Wednesday, 30 March 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 21: 198-204

 

ಕ್ರಮೇಣ ಸರ್ವಾನ್ ನಿರ್ಜ್ಜಿತ್ಯ ಪೌಣ್ಡ್ರಕಂ ಚ ಮಹಾಬಲಮ್ ।

ವಿರಥೀಕೃತ್ಯ ಕರ್ಣ್ಣಂ ಚ ಕರಮಾದಾಯ ಸರ್ವತಃ         ॥೨೧.೧೯೮॥

ಭೀಮ ಕ್ರಮವಾಗಿ ಎಲ್ಲಾ ರಾಜರನ್ನು ಗೆಲ್ಲುತ್ತಾ ಬಂದ,

ಬಲಿಷ್ಠ ಪೌಂಡ್ರಕನನ್ನು ಗೆದ್ದು ಕರ್ಣನ ವಿರಥನ ಮಾಡಿದ.

ಎಲ್ಲರಿಂದ ಕಪ್ಪವನ್ನು ಸ್ವೀಕರಿಸಿದವನಾಗಿ ಮುಂದೆ ನಡೆದ.

 

ಹಿಮವಚ್ಛಿಖರೇ ದೇವಾನ್ ಜಿತ್ವಾ ಶಕ್ರಪುರೋಗಮಾನ್ ।

ಕ್ರೀಡಾರ್ತ್ಥಂ ಯುದ್ಧ್ಯತಸ್ತೇಭ್ಯಸ್ತುಷ್ಟೇಭ್ಯೋ ರತ್ನಸಞ್ಚಯಮ್             ॥೨೧.೧೯೯॥

ಇಂದ್ರಾದಿ ದೇವತೆಗಳು ಮಾಡಿದ್ದು ಕೇವಲ ಯುದ್ಧದ ಕ್ರೀಡೆ,

ಹಿಮವತ್ಪರ್ವತದಲ್ಲಿ ಎಲ್ಲರ ಗೆಲ್ಲುತ್ತಾ ಸಾಗಿತ್ತು ಭೀಮನ ನಡೆ.

ಸಂತುಷ್ಟರಾದ ಅವರೆಲ್ಲರಿಂದ, ಭೀಮ ರತ್ನರಾಶಿಗಳನ್ನು ಪಡೆದ.

 

ಬಾಹುಯುದ್ಧೇನ ಶೇಷಂ ಚ ಗರುಡಂ ಚ ಮಹಾಬಲಮ್ ।

ಕ್ರೀಡಮಾನೌ ವಿನಿರ್ಜ್ಜಿತ್ಯ ಭೂಷಣಾನ್ಯಾಪ ತೋಷತಃ ।

ತಾಭ್ಯಾಂ ಚ ದೃಢಮಾಶ್ಲಿಷ್ಟಃ ಸ್ನೇಹವಿಕ್ಲಿನ್ನಯಾ ಧಿಯಾ             ॥೨೧.೨೦೦॥

ಕ್ರೀಡೆಗಾಗಿ ಬಂದಿದ್ದ ಶೇಷ, ಬಲಿಷ್ಠ ಗರುಡದೇವ,

ಆಲಿಂಗಿತನಾದ ಮಲ್ಲಯುದ್ಧದಿ ಅವರನ್ನು ಗೆದ್ದವ.

ಅವರನ್ನು ಸಂತುಷ್ಟಗೊಳಿಸಿದ ಭೀಮಸೇನ,

ಅವರಿಂದ ಪಡೆದವನಾದ ಹೇರಳ ಆಭರಣ.

 

ಪೋಪ್ಲೂಯಮಾನಃ ಸ ತತೋsಮ್ಬುಧೌ ಬಲೀ ಜಗಾಮ ಬಾಣಸ್ಯ ಪುರಂ ಹರಂ ಚ ।

ರಣೇsಜಯದ್ ವಾರಣರೂಪಮಾಸ್ಥಿತಂ ಕ್ರೀಡನ್ತಮೇತೇನ ಚ ತೋಷಿತೋ ಹರಃ ॥೨೧.೨೦೧॥

ಭೀಮ ಸಮುದ್ರ ಈಜಿ ಬಾಣನೂರು ಸೇರಿದ,

ಕ್ರೀಡೆಗೆ ಬಂದ ಹರನಲ್ಲಿ ಆನೆಯ ವೇಷದಲ್ಲಿದ್ದ.

ಯುದ್ಧದಲ್ಲಿ ಭೀಮ ಹರನನ್ನು ಗೆದ್ದ,

ಇದರಿಂದ ರುದ್ರದೇವ ಸಂತುಷ್ಟನಾದ.

 

ಪೃಷ್ಟಶ್ಚ ಗಿರೀಶೇನಾಸೌ ವಿಸ್ತರಂ ದಿಗ್ಜಯಸ್ಯ ಚ ।

ಸಿಂಹವ್ಯಾಘ್ರಾದಿರೂಪಾಶ್ಚ ಆತ್ಮನಾ ವಿಜಿತಾ ಯಥಾ ।

ಗರುತ್ಮಚ್ಛೇಷಶಕ್ರಾದ್ಯಾ ದೇವಾಃ ಸರ್ವೇ ತದಬ್ರವೀತ್   ॥೨೧.೨೦೨॥

ಶಿವ ಭೀಮನ ದಿಗ್ವಿಜಯವೃತ್ತಾಂತವ ಕೇಳಬಯಸಿದ,

ಸಿಂಹ ಹುಲಿ ಇತ್ಯಾದಿ ರೂಪಗಳ ತೊಟ್ಟುಕೊಂಡು ಬಂದ್ದಿದ್ದ,

ಗರುಡ ಶೇಷ ಇಂದ್ರ ಮುಂತಾದ ದೇವತೆಗಳೆಲ್ಲಾ,

ತನ್ನಿಂದ ಹೇಗೆ ಸೋತರೆಂದು ಹೇಳಿದ ಜಗಮಲ್ಲ.

 

ನಿಶಮ್ಯ ಶಙ್ಕರೋsಖಿಲಂ ಮಖಸ್ಯ ಚ ಪ್ರಸಾಧಕಮ್ ।

ಹರಿಂ ತತೋ ಬಲೇಃ ಸುತಾದ್ ದದೌ ಚ ರತ್ನಸಞ್ಚಯಮ್             ॥೨೧.೨೦೩॥

ಭೀಮನಿಂದ ಭಗವದ್ಯಜ್ಞ ನಡೆಯುತ್ತಿದೆ ಎಂಬುದ ಕೇಳಿದ ರುದ್ರದೇವ,

ಬಲಿಯ ಮಗ ಬಾಣನಿಂದ ಭೀಮಗೆ ಕೊಡಿಸಿದ ಭವ್ಯ ರತ್ನಸಮೂಹ.

 

ಸ ಬಾಣದೈತ್ಯತೋ ಮಹಚ್ಛಿವೇನ ದತ್ತಮುತ್ತಮಮ್ ।

ಪ್ರಗೃಹ್ಯ ರತ್ನಸಞ್ಚಯಂ ಸ್ವಕಂ ಪುರಂ ಸಮಾಯಯೌ   ॥೨೧.೨೦೪॥

ಭೀಮಸೇನ ಬಾಣನ ಮುಖಾಂತರ ಶಿವ ಕೊಟ್ಟ ರತ್ನ ಪಡೆದ,

ಅಧಿಕವಾದ ಆ ರತ್ನಸಮೂಹದೊಂದಿಗೆ ತನ್ನ ಊರಿಗೆ ನಡೆದ.


 [Contributed by Shri Govind Magal]

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 21: 191-197

 

ಪ್ರಯಾಹಿ ಚ ತ್ವಂ ಧನದಪ್ರಪಾಲಿತಾಂ ದಿಶಂ ದ್ವೀಪಾನ್ ಸಪ್ತ ಚಾಶೇಷದಿಕ್ಷು ।

ನಾಗಾಂಶ್ಚ ದೈತ್ಯಾಂಶ್ಚ ತಥಾsಧರಸ್ಥಾನ್ ವಿಜಿತ್ಯ ಶೀಘ್ರಂ ಪುನರೇಹಿ ಚಾತ್ರ             ॥೨೧.೧೯೧॥

ಕುಬೇರ ಪಾಲಿಸುತ್ತಿರುವ ಉತ್ತರ ದಿಕ್ಕನ್ನು,

ಏಳು ದ್ವೀಪಗಳು ವ್ಯಾಪಿಸಿರುವ ಎಲ್ಲ ದಿಕ್ಕನ್ನು,

ನಾಗ, ದೈತ್ಯ, ಪಾತಾಳಲೋಕದವರನ್ನು,

ಬೇಗನೇ ನೀನು ಗೆದ್ದು ಬರಬೇಕಿದೆಯಿನ್ನು.

 

ರಥೋ ಹಿ ದಿವ್ಯೋsಮ್ಬರಗಸ್ತವಾಸ್ತಿ ದಿವ್ಯಾನಿ ಚಾಸ್ತ್ರಾಣಿ ಧನುಶ್ಚ ದಿವ್ಯಮ್ ।

ಯೇsನ್ಯೇ ಚ ಬಾಣಪ್ರಮುಖಾ ಅಜೇಯಾಃ ಶರ್ವಾಶ್ರಯಾಸ್ತಾನಪಿ ಭೀಮ ಏತು             ॥೨೧.೧೯೨॥

ನಿನ್ನಲ್ಲಿದೆ ಅಲೌಕಿಕ, ಆಕಾಶದಿ ಓಡುವ ರಥ,

ಉಂಟು ದಿವ್ಯಾಸ್ತ್ರ, ಅಲೌಕಿಕ ಬಿಲ್ಲಿನ ಸಾಮರ್ಥ್ಯ.

ಬಾಣನಾಗಿದ್ದಾನೆ ಅವಧ್ಯ ರುದ್ರದೇವರ ವರಬಲದಿಂದ,

ಅತ್ತ ನೀನು ಹೋಗುವುದು ಬೇಡ ಅದಾಗಲಿ ಭೀಮನಿಂದ.

 

ತಥಾ ಸುರಾಶ್ಚಾಪಿ ಸಮಸ್ತತೋsಸ್ಯ ಬಲಿಂ ಪ್ರಯಚ್ಛನ್ತಿ ಮದಾಜ್ಞಯೇತರೇ ।

ದಿಶಂ ಪ್ರತೀಚೀಮಥ ದಕ್ಷಿಣಾಂ ಚ ಯಾತಾಂ ಯಮೌ ಕ್ರಮಶೋ ಹ್ಯಧ್ವರಾರ್ತ್ಥೇ ॥೨೧.೧೯೩॥

ದೇವತೆಗಳು ನನ್ನಾಜ್ಞೆಯಿಂದ ಭೀಮಗೊಪ್ಪಿಸುತ್ತಾರೆ ಕರ,

ಉಳಿದ ಗಂಧರ್ವ ಯಕ್ಷಾದಿಗಳದೂ ಕೂಡಾ ಅದೇ ತೆರ.

ಕ್ರಮವಾಗಿ ಪಶ್ಚಿಮ ಮತ್ತು ದಕ್ಷಿಣ ದಿಕ್ಕುಗಳ ಕಡೆ,

ನಕುಲ ಸಹದೇವರದಿರಲಿ ದಿಗ್ವಿಜಯದ ನಡೆ.

 

ಯಶಶ್ಚ ಧರ್ಮ್ಮಶ್ಚ ತಯೋರಪಿ ಸ್ಯಾದಿತಿ ಸ್ಮ ಕೃಷ್ಣೇನ ಸುತೇನ ಕಾಳ್ಯಾಃ ।

ಉಕ್ತೇ ಯಯುಸ್ತೇ ತಮಭಿಪ್ರಣಮ್ಯ ದಿಶೋ ಯಥೋಕ್ತಾಃ ಪರಮೋರುಸದ್ಗುಣಾಃ ॥೨೧.೧೯೪॥

ನಕುಲ ಸಹದೇವರಿಗೂ ಸಿಗಲಿ ಕೀರ್ತಿ ಪುಣ್ಯ,

ಹೀಗಿತ್ತು ಸತ್ಯವತೀಪುತ್ರ ವೇದವ್ಯಾಸರ ಆಜ್ಞ.

ಎಲ್ಲರೂ ಮಾಡುತ್ತಾರೆ ವೇದವ್ಯಾಸರಿಗೆ ನಮಸ್ಕಾರ,

ತಮಗೆ ಸೂಚಿತವಾದ ದಿಕ್ಕಿಗೆ ಹೊರಡುವ ವ್ಯಾಪಾರ.

 

ವೃಕೋದರೋ ಜಯನ್ನೃಪಾನ್ ವಿರಾಟಮಾಸಸಾದ ಹ ।

ಜಿತೇsತ್ರ ಕೀಚಕೇ ರಣೇ ಸಮಾದದೇ ಕರಂ ತತಃ         ॥೨೧.೧೯೫॥

ಭೀಮ ರಾಜರುಗಳ ಗೆಲ್ಲುತ್ತಾ ವಿರಾಟನಲ್ಲಿಗೆ ಬಂದ,

ಕೀಚಕ ತನ್ನಿಂದ ಸೋಲಲು ಕಪ್ಪವನ್ನು ಸ್ವೀಕರಿಸಿದ.

 

ತತಃ ಕ್ರಮಾನ್ನೃಪಾನ್ ಜಿತ್ವಾ ಚೇದೀನಾಂ ವಿಷಯಂ ಗತಃ ।

ಮಾತೃವಾಕ್ಯಾದ್ ಭಯಾಚ್ಚೈವ ಶಿಶುಪಾಲೇನ ಪೂಜಿತಃ             ॥೨೧.೧೯೬॥

ಆನಂತರ ಕ್ರಮವಾಗಿ ರಾಜರುಗಳ ಗೆಲ್ಲುತ್ತಾ ಭೀಮ ಚೇದಿ ದೇಶಕ್ಕೆ ಬಂದ,

ತಾಯಿಯ ನುಡಿಯಿಂದ, ಭಯದಿಂದ ಶಿಶುಪಾಲ ಭೀಮನನ್ನು ಪೂಜಿಸಿದ.

 

ಮಾತೃಷ್ವಸುರ್ಗ್ಗೃಹೇ ಚೋಷ್ಯ ದಿವಸಾನ್ ಕತಿಚಿತ್ ಸುಖಮ್ ।

ಕರಂ ಸುಮಹದಾದಾಯ ತತಃ ಪೂರ್ವಾಂ ದಿಶಂ ಯಯೌ             ॥೨೧.೧೯೭॥

ಭೀಮ ಮಾಡಿದ ದೊಡ್ಡಮ್ಮನ ಮನೆಯಲ್ಲಿ ಕೆಲದಿನದ ಸುಖವಾಸ,

ಅಧಿಕ ಕಪ್ಪವ ಸ್ವೀಕರಿಸಿ ಹೊರಟ ಅಲ್ಲಿಂದ ಪೂರ್ವಕ್ಕೆ ಪ್ರವಾಸ.

 [Contributed by Shri Govind Magal]

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 21: 180-190

ಅಸಾಧಾರಣಹೇತುಶ್ಚ ಭೀಮ ಏವ ಪ್ರಕೀರ್ತ್ತಿತಃ ।

ಯಜ್ಞಸ್ಯಾಸ್ಯ ಜರಾಸನ್ಧವದಾತ್ ಕರ್ಣ್ಣಜಯಾದಪಿ         ॥೨೧.೧೮೦॥

 

ಜಯಾಚ್ಚ ಕೀಚಕಾದೀನಾಮನ್ಯೈರ್ಜ್ಜೇತುಮಶಕ್ಯತಃ ।

ದ್ವಿತೀಯಃ ಫಲ್ಗುನಶ್ಚೈವ ತೃತೀಯಸ್ತು ಯುಧಿಷ್ಠಿರಃ         ॥೨೧.೧೮೧॥

ಪಾಂಡವರು ಮಾಡುತ್ತಿರುವ ಈ ಯಜ್ಞಕ್ಕೆ ಭೀಮನೇ ಮುಖ್ಯ ಕಾರಣ,

ಅವನಿಂದಲೇ ಹತನಾಗಿದ್ದ ಜರಾಸಂಧ ಸೋತುಹೋಗಿದ್ದನು ಕರ್ಣ.

ಯಾರೂ ಗೆಲ್ಲಲಾಗದಂಥ ಕೀಚಕ ಮೊದಲಾದ ಬಲವಂತರನ್ನು ಗೆದ್ದಿದ್ದ,

ಎರಡನೇ ಕಾರಣ ಅರ್ಜುನ ಮೂರನೇ ಕಾರಣ ಯುಧಿಷ್ಠಿರನಾಗಿದ್ದ.

 

ತಸ್ಮಾದ್ ಬ್ರಹ್ಮಪದಾವಾಪ್ತ್ಯೈ ವ್ಯಾಸೋ ಭೀಮಸ್ಯ ತಂ ಕ್ರತುಮ್ ।

ಅನನ್ಯಕೃತಮಾದಿಶ್ಯ ದಿಶಾಂ ವಿಜಯಮಾದಿಶತ್                     ॥೨೧.೧೮೨॥

ಈ ತೆರನಾಗಿ ಭೀಮಸೇನನಾಗಿದ್ದ ಬ್ರಹ್ಮಪದವಿ ಪ್ರಾಪ್ತಿಗಾಗಿ ಅರ್ಹ,

ವ್ಯಾಸರಾಜ್ಞೆಯಿತ್ತು:ಅವನು ಮಾಡಲು ಅಶ್ವಮೇಧ ರಾಜಸೂಯ ಕಾರ್ಯ.

ಅಪ್ಪಣೆಯಿತ್ತರು :ಮೊದಲಾಗಲಿ ದಿಗ್ವಿಜಯ ಅದು ಬಲು ಅನಿವಾರ್ಯ.

 

ಅಥಾsಬ್ರವೀದ್ ಧನಞ್ಜಯೋ ಧನುರ್ಧ್ವಜೋ ರಥೋ ವರಃ ।

ಮಮಾಸ್ತಿ ತದ್ದಿಶಾಂ ಜಯೋ ಮಮೈವ ವಾಞ್ಛಿತಃ ಪ್ರಭೋ             ॥೨೧.೧೮೩॥

ನಂತರ ಅರ್ಜುನ ಹೇಳುವ -ಸರ್ವಸಮರ್ಥರಾದ ವೇದವ್ಯಾಸರೇ,

ಉತ್ತಮ ಬಿಲ್ಲು, ಧ್ವಜ, ಶ್ರೇಷ್ಠ ರಥಗಳದು ನನಗಿದೆ ಗಟ್ಟಿ ಆಸರೆ.

ನಾನೊಬ್ಬನೇ ಮಾಡುವೆ ದಿಗ್ವಿಜಯ ನನಗೆ ಆಗದದು ಹೊರೆ.

 

ಇತೀರಿತೋsಖಿಲಪ್ರಭುರ್ಜ್ಜಗಾದ ಸತ್ಯಮಸ್ತಿತೇ ।

ಸಮಸ್ತಸಾಧನೋನ್ನತಿರ್ಮ್ಮಹಚ್ಚ ವೀರ್ಯ್ಯಮಸ್ತಿತೇ                 ॥೨೧.೧೮೪॥

 

ತಥಾsಪಿ ಕೀಚಕಾದಯೋ ವೃಕೋದರಾದೃತೇ ವಶಮ್ ।

ನ ಯಾನ್ತಿ ನಾಪಿ ತೇ ವಶಂ ಪ್ರಯಾತಿ ಕರ್ಣ್ಣ ಏವ ಚ                  ॥೨೧.೧೮೫॥

ಅರ್ಜುನ ಹೀಗೆ ಹೇಳಲು, ಸರ್ವರೊಡೆಯ ವ್ಯಾಸರು ಹೇಳುತ್ತಾರೆ,

ಖಂಡಿತ ನಿನ್ನಲ್ಲಿದೆ ವೀರ್ಯ ಮತ್ತು ಸಾಧನ ಸಂಪತ್ತಿನ ಅಖಂಡಧಾರೆ.

ಆದರೂ ಕೀಚಕಾದಿಗಳು ಭೀಮಸೇನಗಲ್ಲದೆ ನಿನಗಾಗಲ್ಲ ವಶ,

ಮುಖ್ಯವಾಗಿ ಕರ್ಣನ ವಶೀಕರಿಸಿಕೊಳ್ಳಲೂ ನಿನಗಿಲ್ಲ ಅವಕಾಶ.

 

ಬಲಾಧಿಕೋsಸಿ ಕರ್ಣ್ಣತಸ್ತಥಾsಪಿ ನಾಮೃತಃ ಕರಮ್ ।

ದದಾತಿ ತೇ ಹ್ಯತಿಸ್ಪೃಧಾ ನ ವದ್ಧ್ಯ ಏಷ ತೇsದ್ಯ ಚ                    ॥೨೧.೧೮೬॥

 

ಸವರ್ಮ್ಮಕುಣ್ಡಲತ್ವತೋ ನ ವದ್ಧ್ಯ ಏಷ ಯತ್ ತ್ವಯಾ ।

ತತೋ ವೃಕೋದರೋ ದಿಶಂ ಪ್ರಯಾತು ತೇ ಪಿತುಃ ಪ್ರಿಯಾಮ್ ॥೨೧.೧೮೭॥ 

ಕರ್ಣನಿಗಿಂತ ನೀನು ಹೆಚ್ಚು ಬಲಶಾಲಿ ಹೌದು,

ಜಿದ್ದಿನ ಸ್ಪರ್ಧಿಯವನು ಸಾಯದೇ ಕಪ್ಪ ಸಿಗದು.

ಅವನನ್ನು ಈಗಲೇ ಕೊಲ್ಲುವ ಹಾಗಿಲ್ಲ ,

ಕವಚಕುಂಡಲಧಾರಿಯ ವಧಿಸುವುದು ಸಲ್ಲ.

ಇವೆಲ್ಲಾ ಕಾರಣಗಳಿಂದಲೇ ನಿನ್ನಣ್ಣನಾದ ಭೀಮಸೇನ,

ನಿನ್ನಪ್ಪ ಇಂದ್ರಗೆ ಪ್ರಿಯವಾದ ಪೂರ್ವಕ್ಕೆ ಹೋಗಲಿ ಪ್ರಯಾಣ.

 

ಜೀವಗ್ರಾಹಭಯಾತ್ ಕರ್ಣ್ಣೋ ದದಾತಿ ಕರಮಞ್ಜಸಾ ।

ಭೀಮಾಯ ನಾತ್ರ ಸನ್ದೇಹೋ ಜಿತೋsನೇನ ಚ ಸಂಯುಗೇ             ॥೨೧.೧೮೮॥

ಕರ್ಣನಿಗಿದೆ ಭೀಮಸೇನ ತನ್ನನ್ನು ಜೀವಂತ ಸೆರೆ ಹಿಡಿವನೆಂಬ ಭಯ,

ಹಾಗಾಗಿ ಅವನು ಚೆನ್ನಾಗಿ ಕರವ ಕೊಡುತ್ತಾನೆ ಬೇಡವಿದಕೆ ಸಂಶಯ.

 

ಅಜೇಯೌ ಶರ್ವವಚನಾದ್ ರಣೇ ಕೀಚಕಪೌಣ್ಡ್ರಕೌ ।

ವಶಂ ಪ್ರಯಾತೋ ಭೀಮಸ್ಯ ತಥಾsವದ್ಧ್ಯೋsಪಿ ಚೇದಿಪಃ             ॥೨೧.೧೮೯ll  

ರುದ್ರವರದಿಂದ ಕೀಚಕ ಮತ್ತು ಪೌಂಡ್ರಕರು ಅಜೇಯರು,

ಹಾಗಿದ್ದಾಗಿಯೂ ಭೀಮನ ಬಲಕ್ಕೆ ಅವರು ಬಾಗುವರು.

ಅಂತೆಯೇ ಶಿಶುಪಾಲನವನು ಆಗಿದ್ದಾನೆ ಅವಧ್ಯ,

ಆದರೂ ಅವ ಭೀಮನ ವಶವಾಗದಿರುವುದು ಅಸಾಧ್ಯ.

 

ಜೀವಗ್ರಾಹಭಯಂ ಹ್ಯೇಷಾಂ ಭೀಮಾನ್ಮಾಗಧಪಾತನಾತ್ ।

ತಸ್ಮಾತ್ ಕರಂ ಪ್ರಯಚ್ಛನ್ತಿ ಜಿತಾ ವಾ ಪೂರ್ವಮೇವ ವಾ             ॥೨೧.೧೯೦॥

ಜರಾಸಂಧನನ್ನೇ ಮಣಿಸಿದ್ದಾನೆ ಅವನು ಭೀಮಸೇನ,

ಅವನಿಗೆ ಜೀವಂತ ಸೆರೆಯಾಗುವುದು ಭಯಕ್ಕೆ ಕಾರಣ.

ಹಾಗಾಗಿ ಯುದ್ಧದಿ ಸೋತು ಕೊಡುತ್ತಾರೆ ಕರ,

ಯುದ್ಧವಿಲ್ಲದೇ ಕೊಟ್ಟರೂ ಇರದು ಆಶ್ಚರ್ಯ.

 [Contributed by Shri Govind Magal]

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 21: 175-179

 

ಕೃಷ್ಣಶ್ಚ ಪಾರ್ತ್ಥೌ ಚ ತಥೈಕಯಾನಂ ಸಮಾಸ್ಥಿತಾ ಧರ್ಮ್ಮಜಮಭ್ಯಗಚ್ಛನ್ ।

ತೇಷಾಂ ಶಙ್ಖಧ್ವನಿಸಮ್ಬೋಧಿತಾತ್ಮಾ ರಾಜಾ ಪ್ರೀತಶ್ಚಾತಿತರಾಂ ಬಭೂವ             ॥೨೧.೧೭೫॥

ಕೃಷ್ಣ, ಭೀಮಾರ್ಜುನರು ಒಂದೇ ರಥದಲ್ಲಿ ಬಂದರು ಧರ್ಮರಾಜನ ಬಳಿಗೆ,

ಧರ್ಮರಾಜ ಸಂತುಷ್ಟನಾದ ಕೇಳಿ ಗೆಲುವಿನ ಸಂಕೇತವಿದ್ದ ಶಂಖನಾದದ ಧ್ವನಿಗೆ.

 

ದ್ವೈಪಾಯನೋsಥ ಭಗವಾನಭಿಗಮ್ಯ ಪಾರ್ತ್ಥಾನಾಜ್ಞಾಪಯತ್ ಸಕಲಸಮ್ಭೃತಿಸಾಧನಾಯ ।

ತಂ ರಾಜಸೂಯಸಹಿತಂ ಪರಮಾಶ್ವಮೇಧಯಜ್ಞಂ ಸಮಾದಿಶದನನ್ಯಕೃತಂ ವಿರಿಞ್ಚಾತ್ ॥೨೧.೧೭೬॥

ಆನಂತರ ಪಾಂಡವರ ಬಳಿಗೆ ಷಡ್ಗುಣ ಐಶ್ವರ್ಯ ಸಂಪನ್ನರಾದ ವೇದವ್ಯಾಸರ ಆಗಮನ,

ಹೇಳುತ್ತಾರೆ ಮಾಡಲು ಬ್ರಹ್ಮನ ಬಿಟ್ಟು ಬೇರಾರೂ ಮಾಡಿರದ ರಾಜಸೂಯ ಅಶ್ವಮೇಧ ಯಜ್ಞ.

ವ್ಯಾಸರು ಆಜ್ಞೆ ಮಾಡಿ ಹೇಳುತ್ತಾರೆ-ಮಾಡಿಕೊಳ್ಳಿ ಸಕಲ ಸಿದ್ಧತೆ ಮತ್ತು ಪರಿಕರ ಸಾಧನಗಳನ್ನ.

 

[ಕೇವಲ ರಾಜಸೂಯ ಮಾಡುವುದಲ್ಲ, ಅಶ್ವಮೇಧದಿಂದ ಕೂಡಿರುವ ರಾಜಸೂಯ ಮಾಡಬೇಕು ಎನ್ನುವ ಆಜ್ಞೆ. ಪಾಂಡವರನ್ನು ಬಿಟ್ಟು ಬೇರೆ ಯಾರಿಗೂ ಮಾಡಲು ಅಸಾಧ್ಯವಾದ, ವಿಶಿಷ್ಟವಾದ ಯಾಗವನ್ನು ವೇದವ್ಯಾಸರು ಪಾಂಡವರಲ್ಲಿ ಮಾಡಲು ಆಜ್ಞೆಯನ್ನಿತ್ತರು].

 

ಕರ್ತ್ತಾ ಹಿ ತಸ್ಯ ಪರಮೇಷ್ಠಿಪದಂ ಪ್ರಯಾತಿ ಯದ್ಯನ್ಯಸದ್ಗುಣವರೈಃ ಪರಮೇಷ್ಠಿತುಲ್ಯಃ ।

ಭೀಮೇ ಮಖಸ್ಯ ಫಲಮತ್ಯಧಿಕಂ ನಿಧಾತುಂ ವ್ಯಾಸಃ ಕ್ರತುಂ ತಮದಿಶದ್ ಗುರುರಬ್ಜಜಸ್ಯ ॥೨೧.೧೭೭॥

ಈ ಯಾಗ ಮಾಡುವವ ಉಳಿದ ಗುಣಗಳಲ್ಲಾಗಿದ್ದರೆ ಬ್ರಹ್ಮನಿಗೆ ಸಮಾನ,

ಅದರಿಂದ ಸಿಗುತ್ತದೆ ಅವನಿಗೆ ಮುಂದೆ ಆ ಬ್ರಹ್ಮಪದವಿಯ ವರದಾನ.

ವಾಯುದೇವನಾಗಿದ್ದ (ಭೀಮ) ಚತುರ್ಮುಖಗೆ ಸಮಾನ,

ಬ್ರಹ್ಮಗುರು ವ್ಯಾಸರಿಂದ ಭೀಮ ಆ ಫಲ ಹೊಂದಲು ಆಜ್ಞ.

 

[ಯಜಮಾನನಾಗಿ ಧರ್ಮರಾಜ ಕುಳಿತಿರುವಾಗ ಭೀಮಸೇನನಿಗೆ ಹೇಗೆ ಅತ್ಯುತ್ಕೃಷ್ಟ ಫಲ ಸಲ್ಲುತ್ತದೆ ಎನ್ನುವ ಪ್ರಶ್ನೆಗೆ ಉತ್ತರರೂಪವಾಗಿ ಕರ್ಮದ ರಹಸ್ಯವನ್ನು ವಿವರಿಸುತ್ತಾರೆ:]

 

ಅಸಾಧಾರಣಹೇತುರ್ಯ್ಯಃ ಕರ್ಮ್ಮಣೋ ಯಸ್ಯ ಚೇತನಃ ।

ಸ ಏವ ತತ್ಫಲಂ ಪೂರ್ಣ್ಣಂ ಭುಙ್ಕ್ತೇsನ್ಯೋsಲ್ಪಮಿತಿ ಸ್ಥಿತಿಃ             ॥೨೧.೧೭೮॥

ಯಾವ ಕರ್ಮಕ್ಕೆ ಯಾರು ಪ್ರಮುಖವಾದ ಕಾರಣ,

ಅವನಾಗುತ್ತಾನೆ ಆ ಫಲ ಅನುಭವಿಸುವ ಅರ್ಹ ಯಜಮಾನ.

ಉಳಿದವರಿಗೆ ಯೋಗ್ಯತೆಯಂತೆ ಫಲ ಸ್ವಲ್ಪ ಮಾತ್ರ,

ಇದನ್ನೇ ನಿರ್ಣಯಿಸಿ ಹೇಳುತ್ತದೆ ಆ ಧರ್ಮಶಾಸ್ತ್ರ.

 

[ಹಾಗಿದ್ದರೆ ಎಲ್ಲವುದಕ್ಕೂ ಮುಖ್ಯ ಹೇತುವಾಗಿರುವ ನಾರಾಯಣನಿಗೆ ಸಮಸ್ತಫಲ ಸಲ್ಲಬೇಕಲ್ಲವೇ ಎಂದರೆ:]

 

ವಿನಾ ವಿಷ್ಣುಂ ನಿರ್ಣ್ಣಯೋsಯಂ ಸ ಹಿ ಕರ್ಮ್ಮಫಲೋಜ್ಝಿತಃ ।

ಹೇತವೋsಪಿ ಹಿ ಪಾಪಸ್ಯ ನ ಪ್ರಾಯಃ ಫಲಭಾಗಿನಃ ।

ದೇವಾಃ ಪುಣ್ಯಸ್ಯ ದೈತ್ಯಾಶ್ಚ ಮಾನುಷಾಸ್ತದ್ವಿಭಾಗಿನಃ             ॥೨೧.೧೭೯॥

ಭಗವಂತನನ್ನು ಹೊರತು ಪಡಿಸಿ ಈ ನಿರ್ಣಯ,

ಅವಗೆ ಕರ್ಮಲೇಪವಿಲ್ಲದ್ದರಿಂದ ಆಗದದನ್ವಯ.

ದೇವತೆಗಳೇ ಆದರೂ ದೈತ್ಯರ ಪಾಪದ ಪ್ರೇರಣೆಗೆ ಕಾರಣ,

ಹೆಚ್ಚಾಗಿ ಅವರಾಗುವುದಿಲ್ಲ ಅದರ ಫಲಭೋಗಕ್ಕೆ ಭಾಗಿನ.

ಒಂದೊಮ್ಮೆ ದೈತ್ಯರುಗಳು ಎಲ್ಲೋ ಮಾಡಿದರೂ ಪುಣ್ಯಕರ್ಮ,

ವಿರುದ್ಧಸ್ವಭಾವದವರಿಗೆ ಫಲವಿಲ್ಲವೆಂಬುದದು ಶಾಸ್ತ್ರ ಮರ್ಮ

ಮನುಷ್ಯ ಮಾತ್ರರಿಗಿಲ್ಲ ಪುಣ್ಯ ಪಾಪಗಳ ಪೂರ್ಣ ಭೋಗಿಸುವ ಶಕ್ತಿ,

ಪುಣ್ಯಕ್ಕೆ ದೇವತೆಗಳು, ಪಾಪಕ್ಕೆ ದೈತ್ಯರೂ ಭಾಗಿ - ಸ್ವಲ್ಪವೇ ಉಂಬ ನೀತಿ.


[Contributed by Shri Govind Magal]

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 21: 168-174

 

ಸುತೋ ಯಯೌ ಶರಣಂ ತಾನ್ ರಮೇಶಭೀಮಾರ್ಜ್ಜುನಾನ್ ಸಹದೇವೋsಸ್ಯ ಧೀಮಾನ್ ।

ರಥಂ ಸ್ವಸಾರಂ ಚ ದದೌ ಸ ಮಾರುತೇರ್ನ್ನನಾಮ ಕೃಷ್ಣಂ ಪರಯಾ ಚ ಭಕ್ತ್ಯಾ               ॥೨೧.೧೬೮॥

ಜರಾಸಂಧನ ಮಗ ಸಹದೇವ ವಿವೇಕಮತಿ,

ಅವನಾದ ಕೃಷ್ಣ ಭೀಮಾರ್ಜುನರಲ್ಲಿ ಶರಣಾರ್ಥಿ.

ಭೀಮಸೇನನಿಗೆ ರಥವನ್ನು ತಂಗಿಯನ್ನೂ ಇತ್ತ,

ಕೃಷ್ಣಗೆ ಬಲು ಭಕ್ತಿಯಿಂದ ನಮಸ್ಕರಿಸಿದನಾತ.

 

[ಜರಾಸಂಧನ ಮಗ ನೀಡಿರುವ ರಥದ ಇತಿಹಾಸವನ್ನು ಹೇಳುತ್ತಾರೆ:]

 

ರಥೋ ಹ್ಯಸೌ ವಸುನಾ ವಾಸುದೇವಾಚ್ಛಕ್ರಾನ್ತರಾsಪ್ತೋ ವಸುವಂಶಜತ್ವಾತ್ ।

ಜರಾಸುತಸ್ಯಾsಸ ವೃಕೋದರಸ್ತಂ ಹರೇ ರಥಂ ಪ್ರಾರ್ಪ್ಪಯಾಮಾಸ ತಸ್ಮೈ             ॥೨೧.೧೬೯॥

ಸಹದೇವ ಕೊಟ್ಟ ಆ ರಥ ಮೂಲದಲ್ಲಿ ಭಗವಂತನದ್ದು,

ಇಂದ್ರನ ಮುಖಾಂತರ ಉಪರಿಚರ ವಸುವಿಗೆ ಸಂದದ್ದು.

ಜರಾಸಂಧನಲ್ಲಿತ್ತದು ಅವನು ಉಪರಿಚರ ವಸುವಿನ ವಂಶದಲ್ಲಿದ್ದ ಕಾರಣ,

ಈ ಹಿನ್ನೆಲೆ ತಿಳಿದ ಭೀಮಸೇನ ಭಕ್ತಿಯಿಂದ ಶ್ರೀಕೃಷ್ಣನಿಗೆ ಮಾಡಿದ ಅರ್ಪಣ.

 

ಕೃಷ್ಣೋsಸ್ಮರದ್ ಗರುಡಂ ಸ ಧ್ವಜೇsಭೂದ್ ರಥಂ ಕೃಷ್ಣೋsಥಾsರುಹತ್ ಪಾಣ್ಡವಾಭ್ಯಾಮ್ ।

ಭೀಮಃ ಕನ್ಯಾಂ ಸಹದೇವಸ್ಯ ಹೇತೋಃ ಸಮಗ್ರಹೀದನುಜಸ್ಯಾsತ್ಮನಃ ಸಃ             ॥೨೧.೧೭೦॥

(ಭಗವಂತನ ರಥಕ್ಕೆ ಗರುಡ ಅಥವಾ ಮುಖ್ಯಪ್ರಾಣ ಲಾಂಛನ),

ಹಾಗಾಗೇ ಕೃಷ್ಣ ನೆನಪಿಸಿಕೊಂಡ ತನ್ನ ಭಕ್ತನಾದಂಥ ಗರುಡನನ್ನ.

ಆ ತಕ್ಷಣ ಗರುಡದೇವನಾದ ರಥಧ್ವಜದಲ್ಲಿ ಪ್ರತಿಷ್ಠಿತ,

ಶ್ರೀಕೃಷ್ಣ ಭೀಮಾರ್ಜುನರನ್ನು ಕೂಡಿಕೊಂಡು ಏರಿದನಾ ರಥ.

ಜರಾಸಂಧ ಪುತ್ರಿಯ ತಮ್ಮ ಸಹದೇವಗಾಗಿ ಸ್ವೀಕರಿಸಿದ ವಾಯುಸುತ.

 

ನಕುಲಸ್ಯಾsದಾನ್ಮದ್ರರಾಜೋ ಹಿ ಪೂರ್ವಂ ಸ್ವೀಯಾಂ ಕನ್ಯಾಂ ಸಾ ತಥೈಷಾsಪ್ಯುಷಾ ಹಿ ।

ಏಕಾ ಪೂರ್ವಂ ತೇ ಅಶ್ವಿನೋಶ್ಚೈವ ಭಾರ್ಯ್ಯಾ ಯಮೌ ರೇಮಾತೇ ಯದುಷಾ ಅಶ್ವಿಭಾರ್ಯ್ಯಾ ॥೨೧.೧೭೧॥

ಸಹದೇವಗೆ ಜರಾಸಂಧನ ಮಗಳೊಂದಿಗೆ ವಿವಾಹವಾಗುವ ಮುನ್ನ,

ನಕುಲಗೆ ಮದುವೆಮಾಡಿಕೊಟ್ಟಿದ್ದ ಮದ್ರರಾಜ ಶಲ್ಯ ತನ್ನ ಮಗಳನ್ನ.

ಜರಾಸಂಧನ ಮಗಳು ಮತ್ತು ಮದ್ರರಾಜನ ಮಗಳು,

ಅಶ್ವೀದೇವತೆಗಳ ಪತ್ನಿ ಉಷೆಯವೇ ಎರಡು ರೂಪಗಳು.

ಮೂಲದಲ್ಲಿ ಅಶ್ವೀದೇವತೆಗಳಿಗೆ ಒಬ್ಬಳೇ ಪತ್ನಿ- ಅವಳೇ ಉಷಾ,

ಎರಡು ರೂಪಗಳಿಂದ ನಕುಲ ಸಹದೇವರ ಪತ್ನಿ ಆದದ್ದು ವಿಶೇಷ.

 

ತತಃ ಕೃಷ್ಣಾಯಾಮಗ್ರಜಭ್ರಾತೃಭಾರ್ಯ್ಯಾವೃತ್ತಿಂ ಹಿ ತೌ ಚಕ್ರತುರ್ಮ್ಮಾದ್ರಿಪುತ್ರೌ ।

ಜರಾಸುತಸ್ಯಾsತ್ಮಜಃ ಕೇಶವಾದೀನ್ ರತ್ನೈಃ ಸಮಭ್ಯರ್ಚ್ಚ್ಯ ಯಯಾವನುಜ್ಞಯಾ ॥೨೧.೧೭೨॥

ಹೀಗೆ ಮದುವೆಯಾದಮೇಲೆ ಮಾದ್ರಿಸುತರಾದ ನಕುಲ ಸಹದೇವರು,

ದ್ರೌಪದಿದೇವಿಯಲ್ಲಿ ಅತ್ತಿಗೆಯ ಭಾವನೆಯನ್ನು ತೋರಲಾರಂಭಿಸಿದರು.

ಜರಾಸಂಧನ ಮಗ ಸಹದೇವ ಕೃಷ್ಣಾದಿಗಳಿಗೆ ರತ್ನಗಳ ಕೊಟ್ಟ,

ಪೂಜಿಸಿ ಅವರನ್ನು ಅವರಾಜ್ಞೆಯನ್ನು ಪಡೆದು ತಾನು ಹೊರಟ.

 

ತದಾಜ್ಞಯಾ ಪಿತೃಕಾರ್ಯ್ಯಾಣಿ ಕೃತ್ವಾ ತದಾಜ್ಞಯೈವಾಮುಚತ್ ತಾನ್ ನೃಪಾಂಶ್ಚ ।

ತೈಃ ಸಂಸ್ತುತಃ ಕೇಶವೋ ಭೀಮಪಾರ್ತ್ಥಯುಕ್ತೋ ಯಯೌ ಭಕ್ತಿನಮ್ರೈರ್ಯ್ಯಥಾವತ್ ॥೨೧.೧೭೩॥

ಕೃಷ್ಣ-ಭೀಮಾರ್ಜುನರ ಆಜ್ಞೆಯಿಂದ ಸಹದೇವ ಮಾಡಿದ ಪಿತೃಯಜ್ಞ,

ಭಗವಂತನ ಆಜ್ಞೆಯಂತೆ ನೀಡಿದ ಬಂಧಿತ  ರಾಜರೆಲ್ಲರಿಗೆ ವಿಮೋಚನ.

ಆ ಎಲ್ಲಾ ರಾಜರಿಂದ ಸ್ತುತಿಸಿ ಕೊಂಡಾಡಲ್ಪಟ್ಟ ಶ್ರೀಕೃಷ್ಣ,

ಭೀಮಾರ್ಜುನರೊಡನೆ ಹೊರಟ ಇಂದ್ರಪ್ರಸ್ಥಕ್ಕೆ ಪಯಣ.

 

ಸಮ್ಭಾವಿತಾಸ್ತೇ ಸಹದೇವೇನ ಸಮ್ಯಕ್ ಪ್ರಶಸ್ಯ ಕೃಷ್ಣಂ ಭೀಮಸೇನಂ ಚ ಸರ್ವೇ ।

ಯಯುರ್ಗ್ಗೃಹಾನ್ ಸ್ವಾನಪತತ್ ಕೇಶವದ್ವಿಡ್ ಜರಾಸುತೋsನ್ಧೇ ತಮಸಿ ಕ್ರಮೇಣ ॥೨೧.೧೭೪॥

ಜರಾಸಂಧನಿಂದ ಬಂಧಿಸಲ್ಪಟ್ಟಿದ್ದ ಎಲ್ಲಾ ರಾಜರು,

ಸಹದೇವನಿಂದ ಒಳ್ಳೆಯ ಗೌರವಕ್ಕೊಳಗಾದರು.

ಶ್ರೀಕೃಷ್ಣ ಭೀಮರಿಗೆ ಸಲ್ಲಿಸಿದರು ಪೂಜಾ ನಮನ,

ಬೆಳೆಸಿದರು ತಮ್ಮ ತಮ್ಮ ದೇಶಗಳತ್ತ ಪ್ರಯಾಣ.

ಸ್ವಭಾವತಃ ಹರಿದ್ವೇಷಿಯಾಗಿದ್ದ ಜರಾಸಂಧ,

ಆ ಫಲವಾಗಿ ಅಂಧಂತಮಸ್ಸಿಗೆ ಹೋಗಿ ಬಿದ್ದ.


[Contributed by Shri Govind Magal]