Wednesday, 27 February 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 12: 08 - 10

ಯೋ ಮನ್ಯತೇ ವಿಷ್ಣುರೇವಾಹಮಿತ್ಯಸೌ ಪಾಪೋ ವೇನಃ ಪೌಣ್ಡ್ರಕೋ ವಾಸುದೇವಃ ।
ಜಾತಃ ಪುನಃ ಶೂರಜಾತ್ ಕಾಶಿಜಾಯಾಂ ನಾನ್ಯೋ ಮತ್ತೋ ವಿಷ್ಣುರಸ್ತೀತಿ ವಾದೀ ॥೧೨.೦೮॥

ಧುನ್ಧುರ್ಹತೋ ಯೋ ಹರಿಣಾ ಮಧೋಃ ಸುತ ಆಸೀತ್ ಸುತಾಯಾಂ ಕರವೀರೇಶ್ವರಸ್ಯ।
ಸೃಗಾಲನಾಮಾ ವಾಸುದೇವೋsಥ ದೇವಕೀಮುದೂಹ್ಯ ಶೌರಿರ್ನ್ನ ಯಯಾವುಭೇ ತೇ ॥೧೨.೦೯॥

ನಾನೇ ವಿಷ್ಣು ಎಂದು ತಿಳಿಯುವ ಪಾಪಿಷ್ಠನಾಗಿದ್ದ  ಅವ  ವೇನ,
ಪೌಂಡ್ರಕನಾಗಿ ವಸುದೇವನಿಂದ ಕಾಶಿರಾಜನ ಮಗಳಲ್ಲಿ ಜನನ.
ಹುಟ್ಟಿನಾನಂತರ ನನಗಿಂತ ಬೇರೆ ವಿಷ್ಣುವಿಲ್ಲ ಎಂದನವ ವೇನ.

ಮಧು ದಾನವನ ಮಗ ಧುಂಧು ಹರಿಯಿಂದ ಹಿಂದೆ  ಹತನಾಗಿದ್ದ,
ವಸುದೇವನಿಂದ ಕರವೀರರಾಜನ ಮಗಳಲ್ಲಿ ಸೃಗಾಲನಾಗಿ ಹುಟ್ಟಿದ.
ವಸುದೇವ ದೇವಕಿ ವಿವಾಹಾನಂತರ ಇವರಿಬ್ಬರ ಸೇರದಂತಾದ.




ತತಸ್ತು ತೌ ವೃಷ್ಣಿಶತ್ರೂ ಬಭೂವತುರ್ಜ್ಜ್ಯೇಷ್ಠೌ ಸುತೌ ಶೂರಸುತಸ್ಯ ನಿತ್ಯಮ್ ।
ಅನ್ಯಾಸು  ಚ ಪ್ರಾಪ ಸುತಾನುದಾರಾನ್ ದೇವಾವತಾರಾನ್ ವಸುದೇವೋsಖಿಲಜ್ಞಃ ॥೧೨.೧೦॥

ತಂದೆ ಪ್ರೀತಿಯಿಂದ ವಂಚಿತರಾದ ವಸುದೇವನ ಜ್ಯೇಷ್ಠಪುತ್ರರಾದವರು,
ಪೌಂಡ್ರಕ ಸೃಗಾಲರಿಬ್ಬರೂ ಯಾದವರಿಗೆ ನಿತ್ಯ ಶತ್ರುಗಳಾಗಿ ಬೆಳೆದವರು.
ಸರ್ವಜ್ಞನಾದ ವಸುದೇವ ಮುಂದೆ ಬೇರೆ ಪತ್ನಿಯರಲ್ಲಿ,
ದೇವಾಂಶಸಂಭೂತರಾದ ಉತ್ತಮ ಮಕ್ಕಳ ಪಡೆದನಲ್ಲಿ.
[Contributed by Shri Govind Magal] 

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 12: 04 - 07

ವಿನಾsಪರಾಧಂ ನ ತತೋ ಗರೀಯಸೋ ನ ಮಾತುಲೋ ವಧ್ಯತಾಮೇತಿ ವಿಷ್ಣೋಃ ।
ಲೋಕಸ್ಯ ಧರ್ಮ್ಮಾನನುವರ್ತ್ತತೋsತಃ ಪಿತ್ರೋರ್ವಿರೋಧಾರ್ತ್ಥಮುವಾಚ ವಾಯುಃ ॥೧೧.೦೪॥

ಮೃತ್ಯುಸ್ತವಾಸ್ಯಾ ಭವಿತಾsಷ್ಟಮಃ ಸುತೋ ಮೂಢೇತಿ ಚೋಕ್ತೋ ಜಗೃಹೇ ಕೃಪಾಣಮ್ ।
ಪುತ್ರಾನ್ ಸಮರ್ಪ್ಯಾಸ್ಯ ಚ ಶೂರಸೂನುರ್ವಿಮೋಚ್ಯ ತಾಂ ತತ್ಸಹಿತೋ ಗೃಹಂ ಯಯೌ॥೧೨.೫॥

ಸೋದರಮಾವ (ಕಂಸ )ಹಾಗೇ ವಧಾರ್ಹನಲ್ಲ -ಇದು ಲೋಕಧರ್ಮ,
ಅವನಿಂದ ಅಪರಾಧವೆಸಗಿಸಿ ಕೊಲ್ಲಲು ಅನುವು ಮಾಡುವ ಮರ್ಮ.
ಕಂಸನಿಗೆ ಬರಬೇಕು ಕೃಷ್ಣನ ತಂದೆ ತಾಯಿಗಳಲ್ಲಿ ವಿರೋಧ,
ದೇವಕಿಯ ಎಂಟನೇಮಗು ಕಂಸಗೆ ಮೃತ್ಯುವೆಂದು ವಾಯು ನುಡಿದ.
ಇದ ಕೇಳಿ ಕೆರಳಿದ ಕಂಸ ಅವಳ ತರಿಯಲು ಕತ್ತಿಯ ಹಿರಿದ,
ವಸುದೇವನಿಟ್ಟ ತನ್ನೆಲ್ಲಾ ಮಕ್ಕಳನ್ನು ಕಂಸಗೊಪ್ಪಿಸುವ ವಾದ.
ಬೇಡಿ ಬಿಡಿಸಿಕೊಂಡ ದೇವಕಿಯೊಂದಿಗೆ ವಸುದೇವ ಮನೆಗೆ ತೆರಳಿದ.

ಷಟ್ ಕನ್ಯಕಾಶ್ಚಾವರಜಾ ಗೃಹೀತಾಸ್ತೇನೈವ ತಾಭಿಶ್ಚ ಮುಮೋದ ಶೂರಜಃ ।
ಬಾಹ್ಲೀಕಪುತ್ರೀ ಚ ಪುರಾ ಗೃಹೀತಾ ಪುರಾsಸ್ಯ ಭಾರ್ಯ್ಯಾ ಸುರಭಿಸ್ತು ರೋಹಿಣೀ ॥೧೧.೦೬॥

ದೇವಕಿಯ ಆರೂ ಮಂದಿ ತಂಗಿಯರವರು,
ವಸುದೇವನ ವರಿಸಿ ಅವನ ಹೆಂಡಂದಿರಾದರು.
ಅವರೆಲ್ಲರೊಂದಿಗೆ ವಸುದೇವನ ಸುಖೀ ಸಂಸಾರ,
ಸುರಭಿ ಹುಟ್ಟಿದ್ದಳು ರೋಹಿಣಿಯಾಗಿ ಬಾಹ್ಲೀಕನ ದ್ವಾರ,
ಆರು ತಂಗಿಯರಿಗಿಂತ ಮೊದಲೇ ಅವಳ ವರಿಸಿದ್ದ ವ್ಯಾಪಾರ.

ರಾಜ್ಞಶ್ಚ ಕಾಶಿಪ್ರಭವಸ್ಯ ಕನ್ಯಾಂ ಸ ಪುತ್ರಿಕಾಪುತ್ರಕಧರ್ಮ್ಮತೋsವಹತ್ ।
ಕನ್ಯಾಂ ತಥಾ ಕರವೀರೇಶ್ವರಸ್ಯ ಧರ್ಮ್ಮೇಣ ತೇನೈವ ದಿತಿಂ ಧನುಂ ಪುರಾ ॥೧೧.೦೭॥

ದಿತಿ ಹುಟ್ಟಿದ್ದಳು ಕಾಶಿರಾಜನ ಮಗಳಾಗಿ,
ಪುತ್ರಿಕಾಪುತ್ರ ಧರ್ಮದ ಅನುಸಾರವಾಗಿ,
ಕರವೀರರಾಜನ ಮಗಳೊಬ್ಬಳು ದನುವಿನವತಾರಿ,
ಇಬ್ಬರನ್ನು ವರಿಸಿದ್ದ ವಸುದೇವ ವಿಧಿಯನುಸಾರಿ. 

Tuesday, 26 February 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 12: 01 - 03


ಮಹಾಭಾರತ ತಾತ್ಪರ್ಯ ನಿರ್ಣಯ 
                                          ದ್ವಾದಶೊsಧ್ಯಾಯಃ                                              [ಪಾಣ್ಡವೋತ್ಪತ್ತಿಃ]


                                                                               [ಪಾಣ್ಡವೋತ್ಪತ್ತಿಃ]
ಬಭೂವ ಗನ್ಧರ್ವಮುನಿಸ್ತು ದೇವಕಃ ಸ ಆಸ ಸೇವಾರ್ತ್ಥಮಥಾsಹುಕಾದ್ಧರೇಃ ।
ಸ ಉಗ್ರಸೇನಾವರಜಸ್ತಥೈವ ನಾಮಾಸ್ಯ ತಸ್ಮಾದಜನಿ ಸ್ಮ ದೇವಕೀ ॥೧೨.೦೧॥

ದೇವಕನೆಂಬ ಹೆಸರಿನ ಗಂಧರ್ವ ಮುನಿಯಿದ್ದ,
ಹರಿಸೇವೆಗೆ ಆಹುಕ ಯಾದವನಲ್ಲಿ ಹುಟ್ಟಿಬಂದ.
ಉಗ್ರಸೇನನ ತಮ್ಮನಾದ ಅವನಿಗೆ ದೇವಕನೆಂದೇ ನಾಮ,
ಆ ದೇವಕನಿಂದ ದೇವಕಿ ಹುಟ್ಟಿಬಂದದ್ದು ದೈವ ನಿಯಮ.

ಅನ್ಯಾಶ್ಚ ಯಾಃ ಕಾಶ್ಯಪಸ್ಯೈವ ಭಾರ್ಯ್ಯಾ ಜ್ಯೇಷ್ಠಾಂ ತು ತಾಮಾಹುಕ ಆತ್ಮಪುತ್ರೀಮ್ ।
ಚಕಾರ ತಸ್ಮಾದ್ಧಿ ಪಿತೃಷ್ವಸಾ ಸಾ ಸ್ವಸಾ ಚ ಕಂಸಸ್ಯ ಬಭೂವ ದೇವಕೀ ॥೧೨.೦೨॥

ಯಾರ್ಯಾರು ಕಾಶ್ಯಪಮುನಿಯ ಹೆಂಡಿರಾಗಿ ಇದ್ದರು,
ಅವರೆಲ್ಲಾ ದೇವಕಿಯ ತಂಗಿಯರಾಗಿ ಹುಟ್ಟಿ ಬಂದರು.
ದತ್ತು ತೆಗೆದುಕೊಂಡ ಆಹುಕನಿಗೆ ದೇವಕಿಯಾದಳು ಮಗಳು,
ಹಾಗೆಯೇ ದೇವಕಿ ಕಂಸನಿಗೆ ಅತ್ತೆಯೂ ತಂಗಿಯೂ ಆದಳು.

ಸೈವಾದಿತಿರ್ವಸುದೇವಸ್ಯ ದತ್ತಾ ತಸ್ಯಾ ರಥಂ ಮಙ್ಗಲಂ ಕಂಸ ಏವ ।
̐ಯ್ಯಾಪಯಾಮಾಸ ತದಾ ಹಿ ವಾಯುರ್ಜ್ಜಗಾದ ವಾಕ್ಯಂ ಗಗನಸ್ಥಿತೋsಮುಮ್ ॥೧೨.೦೩॥

ಹೀಗೆ ದೇವಕಿಯಾಗಿ ಹುಟ್ಟಿದ ಅದಿತಿ,
ವಸುದೇವನ ವರಿಸಿ ಆದಳವನ ಸತಿ.
ಅವಳ ಮದುವೆಯ ಮೆರವಣಿಗೆಯ ರಥ,
ಕಂಸನೇ ನಡೆಸುವಂತಿತ್ತು ಅದು ವಿಧಿಲಿಖಿತ.
ಆಗೊಂದು ಆಕಾಶದಿಂದ ತೂರಿಬಂದ ಮಾತು,
ಮುಖ್ಯಪ್ರಾಣನೇ ನುಡಿದದ್ದದು ಕಂಸನ ಕುರಿತು.
[Contributed by Shri Govind Magal] 

Saturday, 9 February 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 11: 233 - 237

ಅಭೂಚ್ಛಿನಿರ್ನ್ನಾಮ ಯದುಪ್ರವೀರಸ್ತಸ್ಯಾsತ್ಮಜಃ ಸತ್ಯಕ ಆಸ ತಸ್ಮಾತ್ ।
ಕೃಷ್ಣಃ ಪಕ್ಷೋ ಯುಯುಧಾನಾಭಿಧೇಯೋ ಗರುತ್ಮತೋsಮ್ಶೇನ ಯುತೋ ಬಭೂವ ॥೧೧.೨೩೩॥
ಯಃ ಸಂವಹೋ ನಾಮ ಮರುತ್ ತದಂಶಶ್ಚಕ್ರಸ್ಯ ವಿಷ್ಣೋಶ್ಚ ಬಭೂವ ತಸ್ಮಿನ್ ।
ಯದುಷ್ವಭೂದ್ಧೃದಿಕೋ ಭೋಜವಂಶೇ ಸಿತಃ ಪಕ್ಷಸ್ತಸ್ಯ ಸುತೋ ಬಭೂವ॥೧೧.೨೩೪॥
ಸ ಪಾಞ್ಚಜನ್ಯಾಂಶಯುತೋ ಮರುತ್ಸು ತಥಾSಮ್ಶಯುಕ್ತಃ ಪ್ರವಹಸ್ಯ ವೀರಃ ।
ನಾಮಾಸ್ಯ ಚಾಭೂತ್ ಕೃತವರ್ಮ್ಮೇತ್ಯಥಾನ್ಯೇ ಯೇ ಯಾದವಾಸ್ತೇsಪಿ ಸುರಾಃ ಸಗೋಪಾಃ॥೧೧.೨೩೫॥

ಶಿನಿ ಎಂಬ ಯಾದವ ವೀರನಿದ್ದ,
ಅವನಿಗೆ ಸತ್ಯಕನೆಂಬ ಮಗನಿದ್ದ.
ಅವನಿಂದ ಕೃಷ್ಣಪಕ್ಷಾಭಿಮಾನಿಯ ಹುಟ್ಟು ಹೆಸರು  ಯುಯುಧಾನ,
ಹೀಗಾಯಿತು ಗರುಡನ ಅಂಶಯುಕ್ತನಾಗಿ ಅವನದು  ಜನನ.
ಸಂವಹನನೆಂಬ ಮರುತ ಮತ್ತು ವಿಷ್ಣುಚಕ್ರದಂಶಗಳ ಯುಯುಧಾನ ಹೊಂದಿದ್ದ,
ಯಾದವ ವಂಶದ ಹೃದಿಕಗೆ ಶುಕ್ಲಪಕ್ಷಾಭಿಮಾನಿದೇವ ಮಗನಾಗಿ ಹುಟ್ಟಿಬಂದ.
ಹೃದಿಕನ ಮಗ ಪಾಂಚ್ಯಜನ್ಯಾಂಶಯುಕ್ತ,
ಮರುತ್ತುಗಳಲ್ಲಿ ಪ್ರವಹನ ಅಂಶಯುಕ್ತ.
ವೀರನಾದ ಅವನಿಗೆ ಕೃತವರ್ಮನೆಂಬ ಹೆಸರು,
ಬೇರೆ ಯಾದವ ಗೋಪಾಲರೂ ದೇವಾಂಶರಾಗಿದ್ದರು.

ಯೇ ಪಾಣ್ಡವಾನಾಮಭವನ್ ಸಹಾಯಾ ದೇವಾಶ್ಚ ದೇವಾನುಚರಾಃ ಸಮಸ್ತಾಃ ।
ಅನ್ಯೇ ತು ಸರ್ವೇsಪ್ಯಸುರಾ ಹಿ ಮಧ್ಯಮಾ ಯೇ ಮಾನುಷಾಸ್ತೇ ಚಲಬುದ್ಧಿವೃತ್ತಯಃ ॥೧೧.೨೩೬॥

ಯಾರ್ಯಾರು ಆಗಿದ್ದರೋ ಪಾಂಡವರಿಗೆ ಸಹಾಯಕರು,
ಅವರೆಲ್ಲಾ ದೇವತೆಗಳು ಅಥವಾ ದೇವತೆಗಳ ಅನುಚರರು.
ಯಾರ್ಯಾರು ವಿರೋಧಿಗಳು ಆಗಿದ್ದವರೆಲ್ಲ  ಅಸುರರು.
ಆಚೆ ಈಚೆ ಚಂಚಲ ಬುದ್ಧಿಯ ಉದಾಸೀನರು ಮನುಷ್ಯರು.

ಲಿಙ್ಗಂ ಸುರಾಣಾಂ ಹಿ ಪರೈವ ಭಕ್ತಿರ್ವಿಷ್ಣೌ ತದನ್ಯೇಷು ಚ ತತ್ ಪ್ರತೀಪತಾ ।
ಅತೋsತ್ರ ಯೇಯೇ ಹರಿಭಕ್ತಿತತ್ಪರಾಸ್ತೇತೇ ಸುರಾಸ್ತದ್ಭರಿತಾ ವಿಶೇಷತಃ ॥೧೧.೧೩೭ ॥

ವಿಷ್ಣುವಿನಲ್ಲಿ ಉತ್ತಮ ಭಕ್ತಿ ದೇವತೆಗಳ ಲಕ್ಷಣ,
ವಿರೋಧಿಗಳಾಗಿರುವುದೆಲ್ಲ ಅಸುರರ ಲಕ್ಷಣ.
ಕುರುಪಾಂಡವ ಸೇನೆಯಲ್ಲಿ ಯಾರ್ಯಾರು ಹರಿಭಕ್ತರಾಗಿದ್ದರು,
ಅವರೆಲ್ಲ ದೇವತೆಗಳು ಅಥವಾ ವಿಶೇಷವಾಗಿ ಅವರಿಂದಾವಿಷ್ಟರು.
ಯಾರ್ಯಾರು ಹರಿಭಕ್ತಿಗೆ ವಿಪರೀತವಾಗಿ ದ್ವೇಷಪರಾಯಣರು,
ಅವರೆಲ್ಲ ಅಸುರರು ಅಥವಾ ವಿಶೇಷವಾಗಿ ಅವರಿಂದಾವಿಷ್ಟರು.

ಇತಿ ಶ್ರೀಮದಾನನ್ದತೀರ್ತ್ಥಭಗವತ್ಪಾದವಿರಚಿತೇ ಶ್ರೀಮಹಾಭಾರತತಾತ್ಪರ್ಯ್ಯನಿರ್ಣ್ಣಯೇ ಭಗವದವತಾರಪ್ರತಿಜ್ಞಾ ನಾಮ ಏಕಾದಶೋsಧ್ಯಾಯಃ ॥
ಹೀಗೆ ಶ್ರೀಮದಾನಂದತೀರ್ಥಭಗವತ್ಪಾದರಿಂದ,
ಮಹಾಭಾರತತಾತ್ಪರ್ಯನಿರ್ಣಯ ಅನುವಾದ,
ಭಗವದವತಾರಪ್ರತಿಜ್ಞಾ ಹೆಸರಿನ ಹನ್ನೊಂದನೇ ಅಧ್ಯಾಯ,
                                                      ಯೋಗ್ಯತಾನುಸಾರ ಅನುವಾದಿಸಿ ಕೃಷ್ಣಗರ್ಪಿಸಿದ ಧನ್ಯಭಾವ.
[Contributed by Shri Govind Magal]

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 11: 230 - 232

ಅಥಾವತೀರ್ಣ್ಣಾಃ ಸಕಲಾಶ್ಚ ದೇವತಾ ಯಥಾಯಥೈವಾsಹ ಹರಿಸ್ತಥಾತಥಾ ।
ವಿತ್ತೇಶ್ವರಃ ಪೂರ್ವಮಭೂದ್ಧಿ ಭೌಮಾದ್ಧರೇಃ ಸುತತ್ವೇsಪಿ ತದಿಚ್ಛಯಾsಸುರಾತ್ ॥೧೧.೨೩೦॥

ಎಲ್ಲಾ ದೇವತೆಗಳಿಂದಲೂ ಹರಿ ಹೇಳಿದಂತೆ ಆಯಿತು ಅವತಾರ,
ಮೊದಲು ಹರೀಚ್ಛೆಯಂತೆ ನರಕಾಸುರನಲ್ಲಿ ಹುಟ್ಟಿದ್ದ ಅವ ಕುಬೇರ.
ನರಕಾಸುರ ಹರಿಯ ಮಗನಾಗಿದ್ದಾರೂ ಅವನಾಗಿದ್ದ ಒಬ್ಬ ಅಸುರ.

ಪಾಪೇನ ತೇನಾಪಹೃತೋ ಹಿ ಹಸ್ತೀ ಶಿವಪ್ರದತ್ತಃ ಸುಪ್ರತೀಕಾಭಿಧಾನಃ ।
ತದರ್ತ್ಥಮೇವಾಸ್ಯ ಸುತೋsಭಿಜಾತೋ ಧನೇಶ್ವರೋ ಭಗದತ್ತಾಭಿಧಾನಃ ॥೧೧.೨೩೧ ॥

ಕುಬೇರಗೆ ಶಿವನಿತ್ತಿದ್ದ ಸುಪ್ರತೀಕ ಎಂಬ ಹೆಸರಿನ ಆನೆ,
ಅದನ್ನು ಅಪಹರಿಸಿದ್ದವ ಪಾಪಿಷ್ಠನಾದ ನರಕಾಸುರನೆ.
ಭಗದತ್ತ ಎಂಬ ಹೆಸರಿಂದ ಅವನ ಮಗನಾದವ ಕುಬೇರನೆ.

ಮಹಾಸುರಸ್ಯಾಂಶಯುತಃ ಸ ಏವ ರುದ್ರಾವೇಶಾದ್ ಬಲವಾನಸ್ತ್ರವಾಂಶ್ಚ ।
ಶಿಷ್ಯೋ ಮಹೇನ್ದ್ರಸ್ಯ ಹತೇ ಬಭೂವ ತಾತೇ ಸ್ವಧರ್ಮ್ಮಾಭಿರತಶ್ಚ ನಿತ್ಯಮ್ ॥೧೧.೨೩೨ ॥

ಭಗದತ್ತ ಮಹಾ ಅಸುರಾಂಶಯುಕ್ತನಾಗಿದ್ದ,
ರುದ್ರಾವೇಶದಿಂದ ಬಹಳ ಬಲಿಷ್ಠನಾಗಿದ್ದ.
ದೇವೇಂದ್ರನ ಶಿಷ್ಯನಾಗಿದ್ದು ಅಸ್ತ್ರಜ್ಞ ಎನಿಸಿದ್ದ,
ತಂದೆ ಸತ್ತಮೇಲೆ ಸ್ವಧರ್ಮದಲ್ಲಿ ಆಸಕ್ತನಾದ.
[Contributed by Shri Govind Magal] 

Thursday, 7 February 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 11: 226 - 229


ತತ್ ತ್ವಂ ಭವಸ್ವಾsಶು ಚ ದೇವಕೀಸುತಸ್ತಥೈವ ಯೋ ದ್ರೋಣನಾಮಾ ವಸುಃ ಸಃ ।
ಸ್ವಭಾರ್ಯ್ಯಯಾ ಧರಯಾ ತ್ವತ್ಪಿತೃತ್ವಂ ಪ್ರಾಪ್ತುಂ ತಪಸ್ತೇಪ ಉದಾರಮಾನಸಃ ॥೧೧.೨೨೬॥

ಹಾಗಾಗಿ ಭಗವಂತ ನೀನು ಬೇಗ ದೇವಕಿಯ ಮಗನಾಗಿ ಜನಿಸು,
ದ್ರೋಣನೆಂಬ ವಸು ನಿನಗೆ ತಂದೆಯಾಗಬೇಕೆಂದು ಮಾಡಿದ್ದ ತಪಸ್ಸು.
ಪತ್ನಿಯಾದ ಧರೆಯೊಂದಿಗೆ ತಪಸ್ಸನ್ನಾಚರಿಸಿದ ಇಬ್ಬರದೂ ಸುಮನಸ್ಸು.

ತಸ್ಮೈ ವರಃ ಸ ಮಯಾ ಸನ್ನಿಸೃಷ್ಟಃ ಸ ಚಾsಸ ನನ್ದಾಖ್ಯ ಉತಾಸ್ಯ ಭಾರ್ಯ್ಯಾ ।
ನಾಮ್ನಾ ಯಶೋದಾ ಸ ಚ ಶೂರತಾತಸುತಸ್ಯ ವೈಶ್ಯಾಪ್ರಭವೋsಥ ಗೋಪಃ ॥೧೧.೨೨೭ ॥

ಅವನಿಗೆ ನನ್ನಿಂದ ಆಯಿತು ವರಪ್ರದಾನ,
ನಂದನೆಂಬ ಹೆಸರಿಂದಾಗಿದೆ ಅವನ ಜನನ.
ಅವನ ಪತ್ನಿಯಾಗಿ ಹುಟ್ಟಿದ ಧರೆಗೆ ಯಶೋದೆ ಎಂದು ಹೆಸರು,
ಶೂರಪಿತಪುತ್ರ ರಾಜಾಧಿದೇವನ ವೈಶ್ಯಪತ್ನಿಯಲ್ಲಿ ನಂದನಾದ ಬಸಿರು.

ತೌ ದೇವಕೀವಸುದೇವೌ ಚ ತೇಪತುಸ್ತಪಸ್ತ್ವದೀಯಂ ಸುತಮಿಚ್ಛಮಾನೌ ।
ತ್ವಾಮೇವ ತಸ್ಮಾತ್ ಪ್ರಥಮಂ ಪ್ರದರ್ಶ್ಯ ತತ್ರ ಸ್ವರೂಪಂ  ತತೋ ವ್ರಜಂ ವ್ರಜ ॥೧೧.೨೨೮॥

ಆ ದೇವಕಿ ಮತ್ತು ವಸುದೇವರು ನಿನ್ನ ಮಗನಾಗಿ ಹೊಂದಲು ಮಾಡಿದ್ದಾರೆ ತಪಸ್ಸು,
ಮೊದಲು ಕೃಷ್ಣನಾಗಿ ಅವರಲ್ಲಿ ಹುಟ್ಟಿ ನಂತರ ನಂದಗೋಕುಲದಿ ನಿನ್ನ ರೂಪ ತೋರಿಸು.

ಇತೀರಿತೇ ಸೋsಬ್ಜಭವೇನ ಕೇಶವಸ್ತಥೇತಿ ಚೋಕ್ತ್ವಾ ಪುನರಾಹ ದೇವತಾಃ ।
ಸರ್ವೇ ಭವನ್ತೋ ಭವತಾsಶು ಮಾನುಷೇ ಕಾರ್ಯ್ಯಾನುಸಾರೇಣ ಯಥಾನುರೂಪತಃ ॥೧೧.೨೨೯॥

ಹೀಗೆ ಬ್ರಹ್ಮದೇವ ಹೇಳಿದ ಮಾತಿಗೆ,
ಭಗವಂತ ನಾರಾಯಣನಿಂದ ಒಪ್ಪಿಗೆ.
ಆಗಲಿರುವ ಧರ್ಮಸಂಸ್ಥಾಪನಾ ಯಜ್ಞ,
ಭಗವಂತನಿಂದಾಯ್ತು ದೇವತೆಗಳಿಗೆ ಆಜ್ಞ.
ದೇವತೆಗಳೇ ನೀವೆಲ್ಲರೂ ಬೇಗನೆ ಕಾರ್ಯಾನುಸಾರ,
ಹುಟ್ಟಿರಿ ಭುವಿಯಲ್ಲಿ ಮನುಷ್ಯರಾಗಿ ಯೋಗ್ಯತಾನುಸಾರ.

Tuesday, 5 February 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 11: 222 - 225

ಸ ಮೇರುಮಾಪ್ಯಾsಹ ಚತುರ್ಮ್ಮುಖಂ ಪ್ರಭುರ್ಯ್ಯತ್ರ ತ್ವಯೋಕ್ತೋsಸ್ಮಿ ಹಿ ತತ್ರ ಸರ್ವಥಾ ।
ಪ್ರಾದುರ್ಭವಿಷ್ಯೇ ಭವತೋ ಹಿ ಭಕ್ತ್ಯಾ ವಶಸ್ತ್ವಿವಾಹಂ ಸ್ವವಶೋsಪಿ ಚೇಚ್ಛಯಾ ॥೧೧.೨೨೨॥

ದೇವತೆಗಳೊಂದಿಗೆ ಹರಿ ಮೇರುಪರ್ವತದ ಬಳಿ ಬಂದ,
ಚತುರ್ಮುಖ ಬ್ರಹ್ಮನುದ್ದೇಶಿಸಿ ಭಗವಂತ ಹೀಗೆ ಹೇಳಿದ.
ಸರ್ವಥಾ ನೀನು ಹೇಳಿದಲ್ಲಿಯೇ ನಾನು ಅವತರಿಸುವೆ,
ಸ್ವತಂತ್ರನಾದರೂ ಸ್ವೇಚ್ಛೆಯಿಂದ ನಿನ್ನ ಭಕ್ತಿಗೆ ವಶನಾಗಿರುವೆ.

ಬ್ರಹ್ಮಾ ಪ್ರಣಮ್ಯಾsಹ ತಮಾತ್ಮಕಾರಣಂ ಪ್ರಾದಾಂ ಪುರಾsಹಂ ವರುಣಾಯ ಗಾಃ ಶುಭಾಃ ।
ಜಹಾರ ತಾಸ್ತಸ್ಯ ಪಿತಾsಮೃತಸ್ರವಾಃ ಸ ಕಶ್ಯಪೋ ದ್ರಾಕ್ ಸಹಸಾsತಿಗರ್ವಿತಃ ॥೧೧.೨೨೩॥
ಮಾತ್ರಾ ತ್ವದಿತ್ಯಾ ಚ ತಥಾ ಸುರಭ್ಯಾ ಪ್ರಚೋದಿತೇನೈವ ಹೃತಾಸು ತಾಸು ।
ಶ್ರುತ್ವಾ ಜಲೇಶಾತ್ ಸ ಮಯಾ ತು ಶಪ್ತಃ ಕ್ಷತ್ರೇಷು ಗೋಜೀವನಕೋ ಭವೇತಿ ॥೧೧.೨೨೪ ॥

ಬ್ರಹ್ಮ ತನ್ನ ಪಿತನಾದ ಭಗವಂತಗೆ ವಂದಿಸುತ್ತಾ ಹೇಳುತ್ತಾನೆ,
ಹಿಂದೆ ವರುಣಗೆ ಅಮೃತಸುರಿಸುವ ಗೋವುಗಳ ಕೊಟ್ಟಿದ್ದು ನಾನೆ.
ಅವನ ತಂದೆ ಕಾಶ್ಯಪ ಅಹಂಕಾರ ಬಲಾತ್ಕಾರದಿಂದ ಅವನ್ನಪಹರಿಸಿದ್ದಾನೆ.
ಕಾಶ್ಯಪ ಅದಿತಿ ಸುರಭಿಯರಿಂದ ಪ್ರಚೋದಿತನಾದ,
ಹಾಗೆ ವರುಣನ ಗೋವುಗಳನ್ನು ತಾ ಅಪಹರಿಸಿದ.
ವರುಣನಿಂದ ಎಲ್ಲ ತಿಳಿದ ನಾನು ಕಾಶ್ಯಪನಿಗೆ ಶಾಪ ಇತ್ತೆ ಹೀಗೆ,
ಕ್ಷತ್ರಿಯನಾಗಿ ಹುಟ್ಟಿದರೂ ಗೋರಕ್ಷಣೆಯಿಂದ ನಿನ್ನ ಜೀವನಬಗೆ.

ಶೂರಾತ್ ಸ ಜಾತೋ ಬಹುಗೋಧನಾಢ್ಯೋ ಭೂಮೌ ಯಮಾಹುರ್ವಸುದೇವ ಇತ್ಯಪಿ ।
ತಸ್ಯೈವ ಭಾರ್ಯ್ಯಾ ತ್ವದಿತಿಶ್ಚ ದೇವಕೀ ಬಭೂವ ಚಾನ್ಯಾ ಸುರಭಿಶ್ಚ ರೋಹಿಣೀ ॥೧೧.೨೨೫॥

ಕಾಶ್ಯಪ ಭುವಿಯಲ್ಲಿ ಶೂರನಿಂದ ಜನಿಸಿ ಗೋಸಂಪತ್ತಿನ ಒಡೆಯನಾದ,
ಬಹುದನಗಳ ಹೊಂದಿ ಗೋಧನದಿಂದ ಶೋಭಿಸುವ ವಸುದೇವನಾದ.
ಅದಿತಿ ದೇವಕಿಯಾಗಿ ಹುಟ್ಟಿ ಬಂದಿದ್ದಳಾಗ,
ಸುರಭಿ ರೋಹಿಣಿಯಾಗಿ ಹೆಂಡಂದಿರಾದರಾಗ.

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 11:218 - 221


ಯೋ ಬಾಣಮಾವಿಶ್ಯ ಮಹಾಸುರೋsಭೂತ್ ಸ್ಥಿತಃ ಸ ನಾಮ್ನಾ ಪ್ರಥಿತೋsಪಿ ಬಾಣಃ ।

ಸ ಕೀಚಕೋ ನಾಮ ಬಭೂವ ರುದ್ರವರಾದವಧ್ಯಃ ಸ ತಮಃ ಪ್ರವೇಶ್ಯಃ ॥೧೧.೨೧೮॥

ಬಾಣನೆಂಬ ಹೆಸರಿನವನು ಬಲಿಚಕ್ರವರ್ತಿಯ ಪುತ್ರ,
ಅವನೊಳು ಪ್ರವೇಶಿಸಿದವನು  ದೈತ್ಯ ಬಾಣಾಸುರ.
ಅವನೇ ಕೀಚಕನೆಂಬ ಹೆಸರಿನಿಂದ ಹುಟ್ಟಿದಾತ,
ರುದ್ರದೇವ ವರಬಲದಿಂದ ಅವಧ್ಯನಾಗಿರುವಾತ.
ಅಂಧಂತಮಸ್ಸಿಗೆ ಬೀಳಲು ಅತ್ಯಂತ ಅರ್ಹನಾದಾತ.

ಅತಸ್ತ್ವಯಾ ಭುವ್ಯವತೀರ್ಯ್ಯ ದೇವಕಾರ್ಯ್ಯಾಣಿ ಕಾರ್ಯ್ಯಾಣ್ಯಖಿಲಾನಿ ದೇವ ।
ತ್ವಮೇವ ದೇವೇಶ ಗತಿಃ ಸುರಾಣಾಂ ಬ್ರಹ್ಮೇಶಶಕ್ರೇನ್ದುಯಮಾದಿಕಾನಾಮ್ ॥೧೧.೨೧೯॥

ಆ ಕಾರಣದಿಂದ ದೇವ;ಭೂಮಿಯಲ್ಲಾಗಬೇಕಿದೆ ನಿನ್ನವತಾರ,
ನಿನ್ನಿಂದ ಮಾಡಪಡಲ್ಬೇಕಾಗಿದೆ ಅನೇಕಾನೇಕ ದೇವಕಾರ್ಯ.
ಓ ದೇವತೆಗಳ ಒಡೆಯ ನೀನು ಅತ್ಯದ್ಭುತ ಅನಂತ ಮೂಲಶಕ್ತಿ,
ಬ್ರಹ್ಮ ರುದ್ರ ಇಂದ್ರ ಯಮ ಮುಂತಾದ  ದೇವತೆಗಳಿಗೆ ನೀನೇ ಗತಿ.

ತ್ವಮೇವ ನಿತ್ಯೋದಿತಪೂರ್ಣ್ಣಶಕ್ತಿಸ್ತ್ವಮೇವ ನಿತ್ಯೋದಿತಪೂರ್ಣ್ಣಚಿದ್ಘನಃ ।
ತ್ವಮೇವ ನಿತ್ಯೋದಿತಪೂರ್ಣ್ಣಸತ್ಸುಖಸ್ತ್ವದೃಙ್ ನ ಕಶ್ಚಿತ್ ಕುತ ಏವ ತೇsಧಿಕಃ  ॥೧೧.೨೨೦ ॥

ನೀನೊಬ್ಬನೇ ನಿತ್ಯದಲ್ಲಿ ಅಭಿವ್ಯಕ್ತವಾಗಬಲ್ಲಂಥ  ಪೂರ್ಣಶಕ್ತಿ,
ನೀನೊಬ್ಬನೇ ಎಂದೆಂದಿಗೂ ಪೂರ್ಣಜ್ಞಾನದ ಕರಗದ ಬುತ್ತಿ.
ನೀನೊಬ್ಬನೇ ಪರಿಪೂರ್ಣ ಉದ್ಭವವಾದ ಜ್ಞಾನಾನಂದ,
ನಿನಗೆ ಸಮವೇ ಇರದಮೇಲೆ ಮಿಗಿಲಾದವನು ಇನ್ನೆಲ್ಲಿಂದ.

ಇತೀರಿತೋ ದೇವವರೈರುದಾರಗುಣಾರ್ಣ್ಣವೋsಕ್ಷೋಭ್ಯತಮಾಮೃತಾಕೃತಿಃ ।
ಉತ್ಥಾಯ ತಸ್ಮಾತ್ ಪ್ರಯಯಾವನನ್ತಸೋಮಾರ್ಕ್ಕಕಾನ್ತಿದ್ಯುತಿರನ್ವಿತೋsಮರೈಃ ॥೧೧.೨೨೧॥

ಹೀಗೆ ದೇವತೆಗಳಿಂದ ಸ್ತೋತ್ರ ಮಾಡಲ್ಪಟ್ಟ ಭಗವಂತ,
ಉತ್ಕೃಷ್ಟ ಗುಣಗಳಿಗೆ ಕಡಲಿನಂತೆ ಇರುವ ಅನಂತ.
ಎಂದೂ ನಾಶವಾಗದ ದೇಹವುಳ್ಳ ಆ ನಾರಾಯಣ,
ಶೇಷಶಯ್ಯೆಯಿಂದ ಎದ್ದು ಹೊರಟ ಲಕ್ಷ್ಮೀರಮಣ.
ಎಣೆಯಿರದ ಸೂರ್ಯ ಚಂದ್ರರ ಕಾಂತಿವುಳ್ಳ ಸ್ವಾಮಿ,
ದೇವತೆಗಳಿಂದನುಸರಿಸಲ್ಪಟ್ಟು ಹೊರಟ ಭಕ್ತಪ್ರೇಮಿ.


ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 11: 211 - 217

ಹತೌ ಚ ಯೌ ರಾವಣಕುಮ್ಭಕರ್ಣ್ಣೌ ತ್ವಯಾ ತ್ವದೀಯೌ ಪ್ರತಿಹಾರಪಾಲೌ ।
ಮಹಾಸುರಾವೇಶಯುತೌ ಹಿ ಶಾಪಾತ್ ತ್ವಯೈವ ತಾವದ್ಯ ವಿಮೋಚನೀಯೌ ॥೧೧.೨೧೧ ॥
ಯೌ ತೌ ತವಾರೀ ಹ ತಯೋಃ ಪ್ರವಿಷ್ಟೌ ದೈತ್ಯೌ ತು ತಾವನ್ಧತಮಃ ಪ್ರವೇಶ್ಯೌ ।
ಯೌ ತೌ ತ್ವದೀಯೌ ಭವದೀಯವೇಶ್ಮ ತ್ವಯಾ ಪುನಃ ಪ್ರಾಪಣೀಯೌ ಪರೇಶ ॥೧೧.೨೧೨ ॥

ಶಾಪಗ್ರಸ್ತರಾದ ನಿನ್ನ ದ್ವಾರಪಾಲಕರಾದ ಜಯವಿಜಯರು,
ರಾವಣ ಕುಂಭಕರ್ಣರಾಗಿ ಹುಟ್ಟಿ ನಿನ್ನಿಂದ ಹತರಾದರು.
ಈಗ ಶಿಶುಪಾಲ ದಂತವಕ್ರರಾಗಿ ಹುಟ್ಟಿದ್ದಾರೆ,
ನಿನ್ನಿಂದ ಶಾಪವಿಮೋಚನೆಯಾಗಬೇಕು ದೊರೆ.

ಅವರಲ್ಲಿದ್ದ ನಿನ್ನ ವೈರಿಗಳಾದ ಹಿರಣ್ಯಕಶಿಪು ಹಿರಣ್ಯಾಕ್ಷ,
ಆ ಜನ್ಮದಮಟ್ಟಿಗಾಗಿದೆ ಅಂಧಂತಮಸ್ಸಿನ ಶಿಕ್ಷೆಯಕಕ್ಷ.
ಶಿಶುಪಾಲ ದಂತವಕ್ರರಿಗೆ ಆಗಬೇಕಿದೆ ಕೊನೆ,
ಅದನ್ನ ಮಾಡಬೇಕಾದವನು ಮಾತ್ರ ನೀನೆ.
ಶಾಪಗ್ರಸ್ತ ನಿನ್ನ ಭಕ್ತರಾದ ಜಯವಿಜಯರಿಗೆ,
ನೀನು ಕೊಡಬೇಕಿದೆ ಬಿಡುಗಡೆಯ ಕೊಡುಗೆ.

ಆವಿಶ್ಯಯೋ ಬಲಿಮಞ್ಜಶ್ಚಕಾರ ಪ್ರತೀಪಮಸ್ಮಾಸು ತಥಾ ತ್ವಯೀಶ ।
ಸ ಚಾಸುರೋ ಬಲಿನಾಮೈವ ಭೂಮೌ ಸಾಲ್ವೋ ನಾಮ್ನಾ ಬ್ರಹ್ಮದತ್ತಸ್ಯ ಜಾತಃ ॥೧೧.೨೧೩॥

ಬಲಿಚಕ್ರವರ್ತಿಯಲ್ಲಿ ಚೆನ್ನಾಗಿ ಆವಿಷ್ಟನಾಗಿ,
ಅವನನ್ನು ನಿನ್ನಲ್ಲಿ ನಮ್ಮಲ್ಲಿ ವಿರೋಧಿಯನ್ನಾಗಿ,
ಮಾಡಿದ್ದ ಬಲಿ ಎಂಬಸುರ ಹುಟ್ಟಿದ್ದಾನೆ ಸಾಲ್ವನಾಗಿ.
ಅವನ ಹುಟ್ಟು ಈಗ ಆಗಿದೆ ಬ್ರಹ್ಮದತ್ತನ ಮಗನಾಗಿ.

ಮಾಯಾಮಯಂ ತೇನ ವಿಮಾನಮಗ್ರ್ಯಮಭೇದ್ಯಮಾಪ್ತಂ ಸಕಲೈರ್ಗ್ಗಿರೀಶಾತ್ ।
ವಿದ್ರಾವಿತೋ ಯೋ ಬಹುಶಸ್ತ್ವಯೈವ ರಾಮಸ್ವರೂಪೇಣ ಭೃಗೂದ್ವಹೇನ ॥೧೧.೨೧೪॥

ಭೃಗುಕುಲದಲ್ಲಿ ಅವತರಿಸಿದ ಪರಶುರಾಮ ರೂಪಿ ನಿನ್ನಿಂದ,
ಅನೇಕಬಾರಿ ಓಡಿಸಲ್ಪಟ್ಟ ಸಾಲ್ವ ಅಭೇದ್ಯ ಮಾಯಾಮಾಯವಾದ,
ಬಲು ಶ್ರೇಷ್ಠವಾದ ವಿಮಾನ ಪಡೆದಿದ್ದಾನೆ ರುದ್ರದೇವನಿಂದ.

ನಾಸೌ ಹತಃ ಶಕ್ತಿಮತಾsಪಿ ತತ್ರ ಕೃಷ್ಣಾವತಾರೇ ಸ ಮಯೈವ ವಧ್ಯಃ ।
ಇತ್ಯಾತ್ಮಸಙ್ಕಲ್ಪಮೃತಂ ವಿಧಾತುಂ ಸ ಚಾತ್ರ ವಧ್ಯೋ ಭವತಾsತಿಪಾಪೀ ॥೧೧.೨೧೫॥

 ನಿನ್ನ ಸಂಕಲ್ಪವದು -ಸಾಲ್ವ ಕೃಷ್ಣಾವತಾರದಲ್ಲಿ ನಿನ್ನಿಂದಾಗಬೇಕು ಹತ,
ಅದಕೇ ಕೊಲ್ಲಲಿಲ್ಲ ಪರಶುರಾಮನಾಗಿದ್ದಾಗ ಆಗಿದ್ದರೂ ಸರ್ವಶಕ್ತ.
ಪಾಪಿಯಾದ ಅವನು ಕೃಷ್ಣಾವತಾರದಲ್ಲಿ ನಿನ್ನಿಂದ ಆಗಬೇಕು ಮೃತ.

ಯದೀಯಮಾರುಹ್ಯ ವಿಮಾನಮಸ್ಯ ಪಿತಾsಭವತ್ ಸೌಭಪತಿಶ್ಚ ನಾಮ್ನಾ ।
ಯದಾ ಸ ಭೀಷ್ಮೇಣ ಜಿತಃ ಪಿತಾsಸ್ಯ ತದಾ ಸ ಸಾಲ್ವಸ್ತಪಸಿ ಸ್ಥಿತೋsಭೂತ್ ॥೧೧.೨೧೬॥

ಯಾರ ವಿಮಾನವನ್ನೇರಿ ಸಾಲ್ವನಪ್ಪ ಬ್ರಹ್ಮದತ್ತನಾಗಿದ್ದ ‘ಸೌಭಪತಿ’ ,
ಅವನಿಗಾಯ್ತು ಭೀಷ್ಮರೊಂದಿಗಾದ ಯುದ್ಧದಲ್ಲಿ ಸೋಲಿನ ಗತಿ.
ಆ ಸಮಯದಲ್ಲಿ ಸಾಲ್ವನದಾಗಿತ್ತು ತಪಸ್ಸು ಆಚರಣೆಯ ಸ್ಥಿತಿ.

ಸ ಚಾದ್ಯ ತಸ್ಮಾತ್ ತಪಸೋ ನಿವೃತ್ತೋ ಜರಾಸುತಸ್ಯಾನುಮತೇ ಸ್ಥಿತೋ ಹಿ ।
ಅನನ್ಯವಧ್ಯೋ ಭವತಾsದ್ಯ ವಧ್ಯಃ ಸ ಪ್ರಾಪಣೀಯಶ್ಚ ತಮಸ್ಯಥೋಗ್ರೇ ॥೧೧.೨೧೭॥

ತಪಸ್ಸಿನಿಂದ ವಾಪಸಾದ ಸಾಲ್ವನವ,
ಜರಾಸಂಧನ ಜೊತೆಗೇ ಇರುವನವ.
ಬೇರೆ ಯಾರಿಂದಲೂ ಸಾಯಲಾರದಂಥವನು,
ನಿನ್ನಿಂದಲೇ ತಮಸ್ಸು ಪ್ರವೇಶ ಮಾಡಬೇಕವನು.