Friday, 30 August 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 13: 133 - 138

ನಿತ್ಯಾತಿದುಃಖಮನಿವೃತ್ತಿ ಸುಖವ್ಯಪೇತಮನ್ಧಂ ತಮೋ ನಿಯತಮೇತಿ ಹರಾವಭಕ್ತಃ ।
ಭಕ್ತೋsಪಿ ಕಞ್ಜಜಗಿರೀಶಮುಖೇಷು ಸರ್ವಧರ್ಮ್ಮಾರ್ಣ್ಣವೋsಪಿ ನಿಖಿಲಾಗಮನಿರ್ಣ್ಣಯೇನ ॥೧೩.೧೩೩॥
ಪರಮಾತ್ಮನ ದ್ವೇಷಿಯಾಗಿ ಆಗದೇ ಅವನ ಭಕ್ತ,
ಪುಣ್ಯಕಾರ್ಯಗಳಿಂದ ಆಗಿದ್ದರೂ ಬ್ರಹ್ಮರುದ್ರರ ಭಕ್ತ,
ಅಂಥ ಜನರಿಗೆ ಕೊಡುತ್ತವೆ ಸಮಸ್ತ ವೇದಗಳು  -ನಿರ್ಣಯ,
ಅವರಿಗೆ ಅಂತ್ಯವಿರದ ದುಃಖವುಳ್ಳ ಅಂಧಂತಮಸ್ಸೇ ಸಂದಾಯ.

ಯೋ ವೇತ್ತಿ ನಿಶ್ಚಿತಮತಿರ್ಹರಿಮಬ್ಜಜೇಶಪೂರ್ವಾಖಿಲಸ್ಯ ಜಗತಃ ಸಕಲೇsಪಿ ಕಾಲೇ ।
ಸೃಷ್ಟಿಸ್ಥತಿಪ್ರಳಯಮೋಕ್ಷದಮಾತ್ಮತನ್ತ್ರಂ ಲಕ್ಷ್ಮ್ಯಾ ಅಪೀಶಮತಿಭಕ್ತಿಯುತಃ ಸ ಮುಚ್ಯೇತ್ ॥೧೩.೧೩೪॥
ಯಾವ ಪರಮಾತ್ಮ ಬ್ರಹ್ಮರುದ್ರಾದಿ ಪ್ರಪಂಚಕ್ಕೆಲ್ಲಾ  ಆಶ್ರಯ,
ಸರ್ವದಾ ಸೃಷ್ಟಿ ಸ್ಥಿತಿ ಪ್ರಳಯ ಮೋಕ್ಷ ಇವನಿಂದಲೇ ಸಂದಾಯ.
ಸರ್ವಶಕ್ತ,ಲಕ್ಷ್ಮಿಗೂ ಈಶನಾದ ಸ್ವತಂತ್ರ ಅದ್ವಿತೀಯ ಶಕ್ತಿ,
ಹಾಗೆ ನಿಶ್ಚಯವಾಗಿ ತಿಳಿದವನಿಗೆ ಆಗುತ್ತದವನಲ್ಲಿ ಭಕ್ತಿ.
ಅಂಥಾ ಅರಿವಿನ ಭಕ್ತಿಯ ಸಾಧಕ ಪಡೆಯುತ್ತಾನೆ ಮುಕ್ತಿ.

ತಸ್ಮಾದನನ್ತಗುಣಪೂರ್ಣ್ಣಮಮುಂ ರಮೇಶಂ ನಿಶ್ಚಿತ್ಯ ದೋಷರಹಿತಂ ಪರಯೈವ ಭಕ್ತ್ಯಾ ।
ವಿಜ್ಞಾಯ ದೈವತಗಣಾಂಶ್ಚ ಯಥಾ ಕ್ರಮೇಣ ಭಕ್ತಾ ಹರೇರಿತಿ ಸದೈವ ಭಜೇತ ಧೀರಃ ॥೧೩.೧೩೫॥
ಬುದ್ಧಿವಂತನಾದವನು ತಿಳಿಯಬೇಕೀ ನಿತ್ಯಸತ್ಯ ಕಾರಣ,
ರಮಾಪತಿ ಕೃಷ್ಣನೇ ಅನಂತಗುಣದ ನಾಶವಿರದ ನಾರಾಯಣ.
ಲಕ್ಷ್ಮಿಗೂ ಒಡೆಯನಾದ ಭಗವಂತ ಎಂದೆಂದೂ ದೋಷರಹಿತ,
ತಾರತಮ್ಯ ರೀತಿಯಿಂದ ದೇವತೆಗಳು ಕೂಡಾ ಹರಿಯಾಶ್ರಿತ.
ಹೀಗೆ ತಿಳಿದು ಮಾಡುವ ಭಕ್ತಿಯೇ ಎಂದೆಂದೂ ಶಾಸ್ತ್ರಸಮ್ಮತ.



ನಿಹತ್ಯ ಕಂಸಮೋಜಸಾ ವಿಧಾತೃಶಮ್ಭುಪೂರ್ವಕೈಃ ।
ಸ್ತುತಃ ಪ್ರಸೂನವರ್ಷಿಭಿರ್ಮ್ಮುಮೋದ ಕೇಶವೋsಧಿಕಮ್ ॥೧೩.೧೩೬॥
ಹೀಗೆ ಕೃಷ್ಣ ತನ್ನ ಶಕ್ತಿಯಿಂದ ಮಾಡಿದ ಕಂಸಸಂಹಾರ,
ಬ್ರಹ್ಮರುದ್ರಾದಿಗಳಿಂದ ಕೃಷ್ಣಗೆ ಹೂಮಳೆಯ ಧಾರ.
ದೇವತೆಗಳಿಂದ ಸ್ತುತಿಸಲ್ಪಟ್ಟ ಕೃಷ್ಣಗೆ ಹರ್ಷ ಅಪಾರ.

ಸದೈವ ಮೋದರೂಪಿಣೋ ಮುದೋಕ್ತಿರಸ್ಯ ಲೌಕಿಕೀ ।
ಯಥೋದಯೋ ರವೇರ್ಭವೇತ್ ಸದೋದಿತಸ್ಯ ಲೋಕತಃ ॥೧೩.೧೩೭॥
ಆನಂದವೇ ಮೈವೆತ್ತುಬಂದವಗೆ ಎಂಥಾ ಸಂತೋಷ,
ಹಾಗೆ ಹೇಳಿರುವುದು ಕೇವಲ ಲೌಕಿಕವೆಂಬ ವಿಶೇಷ.
ಸದಾ ಉದಿತನಾಗಿರುವವನು ಅವನು  ಭಾಸ್ಕರ,
ಲೋಕದೃಷ್ಟಿಯಿಂದ ಉದಯಾಸ್ತ ಹೇಳೋ ವ್ಯಾಪಾರ.

ಅನನ್ತಚಿತ್ಸುಖಾರ್ಣ್ಣವಃ ಸದೋದಿತೈಕರೂಪಕಃ ।
ಸಮಸ್ತದೋಷವರ್ಜ್ಜಿತೋ ಹರಿರ್ಗ್ಗುಣಾತ್ಮಕಃ ಸದಾ ॥೧೩.೧೩೮॥
ಆ ಭಗವಂತ ಹೋಲಿಕೆಯಿರದ ಜ್ಞಾನ ಆನಂದಗಳ ಕಡಲು,
ಅವನು ಏಕರೀತಿಯ ದೋಷರಹಿತ ಗುಣತುಂಬಿದ ಮಡಿಲು.
ಇತಿ ಶ್ರೀಮದಾನನ್ದತೀರ್ತ್ಥಭಗವತ್ಪಾದವಿರಚಿತೇ ಶ್ರೀಮಹಾಭಾರತತಾತ್ಪರ್ಯ್ಯನಿರ್ಣ್ಣಯೇ
ಕಂಸವಧೋ ನಾಮ ತ್ರಯೋದಶೋsಧ್ಯಾಯಃ ॥
ಹೀಗೆ ಶ್ರೀಮದಾನಂದತೀರ್ಥಭಗವತ್ಪಾದರಿಂದ,
ಶ್ರೀಮಹಾಭಾರತತಾತ್ಪರ್ಯನಿರ್ಣಯದ ವಾದ,
ಕಂಸವಧೆ ಹೆಸರಿನ ಹದಿಮೂರನೇ ಅಧ್ಯಾಯ,
ಕಂಸಾರಿ ಶ್ರೀಕೃಷ್ಣಗರ್ಪಿಸಿದ ಧನ್ಯತಾ ಭಾವ. 
                                ॥ಶ್ರೀಕೃಷ್ಣಾರ್ಪಣಮಸ್ತು॥
[Contributed by Shri Govind Magal]

Tuesday, 27 August 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 13: 127 - 132


ನಿಃಶೇಷತೋ ವಿನಿಹತೇ ಸ್ವಬಲೇ ಸ ಕಂಸಶ್ಚರ್ಮ್ಮಾಸಿಪಾಣಿರಭಿಯಾತುಮಿಯೇಷ ಕೃಷ್ಣಮ್ ।

ತಾವತ್ ತಮೇವ ಭಗವನ್ತಮಭಿಪ್ರಯಾತಮುತ್ತುಙ್ಗಮಞ್ಚಶಿರಸಿ ಪ್ರದದರ್ಶ ವೀರಮ್ ॥೧೩.೧೨೭॥
ಕೃಷ್ಣನಿಂದ ತನ್ನ ಸೈನ್ಯ ನಿಶ್ಯೇಷವಾಗಿ ನಾಶವಾದಾಗ,
ಕತ್ತಿ ಗುರಾಣಿ ಹಿಡಿದು ಕೃಷ್ಣಗೆ ಎದುರಾದ ಕಂಸನಾಗ.
ಅಷ್ಟರಲ್ಲೇ ಕಂಸನ ಆವರಿಸಿಬಿಟ್ಟಿದ್ದ ಕೃಷ್ಣಮಹಾಭಾಗ.

ತಂ ಶ್ಯೇನವೇಗಮಭಿತಃ ಪ್ರತಿಸಞ್ಚರನ್ತಂ ನಿಶ್ಚಿದ್ರಮಾಶು ಜಗೃಹೇ ಭಗವಾನ್ ಪ್ರಸಹ್ಯ ।
ಕೇಶೇಷು ಚೈನಮಭಿಮೃಶ್ಯ ಕರೇಣ ವಾಮೇನೋದ್ಧೃತ್ಯ ದಕ್ಷಿಣಕರೇಣ ಜಘಾನ ಕೇsಸ್ಯ ॥೧೩.೧೨೮॥
ಕಂಸ ಗಿಡುಗವೇಗದಿಂದ ಕೃಷ್ಣನೆದುರು ಮತ್ತೆ ಮತ್ತೆ  ಹಾರಿಬಂದ,
ಇದನ್ನು ನೋಡಿದ ಶ್ರೀಕೃಷ್ಣ ಕಂಸನ ಆ ವೇಗವನ್ನು  ನಾಶಮಾಡಿದ.
ಅವನ ತಲೆಯನ್ನು ಎಡಗೈಯಿಂದ ಹಿಡಿದ,
ಕೂದಲು ಸೆಳೆದು ಬಲಗೈಯಿಂದ ಹೊಡೆದ.

ಸಞ್ಚಾಲಿತೇನ ಮಕುಟೇನ ವಿಕುಣ್ಡಲೇನ ಕರ್ಣ್ಣದ್ವಯೇನ ವಿಗತಾಭರಣೋರಸಾ ಚ ।
ಸ್ರಸ್ತಾಮ್ಭರೇಣ ಜಘನೇನ ಸುಶೋಚ್ಯರೂಪಃ ಕಂಸೋ ಬಭೂವ ನರಸಿಂಹಕರಾಗ್ರಸಂಸ್ಥಃ ॥೧೩.೧೨೯॥
ಪುರುಷೋತ್ತಮ ಕೃಷ್ಣನ ಕೈಯಲ್ಲಿ ಬಂಧಿಯಾದ ಕಂಸನ ಸ್ಥಿತಿ,
ಕಿರೀಟ,ಕುಂಡಲ,ಎದೆಯಾಭರಣ ಎಲ್ಲವೂ ಕಳಚಿದ ಹೇಯಗತಿ.
ಉಟ್ಟ ಸೊಂಟದ ಬಟ್ಟೆಯೂ ಬಿಚ್ಚಿದ ಶೋಚನೀಯ ಪರಿಸ್ಥಿತಿ.

ಉತ್ಕೃಷ್ಯ ತಂ ಸುರಪತಿಃ ಪರಮೋಚ್ಚಮಞ್ಚಾದನ್ಯೈರಜೇಯಮತಿವೀರ್ಯ್ಯಬಲೋಪಪನ್ನಮ್।
ಅಬ್ಜೋದ್ಭವೇಶವರಗುಪ್ತಮನನ್ತಶಕ್ತಿರ್ಭೂಮೌ ನಿಪಾತ್ಯ ಸ ದದೌ ಪದಯೋಃ ಪ್ರಹಾರಮ್ ॥೧೩.೧೩೦॥
ಕಂಸನ ನಿಗ್ರಹಿಸಿದ-ದೇವತೆಗಳ ಒಡೆಯ ಅನಂತ ಶಕ್ತಿಯ ಕೃಷ್ಣಪರಮಾತ್ಮ,,
ಹಣ್ಣಾದ-ಅನ್ಯರಿಗೆ ಅಜೇಯ ಅತಿಬಲದ ಬ್ರಹ್ಮ ರುದ್ರ ವರರಕ್ಷಿತ ದುರಾತ್ಮ.
ಆಸನದಿಂದ ಕಂಸನ ಸೆಳೆದ,
ನೆಲಕ್ಕೆ ಕೆಡವಿ ಕಾಲಿಂದ ಒದ್ದ.

‌ದೇಹೇ ತು ಯೋsಭವದಮುಷ್ಯ ರಮೇಶಬನ್ಧುರ್ವಾಯುಃ ಸ ಕೃಷ್ಣತನುಮಾಶ್ರಯದನ್ಯಪಾಪಮ್ ।
ದೈತ್ಯಂ ಚಕರ್ಷ ಹರಿರತ್ರ ಶರೀರಸಂಸ್ಥಂ ಪಶ್ಯತ್ಸು ಕಞ್ಜಜಮುಖೇಷು ಸುರೇಷ್ವನನ್ತಃ ॥೧೩.೧೩೧॥
ಕಂಸನೊಳಗಿದ್ದ ಭಗವತ್ಬಂಧುವಾದ ಮುಖ್ಯಪ್ರಾಣ,
ಸೇರಿಕೊಂಡ ತನ್ನ ಆಶ್ರಯತಾಣನಾದ ನಾರಾಯಣ.
ಕಂಸನಲ್ಲಿದ್ದ ದೈತ್ಯನ ಸೆಳೆದ ಭಗವಾನ್ ಶ್ರೀಕೃಷ್ಣ.

ದ್ವೇಷಾತ್ ಸ ಸರ್ವಜಗದೇಕಗುರೋಃ ಸ್ವಕೀಯೈಃ ಪೂರ್ವಪ್ರಮಾಪಿತಜನೈಃ ಸಹಿತಃ ಸಮಸ್ತೈಃ ।
ಧಾತ್ರ್ಯಾದಿಭಿಃ ಪ್ರತಿ ಯಯೌ ಕುಮತಿಸ್ತಮೋsನ್ಧಮನ್ಯೇsಪಿ ಚೈವಮುಪಯಾನ್ತಿ ಹರಾವಭಕ್ತಾಃ ॥೧೩.೧೩೨॥   
ಕೆಟ್ಟಬುದ್ಧಿಯುಳ್ಳ ದುರುಳನಾದ ಆ ಕಂಸ,
ಮಾಡಿದ್ದಕ್ಕೆ ಜಗದಗುರು ಭಗವಂತನ ದ್ವೇಷ,
ಮೊದಲೇ ಭಗವಂತನಿಂದ ಹತರಾಗಿ ಸೇರಿಕೊಂಡ ಆಭಗವದ್ವೇಷಿಗಳ ತಾಣ,


ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 13: 123 - 126

ತಾಭ್ಯಾಂ ಹತಾನಭಿಸಮೀಕ್ಷ್ಯ ನಿಜಾನ್ ಸಮಸ್ತಾನ್ ಕಂಸೋ ದಿದೇಶ ಬಲಮಕ್ಷಯಮುಗ್ರವೀರ್ಯ್ಯಮ್।
ರುದ್ರಪ್ರಸಾದಕೃತರಕ್ಷಮವ ದ್ಧ್ಯಮೇನೌ ನಿಸ್ಸಾರ್ಯ ದಣ್ಡಮಧಿಕಂ ಕುರುತೇತಿ ಪಾಪಃ ॥೧೩.೧೨೩॥
ಕೃಷ್ಣಬಲರಾಮರಿಂದ ತನ್ನವರೆಲ್ಲರೂ ನಾಶವಾದದ್ದ ಕಂಡ ಪಾಪಿಷ್ಟ ಕಂಸ,
ರುದ್ರದೇವವರದಿಂದ ರಕ್ಷಿತ ತನ್ನ ಅಭೇದ್ಯ ಸೈನ್ಯಕ್ಕೆ ಹೊರಡಿಸುತ್ತಾನೆ ಆದೇಶ.
ರಾಮಕೃಷ್ಣರನ್ನು ಪಟ್ಟಣದಿಂದ ಹೊರಗೊಯ್ದು ಹೆಚ್ಚು ಶಿಕ್ಷೆಯ ಕೊಡುವಾದೇಶ.

ಶ್ರುತ್ವೈವ ರಾಜವಚನಂ ಬಲಮಕ್ಷಯಂ ತದಕ್ಷೋಹಿಣೀದಶಕಯುಗ್ಮಮನನ್ತವೀರ್ಯ್ಯಮ್ ।
ಕೃಷ್ಣಂ ಚಕಾರ ವಿವಿದಾಸ್ತ್ರಧರಂ ಸ್ವಕೋಷ್ಠೇ ಸಿಂಹಂ ಯಥಾsಕಿಲ ಸೃಗಾಲಬಲಂ ಸಮೇತಮ್॥೧೩.೧೨೪॥
ದೈತ್ಯ ಕಂಸನ ಆಜ್ಞೆಯ ಕೇಳಿದ ಒಡನೆ,
ಇಪ್ಪತ್ತು ಅಕ್ಷೋಹಿಣಿ ಅವಿನಾಶಿ ಸೇನೆ,
ವಿಧ ವಿಧ ಅಸ್ತ್ರಗಳ ಧರಿಸಿದ ಆ ಬಲಶಾಲಿ ಸೈನಿಕರ ದಂಡು,
ರಾಮಕೃಷ್ಣರ ಆವರಿಸಿತು ಹೇಗೆ ಸಿಂಹನ ಸುತ್ತುವರೆದ ನರಿಹಿಂಡು.

ಜಾನನ್ನಪೀಶ್ವರಮನನ್ತಬಲಂ ಮಹೇನ್ದ್ರಃ ಕೃಷ್ಣಂ ರಥಂ ನಿಜಮಯಾಪಯದಾಯುಧಾಢ್ಯಮ್ ।
ಶುಶ್ರೂಷಣಾಯ ಪರಮಸ್ಯ ಯಥಾ ಸಮುದ್ರಮರ್ಘ್ಯೇಣ ಪೂರಯತಿ ಪೂರ್ಣ್ಣಜಲಂ ಜನೋsಯಮ್॥೧೩.೧೨೫॥
ಕೃಷ್ಣನನ್ನು ಅನಂತಬಲದ ಸರ್ವಸಮರ್ಥ ಎಂದು ತಿಳಿದರೂ ಇಂದ್ರ,
ದೇವಕಾರ್ಯಕ್ಕೆ ತನ್ನ ಆಯುಧಭರಿತ ರಥವ ಕಳಿಸಿದ ಪುರಂದರ.
ಇಂದ್ರನ ಈ ಸೇವೆ ಕಂಡದ್ದು ಹೀಗೆ,
ಸಮುದ್ರಕ್ಕೆ ಅರ್ಘ್ಯದಿಂದ ಅರ್ಚಿಸಿದ ಹಾಗೆ.
(ಕೆರೆಯ ನೀರನು ಕೆರೆಗೆ ಚೆಲ್ಲಿದ ಹಾಗೆ )



 ಸ್ವಸ್ಯನ್ದನಂ ತು ಭಗವಾನ್ ಸ ಮಹೇನ್ದ್ರದತ್ತಮಾರುಹ್ಯ ಸೂತವರಮಾತಲಿಸಙ್ಗೃಹೀತಮ್ ।
ನಾನಾಯುಧೋಗ್ರಕಿರಣಸ್ತರಣಿರ್ಯ್ಯಥೈವ ಧ್ವಾನ್ತಂ ವ್ಯನಾಶಯದಶೇಷತ ಆಶು ಸೈನ್ಯಮ್ ॥೧೩.೧೨೬॥
ಭಗವಂತ, ಅಗ್ರಗಣ್ಯಸಾರಥಿ ಮಾತಲಿಯಿಂದ ತರಲ್ಪಟ್ಟ ಆ ಇಂದ್ರರಥವನ್ನು ಏರಿ,
ಕಂಸನ ಸೈನ್ಯವ ನಾಶಮಾಡಿದ ಹೇಗೆ ಸೂರ್ಯ ಕತ್ತಲೋಡಿಸಿತ್ತಾನೋ ಉಗ್ರಕಿರಣ ಬೀರಿ. 

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 13: 117 - 122

ರಙ್ಗಪ್ರವಿಷ್ಟಮಭಿವೀಕ್ಷ್ಯ ಜಗಾದ ಮಲ್ಲಃ ಕಂಸಪ್ರಿಯಾರ್ತ್ಥಮಭಿಭಾಷ್ಯ ಜಗನ್ನಿವಾಸಮ್ ।
ಚಾಣೂರ ಇತ್ಯಭಿಹಿತೋ ಜಗತಾಮವದ್ಧ್ಯಃ ಶಮ್ಬುಪ್ರಸಾದತ ಇದಂ ಶೃಣು ಮಾಧವೇತಿ ॥೧೩.೧೧೭॥
 ರಂಗದ ಒಳಹೊಕ್ಕ ಕೃಷ್ಣಗೆ ಎದುರಾದನವನು  ಚಾಣೂರನೆಂಬ ಮಲ್ಲ,
ಕಂಸಪ್ರೀತಿಗೆ ಶಿವವರದಿ ಅವಧ್ಯನಾದವ ನುಡಿದ ಮಾಧವಾ ಕೇಳೆಂಬ ಸೊಲ್ಲ.
ಚಾಣೂರನಿಂದ ಮಾಧವಾ ಎಂಬ ಸಂಬೋಧನೆ,
ನೀನಾರೆಂದು ನಾವು ಗುರುತಿಸಿದ್ದೇವೆಂಬ ಸೂಚನೆ.

ರಾಜೈವ ದೈವತಮಿತಿ ಪ್ರವದನ್ತಿ ವಿಪ್ರಾ ರಾಜ್ಞಃ ಪ್ರಿಯಂ ಕೃತವತಃ ಪರಮಾ ಹಿ ಸಿದ್ಧಿಃ ।
ಯೋತ್ಸ್ಯಾವ ತೇನ ನೃಪತಿಪ್ರಿಯಕಾಮ್ಯಯಾssವಾಂ ರಾಮೋsಭಿಯುದ್ಧ್ಯತು ಬಲೀ ಸಹ ಮುಷ್ಟಿಕೇನ॥೧೩.೧೧೮॥
ರಾಜನೇ ದೇವತೆಯೆಂದು ಬ್ರಾಹ್ಮಣರು ಹೇಳಿಕೊಂಡು ಬಂದ ನೀತಿ,
ಅಂಥ ರಾಜನ ಮೆಚ್ಚಿಸಿದವರಿಗೆ ಉಂಟಾಗುತ್ತದೆ ಉತ್ಕೃಷ್ಟ ಪರಗತಿ.
ಆ ಕಾರಣದಿಂದ ನಾವಿಬ್ಬರು ಮಾಡೋಣ ಯುದ್ಧ,
ಬಲರಾಮ ಮುಷ್ಟಿಕನೊಂದಿಗೆ ಕಾದಲಾಗಲಿ ಸಿದ್ಧ.

ಇತ್ಯುಕ್ತ ಆಹ ಭಗವಾನ್ ಪರಿಹಾಸಪೂರ್ವಮೇವಂ ಭವತ್ವಿತಿ ಸ ತೇನ ತದಾsಭಿಯಾತಃ ।
ಸನ್ದರ್ಶ್ಯ ದೈವತಪತಿರ್ಯ್ಯುಧಿ ಮಲ್ಲಲೀಲಾಂ ಮೌಹೂರ್ತ್ತಿಕೀಮಥ ಪದೋರ್ಜ್ಜಗೃಹೇ ಸ್ವಶತ್ರುಮ್ ॥೧೩.೧೧೯॥
ಚಾಣೂರನ ಮಾತು ಕೇಳಿದ ಶ್ರೀಕೃಷ್ಣ ನಸುಗುತ್ತಾ ಅದಕ್ಕೆ ಒಪ್ಪಿದ,
ಒಂದು ಮುಹೂರ್ತ ಯುಧ್ಧಲೀಲೆ ತೋರಿ ಶತ್ರುವ ಕಾಲಲಿ ಹಿಡಿದ.




ಉತ್ಕ್ಷಿಪ್ಯ ತಂ ಗಗನಗಂ ಗಿರಿಸನ್ನಿಕಾಶಮುದ್ಭ್ರಾಮ್ಯ ಚಾಥ ಶತಶಃ ಕುಲಿಶಾಕ್ಷತಾಙ್ಗಮ್ ।
ಆವಿದ್ಧ್ಯ ದುರ್ದ್ಧರಬಲೋ ಭುವಿ ನಿಷ್ಪಿಪೇಷ ಚೂರ್ಣ್ಣೀಕೃತಃ ಸ ನಿಪಪಾತ ಯಥಾ ಗಿರೀನ್ದ್ರಃ ॥೧೩.೧೨೦॥
ಬೆಟ್ಟದಂತಿದ್ದ ಮಲ್ಲ ಚಾಣೂರನ ಕೃಷ್ಣ ಮೇಲೆತ್ತಿದ,
ಅಮಿತಬಲದ ಕೃಷ್ಣ ಅವನ ತಿರುಗಿಸಿ ನೆಲಕ್ಕಪ್ಪಳಿಸಿದ.
ಚಾಣೂರ ಬೆಟ್ಟ ನೆಲಕ್ಕೆ ಬಿದ್ದಂತೆ ಬಿದ್ದು ಪುಡಿಯಾದ.

ಕೃಷ್ಣಂ ಚ ತುಷ್ಟುವುರಥೋ ದಿವಿ ದೇವಸಙ್ಘಾ ಮರ್ತ್ತ್ಯಾ ಭುವಿ ಪ್ರವರಮುತ್ತಮಪೂರುಷಾಣಾಮ್ ।
ತದ್ವದ್ ಬಲಸ್ಯ ದೃಡಮುಷ್ಟಿನಿಪಿಷ್ಟಮೂರ್ದ್ಧಾ ಭ್ರಷ್ಟಸ್ತದೈವ ನಿಪಪಾತ ಸ ಮುಷ್ಟಿಕೋsಪಿ ॥೧೩.೧೨೧॥
ಆಗುತ್ತಿದ್ದಂತೆ ಚಾಣೂರನೆಂಬ ದುಷ್ಟ ಮಲ್ಲನ ನಿಗ್ರಹ,
ಶ್ರೀಕೃಷ್ಣನ ಹೊಗಳುತ್ತಾ ಸ್ತುತಿಸಿತು ದೇವತಾ ಸಮೂಹ.
ಸಾತ್ವಿಕ ಮನುಷ್ಯರಿಂದ ಉತ್ತಮೋತ್ತಮನ ಗುಣಗಾನ,
ಭುವಿಯಲ್ಲಿ ವಿಶೇಷ ಸ್ತುತಿಸಲ್ಪಟ್ಟ ಶ್ರೇಷ್ಠ ನಾರಾಯಣ.
ಹಾಗೆಯೇ ಮುಷ್ಟಿಕ ನಡೆಸಿದ್ದ ಬಲರಾಮನೊಂದಿಗೆ ಯುದ್ಧ,
ರಾಮನೇಟಿನಿಂದ ತಲೆಯೊಡೆದು ಗತಪ್ರಾಣನಾಗಿ ಬಿದ್ದ. 

ಕೂಟಶ್ಚ ಕೋಸಲ ಉತ ಚ್ಛಲನಾಮಧೇಯೋ ದ್ವೌ ತತ್ರ ಕೃಷ್ಣನಿಹತಾವಪರೋ ಬಲೇನ ।
ಕಂಸಸ್ಯ ಯೇ ತ್ವವರಜಾಶ್ಚ ಸುನೀಥಮುಖ್ಯಾಃ ಸರ್ವೇ ಬಲೇನ ನಿಹತಾಃ ಪರಿಘೇಣ ವೀರಾಃ ॥೧೩.೧೨೨॥
ಕೂಟ ಕೋಸಲರೆಂಬ ಮಲ್ಲರು ಕೃಷ್ಣನಿಂದಾದರು ಹತ,
ಛಲ ನಾಮಕ ದುಷ್ಟಮಲ್ಲನು ಬಲರಾಮನಿಂದಾದ ಮೃತ.
ಕಂಸನ ತಮ್ಮಂದಿರಾದ ಸುನೀಥ ಮೊದಲಾದವರು,
ಬಲರಾಮನ ಒನಕೆಏಟಿಗೆ ಬಲಿಯಾಗಿ ಸತ್ತು ಬಿದ್ದರು.

Wednesday, 21 August 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 13: 112 - 116

ಆಯನ್ ಜಗದ್ಗುರತಮೋ ಬಲಿನಂ ಗಜೇನ್ದ್ರಂ ರುದ್ರಪ್ರಸಾದಪರಿರಕ್ಷಿತಮಾಶ್ವಪಶ್ಯತ್ ।
ದೂಷ್ಟೋರುರಙ್ಗಮುಖಸಂಸ್ಥಿತಮೀಕ್ಷ್ಯ ಚೈಭ್ಯಂ ಪಾಪಾಪಯಾಹಿ ನಚಿರಾದಿತಿ ವಾಚಮೂದೇ ॥೧೩.೧೧೨॥
ರಂಗದತ್ತ ಬರುತ್ತಿರಲು ಜಗತ್ತಿಗೆ ಮಹಾಗುರುವಾದ ಶ್ರೀರಂಗನಾಥ,
ಕಂಡ ಬಾಗಿಲಲ್ಲಿ ರುದ್ರಾನುಗ್ರಹದ ಬಲಿಷ್ಠಆನೆ ಮತ್ತು ಅದರ ಮಾವುತ.
ಪಾಪಿಷ್ಟಾ ಬೇಗ ಆಚೆತೊಲಗು ಎಂದು ಹೇಳಿದನಾಗ ಜಗತ್ತಿನ ತಾತ.

ಕ್ಷಿಪ್ತಃ ಸ ಈಶ್ವರತಮೇನ ಗಿರೀಶಲಬ್ಧಾದ್ ದೃಪ್ತೋ ವರಾಜ್ಜಗತಿ ಸರ್ವಜನೈರವದ್ಧ್ಯಃ ।
ನಾಗಂ ತ್ವವದ್ಧ್ಯಮಭಿಯಾಪಯತೇ ತತೋsಗ್ರೇ ಪಾಪೋ ದುರನ್ತಮಹಿಮಂ ಪ್ರತಿ ವಾಸುದೇವಮ್ ॥೧೩.೧೧೩॥
ಆ ಮಾವುತನಾಗಿದ್ದ ಶಿವವರದಿಂದ ರಕ್ಷಿತ,
ಅವಧ್ಯ ಅಹಂಕಾರಿಯಾಗಿ ಮೆರೆದಿದ್ದನಾತ.
ಸರ್ವೇಶ್ವರ ಕೃಷ್ಣನಿಂದಾಗಿದ್ದನವ ತಿರಸ್ಕೃತ.
ಆನೆಯ ಸಾಗಿಸಿ ಕೃಷ್ಣನ ಕೊಲ್ಲಲೆಂದು ಪ್ರಚೋದಿತ.

ವಿಕ್ರೀಡ್ಯ ತೇನ ಕರಿಣಾ ಭಗವಾನ್ ಸ ಕಿಞ್ಚಿದ್ಧಸ್ತೇ ಪ್ರಗೃಹ್ಯ ವಿನಿಕೃಷ್ಯ ನಿಪಾತ್ಯ ಭೂಮೌ ।
ಕುಮ್ಭೇ ಪದಂ ಪ್ರತಿನಿಧಾಯ ವಿಷಾಣಯುಗ್ಮಮುತ್ಕೃಷ್ಯ ಹಸ್ತಿಪಮಹನ್ ನಿಪಪಾತ ಸೋsಪಿ ॥೧೩.೧೧೪॥
ಗುಣಶಾಲಿ ಕೃಷ್ಣ ಆನೆಯೊಡನಾಡಿದ ಸಣ್ಣ ಆಟ,
ನಂತರ ಸೊಂಡಿಲೆಳೆದು ಭೂಮಿಗೆ ಕೆಡವಿದ ನೋಟ.
ಅದರ ತಲೆಯಮೇಲೆ ಕಾಲಿಟ್ಟು ದಂತಗಳ ಹೊರಸೆಳೆದ,
ಆ ದಂತದಿಂದಲೇ ಮಾವುತಗೆ ಹೊಡೆದವನ ಜೀವ ಕಳೆದ.

ನಾಗಂ ಸಸಾದಿನಮವದ್ಧ್ಯಮಸೌ ನಿಹತ್ಯ  ಸ್ಕನ್ಧೇ ವಿಷಾಣಮವಸಜ್ಜ್ಯ ಸಹಾಗ್ರಜೇನ ।
ನಾಗೇನ್ದ್ರಸಾನ್ದ್ರಮದಬಿನ್ದುಭಿರಞ್ಚಿತಾಙ್ಗಃ ಪೂರ್ಣ್ಣಾತ್ಮಶಕ್ತಿರಮಲಃ ಪ್ರವಿವೇಶ ರಙ್ಗಮ್ ॥೧೩.೧೧೫॥
ಯಾರೂ ಕೊಲ್ಲಲಾಗದ ಮಾವುತ ಆನೆಯ ಕೃಷ್ಣ ಕೊಂದ,
ಅದರ ದಂತ ಹೆಗಲಲ್ಲಿಟ್ಟು ಅಣ್ಣನೊಂದಿಗೆ ತಾನು ನಡೆದ.
ಮೈಮೇಲಾಗಿತ್ತು ಗಜಶ್ರೇಷ್ಠದ ಗಟ್ಟಿಮದದ ಹನಿಗಳ ಸಿಂಚನ,
ಅಂಥಾ ಅಪೂರ್ವ ಅಂಗಾಂಗದವನಾಗಿ ರಂಗಕ್ಕಿಳಿದ ಶ್ರೀಕೃಷ್ಣ.

ವಿಷ್ಟೇ ಜಗದ್ಗುರುತಮೇ ಬಲವೀರ್ಯ್ಯಮೂರ್ತ್ತೌ ರಙ್ಗಂ ಮುಮೋದ ಚ ಶುಶೋಷ ಜನೋsಖಿಲೋsತ್ರ ।
ಕಞ್ಜಂ ತಥಾsಪಿ ಕುಮುದಂ ಚ ಯಥೈವ ಸೂರ್ಯ್ಯ ಉದ್ಯತ್ಯಜೇsನುಭವಿನೋ ವಿಪರೀತಕಾಶ್ಚ ॥೧೩.೧೧೬॥
ಜಗತ್ತು ಪಾಲನೆ ಮಾಡುವವರಲ್ಲೇ ಅತಿಶ್ರೇಷ್ಠ,
ಬಲ ವೀರ್ಯಗಳೇ ಮೈದಾಳಿದ ಮಹಾವಿಶಿಷ್ಟ.
ಮಾಡುತ್ತಿರಲವನು ರಂಗ ಪ್ರವೇಶ,
ಕೆಲವರಿಗಾಯಿತು ಬಲು ಸಂತೋಷ.
ಮತ್ತೆ ಕೆಲವರು ಒಣಗಿದರು ವಿಶೇಷ.
ಹೇಗೆ ಸೂರ್ಯೋದಯಕ್ಕೆ ಅರಳುವುದೋ ಕಮಲ,
ಹಾಗೇ ನೈದಿಲೆಗೆ ಮಾತ್ರ ಬಾಡಿಮುದುಡುವ ಕಾಲ.
[Contributed by Shri Govind Magal] 

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 13: 103 - 111

ಪೂರ್ಣ್ಣೇನ್ದುವೃನ್ದನಿವಹಾಧಿಕಕಾನ್ತಶಾನ್ತಸೂರ್ಯ್ಯಾಮಿತೋರುಪರಮದ್ಯುತಿಸೌಖ್ಯದೇಹಃ ।
ಪೀತಾಮ್ಬರಃ ಕನಕಭಾಸುರಗನ್ಧಮಾಲ್ಯಃ ಶೃಙ್ಗಾರವಾರಿಧಿರಗಣ್ಯಗುಣಾರ್ಣ್ಣವೋsಗಾತ್ ॥೧೩.೧೦೩ ॥
ಪೂರ್ಣಚಂದ್ರರ ಗುಂಪಿಗಿಂತಲೂ ಮಿಗಿಲಾದ ಬೆಳಕು,
ಸುಖಪೂರ್ಣ ಮನೋಹರ ಸೂರ್ಯಕಾಂತಿಯ ತಳಕು.
ಜಗದ ಸುಖವೇ ಮೈದಾಳಿ ಬಂದ,
ಹಳದಿ ಬಟ್ಟೆಯನುಟ್ಟು ಮೈಗೆಪೂಸಿದ ಗಂಧ.
ಹೂಮಾಲೆ ಧರಿಸಿಕೊಂಡ ಚೆಲುವಿನ ಸಮುದ್ರ,
ಮುನ್ನಡೆದ ತಾನು ಎಣೆಯಿರದ ಗುಣಸಾಂದ್ರ.

ಪ್ರಾಪ್ಯಾಥ ಚಾsಯುಧಗೃಹಂ ಧನುರೀಶದತ್ತಂ ಕೃಷ್ಣಃ ಪ್ರಸಹ್ಯ ಜಗೃಹೇ ಸಕಲೈರಭೇದ್ಯಮ್ ।
ಕಾಂಸಂ ಸ ನಿತ್ಯಪರಿಪೂರ್ಣ್ಣಸಮಸ್ತಶಕ್ತಿರಾರೋಪ್ಯ ಚೈನಮನುಕೃಷ್ಯ ಬಭಞ್ಜ ಮದ್ಧ್ಯೇ ॥೧೩.೧೦೪ ॥
ಆನಂತರ ಆಯುಧಶಾಲೆಗೆ ನುಗ್ಗಿದ,
ರುದ್ರದತ್ತ ಭಾರೀ ಬಿಲ್ಲನ್ನು ಕೃಷ್ಣ ಎತ್ತಿದ.
ಕಂಸನಿಗೆ ಶಿವನಿಂದ ಕೊಡಲ್ಪಟ್ಟ ಬಿಲ್ಲಾಗಿತ್ತದು ಅಭೇದ್ಯ,
ಸರ್ವಜ್ಞ ಸರ್ವಶಕ್ತ ನಾರಾಯಣ ಬಗ್ಗಿಸಿ ಅದನ್ನು ಮುರಿದ.

ತಸ್ಮಿನ್ ಸುರಾಸುರಗಣೈರಖಿಲೈರಭೇದ್ಯೇ ಭಗ್ನೇ ಬಭೂವ ಜಗದಣ್ಡವಿಭೇದಭೀಮಃ ।
ಶಬ್ದಃ ಸ ಯೇನ ನಿಪಪಾತ ಭುವಿ ಪ್ರಭಗ್ನಸಾರೋsಸುರೋ ಧೃತಿಯುತೋsಪಿ ತದೈವ ಕಂಸಃ॥೧೩.೧೦೫॥
ಧನುಸ್ಸದು ದೇವತೆಗಳಿಂದ ದೈತ್ಯಗಣದಿಂದ ಅಭೇದ್ಯ,
ಮುರಿಯುತ್ತಿದ್ದಂತೆ ಬಂತು ಜಗತ್ತೇ ತುಂಡಾದಂಥ ಶಬ್ದ.
ಆ ಶಬ್ದ ಧೈರ್ಯಶಾಲೀ ಕಂಸನ ಕಿವಿಗೆ ಬಿತ್ತು,
ಸಿಂಹಾಸನದಿಂದ ಕೆಳಗೆ ಬಿದ್ದವನ ಶಕ್ತಿ ಉಡುಗಿತ್ತು.

ಆದಿಷ್ಟಮಪ್ಯುರು ಬಲಂ ಭಗವಾನ್ ಸ ತೇನ ಸರ್ವಂ ನಿಹತ್ಯ ಸಬಲಃ ಪ್ರಯಯೌ ಪುನಶ್ಚ ।
ನನ್ದಾದಿಗೋಪಸಮಿತಿಂ ಹರಿರತ್ರ ರಾತ್ರೌ ಭುಕ್ತ್ವಾ ಪಯೋsನ್ವಿತಶುಭಾನ್ನಮುವಾಸ ಕಾಮಮ್ ॥೧೩.೧೦೬॥
ಕೃಷ್ಣ ಕಂಸ ಕಳಿಸಿದ ಮಹಾನ್ ಸೈನ್ಯವನು ಕೊಂದ,
ಮುರಿದ ಬಿಲ್ಲಿಂದ ಅಣ್ಣನೊಡಗೂಡಿ ಬಂದವರ ಬಡಿದ.
ನಂತರ ನಂದಾದಿಗಳು ಇರುವ ಸ್ಥಳಕ್ಕೆ ತೆರಳಿದ,
ಹಾಲನ್ನವನುಂಡು ಆ ರಾತ್ರಿ ಅಲ್ಲೇ ವಿರಮಿಸಿದ.

ಕಂಸೋsಪ್ಯತೀವ ಭಯಕಮ್ಪಿತಹೃತ್ಸರೋಜಃ ಪ್ರಾತರ್ನ್ನರೇನ್ದ್ರಗಣಮದ್ಧ್ಯಗತೋsಧಿಕೋಚ್ಚಮ್ ।
ಮಞ್ಚಂ ವಿವೇಶ ಸಹ ಜಾನಪದೈಶ್ಚ ಪೌರೈರ್ನ್ನಾನಾsನುಮಞ್ಚಕಗತೈರ್ಯ್ಯುವತೀಸಮೇತೈಃ ॥೧೩.೧೦೭॥
ಮಾರನೇ ಬೆಳಿಗ್ಗೆ ಬೇರೆಬೇರೆ ಆಸನಗಳಲ್ಲಿ ಸಪತ್ನೀಕರಾಗಿ ದೇಶವಾಸಿಗಳು ಕುಳಿತಿರಲು,
ಆ ಸಮೂಹದ ಮಧ್ಯೆ ಎತ್ತರದ ಆಸನದಲ್ಲಿ ಕುಳಿತ ಕಂಸನ ಎದೆಯಲ್ಲಿ ತೀರದ ದಿಗಿಲು.

ಸಂಸ್ಥಾಪ್ಯ ನಾಗಮುರುರಙ್ಗಮುಖೇ ಕುವಲ್ಯಾಪೀಡಂ ಗಿರೀನ್ದ್ರಸದೃಶಂ ಕರಿಸಾದಿಯುಕ್ತಮ್ ।
ಚಾಣೂರಮುಷ್ಟಿಕಮುಖಾನಪಿ ಮಲ್ಲವೀರಾನ್ ರಙ್ಗೇ ನಿಧಾಯ ಹರಿಸಂಯಮನಂ ಕಿಲೈಚ್ಛತ್ ॥೧೩.೧೦೮॥
ಪ್ರವೇಶ ಮಾಡುವ (ಕ್ರೀಡಾಂಗಣದ)ರಂಗದ ಮುಖ್ಯ ಬಾಗಿಲು,
ಮಾವುತನೊಡಗೂಡಿದ ಕುವಲ್ಯಾಪೀಡನೆಂಬಾನೆಯ ಕಾವಲು.
ರಂಗದ ಒಳಗೆ ಚಾಣೂರ ಮುಷ್ಟಿಕ ಮುಂತಾದ ಮಲ್ಲರು,
ಇವರನ್ನೆಲ್ಲಾ ಇಟ್ಟು ಹರಿಯ ನಿಗ್ರಹಿಸುವ ಕಂಸನ ಹುನ್ನಾರು.

ಅಕ್ಷೋಹಿಣೀಗಣಿತಮಸ್ಯ ಬಲಂ ಚ ವಿಂಶದಾಸೀದಸಹ್ಯಮುರುವೀರ್ಯ್ಯಮನನ್ಯವದ್ಧ್ಯಮ್ ।
ಶಮ್ಭೋರ್ವರಾದಪಿ ಚ ತಸ್ಯ ಸುನೀಥನಾಮಾ ಯಃ ಪೂರ್ವಮಾಸ ವೃಕ ಇತ್ಯಸುರೋsನುಜೋsಭೂತ್ ॥೧೩.೧೦೯॥
ರುದ್ರವರದಿಂದ ಬಲಿಷ್ಠವಾದ ಕಂಸನ ಇಪ್ಪತ್ತು ಅಕ್ಷೋಹಿಣಿ ಸೇನೆ,
ಸೇನಾಧಿಪತಿಯಾಗಿದ್ದವನು ಕಂಸನ ತಮ್ಮನಾದ ಸುನೀಥ ನಾಮಕನೆ.
ಆ ಸುನೀಥ, ಹಿಂದೆ ವ್ರಕಾಸುರ/ಭಸ್ಮಾಸುರ ಎಂಬ ಅಸುರನಾಗಿದ್ದವನೇ.

ಸಪ್ತಾನುಜಾ ಅಪಿ ಹಿ ತಸ್ಯ ಪುರಾತನಾ ಯೇ ಸರ್ವೇsಪಿ ಕಂಸಪೃತನಾಸಹಿತಾಃ ಸ್ಮ ರಙ್ಗೇ ।
ತಸ್ಥುಃ ಸರಾಮಮಭಿಯಾನ್ತಮುದೀಕ್ಷ್ಯ ಕೃಷ್ಣಮಾತ್ತಾಯುಧಾ ಯುಧಿ ವಿಜೇತುಮಜಂ ಸುಪಾಪಾಃ ॥೧೩.೧೧೦॥
ಸುನೀಥನಿಗೆ ಪೂರ್ವಜನ್ಮದಲ್ಲಿ ಸಹೋದರರಾಗಿದ್ದವರು ಏಳು ಜನ,
ಈ ಜನ್ಮದಲ್ಲಿ ಮತ್ತೆ ಸಹೋದರರಾಗಿ ಸೇರಿದ್ದರು ಕಂಸನ ಸೇನ.
ಅವರು ಮೂಲತಃ ದುಷ್ಟರು-ಆಯುಧ ಹಿಡಿದ ಪಾಪಿಷ್ಠರು,
ರಾಮನೊಡನೆ ಬರುತ್ತಿದ್ದ ಹುಟ್ಟಿರದಕೃಷ್ಣನ ಕೊಲ್ಲಲು ನಿಂತಿದ್ದರು.




ಕೃಷ್ಣೋsಪಿ ಸೂರ ಉದಿತೇ ಸಬಲೋ ವಯಸ್ಯೈಃ ಸಾರ್ದ್ಧಂ ಜಗಾಮ ವರರಙ್ಗಮುಖಂ ಸುರೇಶೈಃ ।
ಸಂಸ್ತೂಯಮಾನ ಉರುವಿಕ್ರಮ ಆಸುರಾಣಾಂ ನಿರ್ಮ್ಮೂಲನಾಯ ಸಕಳಾಚಲಿತೋರುಶಕ್ತಿಃ ॥೧೩.೧೧೧॥
ಮುಂದಿನ ಸೂರ್ಯೋದಯವಾಗುತ್ತಿದ್ದಂತೆ,
ಅಮಿತ ಶಕ್ತಿಯ ಕೃಷ್ಣರಾಮರು ರಂಗಕ್ಕೆ ಹೊರಟರಂತೆ.
ಗೆಳೆಯರೊಂದಿಗೆ ಕೂಡಿಕೊಂಡು ಅಸುರವಿನಾಶದ ಉದ್ದೇಶ,
ಹೊರಟ ರಂಗಕ್ಕೆ ಸಮಸ್ತ ದೇವತೆಗಳಿಂದ ಸ್ತುತಿಸಲ್ಪಟ್ಟ ಸರ್ವೇಶ.