Sunday, 20 December 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 20: 72 - 82

 ತಯೋಕ್ತೋsಹಂ ನಾವತಾರೇಷು ಕಶ್ಚಿದ್ ವಿಶೇಷ ಇತ್ಯೇವ ಯದುಪ್ರವೀರಮ್ ।

ಸರ್ವೋತ್ತಮೋsಸೀತ್ಯವದಂ ಸ ಚಾsಹ ನ ಕೇವಲಂ ಮೇsಙ್ಕಗಾಯಾಃ ಶ್ರಿಯೋsಹಮ್ ॥೨೦.೭೨॥

ಸದೋತ್ತಮಃ ಕಿನ್ತು ಯದಾ ತು ಸಾ ಮೇ ವಾಮಾರ್ದ್ಧರೂಪಾ ದಕ್ಷಿಣಾನಾಮಧೇಯಾ ।

ಯಸ್ಮಾತ್ ತಸ್ಯಾ ದಕ್ಷಿಣತಃ ಸ್ಥಿತೋsಹಂ ತಸ್ಮಾನ್ನಾಮ್ನಾ ದಕ್ಷಿಣೇತ್ಯೇವ ಸಾ ಸ್ಯಾತ್ ॥೨೦.೭೩ ॥

ಹೀಗೆ ಯಜ್ಞನಾಮಕ ಲಕ್ಷ್ಮೀದೇವಿ ನನಗೆ (ನಾರದರಿಗೆ)ಹೇಳಿದಳು,

ಕೃಷ್ಣ ಉತ್ಕೃಷ್ಟನೆಂದೆ ಸಿದ್ಧವಾದ್ದರಿಂದ ಭೇದವಿಲ್ಲವನ ಅವತಾರಗಳು.

ಕೃಷ್ಣನೆಂದ-ಕೇವಲ ನನ್ನ ತೊಡೆಯಲ್ಲಿರುವ ಲಕ್ಷ್ಮೀಯಿಂದ ನಾನಲ್ಲ ಉತ್ಕೃಷ್ಟ,

ಅವಳ ಬಲಕ್ಕೆ ನಾನಿದ್ದು ದಕ್ಷಿಣಾ ನಾಮಕಳಾಗಿ ಎಡದಲ್ಲಾಗಿದ್ದಾಳೆ ಆವಿಷ್ಟ.

 

ಸಾ ದಕ್ಷಿಣಾಮಾನಿನೀ ದೇವತಾ ಚ ಸಾ ಚ ಸ್ಥಿತಾ ಬಹುರೂಪಾ ಮದರ್ದ್ಧಾ ।

ವಾಮಾರ್ದ್ಧೋ ಮೇ ತತ್ಪ್ರವಿಷ್ಟೋ ಯತೋ ಹಿ ತತೋsಹಂ ಸ್ಯಾಮರ್ದ್ಧನಾರಾಯಣಾಖ್ಯಃ ॥೨೦.೭೪॥

ಯಜ್ಞ ದಕ್ಷಿಣೆ, ವೇದಜ್ಞಾನಕ್ಕೆ ಅಭಿಮಾನಿನಿಯಾಗಿ  ಇರುವಳು ಲಕ್ಷ್ಮೀ,

ಬಹುರೂಪದಿಂದ ನಾರಾಯಣನರ್ಧ ರೂಪದಿಂದ ಆಗಿದ್ದಾಳೆ ಸಾಕ್ಷಿ.

ನನ್ನ ಎಡಭಾಗ ಅವಳಲ್ಲಿ ಪ್ರವೇಶ ಹೊಂದಿದ ಕಾರಣ,

ನನಗೆ ಆ ಹೆಸರು ಪ್ರಸಿದ್ಧವಾಗಿದೆ ಅರ್ಧನಾರಾಯಣ.

 

ತದಾsಪ್ಯಸ್ಯಾ ಉತ್ತಮೋsಹಂ ಸುಪೂರ್ಣ್ಣೋ ನ ಮಾದೃಶಃ ಕಶ್ಚಿದಸ್ತ್ಯುತ್ತಮೋ ವಾ ।

ಇತ್ಯೇವಾವಾದೀದ್ ದಕ್ಷಿಣಾಭಿಃ ಸಹೇತಿ ಸರ್ವೋತ್ತಮತ್ವಂ ದಕ್ಷಿಣಾನಾಂ ಸ್ಮರನ್ತ್ಸಃ ॥೨೦.೭೫॥

ಆಗಲೂ ಕೂಡಾ ನಾನವಳಿಂದ ಉತ್ಕೃಷ್ಟ -ಪರಿಪೂರ್ಣ,

ಯಾರೂ ಸಮ ಮಿಗಿಲಿಲ್ಲವೆಂದನವ ಶ್ರೀಮನ್ನಾರಾಯಣ.

 

ತಾಭಿಶ್ಚೈತಾಭಿರ್ದ್ದಕ್ಷಿಣಾಭಿಃ ಸಮೇತಾದ್ ವರಿಷ್ಠೋsಹಂ ಜಗತಃ ಸರ್ವದೈವ ।

ಮತ್ಸಾಮರ್ತ್ಥ್ಯಾನ್ನೈವ  ಚಾನನ್ತಭಾಗೋ ದಕ್ಷಿಣಾನಾಂ ವಿದ್ಯತೇ ನಾರದೇತಿ ॥೨೦.೭೬॥

ನಾರದಾ, ದಕ್ಷಿಣೆಯ ಎಲ್ಲಾ ರೂಪಗಳ ಈ ಜಗತ್ತಿನಿಂದ ನಾ ಯಾವಾಗಲೂ ಉತ್ತಮ,

ನನ್ನ ಶಕ್ತಿ ಸಾಮರ್ಥ್ಯದ ಅನಂತಭಾಗದ ಒಂದಂಶ ಕೂಡಾ ದಕ್ಷಿಣೆಯಾಗಲಾರಳು ಸಮ.

 

ಉಕ್ತಂ ಕೃಷ್ಣೇನಾಪ್ರತಿಮೇನ ಭೂಪಾ ಅನ್ಯೋತ್ತಮತ್ವಂ ದಕ್ಷಿಣಾನಾಂ ಚ ಶಶ್ವತ್ ।

ಸೇಯಂ ಭೈಷ್ಮೀ ದಕ್ಷಿಣಾ ಕೇಶವೋsಯಂ ತಸ್ಯಾಃ ಶ್ರೇಷ್ಠಃ ಪಶ್ಯತ ರಾಜಸಙ್ಘಾಃ ॥೨೦.೭೭॥

ಇದು ಶ್ರೀಕೃಷ್ಣ ಹೇಳಿದ ಮಾತು ಎಂದು ಹೇಳಿದರು  ಮುನಿ ನಾರದ,

ಸಮನಿರದವ ಕೃಷ್ಣನಾದರೂ ಉಳಿದವರಿಗಿಂತ ಲಕ್ಷ್ಮೀ ಮೇಲು ಸದಾ.

ರಾಜರೇ ಈ ರುಗ್ಮಿಣಿಯೇ ದಕ್ಷಿಣಾ,

ಈ ನಮ್ಮ ಕೃಷ್ಣನೇ ಆ ನಾರಾಯಣ.

 

ಪ್ರತ್ಯಕ್ಷಂ ವೋ ವೀರ್ಯ್ಯಮಸ್ಯಾಪಿ ಕುನ್ತ್ಯಾ ಯುಧೇsರ್ತ್ಥಿತಃ ಕೇಶವೋ ವೀರ್ಯ್ಯಮಸ್ಯೈ ।

ಅದರ್ಶಯತ್ ಪಾಣ್ಡವಾನ್ ಧಾರ್ತ್ತರಾಷ್ಟ್ರಾನ್ ಭೀಷ್ಮದ್ರೋಣದ್ರೌಣಿಕೃಪಾನ್ ಸಕರ್ಣ್ಣಾನ್ ।

ನಿರಾಯುಧಾಂಶ್ಚಕ್ರ ಏಕಃ ಕ್ಷಣೇನ ಲೋಕಶ್ರೇಷ್ಠಾನ್ ದೈವತೈರಪ್ಯಜೇಯಾನ್ ॥೨೦.೭೮॥

ಇವನ ಶಕ್ತಿ ವೀರ್ಯ ನಿಮಗೇ ಪ್ರತ್ಯಕ್ಷ ಪ್ರಮಾಣ,

ಕುಂತಿಯಿಂದವಗೆ ಬರಲು ಯುದ್ಧಕ್ಕಾಗಿ ಪ್ರಾರ್ಥನ,

ಕೃಷ್ಣ ಮಾಡಿದ ಕುಂತಿಗಾಗಿ --ತನ್ನ ಬಲಪ್ರದರ್ಶನ.

ಪಾಂಡವರು ಕೌರವರು ಭೀಷ್ಮ ದ್ರೋಣ ಅಶ್ವತ್ಥಾಮ ಕೃಪಾಚಾರ್ಯ ಕರ್ಣ ಮುಂತಾದ ಲೋಕವೀರರು,

ಸರ್ವೋತ್ತಮ ಸರ್ವಶಕ್ತ ಕೃಷ್ಣಪರಮಾತ್ಮನಿಂದ ಒಂದೇ ಕ್ಷಣದಲ್ಲಿ ಸೋತು ಹೋಗಿ ಆದರವರು ನಿರಾಯುಧರು.

 

ವ್ರತಂ ಭೀಮಸ್ಯಾಸ್ತಿ ನೈವಾಭಿ ಕೃಷ್ಣಮಿಯಾಮಿತಿ ಸ್ಮಾsಜ್ಞಯಾ ತಸ್ಯ ವಿಷ್ಣೋಃ ।

ಚಕ್ರಂ ರಥಸ್ಯಾಗ್ರಹೀತ್ ಸಃ ಪ್ರಣಮ್ಯ ಕೃಷ್ಣಂ ಸ ತಂ ಕೇಶವೋsಪಾಹರಚ್ಚ ॥೨೦.೭೯॥

ಕೃಷ್ಣನ ಎಂದೂ ಎದುರಿಸಲಾರೆ ಇದು ಭೀಮಸೇನನ ವ್ರತ,

ಕೃಷ್ಣನಾಜ್ಞೆಯಂತೆ ಭೀಮ ನಮಸ್ಕರಿಸಿ ರಥಚಕ್ರ ಹಿಡಿದು ನಿಂತ.

ಅವನನ್ನು ತಳ್ಳಿ ಮುಂದೆ ಯುದ್ಧಕೆಂದು ಹೊರಟ ದೇವಕೀಸುತ.

 

ಏವಂ ಕ್ರೀಡನ್ತೋsಪ್ಯಾತ್ಮಶಕ್ತ್ಯಾ ಪ್ರಯತ್ನಂ ಕುರ್ವನ್ತಸ್ತೇ ವಿಜಿತಾಃ ಕೇಶವೇನ ।

ತತಃ ಸರ್ವೇ ನೇಮುರಸ್ಮೈ ಪೃಥಾ ಚ ಸವಿಸ್ಮಯಾ ವಾಸುದೇವಂ ನನಾಮ ॥೨೦.೮೦॥

ಎಲ್ಲ ರಾಜರ ಕ್ರೀಡೆಯಲ್ಲಿತ್ತು ಪೂರ್ಣಬಲದ ಪ್ರಯತ್ನ,

ಕೃಷ್ಣನಿಂದ ಸೋತು ಕೃಷ್ಣಗೆ ಮಾಡಿದರೆಲ್ಲ ನಮನ.

ಕುಂತಿಯಿಂದಲೂ ಆಯ್ತು ಕೃಷ್ಣಗೆ ಅಚ್ಚರಿಯ ನಮನ.

 

ಏವಂವಿಧಾನ್ಯದ್ಭುತಾನೀಹ ಕೃಷ್ಣೇ ದೃಷ್ಟಾನಿ ವಃ ಶತಸಾಹಸ್ರಶಶ್ಚ ।

ತಸ್ಮಾದೇಷ ಹ್ಯದ್ಭುತೋsತ್ಯುತ್ತಮಶ್ಚೇತ್ಯುಕ್ತಾ ನೇಮುಸ್ತೇsಖಿಲಾ ವಾಸುದೇವಮ್ ॥೨೦.೮೧॥

ಈ ಥರದ ಅದ್ಭುತಗಳು ಕೃಷ್ಣನಲ್ಲಿ ಅನಂತ,

ಹಾಗಾಗಿ ಇವನು ಅತ್ಯುತ್ತಮ -ಅತ್ಯದ್ಭುತ.

ಕೇಳಿದ ರಾಜರಿಂದ ಭಗವಂತನಾದ ನಮಸ್ಕೃತ.

 

ವಾಯ್ವಾಜ್ಞಯಾ ವಾಯುಶಿಷ್ಯಃ ಸ ಸತ್ಯಮಿತ್ಯಾದ್ಯುಕ್ತ್ವಾ ನಾರದೋ ರುಗ್ಮಿಣೀಂ ಚ ।

ಸ್ತುತ್ವಾ ಪುಷ್ಪಂ ಪಾರಿಜಾತಸ್ಯ ದತ್ವಾ ಯಯೌ ಲೋಕಂ ಕ್ಷಿಪ್ರಮಬ್ಜೋದ್ಭವಸ್ಯ ॥೨೦.೮೨॥

ವಾಯುದೇವರ ಆಜ್ಞಾನುಸಾರ,

ಅವರ ಶಿಷ್ಯ ನಾರದರ ವ್ಯಾಪಾರ.

ಕೃಷ್ಣ ಹಿರಿಮೆಯನ್ನು' ಇದು ಸತ್ಯಾ' ಎಂದ,

ರುಗ್ಮಿಣಿಗೆ ಪಾರಿಜಾತ ಕೊಟ್ಟು ಸ್ತುತಿ ಮಾಡಿದ,

ಆ ಕೂಡಲೇ ಬ್ರಹ್ಮಲೋಕದೆಡೆಗೆ ತೆರಳಿದ.

Saturday, 19 December 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 20: 67 - 71

 

ಕೂರ್ಮ್ಮೋ ದೃಷ್ಟೋ ವಿಷ್ಣುಪದ್ಯಾಂ ಮಯೋಕ್ತಸ್ತ್ವಮುತ್ತಮೋ ನಾಸ್ತಿ ಸಮಸ್ತವೇತಿ ।

ಊಚೇ ಗಙ್ಗಾಮುತ್ತಮಾಂ ಸಾ ಜಲೇಶಮುಮಾಮೂಚೇ ಪೃಥಿವೀನಾಮಿಕಾಂ ಸಃ ॥೨೦.೬೭॥

ಯಾ ಮಾದೃಶಾ ದೇವತಾಃ ಸರ್ವಶಸ್ತಾ ಧೃತಾಸ್ತಯಾ ಪ್ರಥಿತತ್ವಾತ್ ಪೃಥಿವ್ಯಾ ।

ಶಿವಂ ಶೇಷಂ ಗರುಡಂ ಚಾsಹ ಸಾsಪಿ ಪರವಾನಾತ್ ಪರ್ವತನಾಮಧೇಯಾನ್ ॥೨೦.೬೮॥

ತೈರೇವಾಹಂ ಮತ್ಸಮಾಶ್ಚೈವ ದೇವ್ಯೋ ಧ್ರಿಯನ್ತ ಇತ್ಯೇವ ತ ಊಚಿರೇsಥ ।

ಬ್ರಹ್ಮಾಣಮೇವೋತ್ತಮಮಾಹ ಸೋsಪಿ ವೇದಾತ್ಮಿಕಾಂ ಪ್ರಕೃತಿಂ ವಿಷ್ಣುಪತ್ನೀಮ್ ॥೨೦.೬೯॥

ಸೈಕಾ ದೇವೀ ಬಹುರೂಪಾ ಬಭಾಷೇ ಯುಕ್ತಾ ಯದಾsಹಂ ಜ್ಞೇನ ನಾರಾಯಣೇನ ।

ಯಜ್ಞಕ್ರಿಯಾಮಾನಿನೀ ಯಜ್ಞನಾಮ್ನೀ ತದೋತ್ತಮಾ ತತ್ಪ್ರವೇಶಾತ್ ತದಾಖ್ಯಾ ॥೨೦.೭೦॥

ನಾರದರೆಂದರು-ನಾನು ಗಂಗೆಯಲ್ಲಿ ದೊಡ್ಡ ಕೂರ್ಮವೊಂದನ್ನು ಕಂಡೆ,

ಅದಕ್ಕೆ, ನೀನು ಉತ್ಕೃಷ್ಟ ಉತ್ತಮ ನಿನಗೆ ಸಮರಾದವರಾರಿಲ್ಲ ಎಂದೆ.

ಆಗ ಕೂರ್ಮ ಗಂಗೆ ಉತ್ತಮ ಎಂದ,

ವರುಣ ಶ್ರೇಷ್ಠವೆಂಬ ಮಾತು ಗಂಗೆಯಿಂದ.

ವರುಣ ಪೃಥಿವೀನಾಮಕ ಉಮೆ ಉತ್ತಮಳೆoದ.

ಉಮೆಯೆಂದಳು----ಶಿವ ಶೇಷ ಗರುಡರು ಉತ್ತಮರು,

ಪರ್ವತವಾಗಿ ಉಮೆ ವಾರುಣಿ ಸುಪರ್ಣಿಯರ ಧರಿಸಿರುವರು.

ಗರುಡ ಶೇಷ ರುದ್ರರೆಂದರು-ಬ್ರಹ್ಮದೇವನೇ  ಉತ್ತಮ,

ಬ್ರಹ್ಮನೆಂದ-ವೇದಾಭಿಮಾನಿ ವಿಷ್ಣುಪತ್ನಿ ರಮೆ ಉತ್ತಮ.

ರಮೆ ಒಬ್ಬಳಾದರೂ ಬಹಳ ರೂಪದವಳಾಗಿ ಹೇಳಿದಳು,

ನಾನು ಸರ್ವಜ್ಞನಿಂದ ಕೂಡಿ ಯಜ್ಞಾಭಿಮಾನಿ ಆದವಳು.

ಭಗವದ್ ಪ್ರವೇಶದಿಂದ ಯಜ್ಞಾ ನಾಮದಿಂದ ಉತ್ಕೃಷ್ಟ,

ಇದರೆಲ್ಲರ ಹಿಂದಿರುವ ನಾರಾಯಣನೇ ಸರ್ವೋತ್ಕೃಷ್ಟ.

(ಈ ಕತೆಯಲ್ಲಿ ಹೇಳಿರುವ ಯಾರೂ ಯಾವುದೂ ಜಡ ಪದಾರ್ಥವಲ್ಲ,

ಅಭಿಮಾನಿ ದೇವತೆಗಳು ಅವರ ಅಂತರ್ಯಾಮಿ ಹರಿ ಎಂಬ ಸೊಲ್ಲ.) 

 

ವಿಷ್ಣ್ವಾವಿಷ್ಟಾ ಯಜ್ಞನಾಮ್ನೀ ತದಙ್ಕಸ್ಥಿತಾ ಸೋಚೇ ಕೇಶವೋ ಹ್ಯುತ್ತಮೋsಲಮ್ ।

ನ ತತ್ಸಮಶ್ಚಾಧಿಕೋsತಃ ಕುತಃ ಸ್ಯಾದೃಷೇ ಸತ್ಯಂ ನಾನ್ಯಥೇತಿ ಸ್ಮ ಭೂಯಃ ॥೨೦.೭೧॥

ವಿಷ್ಣು ಆವೇಶದಿಂದ ಯಜ್ಞ ನಾಮದಿಂದ ಅವನ ತೊಡೆ ಮೇಲೆ ಕುಳಿತವಳು,

ರಮೆಯೆಂದಳು ಕೇಶವಗೆ ಸಮರಿಲ್ಲ, ಮುನಿಯೇ ಸತ್ಯ ಅವನೇ ಎಲ್ಲಕೂ ಮಿಗಿಲು.

[1] ಕಠೋಪನಿಷತ್ತಿನ ವಿವರಣೆಯನ್ನು ಓದುಗರು ಇಲ್ಲಿ ಕಾಣಬಹುದು: https://kathopanishat.blogspot.com

[Contributed by Shri Govind Magal]

Friday, 18 December 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 20: 63 - 66

 ಏವಂ ಕೃಷ್ಣೇ ದ್ವಾರಕಾಮದ್ಧ್ಯಸಂಸ್ಥೇ ಗಿರಿಂ ಭೂಪಾ ರೈವತಕಂ ಸಮಾಯಯುಃ ।

ದುರ್ಯ್ಯೋಧನಾದ್ಯಾಃ ಪಾಣ್ಡವಾಶ್ಚೈವ ಸರ್ವೇ ನಾನಾದೇಶ್ಯಾ ಯೇ ಚ ಭೂಪಾಲಸಙ್ಘಾಃ ॥೨೦.೬೩॥

ಹೀಗೆ ದ್ವಾರಕೆಯ ಮಧ್ಯದಿ ಶ್ರೀಕೃಷ್ಣ ಇರಲು,

ರಾಜರಾದ ದುರ್ಯೋಧನಾದಿಗಳು ಬರಲು,

ಪಾಂಡವರು ಇತರ ದೇಶದ ರಾಜ ಸಮೂಹ ಕೂಡಾ,

ರೈವತ ಕ್ರೀಡಾಪರ್ವತ ಕುರಿತು ಸಾಗಿಬಂದರು ನೋಡಾ.

 

 

ಆತ್ಮಾನಂ ತಾನ್ ದ್ರಷ್ಟುಮಭ್ಯಾಗತಾನ್ ಸ ಕೃಷ್ಣೋ ಗಿರೌ ರೈವತಕೇ ದದರ್ಶ ।

ನಮಸ್ಕೃತೇ ಸರ್ವನರೇನ್ದ್ರಮುಖ್ಯೈಃ ಕೃಷ್ಣೇ ವೈದರ್ಭ್ಯಾ ಸಹ ದಿವ್ಯಾಸನಸ್ಥೇ ॥೨೦.೬೪॥

ಏತ್ಯಾsಕಾಶಾನ್ನಾರದಃ ಕೃಷ್ಣಮಾಹ ಸರ್ವೋತ್ತಮಸ್ತ್ವಂ ತ್ವಾದೃಶೋ ನಾಸ್ತಿ ಕಶ್ಚಿತ್ ।

ಇತ್ಯಾಶ್ಚರ್ಯ್ಯೋ ಧನ್ಯ ಇತ್ಯೇವ ಶಬ್ದದ್ವಯೇ ತೂಕ್ತೇ ವಾಸುದೇವಸ್ತಮಾಹ ॥೨೦.೬೫॥

ದಕ್ಷಿಣಾಭಿಃ ಸಾಕಮಿತ್ಯೇವ ಕೃಷ್ಣಂ ಪಪ್ರಚ್ಛುರೇತತ್ ಕಿಮಿತಿ ಸ್ಮ ಭೂಪಾಃ ।

ನಾರಾಯಣೋ ಮುನಿಮೂಚೇ ವದೇತಿ  ಶೃಣುಧ್ವಮಿತ್ಯಾಹ ಸ ನಾರದೋsಪಿ ॥೨೦.೬೬॥

ತನ್ನ ನೋಡಲು ಬಂದ ಪಾಂಡವಾದಿ ರಾಜರನ್ನು,

ಶ್ರೀಕೃಷ್ಣಪರಮಾತ್ಮ ರೈವತ ಪರ್ವತದಲ್ಲಿ ಕಂಡನು.

ಎಲ್ಲಾ ಶ್ರೇಷ್ಠ ರಾಜರುಗಳು ಮಾಡುತ್ತಿರಲು ನಮಸ್ಕಾರ,

ರುಗ್ಮಿಣೀಸಮೇತ ದಿವ್ಯಾಸನದಿ ಕುಳಿತಿದ್ದ ಮಂದರಧರ.

ಆಕಾಶದಿಂದಿಳಿದ ನಾರದ ಮುನಿಗಳು ಕೃಷ್ಣನ ಬಳಿಗೆ ಸಾರಿ ಬಂದು,

ಅಂದರು-ನೀ ಸರ್ವೋತ್ತಮ,ನಿನಗೆ ಸಮರಿಲ್ಲ -ನೀನು ಆಶ್ಚರ್ಯ,ಧನ್ಯ ಎಂದು.

ಹೀಗೆ ನಾರದರ ಬಾಯಿಂದ ಆ ಎರಡು ಶಬ್ದಗಳು ಬಂದಾಗ,

ವಾಸುದೇವ-ದಕ್ಷಿಣೆಯ ಜೊತೆ ನಾ ಸರ್ವೋತ್ತಮ ಎಂದನಾಗ.

ಆಗ ರಾಜರುಗಳೆಲ್ಲ ಹಾಗೆಂದರೇನು ಎಂದು ಕೇಳಲು,

ನಾರಾಯಣನೆಂದ -ನಾರದಾ ನೀನೇ ಅದನ್ನು ಹೇಳು.

ಕೇಳಿರಿ ಎಂದು ಹೇಳಲಾರಂಭಿಸಿದರು ನಾರದ ಮುನಿಗಳು.

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 20: 57 - 62

 ಕೃಷ್ಣಸ್ತತಶ್ಚಾಪಮಧಿಜ್ಯಮಾಶು ಕೃತ್ವಾsಚಿನ್ತ್ಯಶ್ಛಿನ್ನಬಾಣೇನ ಲಕ್ಷಮ್ ।

ಅಪಾತಯದ್ ದುನ್ದುಭಯಶ್ಚ ದಿವ್ಯಾ ನೇದುಃ ಪ್ರಸೂನಂ ವವೃಷುಃ ಸುರಾಶ್ಚ ॥೨೦.೫೭॥

ನಂತರ ಅಚಿಂತ್ಯಮೂರ್ತಿ ಕೃಷ್ಣ ಬಿಲ್ಲನ್ನು ನೇಣಿಂದ ಬಿಗಿದ,

ಗುರಿಯನ್ನು ಮುರಿದ ಬಾಣದಿಂದ ಹೊಡೆದು ಕೆಳಗೆ ಬೀಳಿಸಿದ.

ಆಗ ಅಲೌಕಿಕ ದುಂದುಭಿಗಳು ಮೊಳಗಿದವು,

ದೇವತೆಗಳು ಮಳೆಗರೆದರು ರಾಶಿರಾಶಿ ಹೂವು.

 

ಕೃಷ್ಣೇ ಬ್ರಹ್ಮಾದ್ಯೈಃ ಸ್ತೂಯಮಾನೇ ನರೇನ್ದ್ರಕನ್ಯಾ ಮಾಲಾಂ ಕೇಶವಾಂಸೇ ನಿಧಾಯ ।

ತಸ್ಥಾವುಪಾಸ್ಯಾಥ ಸರ್ವೇ ನರೇನ್ದ್ರಾ ಯುದ್ಧಾಯಾಗುಃ ಕೇಶವಂ ಸ್ವಾತ್ತಶಸ್ತ್ರಾಃ ॥೨೦.೫೮॥

ಕೃಷ್ಣ ಬ್ರಹ್ಮಾದಿ ದೇವತೆಗಳಿಂದ ಸ್ತುತಿಸಿಕೊಳ್ಳಲ್ಪಡುತ್ತಿರಲು,

ಲಕ್ಷಣೆ ಕೃಷ್ಣಗೆ ಮಾಲೆ ಹಾಕಿ ಅವನ ಬಳಿಯಲ್ಲಿ ನಿಂತಳು.

ಆಗ ಎಲ್ಲಾ ರಾಜರು ಶಸ್ತ್ರ ಸ್ವೀಕರಿಸಿ,

ಮೇಲೇರಿ ಬಂದರು ಯುದ್ಧ ಬಯಸಿ.

 

ವಿದ್ರಾಪ್ಯ ತಾನ್ ಮಾಗಧಾದೀನ್ ಸ ಕೃಷ್ಣೋ ಭೀಮಾರ್ಜ್ಜುನಾಭ್ಯಾಂ ಸಹಿತಃ ಪುರೀಂ ಸ್ವಾಮ್ ।

ಯಯಾವೇತಾ ಅಷ್ಟ ಮಹಾಮಹಿಷ್ಯಃ ಕೃಷ್ಣಸ್ಯ ದಿವ್ಯಾ ಲೋಕಸುನ್ದರ್ಯ್ಯ ಇಷ್ಟಾಃ ॥೨೦.೫೯॥

ಜರಾಸಂಧ ಮೊದಲಾದವರನ್ನು ಶ್ರೀಕೃಷ್ಣ ಓಡಿಸಿದ,

ಭೀಮಾರ್ಜುನರೊಂದಿಗೆ  ತನ್ನ ಊರಿಗೆ ತೆರಳಿದ.

ಕೃಷ್ಣಗತಿಪ್ರಿಯರಾದ ಅಲೌಕಿಕವಾದ ದಿವ್ಯ ಸುಂದರಿಯರು,

ಅಷ್ಟಮಹಿಷಿಯರಾಗಿ ಕೃಷ್ಣನ ಹೆಂಡಂದಿರಾಗಿ ಬಂದವರಾದರು.

 

[ ಮಹಾಭಾರತದ ಸಭಾಪರ್ವದಲ್ಲಿ ಹೀಗೆ ಹೇಳಿದ್ದಾರೆ: ‘ರುಗ್ಮಿಣೀ ಚ ಪತಿವ್ರತಾ । ಸತ್ಯಾ ಜಾಂಬವತೀ ಚೋಭೇ ಗಾನ್ಧಾರೀ ಶಿಶುಮಾsಪಿ ಚ ವಿಶೋಕಾ ಲಕ್ಷಣಾ ಚಾಪಿ ಸುಮಿತ್ರಾ ಕೇತುಮಾ ತಥಾ’ (ಸಭಾಪರ್ವ ೫೯. ೨) . ರುಗ್ಮಿಣೀ, ಸತ್ಯಭಾಮ, ಜಾಮ್ಬವತೀ, ಗಾನ್ಧಾರಿ(ನೀಲಾದೇವಿ, ಪರಮಾತ್ಮ ಶಿಶುವಾಗಿದ್ದಾಗಲೇ ಮದುವೆಯಾದ ಇವಳನ್ನು ‘ಶಿಶುಮಾ’ ಎಂದೂ ಕರೆಯುತ್ತಾರೆ. ಇವಳೇ ರಾಧೆ). ವಿಶೋಕಾ(ಭದ್ರೆ), ಲಕ್ಷಣಾಸುಮಿತ್ರಾ(ಮಿತ್ರವಿನ್ದೆ) ಮತ್ತು ಜ್ಞಾನವನ್ನು ಕೊಡುವ ಕೇತುಮಾ(ಕಾಳಿನ್ದೀ). ಇವರೇ ಆ ಅಷ್ಟ ಮಹಾಮಹಿಷಿಯರು. ಮೇಲ್ನೋಟಕ್ಕೆ ನಾಮಾಂತರ ಅನಿಸಿದರೂ, ಈ ಹೆಸರುಗಳು ಅವರ ಗುಣನಿರೂಪಣೆ ಮಾಡುವ ಹೆಸರುಗಳಾಗಿವೆ].

 

ಭೈಷ್ಮೀ ಸತ್ಯಾ ಚೈಕತನುರ್ದ್ದ್ವಿಧೈವ ಜಾತಾ ಭೂಮೌ ಪ್ರಕೃತಿರ್ಮ್ಮೂಲಭೂತಾ ।

ತಯೈವಾನ್ಯಾಃ ಸರ್ವದಾsನುಪ್ರವಿಷ್ಟಾಸ್ತಾಸಾಂ ಮದ್ಧ್ಯೇ ಜಾಮ್ಬವತೀ ಪ್ರಧಾನಾ  ॥೨೦.೬೦॥

ಆ ಎಂಟು ಮಹಿಷಿಯರಲ್ಲಿ ರುಗ್ಮಿಣೀ ಮತ್ತು ಸತ್ಯಭಾಮಾ ಒಬ್ಬಳೇ,

ಮೂಲಪ್ರಕೃತಿ ಎರಡಾಗಿ ಅವತರಿಸಿ ಭೈಷ್ಮೀ ಭಾಮೆಯಾಗಿ ಬಂದವಳೇ.

ಉಳಿದ ಎಲ್ಲರಲ್ಲೂ ಇತ್ತು ಅವಳ ಪ್ರವೇಶ,

ಷಣ್ಮಹಿಷಿಯರಲ್ಲಿ ಜಾಂಬವತಿಯೇ ವಿಶೇಷ.

 

ರಾಮೇಣ ತುಲ್ಯಾ ಜಾಮ್ಬವತೀ ಪ್ರಿಯತ್ವೇ ಕೃಷ್ಣಸ್ಯಾನ್ಯಾಃ ಕಿಞ್ಚಿದೂನಾಶ್ಚ ತಸ್ಯಾಃ ।

ಯದಾssವೇಶೋ ಬಹುಲಃ ಸ್ಯಾದ್ ರಮಾಯಾಸ್ತದಾ ತಾಸು ಪ್ರೀಯತೇ ಕೇಶವೋsಲಮ್ ॥೨೦.೬೧॥

ಜಾಮ್ಬವತಿ ಕೃಷ್ಣಪ್ರೀತಿ ವಿಷಯದಲ್ಲಿ ಬಲರಾಮಗೆ ಸಮಾನ,

ಉಳಿದ ಐವರು ಪತ್ನಿಯರ ಕಡೆಗೆ ಕಿಂಚಿತ್ ಕಡಿಮೆ ಪ್ರಮಾಣ.

ಯಾವಾಗ ಅವರಲ್ಲಿ ಹೆಚ್ಚಾಗುತ್ತದೆ ಲಕ್ಷ್ಮೀ ಆವೇಶ,

ಶ್ರೀಕೃಷ್ಣ ಅವರನ್ನು ಹೆಚ್ಚು ಪ್ರೀತಿಸುವುದು ವಿಶೇಷ .

 

ಯದಾssವೇಶೋ ಹ್ರಾಸಮುಪೈತಿ ತತ್ರ ಪ್ರದ್ಯುಮ್ನತೋ ವಿಂಶಗುಣಾಧಿಕಾಃ ಸ್ಯುಃ ।

ಅನಾದಿತಸ್ತಾಃ ಕೇಶವಾನ್ನಾನ್ಯಸಂಸ್ಥಾ ರೇಮೇ ತಾಭಿಃ ಕೇಶವೋ ದ್ವಾರವತ್ಯಾಮ್ ॥೨೦.೬೨॥

ಯಾವಾಗ ಅವರಲ್ಲಿ ರಮಾವೇಶ ಕಡಿಮೆಯಾಗುತ್ತದೋ ಆಗ,

ಪ್ರದ್ಯುಮ್ನನಿಗಿಂತ ಇಪ್ಪತ್ತುಪಟ್ಟು ಅಧಿಕರಾಗಿಬಿಡುತ್ತಾರಾಗ.

ಅನಾದಿ ಕಾಲದಿಂದ ಅವರು ಕೇಶವನ ಬಿಟ್ಟು ಬೇರೆಯವರೊಂದಿಗಿಲ್ಲ,

ಅಂತಹ ಅವರೊಂದಿಗೆ ದ್ವಾರಕೆಯಲ್ಲಿ ಕ್ರೀಡೆಯಾಡಿದ ಕೃಷ್ಣನೆಂಬ ಗೊಲ್ಲ.