri Govind Magal] 

Sunday, 7 July 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 13: 48 - 50

ಸಪ್ತೋಕ್ಷಣೋsತಿಬಲವೀರ್ಯ್ಯಯುತಾನದಮ್ಯಾನ್  ಸರ್ವೈರ್ಗ್ಗಿರೀಶವರತೋ ದಿತಿಜಪ್ರಧಾನಾನ್ ।
ಹತ್ವಾ ಸುತಾಮಲಭದಾಶು ವಿಭುರ್ಯ್ಯಶೋದಾಭ್ರಾತುಃ ಸ ಕುಮ್ಭಕಸಮಾಹ್ವಯಿನೋsಪಿ ನೀಲಾಮ್ ॥೧೩.೪೮॥
ರುದ್ರವರದಿಂದ ಎಲ್ಲರಿಂದ ನಿಗ್ರಹಿಸಲು ಅಶಕ್ಯರಾದ,
ಅತಿಬಲ ವೀರ್ಯದ ಏಳು ಗೂಳಿಗಳ ರೂಪದಲ್ಲಿದ್ದ,
ಸರ್ವಶಕ್ತ ಶ್ರೀಕೃಷ್ಣ ಆ ಏಳು ದೈತ್ಯರ ಕೊಂದ,
ಯಶೋದೆ ಅಣ್ಣ ಕುಂಭಕಪುತ್ರಿ ನೀಲಾಳ ಪಡೆದ.

ಯಾ ಪೂರ್ವಜನ್ಮನಿ ತಪಃ ಪ್ರಥಮೈವ ಭಾರ್ಯ್ಯಾ ಭೂಯಾಸಮಿತ್ಯಚರದಸ್ಯ ಹಿ ಸಙ್ಗಮೋ ಮೇ ।
ಸ್ಯಾತ್ ಕೃಷ್ಣಜನ್ಮನಿ ಸಮಸ್ತವರಾಙ್ಗನಾಭ್ಯಃ ಪೂರ್ವಂ ತ್ವಿತಿ ಸ್ಮ ತದಿಮಾಂ ಪ್ರಥಮಂ ಸ ಆಪ ॥೧೩.೪೯॥
ಹರಿಯ ಕೃಷ್ಣಾವತಾರದಲ್ಲಿ ತಾನು ಅವನ ಜ್ಯೇಷ್ಠಪತ್ನಿ ಆಗಬೇಕು,
ನೀಲಾಳ ಪೂರ್ವಜನ್ಮದ ತಪಸ್ಸದು-ತಾ ಮೊದಲು ಕೃಷ್ಣನ ಸೇರಬೇಕು.
ಹಾಗೇ ನೀಲಾಳ ಪಡೆದ- ಪ್ರಶ್ನಾತೀತನ ಇಚ್ಛೆಯಂತೆ ಎಲ್ಲ ನಡೆಯಬೇಕು.

ಅಗ್ರೇ ದ್ವಿಜತ್ವತ ಉಪಾವಹದೇಷ ನೀಲಾಂ ಗೋಪಾಙ್ಗನಾ ಅಪಿ ಪುರಾ ವರಮಾಪಿರೇ ಯತ್ ।
ಸಂಸ್ಕಾರತಃ ಪ್ರಥಮಮೇವ ಸುಸಙ್ಗಮೋ ನೋ ಭೂಯಾತ್ ತವೇತಿ ಪರಮಾಪ್ಸರಸಃ ಪುರಾ ಯಾಃ ॥೧೩.೫೦॥
ಆಗಿನ್ನೂ ಶ್ರೀಕೃಷ್ಣಗೆ ಆಗಿರಲಿಲ್ಲ ಉಪನಯನ ಸಂಸ್ಕಾರ,
ಉಪನಯನಕ್ಕೆ ಮೊದಲೇ ನೀಲಾಳ ವರಿಸಿದ ವ್ಯಾಪಾರ.
ಗೋಪಿಯರಿಗಿತ್ತು ಉಪನಯನಕ್ಕೆ ಮೊದಲೇ ಅವನ ಸಂಗದ ವರ.
ಗೋಪಿಯರೆಲ್ಲ ಮೂಲತಃ ಅಪ್ಸರಾಸ್ತ್ರೀಯರೆಂಬುದು ಗಮನಾರ್ಹ.
(ಸಂಸಾರದ ಲೇಪವೇ ಇರದ ಜ್ಞಾನಾನಂದ ಶರೀರಕ್ಕೆ ಯಾವ ಸಂಸ್ಕಾರ).

Saturday, 6 July 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 13: 43 - 47

ಗೋಪೈರ್ಬಲಾದಿಭಿರುದೀರ್ಣ್ಣತರಪ್ರಮೋದೈಃ ಸಾರ್ದ್ಧಂ ಸಮೇತ್ಯ ಭಗವಾನರವಿನ್ದನೇತ್ರಃ ।
ತಾಂ ರಾತ್ರಿಮತ್ರ ನಿವಸನ್ ಯಮುನಾತಟೇ ಸ ದಾವಾಗ್ನಿಮುದ್ಧತಬಲಂ ಚ ಪಪೌ ವ್ರಜಾರ್ತ್ಥೇ ॥೧೩.೪೩॥
ಹೀಗೆ ಕಾಳಿಯನಾಗನ ಯಮುನೆಯಿಂದ ಓಡಿಸಿದ ಕಮಲಾಕ್ಷನಾದ ಶ್ರೀಶ,
ಬಲರಾಮ ಮುಂತಾದ ಗೋಪಾಲರೊಡನೆ ಮಾಡಿದ ಯಮುನಾತೀರದ ವಾಸ.
ಯಮುನಾತೀರದ ಕಾಳ್ಗಿಚ್ಚು ಕುಡಿದದ್ದು ತನ್ನ ಗ್ರಾಮ ನಾಶವಾಗದಿರಲೆಂಬುದ್ದೇಶ.

ಇತ್ಥಂ ಸುರಾಸುರಗಣೈರವಿಚಿನ್ತ್ಯದಿವ್ಯಕರ್ಮ್ಮಾಣಿ ಗೋಕುಲಗತೇsಗಣಿತೋರುಶಕ್ತೌ ।
ಕುರ್ವತ್ಯಜೇ ವ್ರಜಭುವಾಮಭವದ್ ವಿನಾಶ ಉಗ್ರಾಭಿಧಾದಸುರತಸ್ತರುರೂಪತೋsಲಮ್ ॥೧೩.೪೪॥
ತದ್ಗನ್ಧತೋ ನೃಪಶುಮುಖ್ಯಸಮಸ್ತಭೂತಾನ್ಯಾಪುರ್ಮ್ಮೃತಿಂ ಬಹಳರೋಗನಿಪೀಡಿತಾನಿ ।
ಧಾತುರ್ವರಾಜ್ಜಗದಭಾವಕೃತೈಕಬುದ್ಧಿರ್ವದ್ಧ್ಯೋ ನ ಕೇನಚಿದಸೌ ತರುರೂಪದೈತ್ಯಃ ॥೧೩.೪೫॥
ಈ ತೆರನಾಗಿ ದೇವತೆಗಳು ಮನುಷ್ಯರು ಯೋಚಿಸಲು ಅಸಾಧ್ಯವಾದ,
ಅಲೌಕಿಕ ಕೆಲಸಗಳ ಮಾಡುವ ಕೃಷ್ಣ ಮಿತಿಯಿರದ ಕಸುವಿಂದ ಬದ್ಧ.
ಮರದದೇಹ ಹೊತ್ತ ಉಗ್ರನಿಂದಾಯಿತು ವ್ರಜಜನಕೆ ವಿನಾಶ - ಬಾಧ.
ಆ ಅಸುರ ಮರ ಬೀರುವಂಥ ದುರ್ಗಂಧದಿಂದ,
ಮನುಷ್ಯ ಪಶುಗಳು ಪೀಡಿತವಾದವು ರೋಗದಿಂದ.
ಇವನಿಂದಾಗೇ ಕೆಲವಕ್ಕೆ ಸಂಭವಿಸಿತು ಮರಣ,
ಬ್ರಹ್ಮವರದಿಂದ ಅವಧ್ಯನಾಗಿದ್ದವ-ಅದು ಕಾರಣ.
ಜಗತ್ತಿನ ನಾಶವೇ ಅವನ ಏಕೈಕ ಉದ್ದೇಶ,
ಆ ಉಗ್ರದೈತ್ಯ ಮರದರೂಪದಲ್ಲಿದ್ದುದು ವಿಶೇಷ.



ಸಙ್ಕರ್ಷಣೇsಪಿ ತದುದಾರವಿಷಾನುವಿಷ್ಟೇ ಕೃಷ್ಣೋ ನಿಜಸ್ಪರ್ಶತಸ್ತಮಪೇತರೋಗಮ್ ।
ಕೃತ್ವಾ ಬಭಞ್ಜ ವಿಷವೃಕ್ಷಮಮುಂ ಬಲೇನ ತಸ್ಯಾನುಗೈಃ ಸಹ ತದಾಕೃತಿಭಿಃ ಸಮಸ್ತೈಃ ॥೧೩.೪೬॥
ದೈತ್ಯಾಂಶ್ಚ ಗೋವಪುಷ ಆತ್ತವರಾನ್ ವಿರಿಞ್ಚಾನ್ಮೃ ತ್ಯೂಜ್ಝಿತಾನಪಿ ನಿಪಾತ್ಯ ದದಾಹ ವೃಕ್ಷಾನ್ ।
ವಿಕ್ರೀಡ್ಯ ರಾಮಸಹಿತೋ ಯಮುನಾಜಲೇ ಸ ನೀರೋಗಮಾಶು ಕೃತವಾನ್ ವ್ರಜಮಬ್ಜನಾಭಃ ॥೧೩.೪೭॥
ಅವನ ತೀಕ್ಷ್ಣ ವಿಷದಿಂದ ಸಂಕರ್ಷಣಗೂ ಆಯಿತು ಸಂಕಟ ವಿಕಾರ,
ತನ್ನ ಸ್ಪರ್ಶಮಾತ್ರದಿಂದ ಕೃಷ್ಣಮಾಡಿದ ಬಲರಾಮನ ರೋಗಪರಿಹಾರ.
ಆ ವಿಷವೃಕ್ಷ ಕಿತ್ತುತ್ತಾ ಆ ರೂಪದಲ್ಲಿದ್ದ ಉಗ್ರಾಸುರನ ಕೊಂದ,
ಅದೇ ಆಕಾರದಲ್ಲಿದ್ದ ಅವನ ತಮ್ಮಂದಿರನ್ನೂ ನಾಶ ಮಾಡಿದ.
ಬ್ರಹ್ಮವರದಿಂದ ಅವಧ್ಯರಾದ ಗೋರೂಪದ ದೈತ್ಯರ ತೋಪಿನೊಂದಿಗೆ ಸುಟ್ಟ,
ನಂತರ ಕೃಷ್ಣ ಬಲರಾಮನೊಂದಿಗೆ ಯಮುನೆಯಲ್ಲಿ ಆಡಿದನಂತೆ ನೀರಾಟ.
ಹೀಗೆ ಶ್ರೀಕೃಷ್ಣ ಬಂದತೊಡಕುಗಳ ಪರಿಹರಿಸಿ ವ್ರಜವ ಮಾಡಿದ ರೋಗಮುಕ್ತ. 
[Contributed by Shri Govind Magal]